ಅರಣ್ಯದೊಂದಿಗೆ ಬೆಳೆದ ಆಧುನಿಕ ನಾರಿ: ಕೃಷಿ ಮೇಳ ಉದ್ಘಾಟಿಸಿದ ರೈತ ಮಹಿಳೆ ಪ್ರೇಮ ದಾಸಪ್ಪ ಸತ್ಯ ಕಥೆ!

ಬೆಂಗಳೂರು ಕೃಷಿ ಮೇಳವನ್ನು ಇದೇ ಮೊದಲ ಬಾರಿಗೆ ರೈತ ಮಹಿಳೆಯೊಬ್ಬರು ಉದ್ಘಾಟನೆ ಮಾಡಿದ್ದು ಈ ಬಾರಿಯ ವಿಶೇಷ. ಯಾರಿವರು ರೈತ ಮಹಿಳೆ? ಅನ್ನೋದು ನೆರೆದಿದ್ದ ಜನರಲ್ಲಿ ಅಚ್ಚರಿಗೆ ಕಾರಣವಾಗಿತ್ತು.
ಪ್ರೇಮ ದಾಸಪ್ಪ
ಪ್ರೇಮ ದಾಸಪ್ಪ

ಬೆಂಗಳೂರು: ಬೆಂಗಳೂರು ಕೃಷಿ ಮೇಳವನ್ನು ಇದೇ ಮೊದಲ ಬಾರಿಗೆ ರೈತ ಮಹಿಳೆಯೊಬ್ಬರು ಉದ್ಘಾಟನೆ ಮಾಡಿದ್ದು ಈ ಬಾರಿಯ ವಿಶೇಷ. ಯಾರಿವರು ರೈತ ಮಹಿಳೆ? ಅನ್ನೋದು ನೆರೆದಿದ್ದ ಜನರಲ್ಲಿ ಅಚ್ಚರಿಗೆ ಕಾರಣವಾಗಿತ್ತು. ಅವರ ಹಾಡಿ (ಆದಿವಾಸಿ)ಯಿಂದ ಆಧುನಿಕ ರೈತ ಮಹಿಳೆಯಾದ ಪ್ರೇಮ ದಾಸಪ್ಪ ಅವರ ಸತ್ಯಕಥೆ ಬಗ್ಗೆ ಒಂದಿಷ್ಟು ಮಾಹಿತಿ.

ಅರಣ್ಯದೊಂದಿಗೆ ಬೆಳೆದ ಆಧುನಿಕ ನಾರಿ
ಅರಣ್ಯದೊಂದಿಗೆ ಜೀವನ ಮಾಡಿ., ಕಾಡಿನಲ್ಲೇ ಬೆಳೆದ ಪ್ರೇಮ ದಾಸಪ್ಪ.. ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಸೂಳ್ಳೆಪುರ ಪುನರ್ ವಸತಿ ಕೇಂದ್ರದ ವಾಸಿ. 2007-08ನೇ ಸಾಲಿನಲ್ಲಿ ಪುನರ್ವಸತಿಗೊಂಡ ಪ್ರೇಮ 3 ಎಕರೆ ಪ್ರದೇಶದಲ್ಲಿ ಕೃಷಿ ಮಾಡಿ ಬದುಕು ಕಟ್ಟಿಕೊಳ್ಳಲು ಪ್ರಾರಂಭಿಸುತ್ತಾರೆ.

ಆಧುನಿಕ ಕೃಷಿ ಬಗ್ಗೆ ಏನೂ ಗೊತ್ತಿರದ ಪ್ರೇಮ ದಾಸಪ್ಪ ಅವರು, ಜೀವನಕ್ಕೆ ಆಧಾರ ಸ್ತಂಭವಾಗಿದ್ದ 3 ಎಕರೆ ಜಾಗದಲ್ಲಿ ಜೇನು ಸಾಕಣಿಕೆ ಜೊತೆ ಜೊತೆಗೆ ರಾಗಿ, ಭತ್ತ, ಜೋಳ, ತೊಗರಿ ಸೇರಿದಂತೆ 10ಕ್ಕೂ ಹೆಚ್ಚು ಬೆಳೆಯಲ್ಲಿ ಕೃಷಿ ಕಾಯಕ ಮಾಡಲು ತೊಡಗಿಕೊಳ್ತಾರೆ.

ಪ್ರೇಮ ನಂಬಿದ್ದ ಭೂಮಿ.. ಕೈಬಿಡಲಿಲ್ಲ
ಸಮಗ್ರ ಕೃಷಿಯತ್ತ ಚಿತ್ತ ಹರಿಸಿದ ಪ್ರೇಮ ಅವರು, ರಾಗಿ, ಜೋಳ, ಹತ್ತಿ, ಚಿಯಾ ಜೊತೆ ಜೊತೆಗೆ ಬಾಳೆ, ಟೊಮ್ಯಾಟೋ, ಬದನೆ, ಮೆಣಸಿನ ಕಾಯಿ, ಬೀನ್ಸ್ ಇತ್ಯಾದಿ ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ವ್ಯರ್ಥವಾಗುತ್ತಿದ್ದ ನೀರನ್ನು ಸದುಪಯೋಗಪಡಿಸಿಕೊಳ್ಳಲು ಹನಿ ಮತ್ತು ತುಂತುರು ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ನೀರಿನ ಸದ್ಬಳಕೆ ಮಾಡುವುದರ ಮೂಲಕ ರೈತರಿಗೆ ಸ್ಪೂರ್ತಿಯಾಗಿದ್ದಾರೆ.

ಉಪಕಸುಬಾಗಿ ಏನೇನು ಮಾಡಿದ್ದಾರೆ ಗೊತ್ತಾ?
ರೈತ ಮಹಿಳೆ ಪ್ರೇಮ ಅವರು, ಕೃಷಿಯ ಜೊತೆಗೆ ಉಪ ಕಸುಬಾಗಿ ಹೈನುಗಾರಿಕೆ (2 ನಾಟಿ ಹಸು, 1 ಎಚ್ಎಫ್), ಕುರಿ (4), ಮೇಕೆ (3), ಕೋಳಿ (25), ಜೇನು ಸಾಕಣೆ ಮತ್ತು ಅಣಬೆ ಬೇಸಾಯ ಮಾಡುತ್ತಿದ್ದು, ಇದರಿಂದಾಗಿ ಕುಟುಂಬದ ಆದಾಯವನ್ನು ಹೆಚ್ಚಿಸಿಕೊಂಡಿದ್ದಾರೆ. ಅಲ್ಲದೆ, ಇವುಗಳಿಂದ ಉತ್ಪತ್ತಿಯಾಗುವ ತ್ಯಾಜ್ಯದಿಂದ ಉತ್ತಮ ಕಾಂಪೋಸ್ಟ್ ಮಾಡಿ, ಮಣ್ಣಿನ ಫಲವತ್ತತೆ ಹೆಚ್ಚಿಸುವಲ್ಲಿ ಶ್ರಮಿಸುತ್ತಿದ್ದಾರೆ.

ಖರ್ಚು ತಗ್ಗಿಸಲು "ಬದು" ಬಂಗಾರ
ಹೈನುಗಾರಿಕೆಗಾಗಿ ತಮ್ಮ ಜಮೀನಿನಲ್ಲಿಯೇ ಮೇವಿನ ಬೆಳೆಗಳಾದ ಜೋಳ, ನೇಪಿಯರ್ ಹುಲ್ಲು, ಗಿನಿ ಹುಲ್ಲು, ಕುದುರೆ ಮಸಾಲೆಗಳನ್ನು ಬೆಳೆದು ರಾಸುಗಳಿಗೆ ಉತ್ತಮ ಮೇವನ್ನು ಒದಗಿಸುವುದರ ಜೊತೆಗೆ ಖರ್ಚನ್ನು ಕಡಿಮೆ ಮಾಡಿಕೊಂಡಿದ್ದಾರೆ. ಕೃಷಿ ಜಮೀನಿನ ಬದುಗಳಲ್ಲಿ ತೇಗ, ಸಿಲ್ವರ್ ಓಕ್, ಹೆಬ್ಬೇವು, ನೀಲಗಿರಿ ಮುಂತಾದ ಮರಗಳನ್ನು ಬೆಳೆಸಿದ್ದಾರೆ.

ವಾರ್ಷಿಕ ಆದಾಯ ಎಷ್ಟು ಗೊತ್ತಾ?
ಆಧುನಿಕ ಕೃಷಿಗೆ ಹೆಚ್ಚು ಒತ್ತು ನೀಡಿರುವ ರೈತ ಮಹಿಳೆ ಪ್ರೇಮ, ಎರೆಹುಳು ಗೊಬ್ಬರ, ಹಸಿರೆಲೆ ಗೊಬ್ಬರ, ಜೈವಿಕ ಗೊಬ್ಬರ ಹಾಗೂ ರಾಸಾಯನಿಕ ಗೊಬ್ಬರಗಳನ್ನು ತಮ್ಮ ಜಮೀನಿನಲ್ಲಿ ಬಳಕೆ ಮಾಡಿ ಸಮಗ್ರ ಪೋಷಕಾಂಶ ನಿರ್ವಹಣೆ ಮಾಡುತ್ತಿದ್ದಾರೆ. ತಮ್ಮ ಒಟ್ಟಾರೆ ಬೇಸಾಯದಿಂದ ವರ್ಷಕ್ಕೆ ಸರಾಸರಿ 4 ರಿಂದ 5 ಲಕ್ಷ ರೂಪಾಯಿ ನಿವ್ವಳ ಆದಾಯವನ್ನು ಗಳಿಸುತ್ತಿದ್ದಾರೆ.

ಇತರೆ ರೈತರಿಗೆ ಸ್ಪೂರ್ತಿ ಈ ನಾರಿ
ವೈಲ್ಡ್ ಲೈಫ್ ಕನ್ಸರ್ ವೇಷನ್ ಸೊಸೈಟಿ ಆಫ್ ಇಂಡಿಯಾ ,ಬೆಂಗಳೂರು, ಎಚ್.ಡಿ.ಕೋಟೆ ಶಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕೃಷಿಯಲ್ಲಿ ನಿರಂತರವಾಗಿ ಪ್ರೇಮ ದಾಸಪ್ಪ ಅವರು ತೊಡಗಿಸಿಕೊಂಡಿದ್ದಾರೆ. ವಿಸ್ತರಣಾ ಶಿಕ್ಷಣ ಘಟಕ, ಕೃಷಿ ಇಲಾಖೆ, ಹೈನುಗಾರಿಕೆ, ಕೃಷಿ ಮೇಳ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳು ಆಯೋಜನೆ ಮಾಡುವ ತರಬೇತಿ ಕಾರ್ಯಕ್ರಮಗಳಲ್ಲೂ ಇವರು ಭಾಗಿಯಾಗುತ್ತಾರೆ. ಇಲ್ಲಿ ತಿಳಿಸಿಕೊಡುವ ತಾಂತ್ರಿಕ ಮಾಹಿತಿಗಳನ್ನು ತಮ್ಮ ಜಮೀನಿನಲ್ಲಿ ಅನುಸರಿಸುವುದರ ಜೊತೆಗೆ ಇತರೆ ರೈತ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದು, ಮಾಹಿತಿ ರೈತ ಮಹಿಳೆ ಎನಿಸಿಕೊಂಡಿದ್ದಾರೆ.
(ರೈತ ಮಹಿಳೆ ಪ್ರೇಮ ಅವರ ಮೊಬೈಲ್ ನಂಬರ್ : 9901003549)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com