ಮಿಡಿಯದ ಜೀವನ ವೀಣೆ: ಸಿಂಪಾಡಿಪುರದ ವೀಣೆ ತಯಾರಕರ ಕಥೆ ವ್ಯಥೆ

ಗ್ರಾಮದ ಶೇ.90 ಪ್ರತಿಶತ ಮಂದಿ ವೀಣೆ ತಯಾರಿಯಲ್ಲಿ ತೊಡಗಿರುತ್ತಿದ್ದರು. ಆ ಸಂಖ್ಯೆ ಈಗ ಶೇ.40ಕ್ಕೆ ಕುಸಿದಿದೆ. ಹೀಗೆಯೇ ಮುಂದುವರಿದರೆ ಒಂದೊಮ್ಮೆ ವೀಣಾ ಗ್ರಾಮ ಎನ್ನುವ ಖ್ಯಾತಿಗೆ ಪಾತ್ರವಾಗಿದ್ದ ಸಿಂಪಾಡಿಪುರ ತನ್ನ ಖ್ಯಾತಿಯನ್ನು ಕಳೆದುಕೊಳ್ಳಬಹುದು.
ಮಿಡಿಯದ ಜೀವನ ವೀಣೆ: ಸಿಂಪಾಡಿಪುರದ ವೀಣೆ ತಯಾರಕರ ಕಥೆ ವ್ಯಥೆ

ದೊಡ್ಡಬಳ್ಳಾಪುರ: ಬೆಂಗಳೂರಿನಿಂದ 65 ಕಿ.ಮೀ ದೂರದ ಸಿಂಪಾಡಿಪುರ ಗ್ರಾಮದ ಹೆಸರನ್ನು ಜನಸಾಮಾನ್ಯರು ಕೇಳಿದವರು ವಿರಳ. ಆದರೆ, ಸಂಗೀತಾಸಕ್ತರ ಕಿವಿಗಳಲ್ಲಿ ಈ ಹೆಸರು ಒಮ್ಮೆಯಾದರೂ ಬಿದ್ದಿರುತ್ತದೆ. ಏಕೆಂದರೆ ಸಿಂಪಾಡಿಪುರ ವೀಣಾ ತಯಾರಕರ ತವರೂರು. 

ಹಲಸಿನ ಹಣ್ಣಿಗೆ ಹೆಸರಾದ ದೊಡ್ಡಬಳ್ಳಾಪುರದ ಸನಿಹದ ಈ ಗ್ರಾಮದಲ್ಲಿ ವೀಣಾ ತಯಾರಿಕೆ ಬಳಸಲ್ಪಡುವ ಮರಗಳಿಗೇನೂ ಕೊರತೆಯಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ವೀಣೆಯನ್ನು ಕೊಳ್ಳುವವರಿಲ್ಲದೆ ತಂತಿಯ ದನಿ ಸೊರಗಿದೆ. 

ತಲೆತಲಾಂತರದ ಹಿನ್ನೆಲೆ

ರಸ್ತೆಗಳು ಇಲ್ಲದ ದಿನಗಳಿಂದಲೂ ಮೈಸೂರು, ಕೇರಳ, ತಮಿಳುನಾಡಿನಿಂದ ವೀಣೆಯನ್ನು ಕೊಳ್ಳಲು ಸಿಂಪಾಡಿಪುರಕ್ಕೆ ಬರುತ್ತಿದ್ದರು. ಹಾಗೆ ಬಂದವರು ಹೆಚ್ಚಿನ ಸಂಖ್ಯೆಯಲ್ಲಿ ವೀಣೆಯನ್ನು ಖರೀದಿಸುತ್ತಿದ್ದರು.  ಗ್ರಾಮದ ಹಲವು ಕುಟುಂಬಗಳು ವಂಶಪಾರಂಪರ್ಯವಾಗಿ ವೀಣೆಯ ತಯಾರಿಯಲ್ಲಿ ನಿರತವಾಗಿವೆ. ಅವರಿಗೆ ವೀಣೆ ತಯಾರಿಯೇ ಜೀವನಕ್ಕೆ ಮೂಲಾಧಾರ. 

ತಲೆಮಾರುಗಳಿಂದ ವೀಣೆ ತಯಾರಿಯಲ್ಲಿ ತೊಡಗಿದ್ದರೂ ಅವರಿಗೆ ವೀಣೆಯನ್ನು ನುಡಿಸಲು ಬರುವುದಿಲ್ಲ. ಆದರೆ ಹಲವರು ವೀಣೆ ಕಲಿಯಲು ಆಸಕ್ತಿ ತೋರುತ್ತಾರೆ. 

ಕುಲಕಸುಬು ಬಿಡುವ ಅನಿವಾರ್ಯತೆ

ವೀಣೆಯ ಮಾರುಕಟ್ಟೆ ದರ 40,000- 70,000 ರೂ. ಆದರೆ ವೀಣೆ ತಯಾರಕರಿಗೆ ಅದರ ಮೂರನೇ ಒಂದು ಭಾಗವಷ್ಟೇ ಸಿಗುವುದು. ಅದರ ಮೇಲೆ ಕೊರೊನಾ ಸಾಂಕ್ರಾಮಿಕ ಅವರ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. 

ವೀಣಾ ತಯಾರಕರಲ್ಲಿ ಹಲವು ಮಂದಿ ಈಗಾಗಲೇ ತಮ್ಮ ಕುಲ ಕಸುಬನ್ನು ಬಿಟ್ಟು ಬೆಂಗಳೂರಿನಲ್ಲಿ ಯಾವ ಯಾವುದೋ ಕೆಲಸ ಮಾಡುತ್ತಿದ್ದಾರೆ. ಹೊಟ್ಟೆ ಹೊರೆಯಲು ವೀಣೆ ತಯಾರಿಕೆಯನ್ನು ತ್ಯಜಿಸಬೇಕಾದ ಅನಿವಾರ್ಯ ಒತ್ತಡಕ್ಕವರು ಸಿಲುಕಿದ್ದಾರೆ. 

ದಸರಾ, ಸರಸ್ವತಿ ಪೂಜೆಗೆ ಇಲ್ಲಿನ ವೀಣೆ

ಕೆಲವರ್ಷಗಳ ಹಿಂದಷ್ಟೇ ವೀಣೆಗಳಿಗೆ ವ್ಯಾಪಕ ಬೇಡಿಕೆ ಇತ್ತು. ಸಂಗೀತ ಶಾಲೆಗಳು, ಗುರುಕುಲಗಳು, ಸಂಗೀತಾಸಕ್ತರು, ಸಂಗೀತಾಭ್ಯಾಸಿಗಳು ಸಿಂಪಾಡಿಪುರದ ವೀಣೆಗಳಿಗೆ ಮಾರುಹೋಗಿ ಇಲ್ಲಿನ ಮನೆಗಳಿಂದಲೇ ವೀಣೆಗಳನ್ನು ಖರೀದಿಸುತ್ತಿದ್ದರು. ಅದರಲ್ಲೂ ದಸರಾ, ಸರಸ್ವತಿ ಪೂಜಾ ಸಂದರ್ಭಗಳಲ್ಲಿ ಬೇಡಿಕೆ ಹೆಚ್ಚಳವಾಗುತ್ತಿತ್ತು. ಆದರೆ ಕಳೆದ 2 ವರ್ಷಗಳಿಂದ  ಬೇಡಿಕೆ ಸಂಪೂರ್ಣ ಕುಸಿದಿದೆ. 

ಗ್ರಾಮದ ಶೇ.90 ಪ್ರತಿಶತ ಮಂದಿ ವೀಣೆ ತಯಾರಿಯಲ್ಲಿ ತೊಡಗಿರುತ್ತಿದ್ದರು. ಆ ಸಂಖ್ಯೆ ಈಗ ಶೇ.40ಕ್ಕೆ ಕುಸಿದಿದೆ. ಹೀಗೆಯೇ ಮುಂದುವರಿದರೆ ಒಂದೊಮ್ಮೆ ವೀಣಾ ಗ್ರಾಮ ಎನ್ನುವ ಖ್ಯಾತಿಗೆ ಪಾತ್ರವಾಗಿದ್ದ ಸಿಂಪಾಡಿಪುರ ತನ್ನ ಖ್ಯಾತಿಯನ್ನು ಕಳೆದುಕೊಳ್ಳಬಹುದು ಎನ್ನುವ ಆತಂಕ ಎದುರಾಗಿದೆ. 

ಸರ್ಕಾರದಿಂದ ನೆರವು

ಗ್ರಾಮದ ಹಲವರು ತಮ್ಮ ಕುಲ ಕಸುಬಾದ ವೀಣಾ ತಯಾರಿಯನ್ನು ಉಳಿಸಿಕೊಳ್ಳಲು ಶತಪ್ರಯತ್ನ ನಡೆಸಿದ್ದಾರೆ. ಅದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಸಬ್ಸಿಡಿ ನೆರವು, ಕಡಿಮೆ ಬಡ್ಡಿಯ ಸಾಲ ನೆರವು ಪಡೆದುಕೊಳ್ಲಲು ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದಾರೆ. ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪರಿಶಿಷ್ಟ ಜಾತಿ ಸಮುದಾಯದವರು, ಪರಿಶಿಷ್ಟ ಪಂಗಡದವರೂ ವ್ಯಾಪಾರದಲ್ಲಿ ತೊಡಗಿದ್ದಲ್ಲಿ ಅವರಿಗೆ ಸರ್ಕಾರದಿಂದ ನೆರವು ಯೋಜನೆಗಳು ಲಭ್ಯ ಇವೆ.  ಕರಕುಶಲ ಕರ್ಮಿಗಳಿಗೂ ಸರ್ಕಾರದಿಂದ ಹಲವು ಬಗೆಯಲ್ಲಿ ನೆರವು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com