ಉತ್ತರ ಪ್ರದೇಶ: ನಾಲ್ವರು ಒಡಹುಟ್ಟಿದವರು ಈಗ ಐಎಎಸ್-ಐಪಿಎಸ್ ಅಧಿಕಾರಿಗಳು!
ಬಡತನದಲ್ಲೇ ಬೆಳೆದ ಉತ್ತರ ಪ್ರದೇಶದ ಲಾಲ್‌ಗಂಜ್‌ನ ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರು ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇದೀಗ ಅವರೆಲ್ಲರೂ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಾಗಿದ್ದಾರೆ.
Published: 28th July 2022 04:30 PM | Last Updated: 28th July 2022 04:57 PM | A+A A-

ನಾಲ್ವರು ಸೋದರ-ಸೋದರಿಯರು
ಪ್ರತಾಪಗಢ: ಯುಪಿಎಸ್‌ಸಿ ಪರೀಕ್ಷೆ ಪಾಸು ಮಾಡುವುದೆಂದರೆ ಸುಲಭವಲ್ಲ. ಅದಕ್ಕಾಗಿ ಸಾಕಷ್ಟು ಶ್ರಮ, ತಾಳ್ಮೆಯನ್ನು ವ್ಯಯಿಯಬೇಕಿರುತ್ತದೆ. ಹಾಗೆಂದ ಮಾತ್ರಕ್ಕೆ ಪ್ರಯತ್ನಿಸಿದ ಎಲ್ಲರೂ ತೇರ್ಗಡೆಯಾಗುವುದಿಲ್ಲ. ಆದರೆ, ಬಡತನದಲ್ಲೇ ಬೆಳೆದ ಉತ್ತರ ಪ್ರದೇಶದ ಲಾಲ್‌ಗಂಜ್‌ನ ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರು ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇದೀಗ ಅವರೆಲ್ಲರೂ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಾಗಿದ್ದಾರೆ.
ಗ್ರಾಮೀಣ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದ ಅವರ ತಂದೆ ಅನಿಲ್ ಪ್ರಕಾಶ್ ಮಿಶ್ರಾ ಮಾತನಾಡಿ, 'ನಾನು ಗ್ರಾಮೀಣ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದರೂ ಕೂಡ, ನನ್ನ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸುವಲ್ಲಿ ನಾನು ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಅವರಿಗೆ ಉತ್ತಮ ಉದ್ಯೋಗಗಳು ಸಿಗಬೇಕು ಎಂದು ಬಯಸಿದ್ದೆ ಮತ್ತು ನನ್ನ ಮಕ್ಕಳೂ ಕೂಡ ಅಧ್ಯಯನದ ಮೇಲೆ ಗಮನ ಕೇಂದ್ರೀಕರಿಸಿದ್ದರು' ಎನ್ನುತ್ತಾರೆ.
ನಾಲ್ವರಲ್ಲಿ ಮೊದಲನೆಯವರಾದ ಯೋಗೇಶ್ ಮಿಶ್ರಾ ಐಎಎಸ್ ಅಧಿಕಾರಿ. ಇವರು ತಮ್ಮ ಆರಂಭಿಕ ಶಿಕ್ಷಣವನ್ನು ಲಾಲ್‌ಗಂಜ್‌ನಲ್ಲಿ ಪೂರ್ಣಗೊಳಿಸಿದರು. ನಂತರ ಮೋತಿಲಾಲ್ ನೆಹರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಮುಗಿಸಿದರು.
ಇದನ್ನೂ ಓದಿ: UPSC ಪರೀಕ್ಷೆಯಲ್ಲಿ ತೇರ್ಗಡೆ: ಕರ್ನಾಟಕದಿಂದ ಆಯ್ಕೆಯಾದ ಏಕೈಕ ಮುಸ್ಲಿಂ ಮಹಿಳೆ ರೈಲಿನ ಭದ್ರತಾ ಸಿಬ್ಬಂದಿಯ ಮಗಳು!
ನಂತರ ನೋಯ್ಡಾದಲ್ಲಿ ಉದ್ಯೋಗ ಸಿಗುತ್ತದೆ. ಉದ್ಯೋಗ ಮಾಡುತ್ತಲೇ ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ಮುಂದುವರೆಸಿದ್ದರು. ಬಳಿಕ 2013ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಐಎಎಸ್ ಅಧಿಕಾರಿಯಾಗಿದ್ದಾರೆ.
ಸಿವಿಲ್ ಸರ್ವೀಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಅವರ ಸಹೋದರಿ ಕ್ಷಮಾ ಮಿಶ್ರಾ, ತಮ್ಮ ಮೊದಲ ಮೂರು ಪ್ರಯತ್ನಗಳಲ್ಲಿ ಪರೀಕ್ಷೆಯಲ್ಲಿ ತೇರ್ಗಡೆಗೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ, ನಾಲ್ಕನೇ ಪ್ರಯತ್ನದಲ್ಲಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಈಗ ಐಪಿಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮೂರನೇ ಮಗಳು ಮಾಧುರಿ ಮಿಶ್ರಾ, ಲಾಲ್‌ಗಂಜ್‌ನ ಕಾಲೇಜಿನಲ್ಲಿ ಪದವಿ ಪಡೆದ ನಂತರ, ಸ್ನಾತಕೋತ್ತರ ಅಧ್ಯಯನಕ್ಕಾಗಿ ಅಲಹಾಬಾದ್‌ಗೆ ತೆರಳಿದರು. 2014 ರಲ್ಲಿ ಅವರು ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದರು. ಇದೀಗ ಮಾಧುರಿ ಜಾರ್ಖಂಡ್ ಕೇಡರ್‌ನ ಐಎಎಸ್ ಅಧಿಕಾರಿ.
ಇದನ್ನೂ ಓದಿ: ಉತ್ತರ ಪ್ರದೇಶ: ಹಗರಣಗಳ ಬಯಲು ಮಾಡಿದಕ್ಕೆ 7 ಬಾರಿ ಗುಂಡೇಟು ತಿಂದಿದ್ದ ಅಧಿಕಾರಿ UPSC ಯಲ್ಲಿ ಪಾಸ್!
ಸದ್ಯ ಬಿಹಾರ ಕೇಡರ್‌ನಲ್ಲಿರುವ ಲೋಕೇಶ್ ಮಿಶ್ರಾ ಅವರ ಕಿರಿಯ ಸಹೋದರ, 2015 ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 44 ನೇ ರ‍್ಯಾಂಕ್ ಪಡೆದಿದ್ದರು.
ಮಕ್ಕಳ ಈ ಸಾಧನೆಯನ್ನು ಕಂಡ ತಂದೆಗೆ ಸಂತೋಷವಾಗಿದೆ. 'ಇದಕ್ಕಿಂತ ಇನ್ನೇನನ್ನು ಕೇಳಲಿ? ನನ್ನ ಮಕ್ಕಳ ಕಾರಣದಿಂದಾಗಿ ನಾನು ಇಂದು ನನ್ನ ತಲೆ ಎತ್ತಿ ನಡೆಯುತ್ತಿದ್ದೇನೆ' ಎನ್ನುತ್ತಾರೆ.