ಭೂಕಂಪ, ಬಿರುಗಾಳಿಗೂ ಜಗ್ಗದಂತೆ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಚಿಕ್ಕಬಳ್ಳಾಪುರ ಕಲ್ಲುಗಳ ಬಳಕೆ!
ಸರಯೂ ನದಿಯ ದಡದಲ್ಲಿರುವ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ಭೂಕಂಪ, ಬಿರುಗಾಳಿಗೂ ಜಗ್ಗದಂತೆ ಮಾಡಲು ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿನ ಕಲ್ಲುಗಳನ್ನು ಬಳಕೆ ಮಾಡಲಾಗುತ್ತಿದೆ.
Published: 28th October 2022 01:05 PM | Last Updated: 28th October 2022 02:55 PM | A+A A-

ಚಿಕ್ಕಬಳ್ಳಾಪುರದಿಂದ ಅಯೋಧ್ಯೆಗೆ ಕಲ್ಲುಗಳನ್ನು ಸಾಗಿಸುತ್ತಿರುವುದು.
ಬೆಂಗಳೂರು: ಸರಯೂ ನದಿಯ ದಡದಲ್ಲಿರುವ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ಭೂಕಂಪ, ಬಿರುಗಾಳಿಗೂ ಜಗ್ಗದಂತೆ ಮಾಡಲು ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿನ ಕಲ್ಲುಗಳನ್ನು ಬಳಕೆ ಮಾಡಲಾಗುತ್ತಿದೆ.
ಚಿಕ್ಕಬಳ್ಳಾಪುರದ ಬಂಡೆಗಳು ದೇಶದಲ್ಲೇ ಅತ್ಯಂತ ಗಟ್ಟಿಯಾದ ಬಂಡೆಗಳಾಗಿದ್ದು, ಹೀಗಾಗಿ ದೇವಾಲಯದ ಅಡಿಪಾಯ ಕಾಮಗಾರಿಗೆ ಕಲ್ಲುಗಳನ್ನು ಪೂರೈಸಲು ಚಿಕ್ಕಬಳ್ಳಾಪುರದ ನಾಲ್ಕು ಕಂಪನಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕಲ್ಲುಗಳನ್ನು ಪೂರೈಸುತ್ತಿರುವ ಗುತ್ತಿಗೆದಾರರಲ್ಲಿ ಒಬ್ಬರಾದ ಮುನಿರಾಜು ಅವರು ಹೇಳಿದ್ದಾರೆ.
ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆಗೆ ಮುನ್ನ 'ರಥ ಯಾತ್ರೆ' ಕೈಗೊಳ್ಳಬೇಕು: ಉಡುಪಿ ಪೇಜಾವರ ಮಠಾಧೀಶ ಒತ್ತಾಯ
ಬಂಡೆಗಳು ಶಾಖ ನಿರೋಧಕವಾಗಿದ್ದು, ಈ ಕಲ್ಲುಗಳ ಬಳಕೆಯಿಂದ ಇಡೀ ರಾಮಮಂದಿರವು ಭೂಕಂಪ ನಿರೋಧಕವಾಗಿರುತ್ತದೆ. ಭೂಕಂಪದಿಂದ ರಕ್ಷಣೆಗಾಗಿ 40 ಅಡಿ ಆಳವಾದ ಅಡಿಪಾಯವನ್ನು ದೇವಾಲಯಕ್ಕೆ ಹಾಕಲಾಗುತ್ತಿದೆ.

ಚಿಕ್ಕಬಳ್ಳಾಪುರದಿಂದ ಸಾಗಿಸಲಾಗುತ್ತಿರುವ ಕಲ್ಲುಗಳನ್ನು 1,500 ಡಿಗ್ರಿ ಸೆಲ್ಸಿಯಸ್‌ವರೆಗೆ ಬಿಸಿ ಮಾಡಿ ಪರೀಕ್ಷಿಸಲಾಗಿದೆ. ಈ ಕಲ್ಲುಗಳನ್ನು 24 ಗಂಟೆಗಳಿಗೂ ಹೆಚ್ಚು ಕಾಲ ಘನೀಕರಿಸುವ ತಾಪಮಾನಕ್ಕೆ ಒಡ್ಡಿ, ಈ ಮೂಲಕ ಅವುಗಳನ್ನು ಸಂಪೂರ್ಣವಾಗಿ ಜಲನಿರೋಧಕವಾಗಿಸಿ ಪರೀಕ್ಷಿಸಲಾಗುತ್ತಿದೆ ರಾಜ್ಯದಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ)ನ್ನೂ ಪ್ರತಿನಿಧಿಸುತ್ತಿರುವ ಮುನಿರಾಜು ಅವರು ತಿಳಿಸಿದ್ದಾರೆ.
ರಾಮಮಂದಿರಕ್ಕೆ ಸಾಗಿಸುತ್ತಿರುವ ಕಲ್ಲುಗಳನ್ನು ಚಿಕ್ಕಬಳ್ಳಾಪುರದ ಹೊರವಲಯದ ಗೂಕನಹಳ್ಳಿ ಮತ್ತು ಅಡಿಗಲ್ಲು ಬಂಡೆ ಗ್ರಾಮಗಳ ಕ್ವಾರಿಗಳಿಂದ ಪಡೆಯಲಾಗುತ್ತಿದೆ. ಮಂದಿರದ ಗರ್ಭಗುಡಿಗೆ ಅಡಿಪಾಯ ಹಾಕಲು ದೇವಾಲಯಕ್ಕೆ ಬೇಕಾದ ಬೃಹತ್ ಬಂಡೆಗಳನ್ನು ಕಲ್ಲು ಗಣಿಗಳಿಂದ ಸಾಗಿಸಲಾಗುತ್ತಿದೆ. ಪೂರೈಕೆಯಾಗುತ್ತಿರುವ ಪ್ರತಿಯೊಂದು ಕಲ್ಲು 5 ಅಡಿ ಉದ್ದ, 3 ಅಡಿ ದಪ್ಪ ಮತ್ತು 2.75 ಅಡಿ ಅಗಲವನ್ನು ಹೊಂದಿದೆ. ಎಲ್ಲಾ ಕಲ್ಲುಗಳು ಗ್ರಾನೈಟ್ ಬ್ಲಾಕ್‌ಗಳಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ: 2024ರ ಮಕರಸಂಕ್ರಾಂತಿಯಂದು ಹೊಸ ದೇವಾಲಯದ ಗರ್ಭಗುಡಿಯಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪನೆ
ಭೂವಿಜ್ಞಾನಿಗಳ ಪ್ರಕಾರ, ಚಿಕ್ಕಬಳ್ಳಾಪುರದ ಬಂಡೆಗಳು 2,500 ದಶಲಕ್ಷ ವರ್ಷಗಳ ಹಿಂದೆ ರೂಪುಗೊಂಡ ಅತ್ಯಂತ ಗಟ್ಟಿಯಾದ ಬಂಡೆಗಳಾಗಿವೆ ಎಂದು ತಿಳಿಸಿದ್ದಾರೆ.

ಇವು ಸ್ಫಟಿಕೀಕರಣದಿಂದಾಗಿ ರೂಪುಗೊಂಡ ಅತ್ಯಂತ ಗಟ್ಟಿಯಾದ ಬಂಡೆಗಳಾಗಿವೆ. ಹೀಗಾಗಿ ಇವು ಭೂಕಂಪ ನಿರೋಧಕಗಳಾಗಿವೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಭೂವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊಫೆಸರ್ ಮಹಬಲೇಶ್ವರ್ ಹೇಳಿದ್ದಾರೆ.
ಈ ಬಂಡೆಗಳು ಕನಿಷ್ಠ 3 ರಿಂದ 3.5 ಶತಕೋಟಿ ವರ್ಷಗಳ ಹಿಂದೆ ರೂಪುಗೊಂಡಿದ್ದು, ಇವು ರಾಮನಗರ, ಬೆಂಗಳೂರಿನ ಸುತ್ತಮುತ್ತಲಿನ ಇತರ ಭಾಗಗಳಲ್ಲಿಯೂ ಕಂಡುಬರುತ್ತವೆ ಎಂದು ಹೆಸರು ಹೇಳಲು ಇಚ್ಛಿಸದ ಮತ್ತೊಬ್ಬ ಭೂವಿಜ್ಞಾನಿ ಹೇಳಿದ್ದಾರೆ.