ಸಿಎ ಓದು ಬಿಟ್ಟು, ಕೃಷಿಯಲ್ಲಿ ಯುವತಿ ಸಾಧನೆ: 30 ಗುಂಟೆಯಲ್ಲಿ ಮೆಣಸಿನಕಾಯಿ ಬೆಳೆದು, ಲಕ್ಷ ಲಕ್ಷ ಗಳಿಸುತ್ತಿರುವ ಸಾಧಕಿ

ಕೃಷಿ ಎಂದರೆ ಮೂಗು ಮುರಿಯುವ ಇಂದಿನ ದಿನಮಾನದಲ್ಲಿ ಎಲ್ಲರೂ ಹುಬ್ಬೇರುವಂತೆ ಈ ಯುವತಿ ಸಾಧನೆ ಮಾಡಿದ್ದಾಳೆ. ಈಕೆ ಗಡಿ ಜಿಲ್ಲೆಯ ಪುಟ್ಟ ಗ್ರಾಮದ ನಿವಾಸಿ, ಬಡ ರೈತನ ಮಗಳಾದರೂ ಸಿಎ ಆಗಬೇಕೆಂಬ ದೊಡ್ಡ ಕನಸು ಕಂಡಿದ್ದಳು. ಆದರೆ, ತಂದೆಯ ನಿಧನದಿಂದಾಗಿ ವ್ಯಾಸಂಗ ಮೊಟಕುಗೊಳಿಸಿದ್ದ ಈಕೆ, ಕೃಷಿಯತ್ತ ಮುಖ ಮಾಡಿ, ಅಮೋಘ ಸಾಧನೆ ಮಾಡಿದ್ದಾಳೆ...
ನಿಕಿತಾ ವೈಜು ಪಾಟೀಲ್
ನಿಕಿತಾ ವೈಜು ಪಾಟೀಲ್

ಬೆಳಗಾವಿ: ಕೃಷಿ ಎಂದರೆ ಮೂಗು ಮುರಿಯುವ ಇಂದಿನ ದಿನಮಾನದಲ್ಲಿ ಎಲ್ಲರೂ ಹುಬ್ಬೇರುವಂತೆ ಈ ಯುವತಿ ಸಾಧನೆ ಮಾಡಿದ್ದಾಳೆ.

ಈಕೆ ಗಡಿ ಜಿಲ್ಲೆಯ ಪುಟ್ಟ ಗ್ರಾಮದ ನಿವಾಸಿ, ಬಡ ರೈತನ ಮಗಳಾದರೂ ಸಿಎ ಆಗಬೇಕೆಂಬ ದೊಡ್ಡ ಕನಸು ಕಂಡಿದ್ದಳು. ಆದರೆ, ತಂದೆಯ ನಿಧನದಿಂದಾಗಿ ವ್ಯಾಸಂಗ ಮೊಟಕುಗೊಳಿಸಿದ್ದ ಈಕೆ, ಕೃಷಿಯತ್ತ ಮುಖ ಮಾಡಿ, ಅಮೋಘ ಸಾಧನೆ ಮಾಡಿದ್ದಾಳೆ. ಇಂದು ಈ ಯುವತಿ ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾಳೆ.

ನಿಕಿತಾ ವೈಜು ಪಾಟೀಲ್ (26) ಕೃಷಿಯಲ್ಲಿ ಸಾಧನೆ ಮಾಡಿದ ಯುವತಿಯಾಗಿದ್ದಾರೆ. ಬೆಳಗಾವಿ ತಾಲೂಕಿನ ಜಾಫರವಾಡಿ ಗ್ರಾಮದ ನಿವಾಸಿಯಾಗಿರುವ ನಿಕಿತಾ, ಕಳೆದ ವರ್ಷ ತನ್ನ ತಂದೆ ವೈಜು ಪಾಟೀಲ್ ಅವರನ್ನು ಕಳೆದುಕೊಂಡಿದ್ದರು. ಇದಾದ ಬಳಿಕ ಕುಟಂಬದಲ್ಲಿ ಕತ್ತಲೆ ಕವಿತಿದ್ದು, ದಿಕ್ಕೇ ತೋಚದಂತಾದ ಕುಟುಂಬಕ್ಕೆ ನಿಕಿತಾ ಆಸರೆಯಾದರು. ತಂದೆಯ ನಿಧನದ ಬಳಿಕ ತನ್ನ ಗುರಿಯನ್ನು ಬದಲಾಯಿಸಿಕೊಂಡ ನಿಕಿತಾ ಕೃಷಿಕಳಾಗಬೇಕೆಂದು ಬಯಸಿದ್ದರು. ನಿಕಿತಾಳ ಈ ನಿರ್ಧಾರಕ್ಕೆ ಸ್ನೇಹಿತರು, ನೆರೆಹೊರೆಯವರು ಆಶ್ಚರ್ಯ ವ್ಯಕ್ತಿಪಡಿಸದರಲ್ಲದೆ, ಕೃಷಿ ಮಾಡುವುದು ಸುಲಭದ ಕೆಲಸವಲ್ಲ, ಮತ್ತೊಮ್ಮೆ ಆಲೋಚಿಸುವಂತೆ ಸಲಹೆ ನೀಡಿದ್ದರು.

ಆದರೂ ಇದಾವುದಕ್ಕೂ ಕಿವಿ ಕೊಡದ ನಿಕಿತಾ ಕೃಷಿಯಲ್ಲೇ ಸಾಧನೆ ಮಾಡಬೇಕೆಂಬ ಹಠಕ್ಕೆ ಬಿದ್ದರು. ಇವರ ಈ ಗುರಿಗೆ ತಾಯಿ ಅಂಜನಾ, ಸಹೋದರ ಅಭಿಷೇಕ್ ಹಾಗೂ ಚಿಕ್ಕಪ್ಪ ತಾನಾಜಿ ನೆರವು ನೀಡಿದ್ದರು.

ಇದರಂತೆ ಪ್ರಾಯೋಗಿಕವಾಗಿ ಮೊದಲಿಗೆ ನಿಕಿತಾ ಅವರು 15 ಗುಂಟೆ ಭೂಮಿಯಲ್ಲಿ ಸೌತೆಕಾಯಿ ನೆಟ್ಟಿದ್ದರು. ಆದರೆ, ಅನಿರೀಕ್ಷಿತ ಹವಾಮಾನ ಬದಲಾವಣೆಯಿಂದಾಗಿ ಬೆಳೆಗಳು ಹಾನಿಯಾಗಿದ್ದವು. ಆದರೂ, ನಿಕಿತಾ ಕುಗ್ಗಲಿಲ್ಲ.

ನನ್ನ ತಂದೆ ಯಾವಾಗಲೂ ಒಂದು ಮಾತನ್ನು ಹೇಳುತ್ತಿದ್ದರು. ಸೋಲೇ ಯಶಸ್ಸಿನ ಮೊದಲ ಮೆಟ್ಟಿಲು ಎಂದು. ಇದನ್ನು ನನ್ನ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ. ಅವರನ್ನು ಮಾತುಗಳನ್ನು ಸ್ಮರಿಸುತ್ತಾ ಮತ್ತೆ ಮುನ್ನಡೆಯಲು ಆರಂಭಿಸಿದ್ದೆ ಆರೋಗ್ಯಕರ ಬೆಳೆ ಬೆಳೆಯುವ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿದೆ. ಅಲ್ಲಿ ರೈತರೊಂದಿಗೆ ಮಾತುಕತೆ ನಡೆಸಿದೆ. ಮಾಹಿತಿ ಸಂಗ್ರಹಿಸಿದೆ. ವ್ಯವಸಾಯದಲ್ಲಿ ಪರಿಣತರಾಗಿರುವ ತನ್ನ ಚಿಕ್ಕಪ್ಪ ತಾನಾಜಿ ಅವರಿಂದಲೂ ಸಲಹೆ ಪಡೆದುಕೊಂಡೆ.

ಸಾವಯವ ಕೃಷಿಯ ಜೊತೆಗೆ ಇತ್ತೀಚಿನ ಕೃಷಿ ಪದ್ಧತಿಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಆರೋಗ್ಯಕರ ಬೆಳೆಗಳನ್ನು ಬೆಳೆಸಲು ಪುಸ್ತಕಗಳು ಮತ್ತು ಆನ್‌ಲೈನ್ ಮೂಲಕ ಮಾಹಿತಿ ಪಡೆದುಕೊಂಡೆ. ಸೌತೆಕಾಯಿ ಬಳಿಕ ಭೂಮಿಯಲ್ಲಿ ಮೆಣಸಿನಕಾಯಿ ಬೆಳೆಯಲು ಆರಂಭಿಸಿದೆ. ಇದು ಯಶಸ್ಸು ತಂದು ಕೊಟ್ಟಿತು ಎಂದು ನಿಕಿತಾ ಅವರು ಹೇಳಿದ್ದಾರೆ.

ಮತ್ತೆ ಕೃಷಿಯಲ್ಲಿ ತೊಡಗಿದ ನಿಕಿತಾ ಅವರು, ನಾಲ್ಕು ಎಕರೆ ಜಮೀನಿನ ಪೈಕಿ ಮೂವತ್ತು ಗುಂಟೆಯಲ್ಲಿ ಮೆಣಸಿನಕಾಯಿ ಬೆಳೆದಿದ್ದಾರೆ. ನವಲ್ಭಟ್ಕಾ ಎಂಬ ತಳಿಯ ಮೆಣಸಿನ ಬೀಜವನ್ನು ತಾವೇ ಸ್ವತಃ ಬಿತ್ತಿ ಸಸಿ ಮಾಡಿ 30 ಗುಂಟೆಯಲ್ಲಿ ನಾಟಿ ಮಾಡಿದ್ದಾರೆ. ಹನಿ ನೀರಾವರಿ ಪದ್ಧತಿ ಸೇರಿ ಸುಧಾರಿತ ಬೇಸಾಯ ಕ್ರಮ ಅನುಸರಿಸಿ ವ್ಯವಸಾಯ ಮಾಡುತ್ತಾ ಬಂದಿದ್ದು, ಕಳೆದ ಆರು ತಿಂಗಳಲ್ಲಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಿದ್ದಾರೆ.

ಆರಂಭದಲ್ಲಿ ಬೆಳೆಗೆ ಉತ್ತಮ ವಾತಾವರಣದ ಅವಶ್ಯಕತೆ ಇತ್ತು. ಹೀಗಾಗಿ ಸಹೋದರರು ಸ್ಥಾಪಿಸಿದ್ದ ನರ್ಸರಿಯಲ್ಲಿ ಮೆಣಸಿನ ಸಸಿಗಳನ್ನು ನೆಟ್ಟಿದ್ದೆ. ನಂತರ ಸಸಿಗಳನ್ನು ಹೊಲಕ್ಕೆ ಸ್ಥಳಾಂತರಿಸಲಾಯಿತು. ನಂತರ ಸಸಿಗಳು ಆರೋಗ್ಯಕರವಾಗಿ ಹಾಗೂ ಬಲವಾಗಿ ಬೆಳೆಯಲಾರಂಭಿಸಿತು. ಸಸಿಗಳು ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನ ಕಾಯಿ ಬಿಡಲಾರಂಭಿಸಿತು ಎಂದು ನಿಖಿತಾ ತಿಳಿಸಿದ್ದಾರೆ.

ಮೊದಲ ಕೊಯ್ಲಿನಲ್ಲಿ 4 ಟನ್ ಮೆಣಸಿನಕಾಯಿ ಇಳುವರಿ ನೀಡಿತು, ಇದು ಲಕ್ಷಗಟ್ಟಲೆ ರೂಪಾಯಿಗಳ ಲಾಭಕ್ಕೆ ಕಾರಣವಾಯಿತು, ಈ ಬೆಳವಣಿಗೆಯನ್ನು ಕಂಡ ಗ್ರಾಮಸ್ಥರ ಆಶ್ಚರ್ಯಚಕಿತರಾಗಿದ್ದಾರೆ.

10-12 ದಿನಕ್ಕೊಮ್ಮೆ ಹೊಲದಲ್ಲಿ ಮೆಣಸಿನಕಾಯಿ ಕೊಯ್ಲು ಮಾಡಲಾಗುತ್ತದೆ. ಇಂದು ಹೊಲದಲ್ಲಿ 10 ರಿಂದ 15 ಮಹಿಳೆಯರು ಕೆಲಸ ಮಾಡುತ್ತಿದ್ದಾರೆಂದು ನಿಕಿತಾ ಹೇಳಿದ್ದಾರೆ.

ನಿಕಿತಾ ಸಹೋದರ ಅಭಿಷೇಕ್ ಮಾತನಾಡಿ, ಸಹೋದರಿಯೊಂದಿಗೆ ಹೊಲದಲ್ಲಿ ಕೆಲಸ ಮಾಡಲು ಇಷ್ಟವಾಗುತ್ತದೆ. ಆಕೆ ವ್ಯವಸ್ಥಿತ ರೀತಿಯಲ್ಲಿ ಯೋಜನೆ ಮಾಡುತ್ತಾಳೆ, ಸಮರ್ಪಣಾಭಾವದಿಂದ ಕೆಲಸ ಮಾಡುತ್ತಾಳೆಂದು ಹೇಳಿದ್ದಾರೆ.

ನಿಕಿತಾ ಏನೇ ಮಾಡಿದರೂ ಅದಕ್ಕೂ ಮುನ್ನ ಯೋಜನೆ, ಸಂಶೋಧನೆ ಮಾಡುತ್ತಾಳೆ, ನನ್ನೊಂದಿಗೆ ಚರ್ಚಿಸುತ್ತಾಳೆ. ನಂತರ ನಿರ್ಧಾರಕ್ಕೆ ಬರುತ್ತಾಳೆ. ರೈತಳಾಗಿ ಆಕೆ ಇಂತಹ ಆಲೋಚನೆಗಳಿಂದ ಅದ್ಭುತಗಳನ್ನೇ ಸೃಷ್ಟಿಸಬಹುದು ಎಂದು ನಿಕಿತಾ ಚಿಕ್ಕಪ್ಪ ತಾನಾಜಿ ಹೇಳಿದ್ದಾರೆ.

ನಿಕಿತಾ ಅವರು ಬೆಳೆಯುತ್ತಿರುವ ಈ ಮೆಣಸಿನಕಾಯಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಮೂರರಿಂದ ಐದು ಇಂಚು ಬೆಳೆಯುವ ಈ ಮೆಣಸಿನಕಾಯಿಯನ್ನು ಮಹಾರಾಷ್ಟ್ರದ ಕೊಲ್ಲಾಪುರ, ಗೋವಾಗೆ ಅತಿ ಹೆಚ್ಚು ಸರಬರಾಜು ಮಾಡಲಾಗುತ್ತದೆ.

ಪಿಜ್ಜಾ, ಬರ್ಗರ್ ತಯಾರಿಕೆಯಲ್ಲಿ ಈ ಮೆಣಸಿನಕಾಯಿ ಬಳಸುವುದರಿಂದ ಗೋವಾದಲ್ಲಿ ಈ ಮೆಣಸಿನಕಾಯಿಗೆ ಹೆಚ್ಚಿನ ಬೇಡಿಕೆ ಇದೆ.

ಈ ಸಾಧನೆ ಬಳಿಕ ನಿಕಿತಾ ಅವರು ಚಿಕ್ಕಪ್ಪ ತಾನಾಜಿ ಮತ್ತು ಸಹೋದರ ಅಭಿಷೇಕ್ ನೆರವಿನೊಂದಿಗೆ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದು, ವಿಭಿನ್ನ ಬೆಳೆ ಕುರಿತು ಸಂಶೋಧನೆ ಮಾಡುತ್ತಿದ್ದಾರೆ. ಆನ್ ಲೈನ್ ಮೂಲಕ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ನಿಕಿತಾ ಅವರ ಯಶೋಗಾಥೆಯನ್ನು ತಿಳಿದ ಅಕ್ಕಪಕ್ಕದ ರೈತರು, ಇದೀಗ ನಿಕಿತಾ ಅವರ ಹೊಲಕ್ಕೆ ಭೇಟಿ ನೀಡಿ, ಬೆಳೆಗಳನ್ನು ಬೆಳೆಯಲು ಬಳಸುವ ತಂತ್ರಗಳ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಸಾಕಷ್ಟು ರೈತರು ಕೃಷಿ ಬಿಟ್ಟು ಮಾಸಿಕ ವೇತನ ನೀಡುವ ಉದ್ಯೋಗಗಳಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಆದರೆ, ವೈಜ್ಞಾನಿಕ ಪದ್ಧತಿಯಲ್ಲಿ ಕೃಷಿ ಮತ್ತು ಸಾವಯವ ಕೃಷಿ ಮಾಡಿದರೆ, ಅದಕ್ಕಿಂತಲೂ ಹೆಚ್ಚು ಆದಾಯ ಗಳಿಸಬಹುದು ಎಂದು ನಿಕಿತಾ ತಿಳಿಸಿದ್ದಾರೆ.

ವ್ಯವಸಾಯವು ಹಲವು ತಲೆಮಾರುಗಳಿಂದ ನನ್ನ ಕುಟುಂಬಕ್ಕೆ ರೊಟ್ಟಿ ಮತ್ತು ಬೆಣ್ಣೆ ನೀಡಿದೆ. ಆದ್ದರಿಂದ ಈ ವೃತ್ತಿಯನ್ನು ಬಿಡುವುದು ಸರಿಯಲ್ಲ ಎನಿಸಿತು. ಜೀವನ ಸ್ಥಿರವಾದ ಬಳಿಕ ಮತ್ತೆ ನನ್ನ ವಿದ್ಯಾಭ್ಯಾಸವನ್ನು ಮುಂದುವರೆಸುತ್ತೇನೆ. ಆದರೆ, ಪೂರ್ಣ ಪ್ರಮಾಣದ ರೈತಳಾಗಿ ಉಳಿಯುತ್ತೇನೆ. ಬೇರೆ ವೃತ್ತಿಗಳು ಅರೆಕಾಲಿಕವಾಗಿರಲಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com