ಯೋಗ ಪ್ರಚಾರಕ್ಕಾಗಿ 15,000 ಕಿಮೀ ಪಾದಯಾತ್ರೆ ನಡೆಸುತ್ತಿರುವ ಮೈಸೂರಿನ ಯುವಕ

ಜನರಲ್ಲಿ ಯೋಗ ಜಾಗೃತಿ ಮೂಡಿಸಲು ಮೈಸೂರಿನಿಂದ 15,000 ಕಿ.ಮೀ ಪಾದಯಾತ್ರೆ ಆರಂಭಿಸಿರುವ ಕೃಷ್ಣಾ ನಾಯಕ, ಕರ್ನಾಟಕ, ಕೇರಳ, ತಮಿಳುನಾಡು ಬಳಿಕ ಬುಧವಾರ ದೇಗುಲ ನಗರಿ ತಿರುಪತಿಗೆ ಪ್ರವೇಶಿಸಿದರು.  
ಯೋಗದ ಕುರಿತು ಜಾಗೃತಿ ಮೂಡಿಸಲು ಪಾದಯಾತ್ರೆ ಕೈಗೊಂಡಿರುವ ಮೈಸೂರಿನ ಕೃಷ್ಣ ನಾಯ್ಕ
ಯೋಗದ ಕುರಿತು ಜಾಗೃತಿ ಮೂಡಿಸಲು ಪಾದಯಾತ್ರೆ ಕೈಗೊಂಡಿರುವ ಮೈಸೂರಿನ ಕೃಷ್ಣ ನಾಯ್ಕ

ತಿರುಪತಿ: ಜನರಲ್ಲಿ ಯೋಗ ಜಾಗೃತಿ ಮೂಡಿಸಲು ಮೈಸೂರಿನಿಂದ 15,000 ಕಿ.ಮೀ ಪಾದಯಾತ್ರೆ ಆರಂಭಿಸಿರುವ ಕೃಷ್ಣಾ ನಾಯಕ, ಕರ್ನಾಟಕ, ಕೇರಳ, ತಮಿಳುನಾಡು ಬಳಿಕ ಬುಧವಾರ ದೇಗುಲ ನಗರಿ ತಿರುಪತಿಗೆ ಪ್ರವೇಶಿಸಿದರು.  ಅವರು ತಮ್ಮ ಪಾದಯಾತ್ರೆಯ ಭಾಗವಾಗಿ ಇದುವರೆಗೆ 2,000 ಕಿಮೀ ಕ್ರಮಿಸಿದ್ದಾರೆ ಮತ್ತು ಎರಡು ವರ್ಷಗಳಲ್ಲಿ ತಮ್ಮ ಮಿಷನ್ ಪೂರ್ಣಗೊಳಿಸಲು ಬಯಸಿದ್ದಾರೆ.

29 ವರ್ಷದ ವ್ಯಕ್ತಿ ಕೃಷ್ಣ, ದಿನಕ್ಕೆ 30 ಕಿ.ಮೀ ನಡೆಯುತ್ತಾರೆ ಮತ್ತು ಯೋಗದ ಪ್ರಯೋಜನಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುತ್ತಿದ್ದಾರೆ.

ಕೊರಳಪಟ್ಟಿಯ ಮೂಳೆ ಮುರಿತದಿಂದ ಬಳಲುತ್ತಿದ್ದ ಕೃಷ್ಣಾ ನಾಯಕ ಅವರಿಗೆ 2008ರಲ್ಲಿ ಮೈಸೂರಿನ ಆಯುರ್ವೇದ ಆಸ್ಪತ್ರೆಯಲ್ಲಿದ್ದ ವೇಳೆ ಅವರ ಚಿಕಿತ್ಸೆಗಾಗಿ ಹಿಮಾಲಯದಿಂದ ಬಂದ ಋಷಿಗಳಿಂದ ಯೋಗದ ಮಹತ್ವವನ್ನು ಕಂಡುಕೊಂಡರು. ಬಳಿಕ ಯೋಗ ತರಗತಿಗಳನ್ನು ಸೇರಿದರು ಮತ್ತು ಯೋಗವನ್ನು ವರ್ಷಗಳ ಕಾಲ ಅಭ್ಯಾಸ ಮಾಡಿದರು. ಇದರಿಂದ ಬೆನ್ನಿನ ನೋವಿಗೆ ಕಾರಣವಾಗಿದ್ದ ಸ್ಪಾಂಡಿಲೋಸಿಸ್ ಗುಣಮುಖವಾಗಿದೆ.

ಮೈಸೂರು ವಿಶ್ವವಿದ್ಯಾನಿಲಯದ ಕ್ರಿಕೆಟ್ ತಂಡದ ಸದಸ್ಯರಾಗಿದ್ದ ಅವರು ವಿದ್ಯಾರ್ಥಿ ಜೀವನದಲ್ಲಿ ಅತಿಯಾಗಿ ಕ್ರಿಕೆಟ್ ಆಡಿದ್ದು ಬೆನ್ನು ನೋವಿಗೆ ಕಾರಣವಾಗಿತ್ತು. ಯೋಗದ ಗುಣಪಡಿಸುವ ಪ್ರಯೋಜನಗಳಿಂದ ಪ್ರಭಾವಿತರಾದ ಅವರು, ಅದನ್ನು ದೊಡ್ಡ ರೀತಿಯಲ್ಲಿ ಪ್ರಚಾರ ಮಾಡಲು ಬಯಸಿದ್ದರು. 2022 ರ ಅಕ್ಟೋಬರ್‌ನಲ್ಲಿ ಮೈಸೂರಿನಿಂದ 15,000 ಕಿ.ಮೀ. ಪಾದಯಾತ್ರೆಯನ್ನು ಆರಂಭಿಸಿದರು.

'ಬೆನ್ನು ನೋವಿಗೆ ವೈದ್ಯರನ್ನು ಸಂಪರ್ಕಿಸಿದಾಗ ಅವರೆಲ್ಲರೂ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸೂಚಿಸಿದರು. ನಾನು ಶಸ್ತ್ರಚಿಕಿತ್ಸೆಗೆ ಒಳಗಾಗದೆ, ಆಯುರ್ವೇದ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಆಗ ಅಲ್ಲಿದ್ದ ಋಷಿಗಳು ಬೆನ್ನು ನೋವಿಗೆ ನಿತ್ಯ ಯೋಗ ಮಾಡುವುದಕ್ಕಿಂತ ಉತ್ತಮ ಚಿಕಿತ್ಸೆ ಬೇರೊಂದಿಲ್ಲ ಎಂದು ನನಗೆ ಹೇಳಿದರು' ಎಂದು ಕೃಷ್ಣ ಹೇಳುತ್ತಾರೆ.

ಯೋಗ ಎಂದರೆ ನಿಮ್ಮ ದೇಹವನ್ನು ಬಾಗಿಸುವುದು ಬಿಟ್ಟು ಬೇರೇನೂ ಅಲ್ಲ ಎಂದೇ ಒಬ್ಬ ಸಾಮಾನ್ಯ ವ್ಯಕ್ತಿ ಭಾವಿಸುತ್ತಾನೆ. ನಾನು ಕೂಡ ಯೋಗಾಭ್ಯಾಸವನ್ನು ಪ್ರಾರಂಭಿಸುವವರೆಗೂ ಅದೇ ಗ್ರಹಿಕೆಯನ್ನು ಹೊಂದಿದ್ದೆ. ಒಮ್ಮೆ ನಾವು ಯೋಗವನ್ನು ಮಾಡಲು ಪ್ರಾರಂಭಿಸಿದರೆ, ಅದರ ಪ್ರಯೋಜನಗಳನ್ನು ತಿಳಿದುಕೊಳ್ಳುತ್ತೇವೆ. ಯೋಗ ಮತ್ತು ಯೋಗದ ಆಸನಗಳು ವಿಭಿನ್ನವಾಗಿವೆ. ಭಾವನೆಗಳನ್ನು ನಿಯಂತ್ರಿಸುವುದು ಮತ್ತು ಒತ್ತಡವನ್ನು ನಿಗ್ರಹಿಸುವುದರ ಜೊತೆಗೆ ಒಬ್ಬ ವ್ಯಕ್ತಿಯು ಉತ್ತಮ ಮೈಕಟ್ಟು ಪಡೆಯಲು ಯೋಗವು ಸಹಾಯ ಮಾಡುತ್ತದೆ ಎನ್ನುತ್ತಾರೆ.

ಯೋಗಾಸನಗಳನ್ನು ಕಲಿತ ನಂತರ, ಕೃಷ್ಣ ಯೋಗವನ್ನು ಕಲಿಸಲು ಕೃಷ್ಣಂ ಯೋಗ ಸಂಸ್ಥೆಯನ್ನು ಸ್ಥಾಪಿಸಿದರು. ಈಗ ಅವರ ಸಂಸ್ಥೆಯಲ್ಲಿ ಎಲ್ಲಾ ವಯೋಮಾನದ 30ಕ್ಕೂ ಹೆಚ್ಚು ಮಂದಿ ಯೋಗ ಕಲಿಯುತ್ತಿದ್ದಾರೆ.

ಅವರ ಪಾದಯಾತ್ರೆಯ ಸಮಯದಲ್ಲಿ, ಕೃಷ್ಣ ಅವರು ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡುತ್ತಾರೆ ಮತ್ತು ಯೋಗದ ಪ್ರಯೋಜನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಾರೆ. ದೇಶದ ಎಲ್ಲಾ ರಾಜ್ಯಗಳನ್ನು ಸುತ್ತಿದ ನಂತರ ಮೈಸೂರಿನಲ್ಲಿ ತಮ್ಮ ಪಾದಯಾತ್ರೆಯನ್ನು ಮುಕ್ತಾಯಗೊಳಿಸಲು ಅವರು ಬಯಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com