ದಕ್ಷಿಣ ಕಾಶ್ಮೀರದ ಟೆಥಾನ್ ಕುಗ್ರಾಮಕ್ಕೆ 75 ವರ್ಷಗಳ ನಂತರ ವಿದ್ಯುತ್ ಪೂರೈಕೆ, ನಿವಾಸಿಗಳ ಸಂತಸ!
ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ದೂರದ ಮತ್ತು ಗುಡ್ಡಗಾಡು ಟೆಥಾನ್ ಹಳ್ಳಿಯ ನಿವಾಸಿಗಳಿಗೆ ಇದು ಸಂತೋಷದ ಕ್ಷಣವಾಗಿದ್ದು, ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ಮೊದಲ ಬಾರಿಗೆ ಗ್ರಾಮಕ್ಕೆ ವಿದ್ಯುತ್ ತಲುಪಿದೆ.
Published: 10th January 2023 03:14 PM | Last Updated: 12th January 2023 06:46 PM | A+A A-

75 ವರ್ಷಗಳ ಬಳಿಕ ದಕ್ಷಿಣ ಕಾಶ್ಮೀರದ ಟೆಥಾನ್ ಗ್ರಾಮಕ್ಕೆ ವಿದ್ಯುತ್ ಪ್ರವೇಶ, ಸಂತಸ ವ್ಯಕ್ತಪಡಿಸಿದ ನಿವಾಸಿಗಳು
ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ದೂರದ ಮತ್ತು ಗುಡ್ಡಗಾಡು ಹಳ್ಳಿಯ ನಿವಾಸಿಗಳಿಗೆ ಇದು ಸಂತೋಷದ ಕ್ಷಣವಾಗಿದ್ದು, ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ಮೊದಲ ಬಾರಿಗೆ ಗ್ರಾಮಕ್ಕೆ ವಿದ್ಯುತ್ ತಲುಪಿದೆ. ಶ್ರೀನಗರದಿಂದ ಸುಮಾರು 90 ಕಿಮೀ ದೂರದಲ್ಲಿರುವ ಟೆಥಾನ್ ಗ್ರಾಮವು ಹೆಚ್ಚಾಗಿ ಗುಜ್ಜರ್‌ಗಳು ಮತ್ತು ಬೇಕರ್‌ವಾಲ್‌ಗಳಿರುವ ಸುಮಾರು 35-40 ಕುಟುಂಬಗಳನ್ನು ಒಳಗೊಂಡಿದೆ.
ತಮ್ಮ ಗ್ರಾಮಕ್ಕೆ ಇದೇ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವುದಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ನಿವಾಸಿ ಮುಷ್ತಾಕ್ ಅಹ್ಮದ್ ಮಾತನಾಡಿ, 'ಈಗ ನಮ್ಮ ಮನೆಗಳು ವಿದ್ಯುತ್ ಬಲ್ಬ್‌ಗಳಿಂದ ಬೆಳಗುತ್ತಿವೆ. ವಿದ್ಯುತ್ ಇಲ್ಲದ ಕಾರಣ ತೀವ್ರ ಸಮಸ್ಯೆ ಎದುರಿಸುತ್ತಿದ್ದೆವು. ನಾವು ಆಹಾರವನ್ನು ತಯಾರಿಸಲು ಸೌದೆಯನ್ನು ಮತ್ತು ಮನೆಗಳನ್ನು ಬೆಳಗಿಸಲು ಮೇಣದ ಬತ್ತಿಗಳು ಮತ್ತು ದೀಪಗಳನ್ನು ಬಳಸುತ್ತಿದ್ದೆವು' ಎಂದು ಹೇಳಿದರು.
ಗ್ರಾಮದಲ್ಲಿ ಭಾರಿ ಹಿಮಪಾತವಾಗುವ ಕಾರಣ ಚಳಿಗಾಲದಲ್ಲಿ ಮೊಬೈಲ್ ಚಾರ್ಚಿಂಗ್ ಮಾಡುವುದಕ್ಕೆ ಕೂಡ ಸಮಸ್ಯೆ ಉಂಟಾಗುತ್ತಿತ್ತು. ನಮ್ಮ ಆತ್ಮೀಯರೊಂದಿಗೆ ಸಂಪರ್ಕದಲ್ಲಿರಲು ಮೊಬೈಲ್‌ಗಳನ್ನು ಚಾರ್ಜ್ ಮಾಡಲು ನಾವು ಹಿಮಭರಿತ ರಸ್ತೆಗಳಲ್ಲಿ ಕೆಲವು ಕಿಲೋಮೀಟರ್‌ಗಳಷ್ಟು ದೂರ ಪ್ರಯಾಣಿಸಬೇಕಾಗಿತ್ತು ಎನ್ನುತ್ತಾರೆ.
ಪ್ರಧಾನಮಂತ್ರಿ ಅಭಿವೃದ್ಧಿ ಕಾರ್ಯಕ್ರಮ 'ಹರ್ ಘರ್ ಬಿಜ್ಲಿ ಯೋಜನೆ' ಅಡಿಯಲ್ಲಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಈ ಕಾರ್ಯಕ್ರಮವನ್ನು 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದರು. ಇಡೀ ಗ್ರಾಮಕ್ಕೆ ವಿದ್ಯುದ್ದೀಕರಣಕ್ಕಾಗಿ 63 ಕೆವಿ ಟ್ರಾನ್ಸ್‌ಫಾರ್ಮರ್, 38 ಎಚ್‌ಟಿ ಪೋಲ್‌ಗಳು ಮತ್ತು 57 ಎಲ್‌ಟಿ ಪೋಲ್‌ಗಳನ್ನು ಟೆಥಾನ್ ಗ್ರಾಮದಲ್ಲಿ ಅಳವಡಿಸಲಾಗಿದೆ.
ಇದನ್ನೂ ಓದಿ: ಶಿವಮೊಗ್ಗ: ರಾಜ್ಯಕ್ಕೆ ಬೆಳಕು ನೀಡಲು ಜಮೀನು, ಮನೆಗಳನ್ನು ತ್ಯಾಗ ಮಾಡಿದ್ದ ಹಳ್ಳಿಗರಿಗೆ 60 ವರ್ಷಗಳ ಬಳಿಕ ವಿದ್ಯುತ್
ಅನಂತನಾಗ್ ಜಿಲ್ಲೆಯ ವಿದ್ಯುತ್ ಅಭಿವೃದ್ಧಿ ಇಲಾಖೆಯ ತಾಂತ್ರಿಕ ಅಧಿಕಾರಿ ಫಯಾಜ್ ಅಹ್ಮದ್ ಸೋಫಿ ಮಾತನಾಡಿ, ಗ್ರಾಮದಲ್ಲಿ ನೆಟ್‌ವರ್ಕಿಂಗ್ ಪ್ರಕ್ರಿಯೆಯು 2022 ರಲ್ಲಿ ಪ್ರಾರಂಭವಾಯಿತು. ಹೈ-ಟೆನ್ಷನ್ ಲೈನ್ ಟ್ಯಾಪಿಂಗ್ ಮಾಡುವ ದೊಡ್ಡ ಸಮಸ್ಯೆ ನಮಗೆ ಎದುರಾಯಿತು. ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಜವಾಗಿಯೂ ಶ್ರಮದಿಂದ ಕೆಲಸ ಮಾಡಿದರು ಎಂದರು.
ದೂರುವಿನ ವಿದ್ಯುತ್ ಅಭಿವೃದ್ಧಿ ಇಲಾಖೆಯ ಸಹಾಯ ಕಾರ್ಯನಿರ್ವಾಹಕ ಎಂಜಿನಿಯರ್ ಮೊಹಮ್ಮದ್ ಇಕ್ಬಾಲ್ ಮಾತನಾಡಿ, ಟೆಥಾನ್ ಗುಡ್ಡಗಾಡು ಗ್ರಾಮವಾಗಿರುವುದರಿಂದ ವಿದ್ಯುದ್ದೀಕರಣ ಮಾಡುವುದು ತುಂಬಾ ಕಠಿಣದ ಕೆಲಸವಾಗಿತ್ತು. ಮುಖ್ಯರಸ್ತೆಯಿಂದ ಗ್ರಾಮಕ್ಕೆ ಐದಾರು ಮಂದಿ ಕೂಲಿಕಾರರು ಕಂಬವನ್ನು ಎಳೆದುಕೊಂಡು ಹೋಗಬೇಕಾಗಿತ್ತು. ಬಳಿಕ ಕಂಬವನ್ನು ಅಳವಡಿಸುವುದು ಕೂಡ ಅತ್ಯಂತ ಕಠಿಣ ಕೆಲಸವಾಗಿತ್ತು. ಆದರೆ, ಶ್ರಮಕ್ಕೆ ತಕ್ಕ ಫಲ ಸಿಕ್ಕಿದ್ದು, ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ' ಎಂದು ಇಕ್ಬಾಲ್ ಹೇಳಿದರು.
ಇನ್ನೋರ್ವ ಸ್ಥಳೀಯರಾದ ಫಜಲ್ ದಿನ್ ಅಹ್ಮದ್ ಮಾತನಾಡಿ, 'ಈಗ ನಮ್ಮ ಮಕ್ಕಳು ಬೆಳಕಿನಲ್ಲಿ ಅಧ್ಯಯನ ಮಾಡುತ್ತಾರೆ ಮತ್ತು ಉತ್ತಮ ಸಾಧನೆ ಮಾಡುತ್ತಾರೆ' ಎಂದು ಸಂತಸ ವ್ಯಕ್ತಪಡಿಸಿದರು.