10 ವರ್ಷಗಳ ನಂತರ, ಆಂಧ್ರ ಪ್ರದೇಶದ ನಲ್ಲಮಲ ಅರಣ್ಯದಲ್ಲಿ ಭಾರತೀಯ ತೋಳಗಳು ಪತ್ತೆ!

ಅಳಿವಿನಂಚಿನಲ್ಲಿರುವ ಭಾರತೀಯ ತೋಳಗಳು ಸುಮಾರು 0 ವರ್ಷಗಳ ಬಳಿಕ ಆಂಧ್ರ ಪ್ರದೇಶದ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿವೆ.
ಭಾರತೀಯ ತೋಳ
ಭಾರತೀಯ ತೋಳ

ಓಂಗೋಲು: ಅಳಿವಿನಂಚಿನಲ್ಲಿರುವ ಭಾರತೀಯ ತೋಳಗಳು ಸುಮಾರು 10 ವರ್ಷಗಳ ಬಳಿಕ ಆಂಧ್ರ ಪ್ರದೇಶದ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿವೆ.

ಹೌದು.. ಆಂಧ್ರ ಪ್ರದೇಶದ ನಲ್ಲಮಲ ಅರಣ್ಯ ವಲಯದ ಅರಣ್ಯಾಧಿಕಾರಿಗಳು ಇತ್ತೀಚೆಗೆ ದೋರ್ನಾಳ-ಆತ್ಮಕೂರು ಗಡಿ ಪ್ರದೇಶದಲ್ಲಿ ಅಳಿವಿನಂಚಿನಲ್ಲಿರುವ ಭಾರತೀಯ ತೋಳಗಳನ್ನು ಪತ್ತೆ ಮಾಡಿದ್ದಾರೆ. ಸುಮಾರು ಒಂದು ದಶಕದ ನಂತರ ಈ ವಿಶೇಷ ವನ್ಯಜೀವಿ ಕಾಣಿಸಿಕೊಂಡಿರುವುದು ಅರಣ್ಯಾಧಿಕಾರಿಗಳು ಮತ್ತು ವನ್ಯಜೀವಿ ಪ್ರಿಯರಲ್ಲಿ ಹರ್ಷವನ್ನು ತಂದಿದೆ. ಒಂದು ತಿಂಗಳ ಹಿಂದೆ, ರೊಳ್ಳಪಾಡು ಅರಣ್ಯ ಪ್ರದೇಶದಲ್ಲಿ ತೋಳಗಳ ಗುಂಪನ್ನು ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಹಿಡಿಯಲಾಗಿತ್ತು. ಕೆಲವು ದಿನಗಳ ಹಿಂದೆ, ಮತ್ತೊಂದು ಹಿಂಡು ದೋರ್ನಾಳ-ಆತ್ಮಕೂರು ಶ್ರೀಶೈಲಂ ಅರಣ್ಯ ಪ್ರದೇಶದ ಬಳಿ ಕಾಣಿಸಿಕೊಂಡಿತ್ತು.

ಈ ಬಗ್ಗೆ ಮಾತನಾಡಿರುವ ಮಾರ್ಕಾಪುರ ಅರಣ್ಯ ಇಲಾಖೆ ಉಪ ನಿರ್ದೇಶಕ ವಿಘ್ನೇಶ್ ಅಪ್ಪಾವು ಅವರು, 'ಸುಮಾರು 2-3 ದಶಕಗಳ ಹಿಂದೆ, ನಲ್ಲಮಲ ಅರಣ್ಯ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಹಲವಾರು ಭಾರತೀಯ ತೋಳಗಳು ಚಲಿಸುತ್ತಿದ್ದವು. ಆದಾಗ್ಯೂ, ವಿವಿಧ ಕಾರಣಗಳಿಂದ, ಕಳೆದ ಕೆಲವು ವರ್ಷಗಳಿಂದ ಅವುಗಳ ಸಂಖ್ಯೆಯು ತೀವ್ರವಾಗಿ ಕುಸಿಯಿತು. ನಮ್ಮ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಕ್ಷೇತ್ರ ಸಿಬ್ಬಂದಿ ಕೈಗೊಂಡ ಕ್ರಮಗಳಿಂದ ಅರಣ್ಯದ ಪರಿಸರ ಸಮತೋಲನವನ್ನು ಉತ್ತಮವಾಗಿ ನಿರ್ವಹಿಸಲಾಗಿದೆ. ಇದೀಗ ತೋಳಗಳು ಸಂಖ್ಯೆ ಹೆಚ್ಚಳವಾಗ ತೊಡಗಿವೆ ಎಂದು  ಹೇಳಿದರು.

ವೈಜ್ಞಾನಿಕವಾಗಿ ಕ್ಯಾನಿಸ್ ಲೂಪಸ್ ಪ್ಯಾಲಿಪ್ಸ್ ಎಂದು ಕರೆಯಲ್ಪಡುವ ಈ ಪ್ರಭೇದವು ಆಂಧ್ರಪ್ರದೇಶದ ಎಲ್ಲಾ ಗ್ರಾಮೀಣ ಹುಲ್ಲುಗಾವಲುಗಳಲ್ಲಿ ವಿಶೇಷವಾಗಿ ನಲ್ಲಮಲ ಅರಣ್ಯ ಪ್ರದೇಶದ ಪಕ್ಕದಲ್ಲಿರುವ ಪ್ರಕಾಶಂ ಜಿಲ್ಲೆಯ ಭಾಗಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಆದಾಗ್ಯೂ, ಕೃಷಿ ಕ್ಷೇತ್ರಗಳಲ್ಲಿ ವಿದ್ಯುತ್ ಬೇಲಿ, ವ್ಯಾಪಕವಾದ ಕೀಟನಾಶಕಗಳ ಬಳಕೆ, ಆಹಾರ ಮೂಲಗಳು ಕಡಿಮೆಯಾಗುವುದು ಸೇರಿದಂತೆ ವಿವಿಧ ಕಾರಣಗಳಿಂದ ನಲ್ಲಮಲದಲ್ಲಿ ತೋಳಗಳ ಸಂಖ್ಯೆ ಇಳಿಮುಖವಾಗಿದೆ. ಈ ತೋಳಗಳು ಸಂಭಾವ್ಯ ಜಾನುವಾರು ಪರಭಕ್ಷಕಗಳಾಗಿವೆ ಮತ್ತು ಮುಖ್ಯವಾಗಿ ಕಡವೆ, ಜಿಂಕೆ, ಕುರಿ, ಮೇಕೆ ಮತ್ತು ಮೊಲಗಳನ್ನು ತಿನ್ನುತ್ತವೆ. ಅವು ಸಾಮಾನ್ಯವಾಗಿ ಸಣ್ಣ ಗುಂಪುಗಳಲ್ಲಿ ವಾಸಿಸುತ್ತವೆ. ಈ ಗುಂಪಿನಲ್ಲಿ ಹೆಚ್ಚು ಎಂದರೆ 6-8 ತೋಳಗಳು ಇರಬಹುದು. ಇದೂ ಕೂಡ ಅಪರೂಪವಾಗಿ ಕಾಣುತ್ತದೆ. ಆದಾಗ್ಯೂ, ಕಡವೆಗಳಂತಹ ದೊಡ್ಡ ಬೇಟೆಯನ್ನು ಗುರಿಯಾಗಿಸಿಕೊಂಡಾಗ, ಅವು ಜೋಡಿ-ಜೋಡಿಯಾಗಿ ಬೇಟೆಯಾಡಲು ಬಯಸುತ್ತವೆ ಎಂದು ಹೇಳಿದರು.

“ತೋಳಗಳನ್ನು ರಕ್ಷಿಸಲು ನಾವು ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ನಲ್ಲಮಲ ಅರಣ್ಯದ ಪರಿಸರ, ವನ್ಯಜೀವಿ ಮತ್ತು ಜೀವವೈವಿಧ್ಯಕ್ಕೆ ಹಾನಿಯುಂಟುಮಾಡುವ ಯಾವುದೇ ಚಟುವಟಿಕೆಯಲ್ಲಿ ಸಾರ್ವಜನಿಕರು ಭಾಗವಹಿಸದಂತೆ ವಿನಂತಿಸುತ್ತೇವೆ. ಪ್ರಾಣಿಗಳಿಗೆ ಹಾನಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ವಿಘ್ನೇಶ್ ತಿಳಿಸಿದ್ದಾರೆ. ಸುದ್ದಿಗೆ ಪ್ರತಿಕ್ರಿಯಿಸಿದ ನಲ್ಲಮಲ-ಶ್ರೀಶೈಲಂ ಅರಣ್ಯ ವಲಯದ ಅಧಿಕಾರಿ (ಎಫ್‌ಆರ್‌ಒ-ಜೀವವೈವಿಧ್ಯ) ಶೇಕ್ ಮೊಹಮ್ಮದ್ ಹಯಾತ್, “ನಲ್ಲಮಲ ಅರಣ್ಯದಲ್ಲಿ ಭಾರತೀಯ ತೋಳಗಳನ್ನು ನೋಡುವುದು ಪರಿಸರ ಸಮತೋಲನ ಮತ್ತು ಜೀವವೈವಿಧ್ಯಕ್ಕೆ ಉತ್ತಮ ಸಂಕೇತವಾಗಿದೆ. ಶೆಡ್ಯೂಲ್-1 ವರ್ಗದ ಅಡಿಯಲ್ಲಿ ಇರಿಸಲಾದ ತೋಳಗಳ ಜಾತಿಗಳು ಹುಲಿಗಳಂತೆ ಅಳಿವಿನಂಚಿನಲ್ಲಿವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com