social_icon

ಯಕ್ಷಗಾನದಲ್ಲಿ ಸಾಧನೆ: ಅಕ್ಷರದ ಹಂಗಿಲ್ಲದೆಯೂ ಸಾಧಕನಾಗಬಹುದೆಂದು ತೋರಿಸಿಕೊಟ್ಟ 'ಬನ್ನಂಜೆ ಸಂಜೀವ ಸುವರ್ಣ'

ಕರಾವಳಿ ಪ್ರದೇಶ ಮತ್ತು ಮಲೆನಾಡು ಎಂದ ಕೂಡಲೇ ನಮಗೆ ನೆನಪಾಗುವುದು ಕಡಲು ತೀರ, ಸಾಹಿತ್ಯ, ರುಚಿಕರವಾದ ಊಟ, ಮಲೆನಾಡ ತಪ್ಪಲು ಆದರೆ ಅದಕ್ಕೂ ಮೀರಿ ಇಲ್ಲಿ ಒಂದು ವಿಶೇಷತೆ ಇದೆ ಅದುವೇ ಯಕ್ಷಗಾನ.

Published: 01st October 2023 02:51 PM  |   Last Updated: 04th October 2023 07:54 PM   |  A+A-


Bannanje Sanjeeva Suvarna

ಬನ್ನಂಜೆ ಸಂಜೀವ ಸುವರ್ಣ

Posted By : Manjula VN
Source : The New Indian Express

ಯಕ್ಷಗಾನ ಎಂಬುದು ಕರಾವಳಿಯ ಅದ್ಭುತ ಕಲೆಗಳಲ್ಲಿ ಒಂದಾಗಿದ್ದು ಅದನ್ನು ನೋಡುವುದೇ ಒಂದು ಸೊಬಗು. ಪುರಾಣದ ಕಥೆಗಳನ್ನು ಎಳೆಎಳೆಯಾಗಿ ತನ್ನದೇ ಭಾಷಾ ಸಾಹಿತ್ಯದಲ್ಲಿ ಬೆಸೆದು ಹಾಡುವ ಪರಿ ಎಂತಹವರನ್ನಾದರೂ ಮೋಡಿ ಮಾಡದೇ ಇರಲಾರದು. ರಂಗಸ್ಥಳ ಮತ್ತು ಅದರ ಸುತ್ತ ಜಗಮಗಿಸುವ ಬೆಳಕಿನ ಹಿಂದೆ ಕುಳಿತಿರುವ ಹಿಮ್ಮೇಳ ಮುಂಭಾಗದಲ್ಲಿ ವೇಷಗಳನ್ನು ಹಾಕಿಕೊಂಡು ಆರ್ಭಟಿಸುವ ಯಕ್ಷ ವೇಷಧಾರಿಗಳನ್ನು ನೋಡುತ್ತಾ ಸಮಯವಾಗುವುದೇ ತಿಳಿಯುವುದಿಲ್ಲ. ಅದರಲ್ಲೂ ಕಥೆಗಳ ಮೂಲಕವೇ ಸಮಾಜಮುಖಿ ಚಿಂತನೆಗಳನ್ನು ಬಿತ್ತುತ್ತಾ ತಿಳುವಳಿಕೆಯನ್ನು ಹೆಚ್ಚಿಸುವ ಮಾಧ್ಯಮವಾಗಿ, ಇಂದು ದೇಶದೆಲ್ಲೆಡೆ ಪ್ರಚಾರಗೊಂಡು ತನ್ನದೇ ಹಿರಿಮೆಯ ಮೂಲಕ ಕನ್ನಡದ ಜಾನಪದ ಲೋಕದ ಜನಪ್ರಿಯ ಕಲೆ ಎಂಬ ಹೆಗ್ಗಳಿಕೆಯೊಂದಿಗೆ ಮುಂದೆ ಸಾಗುತ್ತಿದೆ ಈ ರಮ್ಯಾದ್ಭುತ ಕಲೆ.

ಯಕ್ಷಗಾನದಲ್ಲಿ ಬನ್ನಂಜೆ ಸಂಜೀವ ಸುವರ್ಣ (68) ಅವರು ಪ್ರಮುಖರಾಗಿದ್ದು, ತುಳುನಾಡಿನ ಗಂಡು ಕಲೆ ಯಕ್ಷಗಾನದಲ್ಲಿ ಇವರದ್ದು ಭಾರೀ ದೊಡ್ಡ ಹೆಸರು. ಕಲಾವಿದನಾಗಿ, ಗುರುವಾಗಿ ಯಕ್ಷಗಾನ ಕಲೆಯನ್ನು ಜಗದಗಲ ಪ್ರಚುರಪಡಿಸಿದವರಲ್ಲಿ ಇವರು ಒಬ್ಬರು. ಜ್ಞಾನಪೀಠ ಪುರಸ್ಕೃತ ಕೋಟ ಶಿವರಾಮ ಕಾರಂತರ ಗರಡಿಯಲ್ಲಿ ಪಳಗಿದವರು. ಕಲಾವಿದ ಮಾತ್ರವಲ್ಲ, ಬಡ ಮಕ್ಕಳ ಪಾಲಿಗೆ ಅಪ್ಪ-ಅಮ್ಮ, ಗುರು ಎಲ್ಲವೂ ಹೌದು.

100%
ಕೋಟ ಶಿವರಾಮ ಕಾರಂತ

ಸೆಪ್ಟಂಬರ್ 9-1955ರಂದು ಉಡುಪಿಯಲ್ಲಿ ಜನಿಸಿದರು. ಓದಿರುವುದು 2ನೇ ತರಗತಿಯಾದರೂ ದೇಶ-ವಿದೇಶಗಳಲ್ಲಿ ಸುತ್ತಾಡಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಮತ್ತು ಸಾಮಾಜಿಕವಾಗಿ ಸವಾಲನ್ನು ಎದುರಿಸುತ್ತಿದ್ದ ಸಾಮುದಾಯಿಕ ಹಿನ್ನೆಲೆಯಲ್ಲಿ ಹುಟ್ಟಿದ ಇವರು ಆಕಸ್ಮಿಕವಾಗಿ ಯಕ್ಷಗಾನದತ್ತ ಸೆಳೆಯಲ್ಪಟ್ಟರು. 2ನೇ ತರಗತಿ ಓದಿ ಶಾಲಾಶಿಕ್ಷಣವನ್ನು ಅನಿವಾರ್ಯವಾಗಿ ನಿಲ್ಲಸಬೇಕಾದ ಸ್ಥಿತಿಯಲ್ಲಿದ್ದ ಸಂಜೀವ ಸುವರ್ಣ, ಗುಂಡಿಬೈಲು ನಾರಾಯಣ ಶೆಟ್ಟರಲ್ಲಿ ಯಕ್ಷಗಾನದ ಪ್ರಾಥಮಿಕ ಪಾಠಗಳನ್ನು ಕಲಿತರೆ, ಮೆಟ್ಕಲ್ ಕೃಷ್ಣಯ್ಯ ಶೆಟ್ಟರು, ಮಾರ್ಗೋಳಿ ಗೋವಿಂದ ಸೇರಗಾರ ಅವರಲ್ಲಿ ಯಕ್ಷಗಾನದ ಅನುಭವವನ್ನು ವಿಸ್ತರಿಸಿಕೊಂಡರು.

1978ರಲ್ಲಿ ದೆಹಲಿಯ ಎನ್ ಎಸ್ ಡಿಗೆ ತೆರಳಿ ಬಿ.ವಿ.ಕಾರಂತರ ಮ್ಯಾಕ್ ಬೆತ್ ನಾಟಕಕ್ಕೆ ಸಹಾಯಕರಾಗುವುದರ ಮೂಲಕ ರಂಗಭೂಮಿಯ ಅನುಭವ ಗಳಿಸಿದರು. ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಮಟಪಾಡಿ ವೀರಭದ್ರ ನಾಯಕರ ಗುರುತ್ವವು ಕಲಾಬದುಕಿನ ಹೊಸ ಬಾಗಿಲನ್ನು ತೆರೆಯಿತು. ಗುರು ನೀಲಾವರ ರಾಮಕೃಷ್ಣಯ್ಯ ಅವರು ಭಾಗವತಿಕೆಯೊಂದಿಗೆ ಯಕ್ಷಗಾನದ ಸಂಸ್ಕಾರವನ್ನು ಊಡಿಸಿದರು.

ಗುರು ಹಿರಿಯಡಕ ಬಿರ್ತಿ ಬಾಲಕೃಷ್ಣ ಅವರೊಂದಿಗೆ ಮಾಯಾರಾವ್ ಅವರ ತಂಡದಲ್ಲಿ ಯುರೋಪ್ ಪ್ರವಾಸ ಮಾಡುವುದರೊಂದಿಗೆ ಯಕ್ಷಗಾನ ಸಾಧನೆಯ ಮತ್ತೊಂದು ಮಜಲು ತೆರೆದುಕೊಂಡಿತು. ಕೋಟ ಶಿವರಾಮ ಕಾರಂತರ ಬ್ಯಾಲೆಯಂಥ ಯಕ್ಷಗಾನ ಪ್ರಯೋಗಗಳಲ್ಲಿ ಭಾಗವಹಿಸಿ ಹಲವು ದೇಶಗಳನ್ನು ಸುತ್ತಿದರು. ಬದುಕಿನ ನಿರ್ಣಾಯಕ ಘಟ್ಟಗಳಲ್ಲಿ ಶಿವರಾಮ ಕಾರಂತರಿಂದಲೇ ಮಾರ್ಗದರ್ಶನ ಪಡೆದ ಭಾಗ್ಯ ಸಂಜೀವ ಸುವರ್ಣರದು.

ಯಕ್ಷಗಾನ ಕಲಾವಿದರಾಗಿ ಸುಮಾರು ಐವತ್ತು ದೇಶಗಳನ್ನು ಮತ್ತು ಭಾರತದಾದ್ಯಂತ ಹಲವು ನಗರಗಳನ್ನು ಸುತ್ತಿರುವ ಸಂಜೀವ ಸುವರ್ಣರು ಸಮಕಾಲೀನ ಪ್ರಯೋಗಗಳ ಅನುಭವಿಯಾದರೂ ಸಾಂಪ್ರದಾಯಿಕ ಯಕ್ಷಗಾನದ ಬಗ್ಗೆ ಆಳವಾದ ಅಧ್ಯಯನ ಮಾಡಿ, ಪೂರ್ವರಂಗವನ್ನು ಸಮಗ್ರವಾಗಿ ಪ್ರಸ್ತುತಪಡಿಸಬಲ್ಲ ಸಮರ್ಥರು. ನಾಟ್ಯಾಭಿನಯ, ವೇಷಭೂಷಣ ತಯಾರಿಕೆ, ಹಿಮ್ಮೇಳ, ಚೆಂಡೆ-ಮದ್ದಲೆ ತಯಾರಿಕೆ ಹೀಗೆ ಯಕ್ಷಗಾನದ ಸಕಲ ಅಂಗಗಳನ್ನು ಬಲ್ಲವರು. ಜರ್ಮನಿಯ ಕ್ಯಾಥರೀನ್ ಬೈಂದರ್ ಅವರು ಸಂಜೀವ ಸುವರ್ಣರ ಗುರುತ್ವದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಪಿಎಚ್.ಡಿ ಮಾಡಿದ್ದಾರೆ.

ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಯಕ್ಷಗಾನ ಕಲಿಸಿದ್ದು ಸಂಜೀವ ಸುವರ್ಣರ ಹೆಚ್ಚುಗಾರಿಕೆ. ಚಿದಂಬರರಾವ್ ಜಂಬೆಯವರೊಂದಿಗೆ ಎನ್ ಎಸ್ ಡಿಯ ವಿದ್ಯಾರ್ಥಿಗಳಿಗೆ ಯಕ್ಷಗಾನೀಯವಾದ ಕೊರಿಯೋಗ್ರಪಿ ಕಲಿಸಿಕೊಟ್ಟಿದ್ದಾರೆ. ಪ್ರಸ್ತುತ ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಪ್ರಾಚಾರ್ಯರಾಗಿರುವ ಸಂಜೀವ ಸುವರ್ಣ ಅವರು ಕಳೆದ ಕೆಲವು ವರ್ಷಗಳಿಂದ ಅನೇಕ ಮಕ್ಕಳಿಗೆ ಉಚಿತ ಶಾಲಾಶಿಕ್ಷಣ ಮತ್ತು ಯಕ್ಷಗಾನ ಶಿಕ್ಷಣ ನೀಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಯಾವುದೇ ಕಲೆ ಮಾನವತೆಯನ್ನು ಪ್ರತಿಪಾದಿಸಬೇಕು ಮತ್ತು ಸಮಾಜಪುರವಾಗಿ ತೆರೆದುಕೊಳ್ಳಬೇಕೆಂಬುದು ಸಂಜೀವ ಸುವರ್ಣರ ತಾತ್ತ್ವಿಕ ನಿಲುವು.

ಮಾರ್ಗೋಳಿ ಗೋವಿಂದ ಸೇರಗಾರ ಅವರಿಂದ ಯಕ್ಷಗಾನದ ಬಗ್ಗೆ ತಿಳಿದುಕೊಂಡೆ. ಪರಿಣಿತ ಶಿಕ್ಷಕರಿಂದ ಯಕ್ಷಗಾನದ ಎಲ್ಲ ಅಂಶಗಳನ್ನು ಕಲಿತುಕೊಂಡಿದ್ದೇ ನನ್ನ ಅದೃಷ್ಟ. ಮೇಳಗಳಲ್ಲಿ ಕೆಲಸ ಮಾಡಿ ಬೇಸತ್ತು ಹೋಗಿದ್ದೆ. ನಂತರ ಇತರೆ ಅವಕಾಶಗಳಿಗಾಗಿ ಹುಡುಕಾಟ ನಡೆಸಿದ್ದೆ. 1978 ರಲ್ಲಿ, ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್‌ಎಸ್‌ಡಿ)ದ ಅಂದಿನ ನಿರ್ದೇಶಕ ದಿವಂಗತ ಬಿ.ವಿ.ಕಾರಂತ್ (1929-2002) ‘ಮ್ಯಾಕ್‌ಬೆತ್’ ನಾಟಕವನ್ನು ಯಕ್ಷಗಾನ ಶೈಲಿಯಲ್ಲಿ ಪ್ರದರ್ಶಿಸಲು ಕಲಾವಿದರನ್ನು ಹುಡುಕುತ್ತಿದ್ದರು. ಎಂಜಿಎಂ ಕಾಲೇಜಿನ ಆಗಿನ ಪ್ರಾಂಶುಪಾಲರಾಗಿದ್ದ ಕೆ.ಎಸ್.ಹರಿದಾಸ ಭಟ್ ಅವರು ನನ್ನನ್ನು ಹಾಗೂ ಮತ್ತೊಬ್ಬ ಕಲಾವಿದನನ್ನು ದೆಹಲಿಗೆ ಕಳುಹಿಸಿದ್ದರು. ಇದರ ಬಳಿಕ 1982ರಲ್ಲಿ ಜರ್ಮನಿ, ಫ್ರಾನ್ಸ್, ನೈಜೀರಿಯಾ ಮತ್ತು ಇತರ ದೇಶಗಳಲ್ಲಿ ಪ್ರದರ್ಶನ ನೀಡಲು ಭಾರತೀಯ ತಂಡದ ಭಾಗವಾಗಲು ಅವಕಾಶ ತೊರೆತಿತು. ಇಲ್ಲಿಂದ ನನ್ನ ಪ್ರಯಾಣ ಆರಂಭವಾಯಿತು ಎಂದು ಸುವರ್ಣ ಅವರು ಹೇಳಿದ್ದಾರೆ.

ವಿದ್ಯಾರ್ಥಿಗಳು ಎಲ್ಲಾ ರೀತಿಯ ವೇಷಭೂಷಗಳ ಬಗ್ಗೆಯೂ ಕಲಿಯಬೇಕೆಂಬುದು ನನ್ನ ಬಯಕೆಯಾಗಿತ್ತು. ಯಕ್ಷಗಾನ ಗುರುಗಳಾದ ಹಾರಾಡಿ ನಾರಾಯಣ ಗಾಣಿಗ, ಹಾರಾಡಿ ಮಹಾಬಲ, ಚೇರ್ಕಾಡಿ ಮಾಧವ ನಾಯ್ಕ್ ಮತ್ತು ಬಿರ್ತಿ ಬಾಲಕೃಷ್ಣ ಅವರ ಬಳಿ ನಾನು ತರಬೇತಿ ಪಡೆದಿದ್ದೆ. ಈ ತರಬೇತಿಯೇ ಯಕ್ಷಗಾನದಲ್ಲಿ ಆಳಕ್ಕೆ ಹೋಗಲು ನನಗೆ ಸಹಾಯ ಮಾಡಿತು ಎಂದು ತಿಳಿಸಿದ್ದಾರೆ.

ಸುವರ್ಣ ಅವರು ಬಭ್ರುವಾಹನ, ಅಭಿಮನ್ಯು ಮತ್ತು ಶೂರ್ಪನಕ ಪಾತ್ರಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದು, ಹಾಸ್ಯ ಪಾತ್ರಗಳಲ್ಲೂ ಮಿಂಚಿದ್ದಾರೆ. 1982 ರಲ್ಲಿ ಪ್ರಸಿದ್ಧ ಸಾಹಿತಿ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟಾ ಶಿವರಾಮ ಕಾರಂತರ ಯಕ್ಷ ರಂಗವನ್ನು ಸೇರಿದ್ದೆ. ಕಾರಂತರು ನನ್ನನ್ನು ತಮ್ಮ ಮಗನಂತೆ ನೋಡಿಕೊಂಡಿದ್ದರು. ಮನೆ ನಿರ್ಮಾಣಕ್ಕೆ ನಿವೇಶನ ಖರೀದಿಗೆ ಹಣ ಸಹಾಯ ಮಾಡಿದ್ದರು. ಕಾರಂತರ ಅಂತಿಮ ಕ್ಷಣದವರೆಗೂ ನಾವು ಅವರ ಯಕ್ಷ ರಂಗದ ಜೊತೆಗಿದ್ದೆ ಎಂದಿದ್ದಾರೆ.

ಇದನ್ನೂ ಓದಿ: ಉಡುಪಿ: ಯಕ್ಷಗಾನ ನೋಡಲು ಈಗಲೇ ಬುಕ್ ಮಾಡಿ, 21 ವರ್ಷ ಕಾಯಿರಿ!

ಬಳಿಕ ಸುವರ್ಣ ಅವರು 1982 ರಲ್ಲಿ ಯಕ್ಷಗಾನ ಕೇಂದ್ರಕ್ಕೆ (ಎಂಜಿಎಂ ಕಾಲೇಜು) ಶಿಕ್ಷಕರಾಗಿ ಸೇರಿಕೊಂಡರು. 2004 ರಲ್ಲಿ ಅದರ ಪ್ರಾಂಶುಪಾಲರಾಗಿದ್ದರು. 2022 ರವರೆಗೆ ಆ ಹುದ್ದೆಯನ್ನು ನಿರ್ವಹಿಸಿದ ಅವರು, ಆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಕೆಲವು ವೈದ್ಯರಿಗೂ ಯಕ್ಷಗಾನವನ್ನು ಕಲಿಸಿದ್ದರು.

ಬಳಿಕ 2022ರಲ್ಲಿ ಉಡುಪಿಯಲ್ಲಿ ತಮ್ಮದೇ ಆದ ಯಕ್ಷ ಸಂಜೀವ ಯಕ್ಷಗಾನ ಕೇಂದ್ರವನ್ನು ಆರಂಭಿಸಿದರು. ಉಡುಪಿಯ ಅದಮಾರ್ ಮಠ ನಡೆಸುತ್ತಿರುವ ಪೂರ್ಣಪ್ರಜ್ಞಾ ಯಕ್ಷಗಾನ ಕೇಂದ್ರದಲ್ಲೂ ಯಕ್ಷಗಾನ ಕಲಿಸುತ್ತಿದ್ದಾರೆ. NSD ಯ ಯಕ್ಷಗಾನ ಶಿಕ್ಷಕರೂ ಆಗಿರುವ ಸುವರ್ಣ ಅವರು, ದೇಶದಾದ್ಯಂತ NSD ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸುತ್ತಿದ್ದಾರೆ.

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎಲ್.ಸಾಮಗ ಮಾತನಾಡಿ, ಗಂಡು, ಹೆಣ್ಣು, ಯುವಕ, ರಾಜ, ರಾಕ್ಷಸರು (ರಾಕ್ಷಸರು) ಅಥವಾ ಹಾಸ್ಯ ಯಾವುದೇ ಪಾತ್ರಗಳೇ ಇರಲಿ ಯಕ್ಷಗಾನ ನಾಟಕಗಳನ್ನು ಹೇಳಿಕೊಡುವುದರಲ್ಲಿ ಮತ್ತು ಅಭಿನಯಿಸುವುದರಲ್ಲಿ ಸುವರ್ಣ ಅವರು ಪರಿಣತರಾಗಿದ್ದಾರೆ. "ಶಿಕ್ಷಕರಾಗಿ ಮತ್ತು ಕಲಾವಿದರಾಗಿ, ಅವರ ಯುದ್ಧ ಕುಣಿತ (ಯುದ್ಧ ನೃತ್ಯ) ಮತ್ತು ಒಡಲಗ (ಪ್ರವೇಶ ನೃತ್ಯ) ಸೇರಿದಂತೆ ಯಕ್ಷಗಾನದ ನೃತ್ಯ ಸಂಯೋಜನೆಯ ಅವರ ಕಲ್ಪನೆಗಳು ಅತ್ಯುತ್ತಮವಾದದ್ದು. ಕಳೆದ 50 ವರ್ಷಗಳಲ್ಲಿ ವಾಣಿಜ್ಯೀಕರಣದಿಂದಾಗಿ ಕಳೆದು ಹೋಗಿದ್ದ ಬಡಗು ತಿಟ್ಟು ನೃತ್ಯ ಪ್ರಕಾರಗಳಾದ ಒಡಲಗ, ಯುದ್ಧ ಕುಣಿತ ಮತ್ತು ಪೂರ್ವ ರಂಗವನ್ನು ಪ್ರಚಲಿತಪಡಿಸುತ್ತಿದ್ದಾರೆ.  ಬಡಗು ತಿಟ್ಟು ನೃತ್ಯಕ್ಕೆ ಸುವರ್ಣ ಅವರು ಟ್ರೆಂಡ್‌ಸೆಟರ್ ಆಗಿದ್ದಾರೆ. ಕಳೆದ 30 ವರ್ಷಗಳಲ್ಲಿ, ನೃತ್ಯ ಪ್ರಕಾರವನ್ನು ಪರಿಪೂರ್ಣಗೊಳಿಸಿದ್ದಾರೆ. ಅದನ್ನು ಅವರ ವಿದ್ಯಾರ್ಥಿಗಳು ಮುಂದುವರಿಸುತ್ತಿದ್ದಾರೆಂದು ಹೇಳಿದ್ದಾರೆ.

ಸುವರ್ಣ ಅವರು ಸದಾ ಸೃಜನಾತ್ಮಕ ಚಿಂತನೆಗಳುಳ್ಳ ಕಲಾವಿದರಾಗಿದ್ದು, ಹಿಂದಿ ಮತ್ತು ಸಂಸ್ಕೃತದಲ್ಲಿಯೂ ಯಕ್ಷಗಾನವನ್ನು ಪ್ರದರ್ಶಿಸುತ್ತಿದ್ದಾರೆ. 2005-06 ರಲ್ಲಿ NSD ವಿದ್ಯಾರ್ಥಿಗಳು ಹಿಂದಿಯಲ್ಲಿ ಯಕ್ಷಗಾನ ಪ್ರಸಂಗ ಚಿತ್ರಪಟ ರಾಮಾಯಣವನ್ನು ಪ್ರದರ್ಶಿಸಿದ್ದರು.

ವಿನಮ್ರತೆಯುಳ್ಳ ಹಾಗೂ ಸ್ವಾಭಿಮಾನಿ ಗುರುವಾಗಿರುವ ಅವರು, ಕರ್ನಾಟಕ ರಾಜ್ಯೋತ್ಸವ ಮತ್ತು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ.

ಹಿಂದಿಗಿಂತಲೂ ಇಂದು ಯಕ್ಷಗಾನ ಕಲಾವಿದರಿಗೆ ಉತ್ತಮವಾಗಿ ಹಣ ಸಿಗುತ್ತಿದೆ. ಆದರೆ, ಕಲಾವಿದರು ತಮ್ಮ ಕೌಶಲ್ಯಗಳ ಸುಧಾರಿಸಿಕೊಳ್ಳುವತ್ತ ಗಮನಹರಿಸಬೇಕೆಂದು ಬನ್ನಂಜೆ ಸಂಜೀವ ಸುವರ್ಣ ಅವರು ತಿಳಿಸಿದ್ದಾರೆ.


Stay up to date on all the latest ವಿಶೇಷ news
Poll
N R narayana Murty

ಯಾವುದನ್ನೂ ಫ್ರೀಯಾಗಿ ಕೊಡಬಾರದು ಎಂದು ಎನ್ ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ.


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp