ನೇಮಿನಾಥ ತೀರ್ಥಂಕರ ದೇವಸ್ಥಾನ: ಬೆಳಗಾವಿ ಕಮಲ ಬಸದಿಯ ಬೆರಗುಗೊಳಿಸುವ ಸೌಂದರ್ಯ ಸವಿಯಿರಿ...

ಬೆಳಗಾವಿ ಕೋಟೆಯೊಳಗಿನ ಮತ್ತೊಂದು ಅದ್ಭುತವೆಂದರೆ 'ಕಮಲ ಬಸದಿ'. ಇದು ಶ್ರೀ ನೇಮಿನಾಥ ತೀರ್ಥಂಕರ ದೇವಸ್ಥಾನ ಎಂಬ ಜೈನ ದೇವಾಲಯವಾಗಿದ್ದು, ಕಮಲ ಬಸದಿ ಎಂದೇ ಹೆಚ್ಚು ಜನಪ್ರಿಯವಾಗಿದೆ. ಇಲ್ಲಿನ ದೇವಸ್ಥಾನದ ರ೦ಗಮ೦ಟಪದ ಛಾವಣಿಯಲ್ಲಿ ಕಮಲದ ದಳಗಳನ್ನು ಕೆತ್ತಲಾಗಿದ್ದು, ಪ್ರವಾಸಿಗರನ್ನು ಬೆರಗುಗೊಳಿಸುತ್ತದೆ.
ಕಮಲ ಬಸದಿ
ಕಮಲ ಬಸದಿ

ಬೆಳಗಾವಿ: ಬೆಳಗಾವಿಯ ಪೂರ್ವ ಭಾಗದ ಕೋಟೆ ಕೆರೆ ಬಳಿಯಲ್ಲಿ ವಿಶಾಲವಾದ 12ನೇ ಶತಮಾನದ ಬೆಳಗಾವಿ ಕೋಟೆಯಿದೆ. ಕರ್ನಾಟಕದ ಅತ್ಯಂತ ಹಳೆಯ ಕೋಟೆಗಳಲ್ಲಿ ಒಂದಾದ ಇದು ಹಲವಾರು ದೇವಾಲಯಗಳು, ಮಸೀದಿಗಳು ಮತ್ತು ಜೈನ ಬಸದಿಗಳನ್ನು ಹೊಂದಿದೆ. ಪ್ರತಿಯೊಂದರ ವಾಸ್ತುಶಿಲ್ಪವೂ ಅದ್ಭುತ ಮತ್ತು ಧಾರ್ಮಿಕ ಸಾಮರಸ್ಯದ ಜೀವಂತ ಉದಾಹರಣೆಯಾಗಿದೆ. 

ಇದರೊಳಗಿನ ಮತ್ತೊಂದು ಅದ್ಭುತವೆಂದರೆ 'ಕಮಲ ಬಸದಿ'. ಇದು ಶ್ರೀ ನೇಮಿನಾಥ ತೀರ್ಥಂಕರ ದೇವಸ್ಥಾನ ಎಂಬ ಜೈನ ದೇವಾಲಯವಾಗಿದ್ದು, ಕಮಲ ಬಸದಿ ಎಂದೇ ಹೆಚ್ಚು ಜನಪ್ರಿಯವಾಗಿದೆ. ಇಲ್ಲಿನ ದೇವಸ್ಥಾನದ ರ೦ಗಮ೦ಟಪದ ಛಾವಣಿಯಲ್ಲಿ ಕಮಲದ ದಳಗಳನ್ನು ಕೆತ್ತಲಾಗಿದ್ದು, ಪ್ರವಾಸಿಗರನ್ನು ಬೆರಗುಗೊಳಿಸುತ್ತದೆ. ಈ ಆಕರ್ಷಕ ಸ್ಮಾರಕವು ಬಸದಿಯು ರಾಂಪಾರ್ಟ್ ರಸ್ತೆಯ ಕೊನೆಯಲ್ಲಿ ಕೋಟೆಯೊಳಗೆ ಅಡಗಿ ಕುಳಿತಂತಿದೆ. ಇದರ ಸುತ್ತಲೂ ಹಚ್ಚ ಹಸಿರು ಹೊದ್ದು ಕಂಗೊಳಿಸುತ್ತಿದೆ.

ಕ್ರಿ.ಶ. 1204 ರಲ್ಲಿ ಈ ಬಸದಿಯನ್ನು ರಟ್ಟ ರಾಜವಂಶದ ರಾಜ ನಾಲ್ಕನೆಯ ಕಾರ್ತವೀರ್ಯನ ಕಾಲದಲ್ಲಿ ಮಂತ್ರಿಯಾಗಿದ್ದ ಬಿಚಿರಾಜನು ಕಟ್ಟಿಸಿದನು. ಬೆಳಗಾವಿಯನ್ನು ಚಾಲುಕ್ಯರು, ರಾಷ್ಟ್ರಕೂಟರು, ರಟ್ಟರು, ಗೋವಾ ಕದಂಬರು, ಯಾದವರು, ವಿಜಯನಗರದ ಅರಸರು, ಬಹುಮನಿಗಳು, ಮರಾಠರು ಮತ್ತು ಬ್ರಿಟಿಷರು ಸೇರಿದಂತೆ ಹಲವಾರು ರಾಜವಂಶಗಳು ಆಳಿವೆ. ಈ ಕೋಟೆಯನ್ನು ವಿವಿಧ ಆಡಳಿತಾವಧಿಯಲ್ಲಿ ಅನೇಕ ಬಾರಿ ಪುನರ್ನಿರ್ಮಿಸಲಾಗಿದ್ದರೂ, ಬಸದಿಯು ಗಟ್ಟುಮುಟ್ಟಾಗಿ ನಿಂತಿದೆ ಮತ್ತು ಸುಮಾರು 800 ವರ್ಷಗಳ ಹಿಂದಿನ ಸ್ಥಳೀಯ ಕುಶಲಕರ್ಮಿಗಳ ಕೌಶಲ್ಯಕ್ಕೆ ಸಾಕ್ಷಿಯಾಗಿದೆ.

ಈ ಬಸದಿಯನ್ನು ರಟ್ಟರ ಕಾಲಘಟ್ಟದಲ್ಲಿ ನಿರ್ಮಿಸಿದ್ದರೂ, ಇದು ಪಶ್ಚಿಮ ಚಾಲುಕ್ಯರ ಶೈಲಿಯ ವಾಸ್ತುಶಿಲ್ಪದಿಂದ ಪ್ರಭಾವಿತವಾಗಿ ಮುಖಮಂಟಪ ಮತ್ತು ಗರ್ಭಗೃಹಗಳನ್ನು ಒಳಗೊಂಡಿದೆ. ದೇಗುಲದ ಮೇಲೆ ಶ್ರೇಣೀಕೃತ ಛಾವಣಿಯನ್ನು ಹೊಂದಿದೆ.

ಈ ಬಸದಿಯನ್ನು ರಟ್ಟರ ಕಾಲಘಟ್ಟದಲ್ಲಿ ನಿರ್ಮಿಸಿದ್ದರೂ, ಇದು ಪಶ್ಚಿಮ ಚಾಲುಕ್ಯರ ಶೈಲಿಯ ವಾಸ್ತುಶಿಲ್ಪದಿಂದ ಪ್ರಭಾವಿತವಾಗಿ ಮುಖಮಂಟಪ ಮತ್ತು ಗರ್ಭಗೃಹಗಳನ್ನು ಒಳಗೊಂಡಿದೆ. ದೇಗುಲದ ಮೇಲೆ ಶ್ರೇಣೀಕೃತ ಛಾವಣಿಯನ್ನು ಹೊಂದಿದೆ. ಮುಖಮಂಟಪವನ್ನು ಅಲಂಕರಿಸಿರುವುದು ತಲೆಕೆಳಗಾದ ಬೃಹತ್ ಕಲ್ಲಿನಲ್ಲಿ ಕೆತ್ತಿದ ಕಮಲವಾಗಿದೆ. ಇದರಿಂದಲೇ ಇದನ್ನು ಕಮಲ ಬಸ್ತಿ ಎಂದೂ ಕರೆಯುತ್ತಾರೆ. ಒಂದೇ ರೀತಿಯಲ್ಲಿ ಕಾಣುವಂತೆ ಕೆತ್ತಲಾಗಿರುವ ಕಮಲದ ದಳಗಳು ಆಶ್ಚರ್ಯಚಕಿತರನ್ನಾಗಿಸುತ್ತವೆ. ಬೆಳೆಯುತ್ತಿರುವ ತಂತ್ರಜ್ಞಾನದ ಉದಯದ ವೇಳೆಯೂ ಹಿಂದಿನ ತಲೆಮಾರುಗಳ ಕುಶಲತೆಯ ಬಗ್ಗೆ ಅಚ್ಚರಿ ಉಂಟಾಗುತ್ತದೆ.

<strong>ದೇವಾಲಯದಲ್ಲಿನ ಕಮಲದ ಕೆತ್ತನೆಯು ಹಿಂದಿನ, ವರ್ತಮಾನ ಮತ್ತು ಭವಿಷ್ಯದ 24 ತೀರ್ಥಂಕರರನ್ನು ಪ್ರತಿನಿಧಿಸುತ್ತದೆ.</strong>
ದೇವಾಲಯದಲ್ಲಿನ ಕಮಲದ ಕೆತ್ತನೆಯು ಹಿಂದಿನ, ವರ್ತಮಾನ ಮತ್ತು ಭವಿಷ್ಯದ 24 ತೀರ್ಥಂಕರರನ್ನು ಪ್ರತಿನಿಧಿಸುತ್ತದೆ.

ದಳಗಳ ಕೆತ್ತನೆಯ ಒಳಗೆ ತೀರ್ಥಂಕರರ ಚಿತ್ರಗಳಿವೆ. ಒಟ್ಟಾರೆ ಕಮಲದ ದಳಗಳ ಮೇಲೆ ಒಟ್ಟು 72 ತೀರ್ಥಂಕರರ ಚಿತ್ರಗಳು ಕಂಡುಬರುತ್ತವೆ. ಇದು ಹಿಂದಿನ, ಪ್ರಸ್ತುತ ಮತ್ತು ಭವಿಷ್ಯದ 24 ತೀರ್ಥಂಕರರನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗಿದೆ. ನಾಲ್ಕು ದಿಕ್ಕುಗಳನ್ನು ಸೂಚಿಸುವ ಕೆತ್ತಿದ ದಿಗ್ಪಾಲ ದೇವತೆಯೊಂದಿಗೆ ಭವ್ಯವಾದ ಚಾವಣಿಯು ಎಂಟು ಕಂಬಗಳ ಮೇಲೆ ಭಾಗಶಃ ನಿಂತಿದೆ.

ಮುಖಮಂಟಪದಿಂದ ದೂರದಲ್ಲಿರುವ ಕೋಣೆ ಭಕ್ತರಿಗೆ ಪ್ರಾರ್ಥನಾ ಮಂದಿರವಾಗಿದೆ. ಇದು ಭಾಗಶಃ ತೆರೆದ ಸೀಲಿಂಗ್‌ನೊಂದಿಗೆ ಗೋಡೆಗಳು ಮತ್ತು ಬಾಗಿಲುಗಳ ಮೇಲೆ ವಿನ್ಯಾಸಗಳನ್ನು ಹೊಂದಿದೆ. ಚಾಕಾಕಾರವಾಗಿರುವ ಮುಂದಿನ ಕೋಣೆಯಾದ ಗರ್ಭಗೃಹದದ ಮಧ್ಯದಲ್ಲಿ 22ನೇ ತೀರ್ಥಂಕರರಾದ ನೇಮಿನಾಥರ ಧ್ಯಾನಮುದ್ರೆಯ ಸಿದ್ದಾಸನ ಮೂರ್ತಿ ಇದೆ. ವಿಗ್ರಹದ ಹಿನ್ನೆಲೆಯಲ್ಲಿ ಕಲ್ಲಿನಿಂದ ಕೆತ್ತಿದ ಕಲ್ಪವೃಕ್ಷವನ್ನು ಹೊಂದಿದೆ. ಈ ಗರ್ಭಗೃಹದಲ್ಲಿ ತೀರ್ಥಂಕರಿಗೆ ದಿನನಿತ್ಯದ ಆಚರಣೆಗಳನ್ನು ಮಾಡಲಾಗುತ್ತದೆ. ಸದ್ಯಕ್ಕೆ ಈ ಬಸದಿಯು ಬಲವಾದ ಮತ್ತು ಗಟ್ಟಿಮುಟ್ಟಾಗಿ ಕಾಣುತ್ತಿದೆಯಾದರೂ, ಪರಂಪರೆಯನ್ನು ಸಾರುವ ಈ ತಾಣದ ಸಂರಕ್ಷಣೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಬಹಳ ಹಿಂದೆಯೇ ಕೈಗೆತ್ತಿಕೊಂಡಿದೆ.

ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್‌ನ ಬೆಳಗಾವಿ ಚಾಪ್ಟರ್‌ ಸಂಯೋಜಕರಾದ ಸ್ವಾತಿ ಜೋಗ್, ಮುಖಮಂಟಪವನ್ನು 1996 ರಲ್ಲಿ ಎಎಸ್‌ಐ ನವೀಕರಿಸಿ ಮರುಸ್ಥಾಪಿಸಿತು. ಈ ಸ್ಮಾರಕವು ಪ್ರವಾಸಿಗರು, ಭಕ್ತರು, ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಉತ್ಸಾಹಿಗಳಿಗೆ ಪ್ರಸಿದ್ಧ ಆಕರ್ಷಣೆಯಾಗಲು ಎಲ್ಲಾ ಅಂಶಗಳನ್ನು ಹೊಂದಿದೆ. ಪ್ರವಾಸಿಗರನ್ನು ಆಕರ್ಷಿಸಲು ಮಾಹಿತಿ ಕೇಂದ್ರಗಳು, ಶೌಚಾಲಯಗಳು ಮತ್ತು ಕುಡಿಯುವ ನೀರಿನ ವ್ಯವಸ್ಥೆಗಳನ್ನು ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು. 

ಸಾಮಾಜಿಕ ಸಂಸ್ಥೆಗಳು ಮತ್ತು ವ್ಯಕ್ತಿಗಳು ಮುಂದೆ ಬಂದು ಇಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಕೊಡುಗೆ ನೀಡಬೇಕೆಂದು ಒತ್ತಾಯಿಸಿದ ಅವರು, 'ನಾವು ಮಾಡಿದ ಸಂರಕ್ಷಣಾ ಕಾರ್ಯದ ಬಗ್ಗೆ ಕೃತಜ್ಞರಾಗಿರುತ್ತೇವೆ ಮತ್ತು ಸಂತೋಷಪಡುತ್ತೇವೆ. ಆದರೆ, ಈ ಸ್ಮಾರಕಕ್ಕೆ ಅರ್ಹವಾದ ಮನ್ನಣೆಯನ್ನು ನೀಡಲು ಹೆಚ್ಚಿನದನ್ನು ಮಾಡಬೇಕಾಗಿದೆ' ಎಂದು ಹೇಳಿದರು.

ಸಂರಕ್ಷಣಾ ಪ್ರಯತ್ನಗಳ ಭಾಗವಾಗಿ, ಸಮುದಾಯವು ಪ್ರತಿ ವರ್ಷ ದೇವಾಲಯದ ಪ್ರತಿಷ್ಠಾಪನೆಯ ವಾರ್ಷಿಕೋತ್ಸವವನ್ನು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ಆಯೋಜಿಸುತ್ತದೆ. ರಾಜವಂಶಗಳು ಬದಲಾದರೂ ಕೂಡ ದೇವಾಲಯವು ಪ್ರಬಲ ಮತ್ತು ಬಲಿಷ್ಠವಾಗಿ ನಿಂತಿದೆ. ಅಲ್ಲದೆ, ಅನೇಕ ಸಾಮ್ರಾಜ್ಯಗಳ ಉದಯ ಮತ್ತು ಪತನಕ್ಕೆ ಸಾಕ್ಷಿಯಾಗಿದೆ. ಈ ವಿಸ್ಮಯಕಾರಿ ಸೃಷ್ಟಿಯ ಸೌಂದರ್ಯವು 800 ವರ್ಷಗಳಿಂದ ಬಾಡಿಹೋಗಿಲ್ಲ ಮತ್ತು ಮುಂಬರುವ ಪೀಳಿಗೆಗೆ ಅದ್ಭುತ ವಿಚಾರವಾಗಿಯೇ ಉಳಿದಿದೆ. ನೀವು ಒಂದು ಬಾರಿ ಬೆಳಗಾವಿಯಲ್ಲಿರುವ ಈ ಕಮಲ ಬಸದಿಗೆ ಭೇಟಿ ನೀಡಿದರೆ, ಇದು ನಿಮ್ಮನ್ನು ವಿಸ್ಮಯಗೊಳಿಸುವುದು ಖಚಿತ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com