
ಮಂಗಳೂರು: ಪ್ಲಾಸ್ಟಿಕ್. ಮೈಕ್ರೋಪ್ಲಾಸ್ಟಿಕ್ಸ್. ಮರುಬಳಕೆ. ಸುಸ್ಥಿರತೆ. ಇವುಗಳು ನಾವು ಆಗಾಗ್ಗೆ ಕೇಳುವ ಪದಗಳು. ಆದರೆ, ಪರಿಸರ ಸಂರಕ್ಷಿಸುವಲ್ಲಿ ಕೆನರಾ ಆರ್ಗನೈಸೇಶನ್ ಫಾರ್ ಡೆವಲಪ್‌ಮೆಂಟ್ ಅಂಡ್ ಪೀಸ್ (CODP) ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ.
ಮಂಗಳೂರಿನ ಕೆನರಾ ಆರ್ಗನೈಝೆಶನ್ ಆಫ್ ಡೆವಲಪ್‌ಮೆಂಟ್ ಆ್ಯಂಡ್ ಪೀಸ್ (ಸಿಒಡಿಪಿ) ಎಂಬ ಸಂಘಟನೆಯು ಮನೆಗಳಲ್ಲಿ ಸಂಗ್ರಹವಾದ ಪ್ಲಾಸ್ಟಿಕ್ ಗಳನ್ನು ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡುವ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದು, ಪ್ಲಾಸ್ಟಿಕ್ ಬಾಟಲಿಗಳು ಹಾಗೂ ಕವರ್‌ಗಳನ್ನು ಬಳಸಿಕೊಂಡು ಪರಿಸರ ಸ್ನೇಹಿ ಬೆಂಚ್‌ಗಳನ್ನು ನಿರ್ಮಿಸುವ ಕೆಲಸ ಮಾಡಲಾಗುತ್ತಿದೆ. ಇದರಿಂದ ಪ್ಲಾಸ್ಟಿಕ್‌ಗಳನ್ನು ಪರಿಸರಕ್ಕೆ ಪೂರಕವಾಗಿ ಹಾಗೂ ಯಾವುದೇ ಅಪಾಯ ಇಲ್ಲದ ರೀತಿಯಲ್ಲಿ ವಿಲೇವಾರಿ ಮಾಡಿದಂತಾಗುತ್ತಿದೆ.
ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆ ಆವರಣ, ಫಜೀರ್ ಚರ್ಚ್ ಆವರಣಗಳಲ್ಲಿ ಅತ್ಯಂತ ಸುಂದರವಾಗಿ ಬೆಂಚ್‌ಗಳನ್ನು ನಿರ್ಮಿಸಿ ಜನರ ಬಳಕೆಗೆ ಅನುಕೂಲ ಮಾಡಿಕೊಡಲಾಗಿದೆ. ಮುಂದೆ ಮತ್ತಷ್ಟು ಕಡೆ ಇಂತಹ ಬೆಂಚ್‌ಗಳನ್ನು ನಿರ್ಮಿಸುವುದು ಕೆನರಾ ಆರ್ಗನೈಝೆಶನ್ ಆಫ್ ಡೆವಲಪ್‌ಮೆಂಟ್ ಆ್ಯಂಡ್ ಪೀಸ್ ಸಂಘಟನೆಯ ಉದ್ದೇಶವಾಗಿದೆ.
ಈ ಬೆಂಚ್ ಗಳು 400 ವರ್ಷಗಳ ಕಾಲ ಬಾಳಿಕೆ ಬರುತ್ತವೆ. ಮೊದಲು ಪ್ಲಾಸ್ಟಿಕ್ ಕವರ್‌ಗಳನ್ನು ಕಸದ ಬುಟ್ಟಿಗೆ ಹಾಕಿ, ಬಳಿಕ ಒಟ್ಟು ಸೇರಿಸಿ ಬೆಂಕಿ ಹಾಕಿ ಸುಡುತ್ತಿದ್ದೆ. ಮುಂದೆ ನನಗೆ ಸಿಒಡಿಪಿ ಸಂಘಟನೆಯಿಂದ ಹೀಗೆ ಪ್ಲಾಸ್ಟಿಕ್ ಸುಡುವುದರಿಂದ ಅದರ ಕಾರ್ಬನ್ ಡೈ ಆಕ್ಸೈಡ್ ನಮ್ಮ ದೇಹಕ್ಕೆ ಬಹಳಷ್ಟು ಹಾನಿಕಾರಕ ಎಂಬುದು ಗೊತ್ತಾಯಿತು.
ಜರ್ಮನಿಯಿಂದ ಬಂದಿದ್ದ ಇಬ್ಬರು ವಿದ್ಯಾರ್ಥಿಗಳು ಪ್ಲಾಸ್ಟಿಕ್‌ಗಳನ್ನು ಈ ರೀತಿಯಾಗಿ ಬಳಕೆ ಮಾಡುವುದನ್ನು ತೋರಿಸಿಕೊಟ್ಟರು. ಅದರಂತೆ ನಾನು ಕೂಡ ತರಬೇತಿ ಪಡೆದು ಕೊಂಡಿದ್ದೇನೆ. ಇದರಿಂದ ನಮ್ಮ ಮನೆಯ ಫ್ಲಾಸ್ಟಿಕ್‌ಗಳನ್ನು ಸಮಪರ್ಕವಾಗಿ ಬಳಸಿಕೊಳ್ಳಬಹುದಾಗಿದೆ ಎನ್ನುತ್ತಾರೆ ಸಿಒಡಿಪಿ ನಿರ್ದೇಶಕ ಫಾದರ್ ವಿನ್ಸೆಂಟ್ ಡಿಸೋಜಾ.
ಮನೆಗೆ ತರುವ ತಂಪು ಪಾನೀಯದ ಬಾಟಲಿಗಳನ್ನು ಬಳಸಿಕದ ಬಳಿಕ ಹೊರಗಡೆ ಬಿಸಾಡುವ ಬದಲು, ಅದರೊಳಗೆ ಪ್ಲಾಸ್ಟಿಕ್ ಕಸಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕಟ್ ಮಾಡಿ ಹಾಕಬೇಕು. ಅದನ್ನು ಬಾಟಲಿಯೊಳಗೆ ಕೋಲು ಹಾಕಿ ಜಡಿಯಬೇಕು. ತುಂಬಾ ಟೈಟ್ ಆಗಿ ಒಳಗಡೆ ಪ್ಲಾಸ್ಟಿಕ್‌ಗಳು ತುಂಬಿಸ ಬೇಕು. ಹೀಗೆ ತುಂಬಿದ ಬಾಟಲಿಗಳು ಕಲ್ಲಿನಂತೆ ಗಟ್ಟೆಯಾಗುತ್ತದೆ. ಅದನ್ನು ಬೆಂಚ್ ನಿರ್ಮಿಸಲು ಬಳಸಿಕೊಳ್ಳಬಹುದು ಎಂದು ತಿಳಿಸಿದರು.
ಸುಮಾರು ಎರಡು ಲೀಟರ್ ಬಾಟಲಿಯಲ್ಲಿ ಆರು ತಿಂಗಳ ಕಾಲ ಬಳಕೆ ಮಾಡಿದ ಪ್ಲಾಸ್ಟಿಕ್ ತ್ಯಾಜ್ಯಗಳು ತುಂಬಿಸಬಹುದಾಗಿದೆ. ಇದರಿಂದ ಮನೆ ವಠಾರ ಕೂಡ ಕ್ಲೀನ್ ಆಗುತ್ತದೆ. ಇಂತಹ ಬಾಟಲಿಗಳಿಂದ ನಿರ್ಮಿಸಿದ ಬೆಂಚ್‌ಗಳು ಸುಮಾರು 400 ವರ್ಷಗಳಷ್ಟು ಬಾಳಿಕೆ ಬರುತ್ತದೆ ಎಂಬುದು ಆಶ್ಟರ್ಯಕರ. ನನ್ನ ವಠಾರದವರಿಗೆ ನಾನು ಮಾಹಿತಿ ನೀಡಿ, ಎಲ್ಲರೂ ಸವಾಲಾಗಿ ಸ್ವೀಕರಿಸಿ, ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಫಿಲಿಪೈನ್ಸ್ ಮೊದಲ ಪರಿಸರ-ಇಟ್ಟಿಗೆ ರಚನೆಯನ್ನು ಹೊಂದಿದ್ದರೂ, ಈ ವಿಶಿಷ್ಟ ಕೊಡುಗೆಯು ಭಾರತದಲ್ಲಿ ಕಾರ್ಯಸಾಧ್ಯವಾಗಿದೆ, ಇದು ಉದ್ಯೋಗಾವಕಾಶಗಳನ್ನು ಕೂಡ ಸೃಷ್ಟಿಸಲಿದೆ. ಫಾದರ್ ಮುಲ್ಲರ್ಸ್‌ನಲ್ಲಿರುವ ಬೆಂಚ್ ಅನ್ನು ಮೇ 2024 ರಲ್ಲಿ ಉದ್ಘಾಟಿಸಲಾಯಿತು. ವಿಶೇಷ ತರಬೇತಿ ಪಡೆದ ಇಬ್ಬರು ಕಾರ್ಮಿಕರು ಇದನ್ನು ನಿರ್ಮಿಸಿದರು.
ಸಾರ್ವಜನಿಕರ ಪ್ರತಿಕ್ರಿಯೆಗಳ ಆಧಾರದ ಮೇಲೆ ಬೆಂಚುಗಳನ್ನು ಸಿದ್ಧಪಡಿಸಲಾಗತ್ತಿದೆ. ಮರ ಹಾಗೂ ಸಸ್ಯೆಗಳ ಬೇರುಗಳ ಮುಟ್ಟವುದನ್ನು ತಡೆಯಲು ಬೆಂಚುಗಳನ್ನು ದೂರದಲ್ಲಿ ಇರಿಸಲಾಗುತ್ತಿದೆ. ಜನರು ವಿಶ್ರಾಂತಿಗೆ ನೆರಳಿಗಾಗಿ ಸಣ್ಣ ಎಲೆಗಳ ಸಸ್ಯಗಳನ್ನು ನಡೆಸಲಾಗುತ್ತಿದೆ ಎಂದು ಸಂಘಟನೆ ಮಾಹಿತಿ ನೀಡಿದೆ.
ಮಡಿಕೇರಿಯವರಾದ ದೀಪಕ್ ಅವರು ಕದ್ರಿಯಲ್ಲಿ ಹಸಿರು ಮತ್ತು ಬಿಳಿ ಚುಕ್ಕೆಗಳ ಬೆಂಚನ್ನು ನೋಟಿ ಆಶ್ಚರ್ಯಚಕಿತರಾದರು. ಈ ಚಿಂತನೆಯನ್ನು ತಮ್ಮ ಊರಿನಲ್ಲಿ ಕಾರ್ಯರೂಪಕ್ಕೆ ತರಬೇಕೆಂದು ಬಯಸಿದ್ದಾರೆ.
ಹೆಸರು ಹೇಳಲಿಚ್ಛಿಸದ ಎಂಜಿನಿಯರ್ ಒಬ್ಬರು ಮಾತನಾಡಿ, ಮರ ಅಥವಾ ಲೋಹದ ಬೆಂಚುಗಳಿಗಿಂತ ಇದು ಉತ್ತಮವಾಗಿದೆ ಎಂದು ಹೇಳಿದ್ದಾರೆ.
ಕೆನರಾ ಆರ್ಗನೈಝೆಶನ್ ಆಫ್ ಡೆವಲಪ್‌ಮೆಂಟ್ ಆ್ಯಂಡ್ ಪೀಸ್ ಈ ವರ್ಷ ತನ್ನ ಸುವರ್ಣ ಮಹೋತ್ಸವವನ್ನು (1974-2024) ಆಚರಿಸಿಕೊಳ್ಳುತ್ತಿದ್ದು, ತನ್ನ ಪರಿಸರ ಸ್ನೇಹಿ ಪ್ರಯತ್ನಗಳನ್ನು ಮುಂದುವರೆಸಿದೆ.
Advertisement