ಬೆಂಗಳೂರು: ಸಾಧಿಸಬೇಕೆಂಬ ಹಠ ಯಾವುದೇ ಅಡೆತಡೆಯನ್ನೂ ಮೀರುವ ಸಾಮರ್ಥ್ಯಹೊಂದಿರುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ 61 ವರ್ಷದ ಏಂಜೆಲೋ ಜೋಸೆಫ್..
ಹೌದು.. ಕೆಲವು ವರ್ಷಗಳ ಹಿಂದೆ ಕ್ವಾಡ್ರುಪಲ್ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 61 ವರ್ಷದ ಏಂಜೆಲೊ ಜೋಸೆಫ್ 'ವಿಶ್ವ ಹೃದಯ ದಿನ'ದಂದು ಸ್ಪೂರ್ತಿದಾಯಕ ಉದಾಹರಣೆ ನೀಡಲು ಸಜ್ಜಾಗಿದ್ದಾರೆ. ಜೋಸೆಫ್ ಈಗ ಭಾನುವಾರದಂದು ಅಂದರೆ ವಿಶ್ವ ಹೃದಯ ದಿನದಂದು 5.8k ಓಟಕ್ಕೆ ತಯಾರಿ ನಡೆಸುತ್ತಿದ್ದು, ನಂತರ ಅಕ್ಟೋಬರ್‌ನಲ್ಲಿ 10k ಓಟಕ್ಕೆ ಸಿದ್ದರಾಗುತ್ತಿದ್ದಾರೆ.
ವಯಸ್ಸು ಮತ್ತು ಅನಾರೋಗ್ಯ ಸಮಸ್ಯೆಗಳ ಹೊರತಾಗಿಯೂ ಆರೋಗ್ಯ ಮತ್ತು ಫಿಟ್‌ನೆಸ್‌ಗೆ ಹಿಂದಿರುಗಿದ ಅವರ ಪ್ರಯಾಣವು ಇತರರಿಗೆ ಸ್ಪೂರ್ತಿದಾಯಕವಾಗಿದ್ದು, ದೈಹಿಕ ಅಡೆತಡೆಗಳು ಮತ್ತು ವಯಸ್ಸು ಯಾರನ್ನೂ ತಮ್ಮ ಗುರಿ ಸಾಧನೆಯತ್ತ ಸಾಗುವುದನ್ನು ತಡೆಹಿಡಿಯಲಾರದು ಎಂಬುದನ್ನು ಸಾಬೀತು ಮಾಡಿದೆ. ಹಲವು ವೈದ್ಯರು ಜೋಸಫ್ ಅವರ ಹೃದಯದ ಸಮಸ್ಯೆಯಿಂದಾಗಿ ರನ್ನಿಂಗ್ ಮಾಡದಂತೆ ಸಲಹೆ ನೀಡಿದ್ದರು.
ಆದರೆ ಜೋಸೆಫ್ ಈ ಎಚ್ಚರಿಕೆಗಳನ್ನು ಮೀರಿ ನಿಧಾನ ನಡಿಗೆಯಿಂದ ಆರಂಭಿಸಿ ಇದೀಗ ರನ್ನಿಂಗ್ ವರೆಗೂ ಸಾಗಿದ್ದಾರೆ. ಸೌಮ್ಯ ನಡಿಗೆಯಿಂದ ನಿಧಾನವಾಗಿ ಆರಂಭವಾದ ಅವರ ರನ್ನಿಂಗ್ ಜರ್ನಿ ಕಾಲಾನಂತರದಲ್ಲಿ, TCS 10K ಮತ್ತು ಅರ್ಧ-ಮ್ಯಾರಥಾನ್‌ನಂತಹ ಈವೆಂಟ್‌ಗಳಲ್ಲಿ ಭಾಗವಹಿಸುವಂತಾಯಿತು.
ಈ ಬಗ್ಗೆ ಮಾತನಾಡಿರುವ ಜೋಸೆಫ್ ತಮ್ಮ ರನ್ನಿಂಗ್ ಜರ್ನಿಯಲ್ಲಿ ಕಠಿಣವಾಗಿದ್ದು, ಹೃದಯದ ಶಸ್ತ್ರಚಿಕಿತ್ಸೆ ಅಲ್ಲ.. ಆದರೆ ಮಾನಸಿಕ ಅಡೆತಡೆಗಳನ್ನು ಭೇದಿಸುವುದು. ಈ ಎಲ್ಲ ಅಡೆತಡೆಗಳನ್ನು ಭೇದಿಸಲು ನಾನು ಓಟವನ್ನು ಆರಂಭಿಸಿದೆ ಎಂದು ಹೇಳಿದ್ದಾರೆ.
ಅಂತೆಯೇ ತಮ್ಮ ಶಸ್ತ್ರಚಿಕಿತ್ಸೆ ಅನುಭವವನ್ನು ಹಂಚಿಕೊಂಡ ಅವರು, 'ಬೆಳಗಿನ ನಡಿಗೆಯ ಸಮಯದಲ್ಲಿ ಎದೆಯಲ್ಲಿ ಏನೋ ತೊಂದರೆಯಾಗುತ್ತಿದೆ ಎಂದು ಭಾಸವಾಯಿತು. ಇದರಿಂದ ಕೊಂಚ ಗಾಬರಿಯಾದೆ. ಕೂಡಲೇ ವೈದ್ಯರನ್ನು ಭೇಟಿಯಾದಾಗ ಅವರು ಟ್ರೆಡ್‌ಮಿಲ್ ಪರೀಕ್ಷೆಗೆ ಒಳಪಡಿಸಿದರು. ಈ ಪರೀಕ್ಷೆಯಲ್ಲಿ ಅವರ ಹೃದಯದಲ್ಲಿ ಅನೇಕ ಬ್ಲಾಕೇಜ್ ಇರುವುದು ಪತ್ತೆಯಾಯಿತು. ತುರ್ತು ಕ್ವಾಡ್ರುಪಲ್ ಬೈಪಾಸ್ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದರು. ಇದು ನನಗೆ ಆಘಾತವನ್ನುಂಟು ಮಾಡಿತ್ತು ಎಂದು ಹೇಳಿದರು.
ಆಧುನಿಕ ಜೀವನ ಶೈಲಿ, ಅಶಿಸ್ತು, ಅನಾರೋಗ್ಯಕರ ಜೀವನಶೈಲಿ ಮತ್ತು ಕೆಲಸದ ಒತ್ತಡಗಳು ಅವರ ಹೃದಯದ ಸ್ಥಿತಿಗೆ ಕಾರಣವಾಗಿತ್ತು. ಹೀಗಾಗಿ ಜೊಸೆಫ್ ಶಸ್ತ್ರಚಿಕಿತ್ಸೆಗೆ ಒಳಗಾದರು. ಶಸ್ತ್ರಚಿಕಿತ್ಸೆಯ ನಂತರ ಜೋಸೆಫ್ ಚೇತರಿಸಿಕೊಂಡಂತೆಯೇ, ಅವರ ಅರೋಗ್ಯದಲ್ಲಿ ಮತ್ತೊಂದು ಏರುಪೇರಾಯಿತು. ಬೆಡ್ ಸೋರ್ ಸಮಸ್ಯೆಗೆ ತುತ್ತಾಗಿ ಮತ್ತೆ ಆಸ್ಪತ್ರೆ ಮುಖ ನೋಡುವಂತಾಯಿತು.
ಅದಕ್ಕೆ ಹೆಚ್ಚುವರಿ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಇದರ ಬೆನ್ನಲ್ಲೇ ಗಟ್ಟಿ ನಿರ್ಧಾರ ಮಾಡಿದ ಜೋಸೆಫ್ ತಮ್ಮ ಆರೋಗ್ಯ ಮರಳಿ ಪಡೆಯಲು ನಿರ್ಧರಿಸಿದರು. ಅವರು ಚೇತರಿಸಿಕೊಂಡ ನಂತರ, ತಮ್ಮ ನೆರೆಹೊರೆಯ ಸುತ್ತಲ ಪ್ರದೇಶದಲ್ಲಿ ಸೌಮ್ಯವಾದ ನಡಿಗೆ ಪ್ರಾರಂಭಿಸಿದರು. ಕ್ರಮೇಣ ಅವರ ದೂರ ಮತ್ತು ತೀವ್ರತೆ, ಸಮಯವನ್ನು ಹೆಚ್ಚಿಸಿದರು. ಬಳಿಕ ಓಡಲು ಪ್ರಾರಂಭಿಸಿದರು. ಆರಂಭದಲ್ಲಿ ಸಾಕಷ್ಟು ಕಷ್ಟ ಎನಿಸಿದರೂ ಅದನ್ನು ಬಿಡದೇ ಸಾಧಿಸಲು ನಿರ್ಧರಿಸಿ ಈಗ ರನ್ನಿಂದ್ ಈವೆಂಟ್ ಗಳಲ್ಲಿ ಪಾಲ್ಗೊಳ್ಳುವವರೆಗೂ ಸಾಗಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ, ಜೋಸೆಫ್ ಅನೇಕ ರನ್ನಿಂಗ್ ಈವೆಂಟ್‌ಗಳಲ್ಲಿ ಭಾಗವಹಿಸಿದ್ದು, ವರ್ಲ್ಡ್ ಹಾರ್ಟ್ ಡೇ ಸಮೀಪಿಸುತ್ತಿರುವಂತೆ, ಜೋಸೆಫ್ ಅವರು ತಮ್ಮ ರೀತಿಯಂತೆ ಆರೋಗ್ಯ ಸವಾಲುಗಳನ್ನು ಎದುರಿಸುತ್ತಿರುವ ಇತರರನ್ನು ಪ್ರೇರೇಪಿಸಲು ಆಶಿಸಿದ್ದಾರೆ.
ಜೋಸೆಫ್ ಅವರಿಗೆ ಚಿಕಿತ್ಸೆ ನೀಡಿದ ಟ್ರೈಲೈಫ್ ಆಸ್ಪತ್ರೆಯ ಹೃದಯ ವಿಜ್ಞಾನದ ನಿರ್ದೇಶಕ ಡಾ ತಮೀಮ್ ಅಹ್ಮದ್ ಅವರು ಮಾತನಾಡಿ, 'ಆರಂಭದಲ್ಲೇ ಜೋಸೆಫ್ ಅವರ ಸಮಸ್ಯೆ ಪತ್ತೆಯಾಗಿದ್ದು ಅವರ ಚೇತರಿಕೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ಸರಿಯಾದ ಬೆಂಬಲ ಮತ್ತು ಆತ್ಮಸ್ಥೈರ್ಯ ಸರಿಯಾದ ಜೀವನಕ್ರಮದಿಂದ ರೋಗಿಗಳು ಪ್ರಮುಖ ಹೃದಯ ಸವಾಲುಗಳ ನಂತರವೂ ಸಕ್ರಿಯ ಆರೋಗ್ಯಕರ ಜೀವನವನ್ನು ನಡೆಸಬಹುದು ಎಂದು ಹೇಳಿದ್ದಾರೆ.
Advertisement