

ಅಂತರರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಜಗತ್ತು ಯೋಗದ ಮಹತ್ವವನ್ನು ಸ್ಮರಿಸುತ್ತಿರುವಾಗ, ಗದಗ ಜಿಲ್ಲೆಯ ಒಂದು ಪುಟ್ಟ ಹಳ್ಳಿಯ ಹೆಸರನ್ನು ವಿಶ್ವದ ನಕ್ಷೆಯಲ್ಲಿ ಮೂಡಿಸಿದ ಕನ್ನಡಿಗನ ಸಾಧನೆಯೂ ಮತ್ತೆ ನೆನಪಾಗುತ್ತದೆ.
ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಬಾಲಕನೊಬ್ಬ ಮುಂದೆ ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಗೌರವಕ್ಕೆ ಪಾತ್ರನಾಗುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ. ಯೋಗದ ಮೇಲಿನ ಅಪಾರ ಆಸಕ್ತಿ, ಭಾರತೀಯ ತತ್ವಶಾಸ್ತ್ರದ ಮೇಲಿನ ನಿಷ್ಠೆ ಮತ್ತು ಮಾನವ ಸೇವೆಯ ತುಡಿತದಿಂದ ಮಹೇಶ್ ಘಾತ್ರಡ್ಯಾಳ್ ಫ್ರಾನ್ಸ್‌ನಲ್ಲಿ ಸಾವಿರಾರು ಜನರ ಮನ ಗೆದ್ದರು. ಯೋಗದ ಮೂಲಕ ಎರಡು ದೇಶಗಳ ನಡುವೆ ಸಾಂಸ್ಕೃತಿಕ ಸೇತುವೆ ನಿರ್ಮಿಸಿದ ಈ ಕನ್ನಡಿಗನ ಸಾಧನೆ ಇಂದಿಗೂ ಪ್ರೇರಣೆಯ ಚಿಲುಮೆಯಾಗಿದೆ.
ಯೋಗವನ್ನು ಕೇವಲ ದೈಹಿಕ ವ್ಯಾಯಾಮವಲ್ಲ, ಬದುಕಿನ ಮಾರ್ಗವೆಂದು ವಿಶ್ವಕ್ಕೆ ಪರಿಚಯಿಸಿದ ಮಹೇಶ್ ಘಾತ್ರಡ್ಯಾಳ್, ಫ್ರಾನ್ಸ್‌ನಲ್ಲಿ ಯೋಗದ ಜನಪ್ರಿಯತೆಗೆ ಅಡಿಪಾಯ ಹಾಕಿದ ಅಪರೂಪದ ಯೋಗಿ. ಅವರ ಸೇವೆಯನ್ನು ಗುರುತಿಸಿ ಫ್ರಾನ್ಸ್ ಸರ್ಕಾರ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘Legion of Honour’ ನೀಡಿ ಗೌರವಿಸಿತ್ತು.
ಗದಗದ ತಿಮ್ಮಾಪುರ ಗ್ರಾಮದ ಈ ಸಾಧಕನ ಜೀವನ ಪಯಣ ಯೋಗ, ಸೇವೆ ಮತ್ತು ಸಂಸ್ಕೃತಿಯ ಅದ್ಭುತ ಸಂಗಮವಾಗಿದೆ.
ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ ಜನಿಸಿದ ಮಹೇಶ್ ಘಾತ್ರಡ್ಯಾಳ್ ಬಾಲ್ಯದಲ್ಲೇ ಯೋಗದತ್ತ ಆಕರ್ಷಿತರಾದರು. ಕೇವಲ ಐದು ವರ್ಷದವರಿದ್ದಾಗ ಅವರನ್ನು ಅಂದಿನ ಬಾಂಬೆ ಪ್ರೆಸಿಡೆನ್ಸಿಯ ಧಾರವಾಡ ಜಿಲ್ಲೆಯ ಶಿವಯೋಗ ಮಂದಿರಕ್ಕೆ ಕಳುಹಿಸಲಾಯಿತು. ಅಲ್ಲಿ ಮೃತ್ಯುಂಜಯ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಯೋಗ, ವೇದಗಳು ಹಾಗೂ ಉಪನಿಷತ್ತುಗಳನ್ನು ಅಭ್ಯಾಸ ಮಾಡಿದ ಅವರು ಕ್ರಮೇಣ ಯೋಗ ಗುರುವಾಗಿಯೇ ರೂಪುಗೊಂಡರು.
1950ರ ದಶಕದ ಆರಂಭದಲ್ಲಿ ಮಹೇಶ್ ಫ್ರಾನ್ಸ್‌ಗೆ ತೆರಳಿ ಹಠಯೋಗವನ್ನು ಬೋಧಿಸಲು ಆರಂಭಿಸಿದರು. ಆ ಕಾಲದಲ್ಲಿ ಯೋಗದ ಬಗ್ಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹೆಚ್ಚಿನ ಅರಿವು ಇರಲಿಲ್ಲ. ಆದರೆ, ತಮ್ಮ ಜ್ಞಾನ, ಸರಳತೆ ಮತ್ತು ಯೋಗದ ಆಧ್ಯಾತ್ಮಿಕ ಆಯಾಮಗಳನ್ನು ಪರಿಚಯಿಸುವ ಮೂಲಕ ಅವರು ಸಾವಿರಾರು ಫ್ರೆಂಚ್ ನಾಗರಿಕರನ್ನು ಯೋಗದತ್ತ ಸೆಳೆದರು. ಪರಿಣಾಮವಾಗಿ ಯೋಗವು ಫ್ರಾನ್ಸ್‌ನಲ್ಲಿ ಜನಪ್ರಿಯವಾಗಲು ಮಹೇಶ್ ಅವರ ಕೊಡುಗೆ ಅಪಾರವೆಂದು ಪರಿಗಣಿಸಲಾಗುತ್ತದೆ.
ಯೋಗದ ಜೊತೆಗೆ ಭಾರತೀಯ ತತ್ವಶಾಸ್ತ್ರ, ಸಂಸ್ಕೃತಿ ಮತ್ತು ಭಕ್ತಿ ಪರಂಪರೆಯನ್ನೂ ಫ್ರಾನ್ಸ್‌ನಲ್ಲಿ ಪರಿಚಯಿಸಿದ ಅವರು ಹಲವು ಫ್ರೆಂಚ್ ಭಾಷೆಯ ಪುಸ್ತಕಗಳನ್ನು ರಚಿಸಿದರು. ನೈಟ್ರೆ ಎನ್ ಯೋಗ, ಲಾ ಭಕ್ತಿ ಯೋಗ ಡಿ ಅಕ್ಕಮಹಾ ದೇವಿ, ರೆವೆರಿ ಡಿ ಬಸವ, ಆತ್ಮ ಬೋಧ, ವೇದಾಂತ, ಪಾರ್ಡೋನೆ-ಮೋಯಿ, ಯೋಗ ಎಟ್ ಸಿಂಬಾಲಿಸ್ಮ್, ಲೆ ಸೌಫಲ್ ಮತ್ತು ಪರೋಲ್ ಡಿ ವೀ ಸೇರಿದಂತೆ ಅನೇಕ ಕೃತಿಗಳು ಅವರ ಸಾಹಿತ್ಯಿಕ ಸಾಧನೆಗೆ ಸಾಕ್ಷಿಯಾಗಿವೆ.
ಬಸವಣ್ಣ ಮತ್ತು ಅಕ್ಕಮಹಾದೇವಿಯಂತಹ ಕನ್ನಡದ ಮಹಾನ್ ಸಂತರ ವಿಚಾರಗಳನ್ನು ಫ್ರೆಂಚ್ ಭಾಷೆಯಲ್ಲಿ ಪರಿಚಯಿಸುವ ಮೂಲಕ ಅವರು ಕನ್ನಡ ಸಂಸ್ಕೃತಿಯನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದರು.
ಯೋಗ ಮತ್ತು ಸಾಹಿತ್ಯ ಕ್ಷೇತ್ರದ ಅಪೂರ್ವ ಸೇವೆಗಾಗಿ 1996ರಲ್ಲಿ ಫ್ರಾನ್ಸ್ ಸರ್ಕಾರ ‘ನ್ಯಾಷನಲ್ ಆರ್ಡರ್ ಆಫ್ ಮೆರಿಟ್’ ಪ್ರಶಸ್ತಿ ನೀಡಿ ಗೌರವಿಸಿತು. ಬಳಿಕ 2005ರಲ್ಲಿ ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ನ್ಯಾಷನಲ್ ಆರ್ಡರ್ ಆಫ್ ದಿ ಲೀಜನ್ ಆಫ್ ಹಾನರ್’ ಪ್ರಶಸ್ತಿ ನೀಡಿ ಸನ್ಮಾನಿಸಿತು. ಈ ಗೌರವ ಪಡೆದ ಅಪರೂಪದ ಭಾರತೀಯರಲ್ಲಿ ಮಹೇಶ್ ಘಾತ್ರಡ್ಯಾಳ್ ಒಬ್ಬರಾಗಿದ್ದಾರೆ.
ವಿದೇಶದಲ್ಲಿ ನೆಲೆಸಿದ್ದರೂ ಮಹೇಶ್ ತಮ್ಮ ತಾಯ್ನಾಡನ್ನು ಎಂದಿಗೂ ಮರೆತಿರಲಿಲ್ಲ. ಪತ್ನಿ ಮೋನಿಕಾ ಅವರ ಸಲಹೆಯಂತೆ 1994ರಲ್ಲಿ ‘ಫ್ರಾನ್ಸ್ ಇಂದೇ ಕರ್ನಾಟಕ’ ಎಂಬ ಸಂಘಟನೆಯನ್ನು ಸ್ಥಾಪಿಸಿ, ಗದಗ-ಕೊಪ್ಪಳ ರಸ್ತೆಯ ಹಳ್ಳಿಗುಡಿ ಎಂಬ ಹಿಂದುಳಿದ ಪ್ರದೇಶದಲ್ಲಿ ಆಸ್ಪತ್ರೆ ನಿರ್ಮಿಸುವ ಸಂಕಲ್ಪ ಕೈಗೊಂಡರು. 1995ರಲ್ಲಿ ಆಸ್ಪತ್ರೆಯ ಶಿಲಾನ್ಯಾಸ ನೆರವೇರಿತು. 1997ರಲ್ಲಿ ‘ಫ್ರಾನ್ಸ್-ಕರ್ನಾಟಕ ಸಾರ್ವಜನಿಕ ಆಸ್ಪತ್ರೆ’ ಕಾರ್ಯಾರಂಭ ಮಾಡಿತು.
ಆಸ್ಪತ್ರೆ ಆರಂಭವಾದ ದಿನದಿಂದಲೂ ಬಡ ಜನರಿಗೆ ಉಚಿತ ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡುತ್ತಾ ಬಂದಿದೆ. ಗ್ರಾಮೀಣ ಪ್ರದೇಶದ ಸಾವಿರಾರು ಜನರಿಗೆ ಇದು ಆರೋಗ್ಯದ ಆಶಾಕಿರಣವಾಗಿದೆ. ಇಂದು ಕೂಡ ಪ್ರತಿದಿನ ನೂರಕ್ಕೂ ಹೆಚ್ಚು ರೋಗಿಗಳು ಈ ಆಸ್ಪತ್ರೆಯ ಸೇವೆ ಪಡೆಯುತ್ತಿದ್ದಾರೆ.
2007ರ ಆಗಸ್ಟ್‌ನಲ್ಲಿ ಪ್ಯಾರಿಸ್‌ನಲ್ಲಿ ಮಹೇಶ್ ಘಾತ್ರಡ್ಯಾಳ್ ನಿಧನರಾದರು. ಬಳಿಕ ಅವರ ಅಸ್ಥಿಗಳನ್ನು ಹಳ್ಳಿಗುಡಿಗೆ ತಂದು ಆಸ್ಪತ್ರೆ ಆವರಣದಲ್ಲಿ ಸ್ಮಾರಕ ನಿರ್ಮಿಸಲಾಯಿತು. ಯೋಗ, ಸೇವೆ ಮತ್ತು ಮಾನವೀಯತೆಯ ಸಂಕೇತವಾಗಿ ಈ ಸ್ಮಾರಕ ಇಂದಿಗೂ ಜನರನ್ನು ಪ್ರೇರೇಪಿಸುತ್ತಿದೆ. ಮಹೇಶ್ ಅವರ ಮರಣದ ನಂತರ, ತರಳುಬಾಳು ಜಗದ್ಗುರು ಡಾ. ಶಿವಮೂರ್ತ ಶಿವಾಚಾರ್ಯ ಸ್ವಾಮೀಜಿ ಆಸ್ಪತ್ರೆ ಆಡಳಿತದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಆಸ್ಪತ್ರೆ ಅಲೋಪತಿ ಮತ್ತು ಆಯುರ್ವೇದ ಸೇವೆಗಳನ್ನು ಒದಗಿಸುತ್ತದೆ.
ಇನ್ನು ಮಹೇಶ್ ಅವರ ಪುತ್ರಿ ಜೂಲಿಯೆಟ್ ಸುಶೀಲಾ ಈಗ ಫ್ರಾನ್ಸ್‌ನಲ್ಲಿ ಯೋಗ ಬೋಧನೆ ಮಾಡುತ್ತಿದ್ದು, ಪ್ರತಿ ವರ್ಷ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಯೋಜಿಸುತ್ತಾರೆ. ತಂದೆಯ ಜನ್ಮದಿನದಂದು ಹಳ್ಳಿಗುಡಿಗೆ ಆಗಮಿಸಿ ಆರೋಗ್ಯ ಶಿಬಿರಗಳನ್ನು ನಡೆಸುವ ಮೂಲಕ ಅವರ ಸೇವಾ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ.
ಮಹೇಶ್ ಘಾತ್ರಡ್ಯಾಳ್ ಕೇವಲ ಯೋಗ ಶಿಕ್ಷಕರಲ್ಲ; ಅವರು ಭಾರತ ಮತ್ತು ಫ್ರಾನ್ಸ್ ನಡುವಿನ ಸಾಂಸ್ಕೃತಿಕ ರಾಯಭಾರಿ, ಕನ್ನಡದ ಹೆಮ್ಮೆಯ ಪುತ್ರ ಮತ್ತು ಮಾನವ ಸೇವೆಗೆ ಜೀವನವನ್ನೇ ಅರ್ಪಿಸಿದ ಮಹಾನ್ ವ್ಯಕ್ತಿತ್ವ. ಯೋಗವನ್ನು ವಿಶ್ವದ ಮನೆಮಾತಾಗಿಸುವಲ್ಲಿ ಅವರ ಕೊಡುಗೆ ಸದಾ ಸ್ಮರಣೀಯವಾಗಿಯೇ ಉಳಿಯಲಿದೆ.
Advertisement