ಒಂದೇ ಮನೆಯಲ್ಲಿ ಗಂಡ ಒಂದು ಭಾಷೆ ಮಾತನಾಡಿದರೆ, ಹೆಂಡತಿ ಇನ್ನೊಂದು ಭಾಷೆ ಮಾತನಾಡುತ್ತಾಳೆ ಎಂದರೆ ನಂಬುತ್ತೀರಾ.! ಹೌದು, ಬೆಳಿಗ್ಗೆ ಗಂಡ ಬಟ್ಟೆ ಬೇಕು ಎಂದರೆ ಒಂದು ಪದ ಹೇಳುತ್ತಾನೆ. ಅದಕ್ಕೆ ಹೆಂಡತಿ ಉತ್ತರ ಕೊಡುವಾಗ ಅದೇ ಬಟ್ಟೆಗೆ ಸಂಪೂರ್ಣ ಬೇರೆ ಪದ ಬಳಸುತ್ತಾಳೆ. ಆದರೂ ಅವರಿಬ್ಬರಿಗೂ ಒಬ್ಬರ ಮಾತು ಇನ್ನೊಬ್ಬರಿಗೆ ಚೆನ್ನಾಗಿ ಅರ್ಥವಾಗುತ್ತದೆ. ಜಗಳವಿಲ್ಲ, ಗೊಂದಲವಿಲ್ಲ, ತಪ್ಪು ತಿಳುವಳಿಕೆಯೂ ಇಲ್ಲ. ಮಕ್ಕಳು ಕೂಡ ಇದನ್ನು ನೋಡಿಕೊಂಡೇ ಬೆಳೆಯುತ್ತಾರೆ. ಇದು ಯಾವುದೋ ಸಿನಿಮಾ ಕಥೆಯಲ್ಲ, ಕಲ್ಪನೆಯೂ ಅಲ್ಲ. ಪ್ರಪಂಚದಲ್ಲಿ ಅಂತಹ ಒಂದು ವಿಚಿತ್ರ ಊರು ನಿಜವಾಗಿಯೂ ಇದೆ. ಆ ಊರಿನಲ್ಲಿ ಇಡೀ ಗಂಡಸರದ್ದೇ ಒಂದು ಭಾಷೆ, ಇಡೀ ಹೆಂಗಸರದ್ದೇ ಇನ್ನೊಂದು ಭಾಷೆ. ಇಂತಹ ಸಂಪ್ರದಾಯ ಪ್ರಪಂಚದಲ್ಲಿ ಬೇರೆ ಎಲ್ಲೂ ಇಲ್ಲ. ಆ ಊರು ಯಾವುದು, ಅಲ್ಲಿ ಈ ಪದ್ಧತಿ ಹೇಗೆ ಶುರುವಾಯಿತು ಎಂದು ಕೇಳಿದರೆ ನಿಮಗೂ ಅಚ್ಚರಿಯಾಗುತ್ತದೆ. ಆ ಕುರಿತ ವರದಿ ಇಲ್ಲಿದೆ:
ವಿಚಿತ್ರ ಊರು ಎಲ್ಲಿದೆ?
ಈ ವಿಚಿತ್ರ ಊರು ನೈಜೀರಿಯಾದ ಕ್ರಾಸ್ ರಿವರ್ ರಾಜ್ಯದ ಒಬುಡು ಜಿಲ್ಲೆಯಲ್ಲಿದೆ. ಹೆಸರು ಉಬಾಂಗ್. ಇದು ಕೃಷಿ ಮಾಡುವ ಪುಟ್ಟ ಊರು. ಎರಡು ಬೆಟ್ಟಗಳ ನಡುವೆ ಇರುವ ಈ ಊರಿನಲ್ಲಿ ಮೂರು ಹಳ್ಳಿಗಳ ಜನ ವಾಸಿಸುತ್ತಾರೆ. ಇಲ್ಲಿ ಗಂಡಸರು ಒಂದು ಭಾಷೆ, ಹೆಂಗಸರು ಇನ್ನೊಂದು ಭಾಷೆ ಮಾತನಾಡುತ್ತಾರೆ. ಆದರೂ ಒಬ್ಬರಿಗೊಬ್ಬರ ಮಾತು ಸಂಪೂರ್ಣವಾಗಿ ಅರ್ಥವಾಗುತ್ತದೆ. ಇದನ್ನು ಆ ಊರಿನ ಜನ ದೇವರ ಆಶೀರ್ವಾದ ಎಂದು ನಂಬುತ್ತಾರೆ.
ಗಂಡನ ಭಾಷೆ ಬೇರೆ, ಹೆಂಡತಿಯ ಭಾಷೆ ಬೇರೆ!
ಉಬಾಂಗ್ ನಲ್ಲಿ ಬಟ್ಟೆಗೆ ಗಂಡಸರು ನಕಿ ಎಂದರೆ, ಹೆಂಗಸರು ಅರಿಗಾ ಎನ್ನುತ್ತಾರೆ. ಮರಕ್ಕೆ ಗಂಡಸರು ಕಿಚಿ ಎಂದರೆ, ಹೆಂಗಸರು ಒಕ್ವೆಂಗ್ ಎನ್ನುತ್ತಾರೆ. ಗೆಣಸಿಗೆ ಹೆಂಗಸರು ಇರುಯಿ ಎಂದರೆ, ಗಂಡಸರು ಇಟೋಂಗ್ ಎನ್ನುತ್ತಾರೆ. ಇದು ಕೇವಲ ಉಚ್ಚಾರಣೆಯ ವ್ಯತ್ಯಾಸವಲ್ಲ, ಸಂಪೂರ್ಣ ಬೇರೆ ಪದಗಳು. ವ್ಯಾಕರಣ ಒಂದೇ, ಆದರೆ ಸುಮಾರು ನಾಲ್ಕರಲ್ಲಿ ಒಂದು ಪದ ಬೇರೆ ಇರುತ್ತದೆ. ಭಾಷಾ ತಜ್ಞರು ಸುಮಾರು 400 ಪದಗಳು ಹೀಗೆ ಬೇರೆ ಇವೆ ಎಂದು ಗುರುತಿಸಿದ್ದಾರೆ.
ಹುಡುಗರು 10 ವರ್ಷಕ್ಕೆ ಭಾಷೆ ಬದಲಾಯಿಸಬೇಕು!
ಉಬಾಂಗ್ ನಲ್ಲಿ ಹುಟ್ಟಿದ ಮಕ್ಕಳು ಹುಡುಗರಾಗಲಿ, ಹುಡುಗಿಯರಾಗಲಿ ಮೊದಲು ತಾಯಿಯ ಭಾಷೆಯನ್ನೇ ಕಲಿಯುತ್ತಾರೆ. ಏಕೆಂದರೆ ಬಾಲ್ಯದಲ್ಲಿ ಮಕ್ಕಳು ತಾಯಿಯ ಜೊತೆಯೇ ಹೆಚ್ಚು ಇರುತ್ತಾರೆ. ಆದರೆ ಹುಡುಗ 10 ವರ್ಷಕ್ಕೆ ಬಂದಾಗ ತಾಯಿಯ ಭಾಷೆ ಬಿಟ್ಟು ಗಂಡಸರ ಭಾಷೆಗೆ ಬದಲಾಗಬೇಕು. ಇದನ್ನು ಯಾರೂ ನೇರವಾಗಿ ಹೇಳುವುದಿಲ್ಲ. ಅದು ತಾನಾಗಿಯೇ ಅರ್ಥವಾಗುತ್ತದೆ. ಇದನ್ನು ಗಂಡಸಾಗುವ ಸಂಕೇತ ಎಂದು ಊರಿನ ಮುಖ್ಯಸ್ಥ ಆಲಿವರ್ ಇಬಾಂಗ್ ಹೇಳುತ್ತಾರೆ. ಸಮಯಕ್ಕೆ ಬದಲಾಗದ ಮಗುವನ್ನು ವಿಚಿತ್ರ ಎಂದು ನೋಡುತ್ತಾರೆ.
ಹಾಗಾದ್ರೆ, ಈ ಸಂಪ್ರದಾಯ ಹುಟ್ಟಿದ್ದು ಹೇಗೆ?
ಈ ಸಂಪ್ರದಾಯ ಹೇಗೆ ಹುಟ್ಟಿತು ಎಂದು ಯಾರಿಗೂ ಖಚಿತವಾಗಿ ಗೊತ್ತಿಲ್ಲ. ಊರಿನ ಜನರ ನಂಬಿಕೆ ಪ್ರಕಾರ ದೇವರು ಆದಮ್ ಮತ್ತು ಈವ್ ಗೆ ಬೇರೆ ಬೇರೆ ಭಾಷೆ ಕೊಟ್ಟನು. ಇನ್ನೊಂದು ಕಥೆಯ ಪ್ರಕಾರ ದೇವರು ಮೂರು ಭಾಷೆ ಕೊಟ್ಟನು. ಒಂದು ಗಂಡಸರಿಗೆ, ಒಂದು ಹೆಂಗಸರಿಗೆ, ಇನ್ನೊಂದು ಬಿಡಿ ಭಾಷೆ. ಗಂಡ ಹೆಂಡತಿ ಜಗಳ ಮಾಡಬಾರದು ಎಂದು ಹೀಗೆ ಮಾಡಿದನು ಎಂದು ಹಿರಿಯರು ಹೇಳುತ್ತಾರೆ.