ವಿಂಡೀಸ್ ಸೆಮೀಸ್ಗೆ

ಮೀರ್ಪುರ: ಸ್ಫೋಟಕ ಬ್ಯಾಟಿಂಗ್ ಹಾಗೂ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ವಿರುದ್ಧ ಗೆಲವು ದಾಖಲಿಸಿ, ಉಪಾಂತ್ಯಕ್ಕೆ ಪ್ರವೇಶಿಸಿದೆ.
ಮಂಗಳವಾರ ಇಲ್ಲಿನ ಶೇರೇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಸೂಪರ್ 10 ಹಂತದ ಎರಡನೇ ಗುಂಪಿನ ಕಡೇಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 84 ರನ್ಗಳ ಅಂತರದಲ್ಲಿ ಗೆಲವು ತನ್ನದಾಗಿಸಿಕೊಂಡಿತು. ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿತು. ನಂತರ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 166 ರನ್ ದಾಖಲಿಸಿತು. ನಂತರ, ಪಾಕಿಸ್ತಾನ 17.5 ಓವರ್ಗೆ 82 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ವೆಸ್ಟ್ ಇಂಡೀಸ್ ಸೆಮೀಸ್ ಹಾದಿಗೆ ಹಿಡಿದರೆ, ಪಾಕಿಸ್ತಾನ ಮನೆಯ ಹಾದಿ ಹಿಡಿಯಿತು.
ಆರಂಭಿಕ ಆಘಾತ: ಪಾಕಿಸ್ತಾನಕ್ಕೆ ಬೃಹತ್ ಗುರಿ ನೀಡಬೇಕೆಂದು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭಿಕರಿಂದ ಉತ್ತಮ ಆರಂಭ ದೊರೆಯಲಿಲ್ಲ.
ವಿಶ್ವದ ಸ್ಫೋಟಕ ಬ್ಯಾಟ್ಸ್ಮನ್ಗಳು ಎಂಬ ಖ್ಯಾತಿ ಪಡೆದಿರುವ ಕ್ರಿಸ್ ಗೇಯ್ಲ್ ಹಾಗೂ ಡ್ವೈನ್ ಬ್ರಾವೊ ಜೋಡಿ ಕೇವಲ 10 ರನ್ ಕಲೆ ಹಾಕಿದರು. ಈ ವೇಳೆ ತನ್ವೀರ್ ಎಸೆತದಲ್ಲಿ ಸ್ಟಂಪ್ ಆದ ಗೇಯ್ಲ್ ಎಲ್ಲರಲ್ಲೂ ನಿರಾಸೆ ಮೂಡಿಸಿದರು. ನಂತರ ಡ್ವೈನ್ ಸ್ಮಿತ್ ಸಹ ಗೇಯ್ಲ್ ಹಿಂದೆಯೇ ಪೆವಿಲಿಯನ್ಗೆ ಮರಳಿದರು.
ಹಾಗಾಗಿ ವೆಸ್ಟ್ ಇಂಡೀಸ್ ತಂಡದ ರನ್ ವೇಗಕ್ಕೆ ಬ್ರೇಕ್ ಬಿತ್ತು. ನಂತರ ಬಂದ ಲೆಂಡ್ಲ್ ಸಿಮನ್ಸ್(31), ಮರ್ಲಾನ್ ಸ್ಯಾಮ್ಯುಯೆಲ್ಸ್ (20) ಹಾಗೂ ದಿನೇಶ್ ರಾಮ್ದಿನ್(5) ರನ್ ದಾಖಲಿಸಿ ಪೆವಿಲಿಯನ್ ಸೇರಿಕೊಂಡರು.
ಈ ಮೂಲಕ ವೆಸ್ಟ್ ಇಂಡೀಸ್ ತಂಡ 13.5 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 81 ರನ್ ಕಲೆ ಹಾಕಿ ತೀವ್ರ ಹಿನ್ನಡೆ ಅನುಭವಿಸಿತ್ತು.
ಅಬ್ಬರಿಸಿದ ಬ್ಯಾವೊ, ಸಾಮಿ: ತಂಡ ಆತಂಕದ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಕ್ರೀಸ್ಗಿಳಿದ ಡಾರೆನ್ ಸಾಮಿ ಹಾಗೂ ಡ್ವೈನ್ ಬ್ರಾವೊ ತಂಡವನ್ನು ಮೇಲೆತ್ತುವಲ್ಲಿ ಯಶಸ್ವಿಯಾದರು. 26 ಎಸೆತಗಳನ್ನು ಎದುರಿಸಿದ ಡ್ವೈನ್ ಬ್ರಾವೊ, 2 ಬೌಂಡರಿ ಹಾಗೂ 4 ಸಿಕ್ಸರ್ಗಳ ನೆರವಿನಿಂದ 46 ರನ್ ದಾಖಲಿಸಿದರು. ಆದರೆ ಅಂತಿಮ ಓವರ್ನಲ್ಲಿ ರನೌಟ್ಗೆ ಬಲಿಯಾದರು. ಇನ್ನು ಬ್ರಾವೊ ಜತೆ ಆಕರ್ಷಕ ಬ್ಯಾಟಿಂಗ್ ಮಾಡಿದ ಡಾರೆನ್ ಸಾಮಿ 20 ಎಸೆತಗಳನ್ನು ಎದುರಿಸಿ, 5 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸುವ ಮೂಲಕ ಅಜೇಯ 42 ರನ್ ದಾಖಲಿಸಿದರು.
ಈ ಸವಾಲಿನ ಮೊತ್ತ ಬೆನ್ನಟ್ಟಿದ ಪಾಕಿಸ್ತಾನ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಹಫೀಜ್ 19 ಹಾಗೂ ಮಕ್ಸೂದ್ ಮತ್ತು ಅಫ್ರಿದಿ ತಲಾ 18 ರನ್ ದಾಖಲಿಸಿದ್ದು, ತಂಡದ ಪರ ಗರಿಷ್ಠ ಮೊತ್ತವಾಯಿತು. ವಿಂಡೀಸ್ ಪರ ಸ್ಯಾಮ್ಯುಯೆಲ್ ಬದ್ರಿ, ನಾರಾಯಣ ತಲಾ 3 ಹಾಗೂ ಸ್ಯಾಂಟೋಕಿ ಹಾಗೂ ರಸ್ಸೆಲ್ ತಲಾ 2 ವಿಕೆಟ್ ಕಬಳಿಸಿದರು.
ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್ ತಂಡ
20 ಓವರ್ಗಳಲ್ಲಿ 6 ವಿಕೆಟ್ಗೆ 166
ಬ್ರಾವೊ 46, ಸಾಮಿ ಅಜೇಯ 42, ಹಫೀಜ್ 15ಕ್ಕೆ1
ಪಾಕಿಸ್ತಾನ 17.5 ಓವರ್ಗೆ 82
ಹಫೀಜ್ 19, ಅಫ್ರಿದಿ 18, ಬದ್ರಿ 10ಕ್ಕೆ3
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


