ಹೆರಾತ್ ಫಿರ್ಕಿಗೆ ಹೆದರೋಡಿದ ಕಿವೀಸ್
ಚಿತ್ತಗಾಂಗ್: ಸ್ಪಿನ್ನರ್ ರಂಗನ ಹೆರಾತ್ರ ಅಪಾಯಕಾರಿ ತಿರುಗುವಿಕೆಯ ಎಸೆತಗಳ ಮುಂದೆ ನಾಟಕೀಯ ರೀತಿಯಲ್ಲಿ ವಿಕೆಟ್ ಕೈಚೆಲ್ಲಿದ ನ್ಯೂಜಿಲೆಂಡ್ ಪಡೆ ವಿಶ್ವಕಪ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪುವ ಅತ್ಯುತ್ತಮ ಅವಕಾಶ ಹಾಳುಮಾಡಿಕೊಂಡಿದೆ.
ಸೋಮವಾರ ಚಿತ್ತಗಾಂಗ್ನಲ್ಲಿ ನಡೆದ ಗುಂಪು-1ರ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ 59 ರನ್ಗಳಿಂದ ಶ್ರೀಲಂಕಾ ಎದುರು ಅವಮಾನಕಾರಿ ಸೋಲುಂಡಿತು.
ಈ ಪಂದ್ಯ ಉಭಯರ ಪಾಲಿಗೆ ಗುಂಪಿನ ಕೊನೆಯ ಪಂದ್ಯವಾಗಿದ್ದು, ಗೆದ್ದವರು ಸೆಮಿಫೈನಲ್ ಪ್ರವೇಶಿಸಲಿದ್ದರು. ಅಂತಿಮವಾಗಿ ಈ ಸೌಭಾಗ್ಯ ಶ್ರೀಲಂಕನ್ನರದ್ದಾಯಿತು. ಮತ್ತೊಂದೆಡೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಹ ಸ್ಥಿತಿಗೊಳಗಾದ ನ್ಯೂಜಿಲೆಂಡ್ ತನ್ನ ಹೋರಾಟಕ್ಕೆ ತೆರೆ ಎಳೆದುಕೊಂಡಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಶ್ರೀಲಂಕಾ 19.2 ಓವರುಗಳಲ್ಲಿ 119 ರನ್ಗಳ ಅಲ್ಪ ಮೊತ್ತಕ್ಕೆ ಪತನಗೊಂಡಿತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಮಹೇಲ ಜಯವರ್ದನೆ 32 ಎಸೆತಗಳಲ್ಲಿ 2 ಬೌಂಡರಿಗಳಿದ್ದ 25 ರನ್ಗಳಿಸಿದ್ದೇ ವೈಯಕ್ತಿಕ ಗರಿಷ್ಠ ಮೊತ್ತವಾಯಿತು. ಗುರಿ ಬೆಂಬತ್ತಿದ ನ್ಯೂಜಿಲೆಂಡ್ 15.3 ಓವರುಗಳಲ್ಲಿ ಕೇವಲ 60 ರನ್ಗಳಿಗೆ ಆಲೌಟಾಯಿತು. ಟಿ-20 ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಇದು ಮೂರನೇ ಕನಿಷ್ಠ ಮೊತ್ತವಾಗಿದೆ. ನೆದರ್ಲ್ಯಾಂಡ್ಸ್ 39 ಮತ್ತು ಕೀನ್ಯಾ 56 ರನ್ಗಳಿಸಿದ್ದು, ಮೊದಲೆರಡು ಕಳಪೆ ಸಾಧನೆಯಾಗಿವೆ.
ಆರಂಭಿಕ ಕೇನ್ ವಿಲಿಯಮ್ಸನ್ 43 ಎಸೆತಗಳಲ್ಲಿ 6 ಬೌಂಡರಿಗಳಿದ್ದ 42 ರನ್ಗಳಿಸಿದರೆ, ಮತ್ತೊಬ್ಬ ಆರಂಭಿಕ ಮಾರ್ಟಿನ್ ಗುಪ್ಟಿಲ್ 5 ರನ್ಗಳಿಸಿದ್ದೇ ಎರಡನೇ ವೈಯಕ್ತಿಕ ಗರಿಷ್ಠ ಮೊತ್ತ ಎನಿಸಿತು. ನಂತರ ಬಂದ 8 ಬ್ಯಾಟ್ಸ್ಮನ್ಗಳ ಪೈಕಿ ನಾಲ್ವರು ಸೊನ್ನೆಗೆ ಔಟಾದರು. ಇನ್ನು ಮಧ್ಯಮ ಕ್ರಮಾಂಕದ ಅಪಾಯಕಾರಿ ಬ್ಯಾಟ್ಸ್ಮನ್ ಕೋರೆ ಆ್ಯಂಡರ್ಸನ್ ಅವರು ಕ್ಷೇತ್ರರಕ್ಷಣೆಯ ವೇಳೆ ಕಠಿಣ ಕ್ಯಾಚ್ ಪಡೆಯುವ ಯತ್ನದಲ್ಲಿ ಬೆರಳಿಗೆ ಬಲವಾದ ಗಾಯ ಮಾಡಿಕೊಂಡು ಅಸ್ಪತ್ರೆ ಸೇರಿದ ಕಾರಣ ಬ್ಯಾಟಿಂಗ್ಗೆ ಆಗಮಿಸದೇ ಇದ್ದುದು ನ್ಯೂಜಿಲೆಂಡ್ಗೆ ಭಾರಿ ನಷ್ಟ ತಂದುಕೊಟ್ಟಿತು. ಕಿವೀಸ್ನ ನಾಟಕೀಯ ಕುಸಿತಕ್ಕೆ ಕಾರಣರಾಗಿದ್ದು ರಂಗನ ಹೆರಾತ್. ಅವರು 3.3 ಓವರುಗಳಲ್ಲಿ ಕೇವಲ 3 ರನ್ ನೀಡಿ 2 ಮೇಡನ್ ಒಳಗೊಂಡಂತೆ 5 ವಿಕೆಟ್ ಕಬಳಿಸಿದರು. ಆ ಮೂಲಕ ಶುರುವಿನಲ್ಲಿ ಸೆಮಿಫೈನಲ್ ಆಸೆಯನ್ನೇ ಕೈಬಿಟ್ಟಂತಿದ್ದ ಶ್ರೀಲಂಕಾಗೆ ಅಂತಿಮವಾಗಿ ರೋಚಕ ಗೆಲವು ತಂದುಕೊಟ್ಟು ತಮ್ಮ ತಂಡವನ್ನುನಾಲ್ಕರಘಟ್ಟಕ್ಕೆ ಕೊಂಡುಯ್ಯುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದರು. ಟಿ-20 ಅಂತಾರಾಷ್ಟ್ರೀಯ ಇತಿಹಾಸದಲ್ಲೇ ಇದು ಮೂರನೇ ಶ್ರೇಷ್ಠ ಬೌಲಿಂಗ್ ಸಾಧನೆ ಎನಿಸಿದೆ. ಈ ಮುನ್ನ ಕೂಡ ಶ್ರೀಲಂಕಾದವರೇ ಆದ ಸ್ಪಿನ್ ಮಾಂತ್ರಿಕ ಅಜಂತ ಮೆಂಡಿಸ್ ಒಮ್ಮೆ 8ಕ್ಕೆ6 ಹಾಗೂ ಮಗದೊಮ್ಮೆ 16ಕ್ಕೆ6ರಂತೆ ಎರಡು ಬಾರಿ ಈ ಸಾಧನೆ ಮಾಡಿದ್ದರು. ತಮ್ಮ 2ನೇ ಓವರಿನ ಕೊನೆಯ ಎರಡು ಎಸೆತಗಳಲ್ಲಿ ಟೇಲರ್ ಮತ್ತು ನೀಶಂ ಅವರನ್ನು ಔಟ್ ಮಾಡಿದ್ದ ಹೆರಾತ್, ಹ್ಯಾಟ್ರಿಕ್ ಅವಕಾಶವನ್ನೂ ಹೊಂದಿದ್ದರು. ಆದರೆ, ಅವರ ಮುಂದಿನ ಓವರಿನ ಮೊದಲ ಎಸೆತವನ್ನು ಉತ್ತಮವಾಗಿ ಎದುರಿಸಿದ ವಿಲಿಯಮ್ಸನ್, ಶ್ರೀಲಂಕಾ ಬೌಲರ್ನ ಈ ಆಸೆಯನ್ನು ಚಿವುಟಿ ಹಾಕಿದರು.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ 19.2 ಓವರುಗಳಲ್ಲಿ 119
(ಮಹೇಲ ಜಯವರ್ದನೆ 25, ಲಹಿರು ತಿರಿಮಾನೆ 20, ಸಚಿತ್ರ ಸೇನಾನಾಯಕೆ 17, ಟ್ರೆಂಟ್ ಬೌಲ್ಟ್ 20ಕ್ಕೆ3, ಜಿಮ್ಮಿ ನೀಶಂ 22ಕ್ಕೆ3, ಮಿಚೆಲ್ ಮೆಕ್ಲೆನ್ಘಾನ್ 24ಕ್ಕೆ2). ನ್ಯೂಜಿಲೆಂಡ್ 15.3 ಓವರುಗಳಲ್ಲಿ 60 (ಕೇನ್ ವಿಲಿಯಮ್ಸನ್ 42, ರಂಗನ ಹೆರಾತ್ 3ಕ್ಕೆ5, ಸಚಿತ್ರ ಸೇನಾನಾಯಕೆ 3ಕ್ಕೆ2).
ಹೆರಾತ್ ಬೌಲಿಂಗ್ ಸಾಧನೆ
ಓವರ್ ಮೇಡನ್ ರನ್ ವಿಕೆಟ್
1 1 0 1
1 1 0 2
1 0 2 1
0.3 0 1 1
ಒಟ್ಟು
3.3 2 3 5
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

