ಕಶ್ಯಪ್ಗೆ ರೋಚಕ ಗೆಲವು

ನವದೆಹಲಿ: ಭಾರತದ ಪರುಪಳ್ಳಿ ಕಶ್ಯಪ್ ಅವರು ಇಂಡಿಯಾ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ವಿಶ್ವದ 7ನೇ ನಂಬರ್ ಆಟಗಾರ ಚೀನಾದ ಝೆಂಗ್ಮಿಂಗ್ ವಾಂಗ್ ಅವರನ್ನು ಪರಾಭವಗೊಳಿಸುವ ಮೂಲಕ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ.
ಜರ್ಮನ್ ಓಪನ್ನಲ್ಲಿ ಭುಜದ ನೋವಿನಿಂದ ಬಳಲುತ್ತಿದ್ದ ಕಶ್ಯಪ್, ವಾಂಗ್ ವಿರುದ್ಧ 21-12, 17-21, 21-12 ಗೇಮ್ಗಳಿಂದ ಜಯ ಸಾಧಿಸಿದರು.ಇನ್ನು ಮಲೇಷ್ಯಾ ಗ್ರ್ಯಾಂಡ್ ಪ್ರಿ ಗೋಲ್ಡ್ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿದ್ದ ಸೌರಭ್ ವರ್ಮಾ ಅವರು ರಷ್ಯಾದ ಲಾಡಿಮಿರ್ ಇವಾನೋವಾ ಅವರನ್ನು 21-16, 17-21, 21-14 ಗೇಮ್ಗಳಿಂದ ಮಣಿಸುವ ಮೂಲಕ ದ್ವಿತೀಯ ಸುತ್ತಿಗೆ ಪ್ರವೇಶಿಸಿದರು.
ಭಾರತದ ಇನ್ನೊಬ್ಬ ಆಟಗಾರ ಆರ್ಎಂವಿ ಗುರುಸಾಯಿದತ್ ಸಹ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದು, ಮೊದಲ ಸುತ್ತಿನಲ್ಲಿ ತೈಪೇಯ ಟೀನ್ ಚೆನ್ ಚೂ ಅವರನ್ನು 17-21, 21-16, 21-17 ಗೇಮ್ಗಳಿಂದ ಹಿಮ್ಮೆಟ್ಟಿಸಿದರು.
ಇನ್ನು ಮಹಿಳೆಯರ ಸಿಂಗಲ್ಸ್ನಲ್ಲಿ ಭಾರತದ ಸಯಾಲಿ ಗೋಖಲೆ ಮತ್ತು ತೃಪ್ತಿ ಮುರುಗುಂಡೆ ಅವರು ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ದೇಶದ ಇತರ ಆಟಗಾರರಾದ ಕೆ. ಶ್ರೀಕಾಂತ್, ಎಚ್.ಎಸ್. ಪ್ರಣಯ್, ಬಿ. ಸಾಯಿ ಪ್ರಣೀತ್, ಆನಂದ್ ಪವಾರ್, ಶ್ರೇಯಾನ್ಷ್ ಜೈಸ್ವಾಲ್ ಹಾಗೂ ಎರಡು ಬಾರಿ ರಾಷ್ಟ್ರೀಯ ಚಾಂಪಿಯನ್ ಅನೂಪ್ ಶ್ರೀಧರ್ ಅವರು ಸೋಲನುಭವಿಸಿದ್ದಾರೆ.
ಮಹಿಳೆಯರ ಸಿಂಗಲ್ಸ್ನಲ್ಲಿ ಸೈಲಿ ರಾಣೆ, ತನ್ವಿ ಲಾಡ್, ಶೃತಿ ಮುಂದಾದಾ ಹಾಗೂ ಪಿ.ಸಿ ತುಳಸಿ ಅವರು ಮೊದಲ ಸುತ್ತಿನಲ್ಲಿ ತಮ್ಮ ಹೋರಾಟ ಅಂತ್ಯಗೊಳಿಸಿದ್ದಾರೆ.
ಕಶ್ಯಪ್ ಅವರು ಈ ಮುನ್ನ ವಾಂಗ್ ವಿರುದ್ಧ ಎರಡು ಬಾರಿ ಸೋಲನುಭವಿಸಿದ್ದರು. 2012ರಲ್ಲಿ ಚೀನಾದಲ್ಲಿ ಮತ್ತು 2013ರಲ್ಲಿ ಹಾಂಕಾಂಗ್ನಲ್ಲಿ ಸೋಲನುಭವಿಸಿದ್ದರು. ಈಗ ಅಂತಿಮವಾಗಿ ಚೀನಾ ಆಟಗಾರನ ವಿರುದ್ಧ ಗೆದ್ದ ಕಶ್ಯಪ್ ಮುಖದಲ್ಲಿ ಸಂತಸ ಅರಳಿದೆ.
'ಚೀನಾ ಆಟಗಾರನ ವಿರುದ್ಧ ಜಯ ಕಂಡಿದ್ದು ಸಂತಸ ತಂದಿದೆ. ಈ ಮುನ್ನ ಆತನ ವಿರುದ್ಧ ನಾನು ಎರಡು ಬಾರಿ ಸೋನುಭವಿಸಿದ್ದೆ. ನನ್ನ ಆಟವನ್ನು ವಾಂಗ್ ಚೆನ್ನಾಗಿ ಅರ್ಥ ಮಾಡಿಕೊಂಡು ಆಡುತ್ತಿದ್ದರು. ಅಲ್ಲದೆ, ನನ್ನ ಸ್ಟ್ರೋಕ್ಗಳನ್ನು ಗ್ರಹಿಸಿ ಜಯ ಕಂಡುಕೊಳ್ಳುತ್ತಿದ್ದರು. ಆದರೆ, ಈ ಪಂದ್ಯದಲ್ಲಿ ನಾನು ವಾಂಗ್ ಸ್ಟ್ರೋಕ್ಗಳನ್ನು ಗ್ರಹಿಸಿದ್ದು ಜಯ ಕಂಡುಕೊಳ್ಳಲು ನೆರವಾಯಿತು' ಎಂದು ಪಂದ್ಯದ ನಂತರ ಕಶ್ಯಪ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


