ಲಂಕಾ ಹರಣಕ್ಕೆ ಹೊರಟ ಭಾರತ

ಮೀರ್ಪುರ: ಭಾರತದ ಭರವಸೆಯ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ(ಅಜೇಯ 72) ಅವರ ಅಕರ್ಷಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ಟಿ20 ವಿಶ್ವಕಪ್ ಪಂದ್ಯಾವಳಿಯ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ. ಇದರೊಂದಿಗೆ ಭಾರತ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲು ಸಜ್ಜಾಗಿದೆ.
ಶುಕ್ರವಾರ ಇಲ್ಲಿನ ಶೇರೇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್ಗಳ ಗೆಲವು ದಾಖಲಿಸಿತು. ಭಾರತ ತಂಡ ಫೈನಲ್ನಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ತಂಡ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 172 ರನ್ ಕಲೆ ಹಾಕಿತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ 19.1 ಓವರ್ಗಳಲ್ಲಿ 4 ವಿಕೆಟ್ಗೆ 176 ರನ್ ಕಲೆ ಹಾಕಿ ಗೆಲವಿನ ಕೇಕೆ ಹಾಕಿತು. ಈ ಮೂಲಕ ಮತ್ತೊಮ್ಮೆ ದಕ್ಷಿಣ ಆಫ್ರಿಕಾ ವಿಶ್ವಕಪ್ನ ಪ್ರಶಸ್ತಿ ಸುತ್ತಿಗೆ ತಲುಪಲು ಎಡವಿದೆ.
ಆರಂಭಿಕ ಆಘಾತ: ಬೃಹತ್ ಮೊತ್ತವನ್ನು ಪೇರಿಸುವ ಉದ್ದೇಶದೊಂದಿಗೆ ಮೊದಲು ಬ್ಯಾಟಿಂಗ್ಗೆ ಇಳಿದ ದಕ್ಷಿಣ ಆಫ್ರಿಕಾ ತಂಡಕ್ಕೆ ನಿರೀಕ್ಷಿತ ಮಟ್ಟದಲ್ಲಿ ಆರಂಭ ಸಿಗಲಿಲ್ಲ.
ಆರಂಭಿಕರಾಗಿ ಕಣಕ್ಕಿಳಿದ ಖಿಂಟಾನ್ ಡಿ ಕಾಕ್ (6) ಹಾಗೂ ಹಶೀಂ ಆಮ್ಲಾ (22) ಜೋಡಿ ಕೇವಲ 9 ರನ್ ದಾಖಲಿಸಿತು. ಈ ವೇಳೆ ಭುವನೇಶ್ವರ್ ಸ್ವಿಂಗ್ಗೆ ಬಲಿಯಾದ ಕಾಕ್ ಪೆವಿಲಿಯನ್ ಸೇರಿಕೊಂಡರು. ಆಮ್ಲಾ ಸಹ ಉತ್ತಮ ಆರಂಭ ಪಡೆದರಾದರೂ ಅಶ್ವಿನ್ ಸ್ಪಿನ್ ಮೋಡಿ ಅರಿಯಲು ವಿಫಲರಾದರು. ಈ ವೇಳೆ ಭಾರತದ ಸ್ಪಿನ್ ವಿಭಾಗವನ್ನು ಸಮರ್ಥವಾಗಿ ಎದುರಿಸಿ ತಂಡವನ್ನು ಮೇಲೆತ್ತುವ ಪ್ರಯತ್ನ ನಡೆಸಿದ್ದು, ನಾಯಕ ಡುಪ್ಲೆಸಿಸ್ ಹಾಗೂ ಜೆ.ಪಿ ಡುಮಿನಿ.
ಡುಪ್ಲೆಸಿಸ್ 41 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 58 ರನ್ ದಾಖಲಿಸಿದರು. ಈ ವೇಳೆ ಅಶ್ವಿನ್ ಸ್ಪಿನ್ಗೆ ಬಲಿಯಾದರು. ಡುಪ್ಲೆಸಿಸ್ ಅವರ ಈ ಜವಾಬ್ದಾರಿಯುತ ಇನಿಂಗ್ಸ್ ತಂಡ 13.5 ಓವರ್ಗಳಲ್ಲಿ 115 ರನ್ ದಾಖಲಿಸಿತ್ತು. ಹಾಗಾಗಿ ತಂಡ 180ರ ಗಡಿಗೆ ತಲುಪುವ ಲಕ್ಷಣ ಗೋಚರಿಸಿತು. ಡುಪ್ಲೆಸಿಸ್ ಔಟಾದ ನಂತರ ಬಂದ ಡಿವಿಲಿಯರ್ಸ್, ನಿರೀಕ್ಷಿತ ಮಟ್ಟದಲ್ಲಿ ರನ್ ಕಲೆ ಹಾಕಲಿಲ್ಲ. ಕೇವಲ 10 ರನ್ ಗಳಿಸಿದ ಡಿವಿಲಿಯರ್ಸ್, ಅಶ್ವಿನ್ ಎಸೆತದಲ್ಲಿ ದುಬಾರಿ ಹೊಡೆತಕ್ಕೆ ಮುಂದಾಗಿ ವಿಕೆಟ್ ಕೈಚೆಲ್ಲಿದರು.
ನಂತರ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತ ಡುಮಿನಿ ಅಂತಿಮದವರೆಗೂ ಅಜೇಯರಾಗುಳಿದರು. 40 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್ಗಳ ನೆರವಿನಿಂದ 45 ರನ್ ದಾಖಲಿಸಿದರು. ಡುಮಿನಿ ಜತೆಗೆ ಡೇವಿಡ್ ಮಿಲ್ಲರ್ 12 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 23 ರನ್ಗಳಿಸಿ ಅಜೇಯರಾಗುಳಿದರು. ಹಾಗಾಗಿ ದಕ್ಷಿಣ ಆಫ್ರಿಕಾ ತಂಡ 170ರ ಗಡಿ ದಾಟುವ ಮೂಲಕ ಸವಾಲಿನ ಗುರಿಯನ್ನು ನೀಡುವಲ್ಲಿ ಯಶಸ್ವಿಯಾಯಿತು.
ಇನ್ನು ಭಾರತದ ಪರ ಗಮನಾರ್ಹ ಬೌಲಿಂಗ್ ಮಾಡಿದ್ದು, ಆರ್.ಅಶ್ವಿನ್. 4 ಓವರ್ಗಳಲ್ಲಿ 22 ರನ್ ನೀಡಿದ ಅಶ್ವಿನ್ 3 ವಿಕೆಟ್ ಕಬಳಿಸಿದರು. ಉಳಿದಂತೆ ಭುವನೇಶ್ವರ್ ಕುಮಾರ್ 1 ವಿಕೆಟ್ ಕಬಳಿಸಿದರು. ಇನ್ನು ಹೆಚ್ಚು ನಿರೀಕ್ಷೆ ಮೂಡಿಸಿದ್ದ ಅಮಿತ್ ಮಿಶ್ರಾ ಜತೆಗೆ ಜಡೇಜಾ ಹಾಗೂ ಸುರೇಶ್ ರೈನಾ ದುಬಾರಿಯಾಗಿ ಪರಿಣಮಿಸಿದರು.
ವಿರಾಟ ದರ್ಶನ: ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡದ ಹಾದಿಗೆ ದಾರಿ ದೀಪವಾಗಿದ್ದು, ವಿರಾಟ್ ಕೊಹ್ಲಿ. 44 ಎಸೆತಗಳನ್ನು ಎದುರಿಸಿದ ವಿರಾಟ್ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 72 ರನ್ ದಾಖಲಿಸಿದರು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ (24) ಹಾಗೂ ಅಜಿಂಕ್ಯ ರಹಾನೆ (32) ತಂಡಕ್ಕೆ 39 ರನ್ಗಳ ಉತ್ತಮ ಆರಂಭ ನೀಡಿದರು. ಕೊಹ್ಲಿ ಜತೆಗೆ ಉತ್ತಮ ಸಾಥ್ ನೀಡಿದ ಯುವರಾಜ್ 18, ಸುರೇಶ್ ರೈನಾ 21 ರನ್ ದಾಖಲಿಸಿದರು.
ತಿರುವು ಕೊಟ್ಟ 17ನೇ ಓವರ್: ಭಾರತ ತಂಡ ಪಂದ್ಯದವನ್ನು ಸಂಪೂರ್ಣವಾಗಿ ತನ್ನ ಕೈವಶ ಮಾಡ್ಕೊಂಡಿದ್ದು, ವೇಯ್ನ್ ಪಾರ್ನೆಲ್ ಮಾಡಿದ 17ನೇ ಓವರ್ನಲ್ಲಿ. ಈ ಓವರ್ನಲ್ಲಿ ಭಾರತ ಒಟ್ಟು 17 ರನ್ ದಾಖಲಿಸಿತು.
ಆಗತಾನೆ ಕ್ರೀಸ್ಗಿಳಿದ ಸುರೇಶ್ ರೈನಾ ಪಾರ್ನೆಲ್ ಎಸೆತ ಎದುರಿಸಲು ಸಜ್ಜಾಗಿದ್ದರು. ಮೊದಲ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಎರಡನೇ ಎಸೆತ ವೈಡ್ ಆಯಿತು. ರೈನಾ ಮೂರನೇ ಎಸೆತದಲ್ಲಿ ಸಿಕ್ಸರ್, ನಾಲ್ಕನೇ ಎಸೆತದಲ್ಲಿ ಎರಡು, ನಂತರದ ಎರಡು ಎಸೆತದಲ್ಲಿ ಎರಡು ಬೌಂಡರಿಗಳು ಬಂದವು. ಇನ್ನು ಅಂತಿಮ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಈ ಓವರ್ ನಂತರ ಭಾರತಕ್ಕೆ 18 ಎಸೆತದಲ್ಲಿ ಕೇವಲ 23 ರನ್ ಬೇಕಾಯಿತು. ಹಾಗಾಗಿ ಭಾರತದ ಬ್ಯಾಟ್ಸ್ಮನ್ಗಳು ಒತ್ತಡವಿಲ್ಲದೇ ಡೇಲ್ ಸ್ಟೇಯ್ನ್ ಓವರ್ಗಳನ್ನು ಎದುರಿಸಲು ಸಾಧ್ಯವಾಯಿತು.
ಸ್ಕೋರ್ ವಿವರ
ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 4 ವಿಕೆಟ್ಗೆ 172
ಖಿಂಟಾನ್ ಡಿ ಕಾಕ್ ಸಿ ಧೋನಿ ಬಿ ಭುವನೇಶ್ವರ್ 6 (4), ಹಶೀಂ ಆಮ್ಲಾ ಬಿ ಅಶ್ವಿನ್ 22 (16), ಡುಪ್ಲೆಸಿಸ್ ಬಿ ಅಶ್ವಿನ್ 58 (41), ಡುಮಿನಿ ಅಜೇಯ 45 (40), ಡಿವಿಲಿಯರ್ಸ್ ಸಿ ರೋಹಿತ್ ಬಿ ಅಶ್ವಿನ್ 10 (8), ಡೇವಿಡ್ ಮಿಲ್ಲರ್ ಅಜೇಯ 23 (12)
ಇತರೆ: (ಬೈ1, ಎಲ್ಬಿ3, ವೈಡ್3, ನೊಬಾಲ್1) ಒಟ್ಟು 8
ವಿಕೆಟ್ ಪತನ: 1-9, 2-44, 3-115, 4-129
ಬೌಲಿಂಗ್ ವಿವರ: ಭುವನೇಶ್ವರ್ ಕುಮಾರ್ 4-0-33-1, ಮೋಹಿತ್ ಶರ್ಮಾ 3-0-34-0, ಆರ್.ಅಶ್ವಿನ್ 4-0-22-3, ರವಿಂದ್ರ ಜಡೇಜಾ 2-0-8-0, ಸುರೇಶ್ ರೈನಾ 4-0-35-0, ಅಮಿತ್ ಮಿಶ್ರಾ 3-0-36-0
ಭಾರತ 19.1 ಓವರ್ಗಳಲ್ಲಿ 4 ವಿಕೆಟ್ಗೆ 176
ರೋಹಿತ್ ಶರ್ಮಾ ಸಿ ಡುಪ್ಲೆಸಿಸ್ ಬಿ ಹೆಂಡ್ರಿಕ್ಸ್ 24 (13), ಅಜಿಂಕ್ಯ ರಹಾನೆ ಸಿ ಡಿವಿಲಿಯರ್ಸ್ ಬಿ ಪಾರ್ನೆಲ್ 32 (30), ವಿರಾಟ್ ಕೊಹ್ಲಿ ಅಜೇಯ 72 (44), ಯುವರಾಜ್ ಸಿಂಗ್ ಸಿ ಡಿವಿಲಿಯರ್ಸ್ ಬಿ ತಾಹೀರ್ 18 (17), ಸುರೇಶ್ ರೈನಾ ಸಿ ಡುಪ್ಲೆಸಿಸ್ ಬಿ ಹೆಂಡ್ರಿಕ್ಸ್ 21 (10), ಧೋನಿ 0 (1)
ಇತರೆ: (ವೈಡ್ 9) ಒಟ್ಟು 9.
ವಿಕೆಟ್ ಪತನ: 1-39, 2-77, 3-133, 4-167.
ಬೌಲಿಂಗ್ ವಿವರ: ಜೆ.ಪಿ ಡುಮಿನಿ 3-0-29-0, ಆಲ್ಬಿ ಮಾರ್ಕೆಲ್ 2-0-17-0, ಡೇಲ್ ಸ್ಟೇಯ್ನ್ 3.1-0-36-0, ಹೆಂಡ್ರಿಕ್ಸ್ 4-0-31-2, ವೇಯ್ನ್ ಪಾರ್ನೆಲ್ 3-0-33-1, ಇಮ್ರಾನ್ ತಾಹೀರ್ 4-0-30-1
ಪಂದ್ಯಶ್ರೇಷ್ಠ ವಿರಾಟ್ ಕೊಹ್ಲಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


