ಸಿಂಧು, ಶ್ರೀಕಾಂತ್ ಸಾರಥ್ಯ
ನವದೆಹಲಿ: ತವರಿನ ಅಗ್ರಮಾನ್ಯ ಆಟಗಾರ್ತಿ ಸೈನಾ ನೆಹ್ವಾಲ್ ವಿಶ್ರಾಂತಿಗೆ ಮೊರೆ ಹೋಗಿರುವ ಹಿನ್ನೆಲೆಯಲ್ಲಿ ಉದಯೋನ್ಮುಖ ಪ್ರತಿಭೆಗಳಾದ ಪಿ.ವಿ. ಸಿಂಧು ಮತ್ತು ಕೆ. ಶ್ರೀಕಾಂತ್ ಅವರು ಕೊರಿಯಾದ ಗಿಮ್ಚೋನ್ನಲ್ಲಿ ಮಂಗಳವಾರ ಆರಂಭವಾಗಲಿರುವ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಭಾರತದ ಸವಾಲು ಮುನ್ನಡೆಸಲಿದ್ದಾರೆ.
ಒಲಿಂಪಿಕ್ ಕಂಚು ಪದಕ ವಿಜೇತೆ ಸೈನಾ ಈ ಟೂರ್ನಿಗೆ ವಿಶ್ರಾಂತಿ ಹೇಳಿದ್ದು, ಮುಂದಿನ ತಿಂಗಳು ನಡೆಯಲಿರುವ ಥಾಮಸ್ ಮತ್ತು ಉಬರ್ ಕಪ್ನಲ್ಲಿ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ. ಏಷ್ಯನ್ ಚಾಂಪಿಯನ್ಶಿಪ್ನ 2010ರ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದ ಸೈನಾರ ಅನುಪಸ್ಥಿತಿ ಈ ಬಾರಿ ಕಾಡುವುದು ಸಹಜ.
ಆದರೆ, 18ರ ಭರವಸೆಯ ಪ್ರತಿಭೆ ಸಿಂಧು ಮಹಿಳೆಯರ ವಿಭಾಗದಲ್ಲಿ ತವರಿಗೆ ಪ್ರಶಸ್ತಿಗೆ ಗೆದ್ದುಕೊಡುವ ಆಶಾಭಾವನೆ ಹೊಂದಿದ್ದಾರೆ. ಕಳೆದ ವರ್ಷ ಮಲೇಷಿಯನ್ ಓಪನ್ ಹಾಗೂ ಮಕಾವು ಓಪನ್ಗಳಲ್ಲಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದ ಸಿಂಧು ಉತ್ತಮ ಫಾರ್ಮ್ನಲ್ಲಿದ್ದಾರೆ.
ಮಹಿಳೆಯರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತೀಯ ಆಟಗಾರ್ತಿಗೆ ಚೆಂಗ್ ನಾಗನ್ ಯೀ ಸವಾಲು ಎದುರಾಗಲಿದೆ. ಇಲ್ಲಿ ಗೆಲವು ದಾಖಲಿಸಿದರೆ, ಮುಂದಿನ ಹಂತದಲ್ಲಿ ಸಿಂಧು, ಜಪಾನಿಲ ಎರಿಕೊ ಹಿರೋಸ್ ಅವರ ಕಠಿಣ ಸವಾಲು ಎದುರಿಸಬೇಕಾಗಬಹುದು.
ಪುರುಷರ ಸಿಂಗಲ್ಸ್ನಲ್ಲಿ ಏಳನೇ ಶ್ರೇಯಾಂಕಿತ ಕೆ. ಶ್ರೀಕಾಂತ್, ಎರಡು ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ಮತ್ತು ಐದು ಬಾರಿಯ ವಿಶ್ವ ಚಾಂಪಿಯನ್ ಲಿನ್ ಡಾನ್ ಅವರನ್ನು ಎದುರಿಸಲಿದ್ದು, ಗೆಲವು ಕಷ್ಟವಾಗಿದೆ.
ಇತರೆ ಆಟಗಾರರಾದ ಪರುಪಳ್ಳಿ ಕಶ್ಯಪ್, ಮೊದಲ ಸುತ್ತಿನ ಸಿಂಗಲ್ಸ್ನಲ್ಲಿ ಮಲೇಷಿಯಾದ ಗೊಹ್ ಸೂನ್ ಹೌತ್ರನ್ನು, ಆರ್ಎವಿ ಗುರುಸಾಯಿದತ್,ಥಾಯ್ಲೆಂಡ್ನ ಫೆಟ್ಪ್ರದಾಬ್ ಖೋಸಿಟ್ ಸವಾಲು ಎದುರಿಸಲಿದ್ದಾರೆ.
ಪುರುಷರ ಡಬಲ್ಸ್ನಲ್ಲಿ ಮನು ಅತ್ರಿ ಮತ್ತು ಬಿ. ಸುಮೀತ್ ರೆಡ್ಡಿ, ಮಹಿಳೆಯರ ಡಬಲ್ಸ್ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಜ್ವಾಲಾ ಗುಟ್ಟಾ ಆಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

