ಅದೃಷ್ಟ ನನ್ನ ಪರವಾಗಿದೆ
ಶಾರ್ಜಾ: ಸತತ ಎರಡು ಪಂದ್ಯಗಳಲ್ಲಿ ಅಬ್ಬರದ ಇನಿಂಗ್ಸ್ ಮೂಲಕ ಐಪಿಎಲ್ ಅಭಿಮಾನಿಗಳ ಮನಸೂರೆಗೊಳಿಸಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್ಮನ್ ಗ್ಲೆನ್ ಮ್ಯಾಕ್ಸ್ವೆಲ್, ಅದೃಷ್ಟ ನನ್ನ ಪರವಾಗಿದೆ ಎಂದು ತಿಳಿಸಿದ್ದಾರೆ.
ಐಪಿಎಲ್ 7ನೇ ಆವೃತ್ತಿಯಲ್ಲಿ ಪಂಜಾಬ್ ತಂಡ ಆಡಿರುವ ಎರಡೂ ಪಂದ್ಯಗಳಲ್ಲಿ ಬೃಹತ್ ಮೊತ್ತವನ್ನು ಬೆನ್ನಟ್ಟುವ ಮೂಲಕ ಗೆಲವು ದಾಖಲಿಸಿದ್ದು, ಈ ಗೆಲವಿನಲ್ಲಿ ಮ್ಯಾಕ್ಸ್ವೆಲ್ ಪ್ರಮುಖ ಪಾತ್ರ ವಹಿಸಿದ್ದಾರೆ.
ಈ ರೀತಿಯಾಗಿ ಸತತವಾಗಿ ಎರಡು ಪಂದ್ಯಗಳಲ್ಲಿ ದೊಡ್ಡ ಇನಿಂಗ್ಸ್ ಆಡುವುದು ಕಷ್ಟ. ಮುಂದಿನ ಪಂದ್ಯಗಳಲ್ಲೂ ಅದೃಷ್ಟ ನನ್ನ ಪರವಾಗಿತ್ತು. ಈ ಅದೃಷ್ಟ ನನ್ನ ಪರವಾಗಿ ಇರಲಿದ್ದು, ಮತ್ತಷ್ಟು ಬೃಹತ್ ಮೊತ್ತ ದಾಖಲಿಸುವ ವಿಶ್ವಾಸವಿದೆ ಎಂದು ಮ್ಯಾಕ್ಸ್ವೆಲ್ ತಿಳಿಸಿದ್ದಾರೆ.
ಆರಂಭಿಕ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಅಬ್ಬರದ 95 ರನ್ ದಾಖಲಿಸಿ 206ರನ್ಗಳ ಬೃಹತ್ ಗುರಿಯನ್ನು ಅನಾಯಾಸವಾಗಿ ಮುಟ್ಟುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಭಾನುವಾರ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 192 ರನ್ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ಮತ್ತೊಮ್ಮೆ ಆಸರೆಯಾಗಿ ನಿಂತ ಮ್ಯಾಕ್ಸ್ವೆಲ್, 54 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ ಅಬ್ಬರದ 89 ರನ್ ದಾಖಲಿಸಿ ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ನನ್ನ ಕೈಯಲ್ಲಾದಷ್ಟು ಮಟ್ಟಿಗೆ ನಾನು ಫೀಲ್ಡರ್ಗಳನ್ನು ಕಂಗೆಡಿಸಲು ಪ್ರಯತ್ನಿಸುತ್ತೇನೆ. ಅದು ಮೈದಾನದ ಗಾತ್ರ ಹಾಗೂ ಬೌಲರ್ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ನಾನು ಈ ಪಂದ್ಯದಲ್ಲಿ ಮೈದಾನದಲ್ಲಿರುವ ಚಿಕ್ಕ ಅಂತರವನ್ನು ಗುರಿಯಾಗಿಸಿಕೊಂಡು ಬ್ಯಾಟಿಂಗ್ ಮಾಡಿದ್ದು, ಯಶಸ್ವಿಯಾಯಿತು ಎಂದು ತಿಳಿಸಿದರು.
ಮುಂದಿನ ಪಂದ್ಯಗಳಲ್ಲೂ ಇದೇ ರೀತಿಯ ಸಾಮರ್ಥ್ಯ ಉಳಿಸಿಕೊಂಡು ಬರುವ ವಿಶ್ವಾಸವಿದೆ. ಪಂಜಾಬ್ ಗೆಲವಿನಲ್ಲಿ ತಾವು ಪ್ರಮುಖ ಪಾತ್ರವಹಿಸುವ ಉದ್ದೇಶ ಹೊಂದಿದ್ದೇನೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ತಂಡ ಹೆಚ್ಚು ಸಮತೋಲನದಿಂದ ಕೂಡಿದ್ದು, ಪ್ರತಿಭಾನ್ವಿತ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಮ್ಮ ಪಡೆ ಹೆಚ್ಚು ಶಕ್ತಿಯುತವಾಗಿದೆ ಎಂದು ಮ್ಯಾಕ್ಸ್ವೆಲ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

