ಬಿಎಫ್ಸಿ ಮುಡಿಗೆ ಕಿರೀಟ
ಮಾರ್ಗೋವಾ: ಇದೇ ಮೊದಲ ಬಾರಿಗೆ ಐ-ಲೀಗ್ ಫುಟ್ಬಾಲ್ ಪಂದ್ಯಾವಳಿಗೆ ಪ್ರವೇಶ ಪಡೆದಿದ್ದ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ), ಐ-ಲೀಗ್ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ. ಈ ಮೂಲಕ ಪದಾರ್ಪಣೆ ಮಾಡಿದ ವರ್ಷವೇ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡು ವಿಭಿನ್ನವಾದ ದಾಖಲೆ ಬರೆದಿದೆ.
ಬೆಂಗಳೂರು ಫುಟ್ಬಾಲ್ ಕ್ಲಬ್ ಡೆಂಪೋ ವಿರುದ್ಧದ ಪಂದ್ಯಕ್ಕೂ ಮುನ್ನ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳಲು ಕೇವಲ 1 ಪಂದ್ಯದಲ್ಲಿ ಜಯ ಕಂಡುಕೊಳ್ಳಬೇಕಾಗಿತ್ತು.
ಬೆಂಗಳೂರು ಫುಟ್ಬಾಲ್ ಕ್ಲಬ್ ಸೋಮವಾರ ನಡೆದ ಪಂದ್ಯದಲ್ಲಿ ಡೆಂಪೊ ಸ್ಪೋರ್ಟಿಂಗ್ ಕ್ಲಬ್ ವಿರುದ್ಧ ಸೋಮವಾರ ನಡೆದ 23ನೇ ಸುತ್ತಿನ ಪಂದ್ಯದಲ್ಲಿ ಪಂದ್ಯದಲ್ಲಿ 4-2 ಗೋಲುಗಳ ಅಂತರದಿಂದ ವಿಜಯದ ಕೇಕೆ ಹಾಕಿತು.
ಈಗ ಇನ್ನೊಂದು ಸುತ್ತು ಉಳಿದಿರುವ ಪಂದ್ಯಾವಳಿಯಲ್ಲಿ ಬೆಂಗಳೂರು ಎಫ್ಸಿ 44 ಅಂಕಗಳನ್ನು ಗಳಿಸಿದ್ದರೆ, ಈಸ್ಟ್ ಬೆಂಗಾಲ್ 40 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ತೀವ್ರ ಪೈಪೋಟಿಯಿಂದ ನಡೆದ ಪಂದ್ಯದ ಮೊದಲಾರ್ಧ ಭಾಗದಲ್ಲಿ ಬಿಎಫ್ಸಿ ಸಂಪೂರ್ಣವಾಗಿ ಮೇಲುಗೈ ಸಾಧಿಸಿತ್ತು. ಆದರೆ, ದ್ವಿತೀಯಾರ್ಧ ಪಂದ್ಯದಲ್ಲಿ ತಿರುಗೇಟು ನೀಡಿದ ಡೆಂಪೊ ತಂಡ ಕನಿಷ್ಠ ಡ್ರಾ ಸಾಧಿಸಲು ಯತ್ನಿಸಿತು. ಆದರೆ, ಅದಕ್ಕೆ ಬಂಗಳೂರು ತಂಡ ಅವಕಾಶವನ್ನೇ ನೀಡಲಿಲ್ಲ.
ಪಂದ್ಯದಲ್ಲಿ ಸೀನ್ ರೂನಿ, ರಾಬಿನ್ ಸಿಂಗ್, ಜಾನ್ ಮೆನಿಯಂಗರ್ ಹಾಗೂ ಸುನಿಲ್ ಛೆಟ್ರಿ ಅವರು ಬೆಂಗಳೂರು ಎಫ್ಸಿ ಪರ ಗೋಲು ದಾಖಲಿಸಿದರು. ಡೆಂಪೊ ಪರ ಬೆಟೋ ಮತ್ತು ರೋಮೆಯೋ ಫೆರ್ನಾಂಡೀಸ್ ಗೋಲು ದಾಖಲಿಸಿದರು. ಮೊದಲಾರ್ಧ ಪಂದ್ಯ ಆರಂಭವಾಗಿ ಕೇವಲ 2ನೇ ನಿಮಿಷದಲ್ಲೇ ಗೋಲು ದಾಖಲಿಸಿದ ಸೀನ್ ರೂನಿ ಬೆಂಗಳೂರು ಎಫ್ಸಿ ತಂಡಕ್ಕೆ 1-0 ಅಂತರದಿಂದ ಮುನ್ನಡೆ ತಂದುಕೊಟ್ಟರು. ನಂತರ ಮೊದಲಾರ್ಧ ಪಂದ್ಯ ಮುಕ್ತಾಯವಾಗುವವರೆಗೂ ಉಭಯ ತಂಡಗಳು ಗೋಲು ದಾಖಲಿಸಲಿಲ್ಲ.
ಆದರೆ, ದ್ವಿತೀಯಾರ್ಧ ಪಂದ್ಯ ಆರಂಭವಾದ ನಂತರ 56ನೇ ನಿಮಿಷದಲ್ಲಿ ಗೋಲು ದಾಖಲಿಸುವುದರೊಂದಿಗೆ ಬೆಂಗಳೂರು ತಂಡ 2-0 ಗೋಲುಗಳ ಅಂತರದಿಂದ ಮುನ್ನಡೆ ಕಂಡುಕೊಂಡಿತು. ಆಗ ಡೆಂಪೊ ತಂಡ ಬೆಂಗಳೂರಿಗೆ ತಿರುಗೇಟು ನೀಡಲು ತೀವ್ರ ಹರಸಾಹಸ ಮಾಡಿತು. ಡೆಂಪೊ ತಂಡದ ಸಂಜು ಪ್ರಧಾನ್ ಗೋಲು ದಾಖಲಿಸಲು ಮಾಡಿದ ಯತ್ನವನ್ನು ಬೆಂಗಳೂರು ತಂಡದ ಗೋಲ್ಕೀಪರ್ ಪವನ್ ಕುಮಾರ್ ಸಂಪೂರ್ಣವವಾಗಿ ವಿಫಲಗೊಳಿಸಿದರು. ಅನಂತರವೂ ಆಕ್ರಮಣಕಾರಿ ಆಟ ಮುಂದುವರಿಸಿದ ಬೆಂಗಳೂರು ತಂಡ 79ನೇ ನಿಮಿಷದಲ್ಲಿ ಜಾನ್ ಮೆನಿಯಾಂಗರ್ ಅವರು ಗೋಲು ದಾಖಲಿಸುವ ಮೂಲಕ 3-0 ಅಂತರದಿಂದ ಭರ್ಜರಿ ಮುನ್ನಡೆ ಕಂಡುಕೊಂಡಿತು.
ಬೆಂಗಳೂರು ಇನ್ನೇನು ಗೆದ್ದಿತು ಎಂಬ ಸಮಾಧಾನ ಮೂಡುತ್ತಿದ್ದಂತೆಯೇ, ಎಚ್ಚೆತ್ತುಕೊಂಡ ಡೆಂಪೊ ತಂಡಕ್ಕೆ 82ನೇ ನಿಮಿಷದಲ್ಲಿ ದೊರಕಿದ ಫ್ರೀ ಕಿಕ್ನಲ್ಲಿ ವಿಶ್ವದರ್ಜೆಯ ಗೋಲು ದಾಖಲಿಸಿದ ಬೆಟೋ ಅವರು ಬೆಂಗಳೂರು ತಂಡದಲ್ಲಿ ತಳಮಳ ಉಂಟಾಗುವಂತೆ ಮಾಡಿದರು.
ಇದಾಗಿ 6 ನಿಮಿಷಗಳ ನಂತರ ಮತ್ತೊಂದು ಗೋಲು ದಾಖಲಿಸಿದ ಡೆಂಪೊ ತಂಡದ ರೋಮಿಯೋ ಪೆರ್ನಾಂಡೆಸ್ ಅವರು ಬೆಂಗಳೂರು ತಂಡದಲ್ಲಿ ನಡುಕ ಹುಟ್ಟಿಸಿದ್ದರು.
ಆದರೆ, ಅಂತ್ಯದಲ್ಲಿ 96ನೇ ನಿಮಿಷದಲ್ಲಿ ಗೋಲು ದಾಖಲಿಸಿದ ನಾಯಕ ಸುನಿಲ್ ಛೆಟ್ರಿ ಅವರು ಬೆಂಗಳೂರು ತಂಡ 4-2 ಗೋಲುಗಳ ಅಂತರದಿಂದ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳುವಂತೆ ನೋಡಿಕೊಂಡರು.
ಅಂಕಪಟ್ಟಿ
ತಂಡಗಳು ಪಂದ್ಯ ಜಯ ಡ್ರಾ, ಸೋಲು ಅಂಕ
ಬೆಂಗಳೂರು ಎಫ್ಸಿ 23 13 5 5 44
ಈಸ್ಟ್ ಬೆಂಗಾಲ್ 23 11 7 5 40
ಸಲ್ಗಾಂವ್ಕರ್ 23 11 5 7 38
ಸ್ಪೋರ್ಟಿಂಗ್ ಗೋವಾ 23 9 7 7 34
ಶಿಲ್ಲಾಂಗ್ ಲಾಜಾಂಗ್ 23 8 9 6 33
ಡೆಂಪೋ 23 8 8 7 32
ಪುಣೆ 23 8 7 8 31
ಮುಂಬೈ 23 5 13 5 28
ಯುನೈಟೆಡ್ 23 5 11 7 26
ರಂಗದಾಜೀದ್ 24 6 7 11 25
ಮೋಹನ್ ಬಗಾನ್ 23 5 10 8 25
ಚರ್ಚಿಲ್ ಬ್ರದರ್ಸ್ 23 5 7 11 22
ಮೊಹಮಡನ್ 23 5 6 12 21
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

