ಮ್ಯಾಕ್ಸ್ ವೆಲ್ ಹಿಟ್

ಶಾರ್ಜಾ: ಐಪಿಎಲ್ 7ನೇ ಆವೃತ್ತಿಯಲ್ಲಿ ತನ್ನ ಅಬ್ಬರದ ಬ್ಯಾಟಿಂಗ್ನಿಂದ ವಿಶ್ವದ ಗಮನ ಸೆಳೆದಿರುವ ಗ್ಲೆನ್ ಮ್ಯಾಕ್ಸ್ವೆಲ್ ತಮ್ಮ ಸಿಂಹ ಗರ್ಜನೆಯನ್ನು ಮುಂದುವರಿಸಿದ್ದಾರೆ. ಅದೃಷ್ಟವನ್ನು ತನ್ನ ಸೊಂಟದಲ್ಲಿ ಕಟ್ಟಿಕೊಂಡು ಕಣದಲ್ಲಿ ಬೌಲರ್ಗಳನ್ನು ಚೆಂಡಾಡುತ್ತಿರುವ ಮ್ಯಾಕ್ಸ್ವೆಲ್ ಮತ್ತೊಂದು ಅತ್ಯದ್ಭುತ ಇನಿಂಗ್ಸ್ ಆಡುವ ಮೂಲಕ ತಂಡಕ್ಕೆ ಮಗದೊಂದು ಗೆಲವು ತಂದುಕೊಟ್ಟಿದ್ದಾರೆ.
ಮಂಗಳವಾರ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 72 ರನ್ಗಳ ಗೆಲವು ದಾಖಲಿಸಿದೆ.
ಟಾಸ್ ಗೆದ್ದ ಸನ್ರೈಸರ್ಸ್ ಹೈದರಾಬಾದ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹಾಗಾಗಿ ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 20 ಓವರ್ಗಳಲ್ಲಿ 6 ವಿಕೆಟ್ಗೆ 193 ರನ್ ಕಲೆಹಾಕುವ ಮೂಲಕ ಪಂದ್ಯದಲ್ಲಿ ನಿಯಂತ್ರಣ ಸಾಧಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಸನ್ರೈಸರ್ಸ್ ತಂಡ 19.2 ಓವರ್ಗಳಲ್ಲಿ 121 ರನ್ಗಳಿಗೆ ಆಲೌಟ್ ಆಯಿತು.
ಕಳೆದ ಎರಡು ಪಂದ್ಯದಳಲ್ಲಿ ಕಿಂಗ್ಸ್ ಇಲೆವೆನ್ ತಂಡ ಎರಡನೇ ಪಾಳಿಯಲ್ಲಿ ಬ್ಯಾಟಿಂಗ್ ಮಾಡಿತ್ತು. ಅಲ್ಲದೆ ಬೃಹತ್ ಮೊತ್ತವನ್ನು ತನ್ನ ಬ್ಯಾಟ್ಸ್ಮನ್ಗಳ ಅಬ್ಬರದ ಪ್ರದರ್ಶನದಿಂದ ಸುಲಭವಾಗಿ ಬೆನ್ನಟ್ಟಿ ಗೆಲವು ದಾಖಲಿಸಿತ್ತು. ಹಾಗಾಗಿ ಸನ್ರೈಸರ್ಸ್ ತಂಡದ ನಾಯಕ ಶಿಖರ್ ಧವನ್ ಟಾಸ್ ಗೆದ್ದ ನಂತರ ಮೊದಲ ಬ್ಯಾಟಿಂಗ್ ಮಾಡುವ ಅವಕಾಶವನ್ನು ಎದುರಾಳಿ ತಂಡಕ್ಕೆ ನೀಡಿದರು.
ಲಕ್ಕಿ ಮ್ಯಾಕ್ಸ್ವೆಲ್: ಈ ಬಾರಿಯ ಐಪಿಎಲ್ನಲ್ಲಿ ಬೌಂಡರಿ ಹಾಗೂ ಸಿಕ್ಸರ್ ಮಳೆ ಸುರಿಸುತ್ತಿರುವ ಗ್ಲೆನ್ ಮ್ಯಾಕ್ಸ್ವೆಲ್ಗೆ ಮತ್ತೊಮ್ಮೆ ಅದೃಷ್ಟ ಬೆನ್ನೆಲುಬಾಗಿ ನಿಂತಿತು. ಈ ಪಂದ್ಯದಲ್ಲಿ ಎರಡು ಅಮೂಲ್ಯ ಜೀವದಾನ ಪಡೆದ ಮ್ಯಾಕ್ಸ್ವೆಲ್ (95 ರನ್, 43 ಎಸೆತ, 5 ಬೌಂಡರಿ, 9 ಸಿಕ್ಸರ್) ಮತ್ತೊಮ್ಮೆ ಶತಕ ವಂಚಿತರಾದರು.
ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮ್ಯಾಕ್ಸ್ವೆಲ್ ಆರಂಭದಲ್ಲೇ ಕ್ಯಾಚ್ ನೀಡಿದ್ದರೂ, ಸಿಎಸ್ಕೆ ಫೀಲ್ಡರ್ ಆಶಿಶ್ ನೆಹ್ರಾ ಅವಕಾಶ ಕೈಚೆಲ್ಲುವ ಮೂಲಕ ಜೀವದಾನ ನೀಡಿದ್ದರು. ನಂತರ ಎರಡನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಬೌಲರ್ ಜೇಮ್ಸ್ ಫಾಕ್ನರ್ ತಮಗೆ ಬಂದ ಕ್ಯಾಚ್ ಅನ್ನು ಹಿಡಿಯಲು ವಿಫಲರಾಗಿ ಮ್ಯಾಕ್ಸ್ವೆಲ್ಗೆ ಅಮೂಲ್ಯ ಅವಕಾಶ ನೀಡಿ ತಂಡದ ಹಿನ್ನಡೆಗೆ ಕಾರಣವಾಯಿತು.
ಇನ್ನು ಈ ಪಂದ್ಯದಲ್ಲೂ 2 ಜೀವದಾನ ಪಡೆದ ಮ್ಯಾಕ್ಸ್ವೆಲ್ ಮತ್ತೊಮ್ಮೆ ಬೃಹತ್ ಮೊತ್ತ ದಾಖಲಿಸಿ ತಂಡ ಸವಾಲಿನ ಮೊತ್ತ ಪೇರಿಸಲು ನೆರವಾದರು.
ಇನಿಂಗ್ಸ್ನ 9.4ನೇ ಓವರ್ನಲ್ಲಿ ಕರಣ್ ಶರ್ಮಾ ಎಸೆತದಲ್ಲಿ ಸಿಕ್ಸರ್ಗೆ ಮುಂದಾದ ಮ್ಯಾಕ್ಸ್ವೆಲ್, ಡೇವಿಡ್ ವಾರ್ನರ್ಗೆ ಕ್ಯಾಚ್ ನೀಡಿದ್ದರು. ಈ ಅವಕಾಶವನ್ನು ನೆಲಕ್ಕೆ ಹಾಕಿದ ವಾರ್ನರ್ ತಂಡದ ಹಿನ್ನಡೆಗೆ ಕಾರಣರಾದರು. ನಂತರ ಇನಿಂಗ್ಸ್ನ 14.3ನೇ ಓವರ್ನಲ್ಲಿ ಸಾಮಿ ಎಸೆತದಲ್ಲಿ ಮತ್ತೊಮ್ಮೆ ಬೃಹತ್ ಹೊಡೆತಕ್ಕೆ ಮುಂದಾದ ಮ್ಯಾಕ್ಸ್ವೆಲ್, ಫೀಲ್ಡರ್ ಕೈಗೆ ಕ್ಯಾಚ್ ನೀಡಿದರು. ಆದರೆ ಈ ಎಸೆತ ನೊಬಾಲ್ ಆದ ಕಾರಣ ಮ್ಯಾಕ್ಸ್ವೆಲ್ ಮತ್ತೊಂದು ಜೀವದಾನ ಪಡೆದರು.
ಆದರೆ, 17.6ನೇ ಓವರ್ನಲ್ಲಿ ಅಮಿತ್ ಮಿಶ್ರಾ ಎಸೆತದಲ್ಲಿ, ಸಿಕ್ಸರ್ ಮೂಲಕ ಶತಕ ಪೂರೈಸಲು ಮುಂದಾದ ಮ್ಯಾಕ್ಸ್ವೆಲ್, ಸಾಮಿಗೆ ಕ್ಯಾಚ್ ನೀಡಿ ತಮ್ಮ ಅತ್ಯುತ್ತಮ ಇನಿಂಗ್ಸ್ಗೆ ತೆರೆ ಎಳೆದರು.
ಉತ್ತಮ ಆರಂಭ: ಕಿಂಗ್ಸ್ ಇಲೆವೆನ್ ತಂಡ ಮೊದಲು ಬ್ಯಾಟಿಂಗ್ ಮಾಡಲು ಸಿಕ್ಕ ಅವಕಾಶವನ್ನು ತನ್ನ ಎರಡೂ ಕೈಗಳಿಂದ ಬಾಕಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಕಿಂಗ್ಸ್ ಇಲೆವೆನ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ವೀರೇಂದ್ರ ಸೆಹವಾಗ್ (30) ಹಾಗೂ ಚೇತೇಶ್ವರ ಪೂಜಾರ (35) ತಂಡಕ್ಕೆ 51 ರನ್ಗಳ ಆರಂಭ ನೀಡಿದರು.
ಈ ವೇಳೆ ವೀರೇಂದ್ರ ಸೆಹವಾಗ್, ಅಮಿತ್ ಮಿಶ್ರಾ ಎಸೆತದಲ್ಲಿ ಸಾಮಿಗೆ ಕ್ಯಾಚ್ ನೀಡಿ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು. ಸೆಹವಾಗ್ ನಿರ್ಗಮನದ ಹಿಂದೆಯೇ ಮತ್ತೊರ್ವ ಆರಂಭಿಕ ಪೂಜಾರ ಸಹ ಸಾಮಿ ಎಸೆತದಲ್ಲಿ ದುಬಾರಿ ಹೊಡೆತಕ್ಕೆ ಮುಂದಾಗಿ ವೇಣುಗೋಪಾಲ್ಗೆ ಕ್ಯಾಚ್ ನೀಡಿದರು. ನಂತರ ಬಂದ ಡೇವಿಡ್ ಮಿಲ್ಲರ್ (10), ಜಾರ್ಜ್ ಬೇಯ್ಲಿ (10), ಮಿಚೆಲ್ ಜಾನ್ಸನ್ (4) ರನ್ಗಳಿಸಿದರು.
ಹೈದರಾಬಾದ್ ಪರ ಭುವನೇಶ್ವರ್ 3, ಅಮಿತ್ ಮಿಶ್ರಾ 2, ಹಾಗೂ ಸಾಮಿ 1 ವಿಕೆಟ್ ಪಡೆದರು.
ಹಾದಿ ತಪ್ಪಿದ ಸನ್: ಪಂಜಾಬ್ ತಂಡ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಸನ್ರೈಸರ್ಸ್ ಹೈದರಾಬಾದ್ ತಂಡ ಆರಂಭದಿಂದಲೇ, ಹಾದಿ ತಪ್ಪುವ ಮೂಲಕ ಸೋಲಿನೆಡೆಗೆ ಮುಖ ಮಾಡಿತು.
ರೈಸರ್ಸ್ ಪಡೆ ನಿಗದಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಪರಿಣಾಮ ತಂಡ, ಪಂದ್ಯದ ಮೇಲಿನ ನಿಯಂತ್ರಣ ಕೈಬಿಟ್ಟಿತು. ತಂಡದ ಪರ ಕೆ.ಎಲ್ ರಾಹುಲ್ ಗಳಿಸಿದ 27 ರನ್ ಗರಿಷ್ಠವಾಯಿತು. ಯಾವುದೇ ಆಟಗಾರ ಸಮರ್ಥ ರೀತಿಯಲ್ಲಿ ರನ್ಗಳಿಸದ ಪರಿಣಾಮ 121 ರನ್ ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯವಾಗಿ ಕಿಂಗ್ಸ್ಗೆ ತಲೆಬಾಗಿತು. ಪಂಜಾಬ್ ತಂಡದ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಲಕ್ಷ್ಮಿಪತಿ ಬಾಲಾಜಿ 4 ಓವರ್ಗಳಲ್ಲಿ 13 ರನ್ಗಳಿಗೆ 4 ವಿಕೆಟ್ ಪಡೆದು ಗಮನ ಸೆಳೆದರು.
ಸ್ಕೋರ್ ವಿವರ
ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರ್ಗಳಲ್ಲಿ 6 ವಿಕೆಟ್ಗೆ 193
ಪೂಜಾರ ಸಿ ಮೇಣುಗೋಪಾಲ್ ಬಿ ಸಾಮಿ 35
ಸೆಹವಾಗ್ ಸಿ ಸಾಮಿ ಬಿ ಮಿಶ್ರಾ 30
ಮ್ಯಾಕ್ಸ್ವೆಲ್ ಸಿ ಸಾಮಿ ಬಿ ಮಿಶ್ರಾ 95
ಮಿಲ್ಲರ್ ಸಿ ವಾರ್ನರ್ ಬಿ ಭುವನೇಶ್ವರ್ 10
ಜಾರ್ಜ್ ಬೇಯ್ಲಿ ಸಿ ವಾರ್ನರ್ ಬಿ ಭುವನೇಶ್ವರ್ 10
ಮಿಚೆಲ್ ಜಾನ್ಸನ್ ಬಿ ಭುವನೇಶ್ವರ್ 4
ಅಕ್ಷರ್ ಪಟೇಲ್ ಅಜೇಯ 0
ಇತರೆ: (ಲೆಗ್ ಬೈ 5, ವೈಡ್ 3, ನೊಬಾಲ್ 1) ಒಟ್ಟು 9
ವಿಕೆಟ್ ಪತನ: 1-51, 2-86, 3-154, 4-179, 5-189, 6-193
ಬೌಲಿಂಗ್ ವಿವರ
ಡೇಲ್ ಸ್ಟೇಯ್ನ್ 4-0-26-0
ಭುವನೇಶ್ವರ್ 4-0-19-3
ಇರ್ಫಾನ್ ಪಠಾಣ್ 2-0-28-0
ಕರಣ್ ಶರ್ಮಾ 4-0-37-0
ಅಮಿತ್ ಮಿಶ್ರಾ 4-0-56-2
ಡಾರೆನ್ ಸಾಮಿ 2-0-22-1
ಸನ್ರೈಸರ್ಸ್ ಹೈದರಾಬಾದ್ 19.2 ಓವರ್ಗಳಲ್ಲಿ 121
ಎರಾನ್ ಫಿಂಚ್ ಬಿ ಬಾಲಾಜಿ 19
ಶಿಖರ್ ಧವನ್ ಸಿ ಸಾಹ ಬಿ ಜಾನ್ಸನ್ 1
ವಾರ್ನರ್ ಸಿ ಮ್ಯಾಕ್ಸ್ವೆಲ್ ಬಿ ಬಾಲಾಜಿ 8
ರಾಹುಲ್ ಸಿ ಮಿಲ್ಲರ್ ಬಿ ಪಟೇಲ್ 27
ಮೇಣುಗೋಪಾಲ್ ಸಿ ಸಂದೀಪ್ 11
ಇರ್ಫಾನ್ ಪಠಾಣ್ ಬಿ ಪಟೇಲ್ 5
ಸಾಮಿ ಸಿ ಪಟೇಲ್ ಬಿ ಬಾಲಾಜಿ 15
ಕರಣ್ ಶರ್ಮಾ ಸಿ ಮಿಲ್ಲರ್ ಬಿ ಜಾನ್ಸನ್ 10
ಡೇಲ್ ಸ್ಟೇಯ್ನ್ ಬಿ ಬಾಲಾಜಿ 12
ಅಮಿತ್ ಮಿಶ್ರಾ ಅಜೇಯ 4
ಭುವನೇಶ್ವರ್ ಸಿ ಜಾನ್ಸನ್ ಬಿ ಧವನ್ 1
ಇತರೆ: (ಲೆಗ್ಬೈ 3, ವೈಡ್ 3, ನೊಬಾಲ್ 2) ಒಟ್ಟು 8
ವಿಕೆಟ್ ಪತನ: 1-11, 2-31, 3-33, 4-49, 5-74, 6-93, 7-95, 8-114, 9-118, 10-121
ಬೌಲಿಂಗ್ ವಿವರ
ಸಂದೀಪ್ ಶರ್ಮಾ 4-0-26-1
ಮಿಚೆಲ್ ಜಾನ್ಸನ್ 4-0-26-2
ಬಾಲಾಜಿ 4-0-13-4
ರಿಶಿ ಧವನ್ 2.2-0-23-1
ಅಕ್ಷರ್ ಪಟೇಲ್ 4-0-20-2
ಗ್ಲೆನ್ ಮ್ಯಾಕ್ಸ್ವೆಲ್ 1-0-10-0
ಪಂದ್ಯಶ್ರೇಷ್ಠ: ಗ್ಲೆನ್ ಮ್ಯಾಕ್ಸ್ವೆಲ್
ಅಂಕಪಟ್ಟಿ
ತಂಡ ಪಂದ್ಯ ಜಯ ಸೋಲು ಅಂಕ ಸರಾಸರಿ
ಕಿಂಗ್ಸ್ ಇಲೆವೆನ್ ಪಂಜಾಬ್ 3 3 0 6 +1.679
ರಾಯಲ್ ಚಾಲೆಂಜರ್ಸ್ ಬೆಂಗಳೂರು 2 2 0 4 +1.168
ಚೆನ್ನೈ ಸೂಪರ್ ಕಿಂಗ್ಸ್ 2 1 1 2 +2.082
ಕೋಲ್ಕತಾ ನೈಟ್ ರೈಡರ್ಸ್ 2 1 1 2 +0.909
ರಾಜಸ್ಥಾನ ರಾಯಲ್ಸ್ 2 1 1 2 - 0.178
ಡೆಲ್ಲಿ ಡೇರ್ಡೆವಿಲ್ಸ್ 3 1 2 2 - 1.974
ಮುಂಬೈ ಇಂಡಿಯನ್ಸ್ 2 0 2 0 -1.515
ಸನ್ರೈಸರ್ಸ್ ಹೈದರಾಬಾದ್ 2 0 2 0 - 1.954
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


