ಕೆಕೆಆರ್ಗೆ ಗಂಭೀರ್ ವೈಫಲ್ಯದ್ದೆ ಚಿಂತೆ; ಬೇಟೆಗೆ ರಾಯಲ್ಸ್ ಸಜ್ಜು
ಅಬುಧಾಬಿ: ಪ್ರಸಕ್ತ ಸಾಲಿನ ಏಳನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪಾಲಿಗೆ ನಾಯಕ ಗೌತಮ್ ಗಂಭೀರ್ರ ದಯನೀಯ ವೈಫಲ್ಯವೇ ದೊಡ್ಡ ಚಿಂತೆಯಾಗಿದೆ. ಈಗ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಾದರೂ, ಗಂಭೀರ್ ಫಾರ್ಮ್ ಕಂಡುಕೊಳ್ಳಬಹುದೆಂಬ ಮತ್ತೊಂದು ಆಶಾಕಿರಣ ಆ ತಂಡದಲ್ಲಿದೆ.
ಅಬುಧಾಬಿಯಲ್ಲಿ ಮಂಗಳವಾರ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಸದ್ಯ ಉಭಯ ತಂಡಗಳು ಸಮಸ್ಥಿತಿಯಲ್ಲಿವೆ. ಎರಡೂ ತಂಡಗಳು ಆಡಿರುವ ತಲಾ ನಾಲ್ಕು ಪಂದ್ಯಗಳಲ್ಲಿ ತಲಾ ಎರಡು ಮತ್ತು ಸೋಲುಗಳ ಫಲಿತಾಂಶ ಅನುಭವಿಸಿವೆ.
ಕೋಲ್ಕತಾ ತಂಡದ ನಾಯಕ ಗೌತಮ್ ಗಂಭೀರ್ 4 ಪಂದ್ಯಗಳಿಂದ ಗಳಿಸಿದ್ದು ಕೇವಲ 1 ರನ್. ಇದರಲ್ಲಿ ಮೂರು ಶೂನ್ಯಗಳಿವೆ. ಮೊದಲ ಮೂರು ಪಂದ್ಯಗಳಲ್ಲಿ ಖಾತೆ ತೆರೆಯದೇ ನಿರ್ಗಮಿಸಿದ್ದ ಅವರು, ಕಳೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕೇವಲ 1 ರನ್ಗಳಿಸಿ ನಿರ್ಗಮಿಸಿದ್ದರು. ಗಂಭೀರ್ ವೈಫಲ್ಯ ಕೋಲ್ಕತಾ ಪಾಲಿಗೆ ಭಾರಿ ಹಿನ್ನಡೆ ತಂದುಕೊಟ್ಟಿದೆ. ಹಾಗಾಗಿ, ನಾಳಿನ ಪಂದ್ಯದಲ್ಲಿ ಅವರು ಎಂದಿನ ಲಹರಿಗೆ ಬರುವ ವಿಶ್ವಾಸದೊಂದಿಗೆ ಮತ್ತೊಮ್ಮೆ ತಂಡ ಹೋರಾಟಕ್ಕೆ ಅಣಿಯಾಗುತ್ತಿದೆ.
2012ರ ಆವೃತ್ತಿಯ ಚಾಂಪಿಯನ್ ಕೋಲ್ಕತಾ ಒಟ್ಟು 8 ಐಪಿಎಲ್ ತಂಡಗಳ ಪೈಕಿ ಬಲಾಢ್ಯ ಬ್ಯಾಟಿಂಗ್ ಕ್ರಮಾಂಕ ಹೊಂದಿರುವ ಪಡೆಗಳಲ್ಲೊಂದಾಗಿದೆ. ಆದರೆ, ಜಾಕ್ ಕಾಲಿಸ್ ಮತ್ತು ಮನೀಷ್ ಪಾಂಡೆ ಬಿಟ್ಟರೆ ಮಿಕ್ಕವರು ಸ್ಥಿರ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಸ್ಫೋಟಕ ಬ್ಯಾಟ್ಸ್ಮನ್ ಯೂಸುಫ್ ಪಠಾಣ್ ಈವರೆಗೆ 4 ಪಂದ್ಯಗಳಿಂದ ಗಳಿಸಿದ್ದು ಬರೀ 17 ರನ್. ಆರಂಭಿಕ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಬಗ್ಗು ಬಡೆದು ಶುಭಾರಂಭ ಮಾಡಿದ್ದ ಕೆಕೆಆರ್, ಒಂದು ತಂಡವಾಗಿ ಕ್ಲಿಕ್ ಆಗುವಲ್ಲಿ ವಿಫಲವಾಗಿದೆ. ಶಾರ್ಜಾದಲ್ಲಿ ಏಪ್ರಿಲ್ 24ರಂದು ರಾಯಲ್ ಚಾಲೆಂಜರ್ಸ್ ವಿರುದ್ಧದ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಬಾರಿಸಿದ್ದ ಚೆಂಡನ್ನು ಬೌಂಡರಿ ಗೆರೆಯ ಬಳಿ ಕ್ರಿಸ್ ಲಿನ್ ಅಚ್ಚರಿಯ ರೀತಿಯಲ್ಲಿ ಕ್ಯಾಚ್ ಆಗಿ ತೆಗೆದುಕೊಳ್ಳದೇ ಇದ್ದಲ್ಲಿ ಇಲ್ಲಿಯೂ ಕೆಕೆಆರ್ಗೆ ಸೋಲು ಕಟ್ಟಿಟ್ಟಬುತ್ತಿಯಾಗಿತ್ತು. ಆದರೆ, ಅಂದು ಅದೃಷ್ಟ ಕೋಲ್ಕತಾ ತಂಡದ ಪಾಲಿಗಿದ್ದರಿಂದ ಬಚಾವ್ ಆಯಿತು. ಅದ್ಭುತ ಸ್ಪಿನ್ ಜಾದೂಗಾರ ವೆಸ್ಟ್ ಇಂಡೀಸ್ನ ಸುನೀಲ್ ನಾರಾಯಣ ಸದ್ಯ ಈ ಋುತುವಿನಲ್ಲಿ ಅತಿ ಹೆಚ್ಚು ವಿಕೆಟ್ (9) ಪಡೆದ ಬೌಲರ್ ಆಗಿದ್ದು ಕೋಲ್ಕತಾದ ಬೌಲಿಂಗ್ ವಿಭಾಗದ ಶಕ್ತಿ ಎನಿಸಿದ್ದಾರೆ. ಯುಎಇ ಹಂತದ ಟೂರ್ನಿಯನ್ನು ಗೆಲವಿನೊಂದಿಗೆ ವಿದಾಯ ಹೇಳಲು ಕಾತರದಲ್ಲಿರುವ ಕೋಲ್ಕತಾ ತಂಡದ ಬ್ಯಾಟ್ಸ್ಮನ್ಗಳು ಮತ್ತು ಬೌಲರ್ಗಳು ತಮ್ಮ ಎಂದಿನ ಲಯಕ್ಕೆ ಮರಳಿ, ಒಂದು ತಂಡವಾಗಿ ಸಾಮರ್ಥ್ಯ ಧಾರೆಯರೆಯುವಲ್ಲಿ ಯಶಸ್ವಿಯಾದಲ್ಲಿ, ವಿಜಯಲಕ್ಷ್ಮಿ ಒಲಿಸಿಕೊಳ್ಳಬಹುದಾಗಿದೆ.
ಮತ್ತೊಂದೆಡೆ ಶೇನ್ ವ್ಯಾಟ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ಕೂಡ ಅಸ್ಥಿರ ಪ್ರದರ್ಶನ ನೀಡುತ್ತಿದೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಮೊದಲ ಪಂದ್ಯದಲ್ಲಿ ಗೆಲವು ದಾಖಲಿಸಿ ಶುಭಾರಂಭ ಮಾಡಿದ್ದ ರಾಜಸ್ಥಾನ ಪಡೆ ನಂತರದ ಎರಡೂ ಪಂದ್ಯಗಳಲ್ಲಿ ಕಿಂಗ್ಸ್ ಪಂಜಾಬ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಘಾತ ಅನುಭವಿಸಿತ್ತು. ಆದರೆ, ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೇವಲ 70 ರನ್ಗಳಿಗೆ ಕಟ್ಟಿಹಾಕಿ ಸುಲಭ ಜಯ ಸಂಪಾದಿಸಿದ್ದ ರಾಜಸ್ಥಾನದ ಆಟಗಾರರಲ್ಲಿ ಹೊಸ ಚೈತನ್ಯ ತುಂಬಿದೆ. ಇದೇ ಸ್ಫೂರ್ತಿಯಲ್ಲಿ ಕೋಲ್ಕತಾ ವಿರುದ್ಧವೂ ಗೆಲುವು ತಮ್ಮದಾಗಿಸಿಕೊಳ್ಳುವ ಲೆಕ್ಕಾಚಾರದಲ್ಲಿ ವ್ಯಾಟ್ಸನ್ ಬಳಗವಿದೆ.
ಆದರೆ, ಆರಂಭಿಕರಾದ ಅಜಿಂಕ್ಯಾ ರಹಾನೆ ಮತ್ತು ಅಭಿಷೇಕ್ ನಾಯರ್ ತಂಡಕ್ಕೆ ಉತ್ತಮ ಆರಂಭ ನೀಡಲು ವಿಫಲರಾಗಿದ್ದು, ರನ್ಗಳಿಸಲು ಪರದಾಡುತ್ತಿರುವುದು ರಾಜಸ್ಥಾನಕ್ಕೆ ಸಮಸ್ಯೆಯಾಗಿದೆ. ಮಧ್ಯಮ ಕ್ರಮಾಂಕದಲ್ಲಿ ವ್ಯಾಟ್ಸನ್, ಸಂಜು ಸ್ಯಾಮ್ಸನ್ ಮತ್ತು ಸ್ಟೀವನ್ ಸ್ಮಿತ್ ಸ್ವಲ್ಪ ಮಟ್ಟಿಗೆ ಭರವಸೆ ಹುಟ್ಟಿಸಿದ್ದರೂ, ಇದುವರೆಗಿನ ಅವರ ಪ್ರದರ್ಶನ ನೋಡಿದರೆ, ಇನ್ನೂ ಸಂಪೂರ್ಣವಾಗಿ ಅವರ ಮೇಲೆ ನಂಬಿಕೆ ಇಡುವುದು ಕಷ್ಟ.
ಬೌಲಿಂಗ್ ವಿಭಾಗದಲ್ಲಿ ಕೂಡ ಖ್ಯಾತನಾಮರ ಹೆಸರುಗಳೇನಿಲ್ಲ. ಆದರೂ, ರಜತ್ ಭಾಟಿಯಾ ಮತ್ತು ಆಫ್ ಸ್ಪಿನ್ನರ್ ಕೇನ್ ರಿಚರ್ಡ್ಸನ್ ಸ್ವಲ್ಪ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಪ್ರವೀಣ್ ತಾಂಬೆ ಕೂಡ ಉತ್ತಮ ದಾಳಿ ನಡೆಸಿ 4 ವಿಕೆಟ್ ಕಬಳಿಸಿದ್ದರು. ನಾಳಿನ ಪಂದ್ಯದಲ್ಲಿ ಕಾಲಿಸ್, ಗಂಭೀರ್, ರಾಬಿನ್ ಉತ್ತಪ್ಪ ಹಾಗೂ ಪಾಂಡೆ ಅವರ ಎದುರು ರಾಜಸ್ಥಾನ ಬೌಲರ್ಗಳು ಎಷ್ಟು ಪ್ರಭಾವ ಬೀರಲಿದ್ದಾರೆ ಎಂಬುದನ್ನು ಈಗಲೇ ಹೇಳುವುದು ಕಷ್ಟ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

