ಕ್ರೀಡೆ

ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಗುರಿ: ಸರ್ದಾರ್ ಸಿಂಗ್

ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಗುರಿ: ಸರ್ದಾರ್ ಸಿಂಗ್
Published On :

ನವದೆಹಲಿ: ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಗದೊಮ್ಮೆ ಬೆಳ್ಳಿ ಪದಕ ಗೆದ್ದು ತವರಿಗೆ ಹಿಂತಿರುಗಿರುವ ಭಾರತ ಹಾಕಿ ತಂಡದ ಆಟಗಾರರಿಗೆ ಭವ್ಯ ಸ್ವಾಗತ ನೀಡಲಾಗಿದೆ.
ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಟಗಾರರು ಬಂದಿಳಿಯುತ್ತಿದ್ದಂತೆಯೇ ಹಾಕಿ ಇಂಡಿಯಾ ಮತ್ತು ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಅಧಿಕಾರಿಗಳು ತಂಡವನ್ನು ಆದರದಿಂದ ಬರಮಾಡಿಕೊಂಡರು. ಅಪಾರ ಸಂಖ್ಯೆಯ ಅಭಿಮಾನಿಗಳು, ಆಟಗಾರರ ಸ್ನೇಹಿತರು-ಸಂಬಂಧಿಕರು ಉಪಸ್ಥಿತರಿದ್ದು, ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಸರ್ದಾರ್ ಸಿಂಗ್ ನಾಯಕತ್ವದ ಭಾರತ ತಂಡ ಫೈನಲ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ 0-4 ಗೋಲುಗಳಿಂದ ಸೋಲನುಭವಿಸಿ ಬೆಳ್ಳಿ ಪದಕ ಪಡೆದಿದ್ದು. 2010ರಲ್ಲಿ ದೆಹಲಿಯಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಸಹ ಇದೇ ಆಸ್ಟ್ರೇಲಿಯಾ ವಿರುದ್ಧ ಸೋತು ಚಿನ್ನದ ಪದಕದಿಂದ ವಂಚಿತವಾಗಿತ್ತು. ಈ ಬಾರಿಯೂ ಅದೇ ಫಲಿತಾಂಶ ಪುನರಾವರ್ತನೆಯಾಗಿ ಬೆಳ್ಳಿ ಪದಕದೊಂದಿಗೆ ತವರಿಗೆ ಹಿಂತಿರುಗಬೇಕಾಯಿತು.
ಕ್ರೀಡಾಕೂಟದಲ್ಲಿ ಭಾರತದ ಆಟಗಾರರು ಉತ್ತಮ ಪ್ರದರ್ಶನವನ್ನೇ ನೀಡಿದರು. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಎರಡು ಗೋಲುಗಳಿಂದ ಹಿಂದಿದ್ದಾಗಲೂ ಸರ್ದಾರ್ ಪಡೆ ಕೆಚ್ಚೆದೆಯಿಂದ ಹೋರಾಡಿ ಅಂತಿಮವಾಗಿ 3-2ರಿಂದ ಜಯ ದಾಖಲಿಸಿ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿತ್ತು.
ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಬಾತ್ರಾ ಮಾತನಾಡಿ, ತಂಡ ಹೆಮ್ಮೆ ಪಡುವ ಸಾಧನೆ ಮಾಡಿದೆ. ಬೆಳ್ಳಿ ಪದಕಕ್ಕೆ ಆಟಗಾರರು ಅರ್ಹರಾಗಿದ್ದರು. ಪ್ರತಿಯೊಬ್ಬರ ಕಠಿಣ ಪರಿಶ್ರಮದ ಫಲವಾಗಿ ಈ ಗೆಲವು ದೊರೆತಿದ್ದು, ಇಡೀ ದೇಶ ಹೆಮ್ಮೆ ತರುವ ಸಾಧನೆ ಅವರಿಂದ ಹೊರಹೊಮ್ಮಿದೆ ಎಂದರು.
ಮುಂಬರುವ ಏಷ್ಯನ್ ಗೇಮ್ಸ್ ಅಲ್ಲದೇ ಭವಿಷ್ಯದಲ್ಲಿ ಆಡಲಾಗುವ ಪ್ರಮುಖ ಟೂರ್ನಿಗಳಲ್ಲಿ ಭಾರತದ ಆಟಗಾರರಿಗೆ ಯಶಸ್ಸು ದೊರೆಯಲಿ ಎಂದೂ ಸಹ ಬಾತ್ರಾ ಹಾರೈಸಿದರು.
ನಾಯಕ ಸರ್ದಾರ್ ಸಿಂಗ್ ಪ್ರತಿಕ್ರಿಯಿಸಿ, ಅದ್ಧೂರಿ ಸ್ವಾಗತದಿಂದ ಖುಷಿಯಾಗಿದೆ. ಮುಂದಿನ ತಿಂಗಳು ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದುಕೊಳ್ಳುವುದು ನಮ್ಮ ಮುಂದಿನ ಗುರಿಯಾಗಿದೆ ಎಂದು ಹೇಳಿದರು.
ಕಾಮನ್ವೆಲ್ತ್ನಲ್ಲಿ ಚಿನ್ನದ ಪದಕ ಗೆದ್ದುಕೊಳ್ಳದಿರುವುದು ಸ್ವಲ್ಪ ಬೇಸರ ತಂದಿದೆ. ಆದರೂ, ತಂಡ ಬೆಳ್ಳಿ ಪದಕದ ಮೂಲಕ ಹೆಮ್ಮೆಪಡುವ ಸಾಧನೆಯನ್ನೇ ಮಾಡಿದೆ ಎಂದರು.
ಗ್ಲಾಸ್ಗೋ ಕ್ರೀಡಾಕೂಟದಿಂದ ಉತ್ತಮ ಪಾಠ ಕಲಿತಿದ್ದು, ತಂಡದಲ್ಲಿರುವ ಕೆಲ ನ್ಯೂನತೆಗಳನ್ನು ಸರಿಪಡಿಸಿಕೊಂಡು ಮುಂದಿನ ಮಹತ್ವದ ಸವಾಲಿಗೆ ಉತ್ತಮ ರೀತಿಯಲ್ಲಿ ಅಣಿಯಾಗಲಿದ್ದೇವೆ ಎಂದು ಸರ್ದಾರ್ ಸಿಂಗ್ ವಿಶ್ವಾಸದಿಂದ ನುಡಿದರು. ಯುವ ಪ್ರತಿಭಾನ್ವಿತರಿಂದ ಕೂಡಿರುವ ತಂಡ ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಇನ್ನೆರಡು ವರ್ಷಗಳಲ್ಲಿ ಭಾರತ ಕೂಡ ಆಸ್ಟ್ರೇಲಿಯಾ, ಜರ್ಮನಿ, ಹಾಲೆಂಡ್ಗೆ ಸರಿಸಮನಾದ ಪೈಪೋಟಿ ನೀಡುವಷ್ಟು ಸಮರ್ಥವಾಗಲಿದೆ ಎಂದು ಸರ್ದಾರ್ ಸಿಂಗ್ ಹೇಳಿದರು. ಭಾರತ ತಂಡ ಬುಧವಾರದಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದದ ಮೂರು ಪಂದ್ಯಗಳ ಅಭ್ಯಾಸ ಸರಣಿಗಾಗಿ ಢಾಕಾಗೆ ತೆರಳಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.