ಶಿಖರ್ ವಿವಾದ 'ಶಿಕಾರಿ'ಗಿಳಿದ ಬಿಸಿಸಿಐ

ಬ್ರಿಸ್ಬೇನ್‌ನಲ್ಲಿ ಭಾರತ, ಆಸ್ಟ್ರೇಲಿಯಾಕ್ಕೆ ಶರಣಾದ ಬೆನ್ನಲ್ಲೇ ವಿವಾದಗಳೂ ಭುಗಿಲೆದ್ದಿವೆ.
ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯದೇ ವಿವಾದಕ್ಕೀಡಾಗಿರುವ ಶಿಖರ್ ಧವನ್ (ಸಂಗ್ರಹ ಚಿತ್ರ)
ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯದೇ ವಿವಾದಕ್ಕೀಡಾಗಿರುವ ಶಿಖರ್ ಧವನ್ (ಸಂಗ್ರಹ ಚಿತ್ರ)

ಚೆನ್ನೈ: ಬ್ರಿಸ್ಬೇನ್‌ನಲ್ಲಿ ಭಾರತ, ಆಸ್ಟ್ರೇಲಿಯಾಕ್ಕೆ ಶರಣಾದ ಬೆನ್ನಲ್ಲೇ ವಿವಾದಗಳೂ ಭುಗಿಲೆದ್ದಿವೆ.

ಎಲ್ಲಕ್ಕಿಂತ ಮುಖ್ಯವಾಗಿ, ಪಂದ್ಯದ ನಾಲ್ಕನೇ ದಿನದಾಟದ ಆರಂಭದ ಹಂತದಲ್ಲಿ ಭಾರತ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಬ್ಯಾಟಿಂಗ್‌ಗಾಗಿ ಕಣಕ್ಕಿಳಿಯದೇ ಇದ್ದದ್ದು ಈಗ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಈ ಬಗ್ಗೆ ತನಿಖೆ ನಡೆಸಲು ನಿರ್ಧರಿಸಿರುವ ಬಿಸಿಸಿಐ, ತಂಡದ ವ್ಯವಸ್ಥಾಪಕ ಮಂಡಳಿಯನ್ನು ಪ್ರಶ್ನಿಸಲು ಮುಂದಾಗಿದೆ.

ಏಕೆ ವಿಚಾರಣೆ?
ಪಂದ್ಯದ ಒಂದು ಹಂತದಲ್ಲಿ ಎದುರಾಳಿಗಳಿಗೆ ಸೆಡ್ಡು ಹೊಡೆದಿದ್ದ ಭಾರತ, ಹೀಗೆ ಏಕಾಏಕಿಯಾಗಿ ಶರಣಾಗಿದ್ದು ಏಕೆ ಮತ್ತು ಹೇಗೆ ಎಂಬುದು ಸದ್ಯಕ್ಕೆ ಬಿಸಿಸಿಐನಲ್ಲಿ ದೊಡ್ಡದಾಗಿ ಚರ್ಚೆಯಾಗುತ್ತಿದೆ. ಇನ್ನೊಂದೆಡೆ, ಶಿಖರ್ ಧವನ್ ಅವರು ಅಭ್ಯಾಸದ ವೇಳೆ ಗಾಯಗೊಂಡಿದ್ದರಿಂದ ಬೆಳಗಿನ ಆಟದಲ್ಲಿ ಅವರು ಭಾಗಿಯಾಗಲಿಲ್ಲ ಎಂಬ ಮಾತುಗಳನ್ನು ಸ್ವತಃ ಟೀಂ ಇಂಡಿಯಾ ನಾಯಕ ಧೋನಿಯವರೇ ಅಲ್ಲಗಳೆದಿದ್ದಾರೆ. ಅಭ್ಯಾಸದ ವೇಳೆ ಧವನ್‌ಗೆ ಗಾಯವಾಗಿರಲಿಲ್ಲ. ಹಾಗಾಗಿ ಅವರು ಕ್ರೀಸ್‌ಗೆ ಇಳಿಯದಿದ್ದರ ಹಿಂದೆ ಬೇರೇನೋ ಕಾರಣವಿದೆ ಎಂಬಂತೆ ಮಾತನಾಡಿದ್ದಾರೆ.

ಇದರ ಜೊತೆಗೆ, ಮಧ್ಯಾಹ್ನದ ಭೋಜನ ವಿರಾಮದ ವೇಳೆ ತಮಗೆ ಸಸ್ಯಾಹಾರಿ ಆಹಾರ ನೀಡುತ್ತಿಲ್ಲ ಎಂದು ಮುನಿಸಿಕೊಂಡ ತಂಡದ ಆಟಗಾರರಾದ ಇಶಾಂತ್ ಶರ್ಮಾ, ಸುರೇಶ್ ರೈನಾ ಅವರು ಕ್ರೀಡಾಂಗಣದ ಹೊರಗೆ ಹೋಗಿ ಊಟ ಮಾಡಿಕೊಂಡು ಬಂದಿದ್ದಾರೆ. ಈ ಎಲ್ಲ ಬೆಳವಣಿಗಳೂ ಬಿಸಿಸಿಐನ ನಿದ್ದೆಗೆಡಿಸಿವೆ. ಬ್ರಿಸ್ಬೇನ್ ಟೆಸ್ಟ್ ಅನ್ನು ಭಾರತ ಸೋಲಲು, ಡ್ರೆಸಿಂಗ್ ರೂಂನಲ್ಲಿನ ಅಸಮಾಧಾನಗಳೂ ಕಾರಣ ಎಂಬ ನಿರ್ಧಾರಕ್ಕೆ ಬರಲಾಗಿದೆ. ಹೀಗಾಗಿ ತಂಡದ ವ್ಯವಸ್ಥಾಪಕ ಮಂಡಳಿಯ ವಿಚಾರಣೆಗೆ ಅದು ಸಿದ್ಧವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು, ಧವನ್ ಅವರು ಪಂದ್ಯ ಮುಗಿಯಲು ಇನ್ನು ಕೇವಲ ಒಂದು ಗಂಟೆಗೂ ಕಡಿಮೆ ಕಾಲಾವಕಾಶವಿದ್ದಾಗ ಕ್ರೀಸ್‌ಗೆ ಇಳಿದಿದ್ದರು. ದಿನದಾಟದ ಆರಂಭದಲ್ಲೇ ಅವರು ಕಣಕ್ಕಿಳಿದಿದ್ದರೆ ತಂಡಕ್ಕೆ ನೆರವಾಗುತ್ತಿತ್ತು. ದಿನದಾಟ ಆರಂಭಿಕ ಅವಧಿಯಲ್ಲಿ ಎದುರಾಳಿಗಳ ಮೇಲೆ ಹತೋಟಿ ಸಾಧಿಸುವುದು ಅಂದಿನ ಮಟ್ಟಿಗೆ ತುರ್ತು ಅಗತ್ಯವಾಗಿತ್ತು. ಆದರೂ, ಧವನ್ ಅವರು ಕಣಕ್ಕಿಳಿಯಲೇ ಇಲ್ಲ. ಅವರು ಗಾಯಗೊಂಡಿದ್ದರು ಎಂಬ ಸಮಜಾಯಿಷಿ ನೀಡಲಾಗುತ್ತಿದೆ. ಇದರ ನಿಜ ಮರ್ಮವೇನು ಎಂಬುದನ್ನು ಪತ್ತೆ ಹಚ್ಚಬೇಕಿದೆ ಎಂದಿದ್ದಾರೆ.

ವ್ಯವಸ್ಥಾಪಕ ಮಂಡಳಿ ಹೇಳೋದೇನು?
ಏತನ್ಮಧ್ಯೆ, ಟೀ ಇಂಡಿಯಾ ವ್ಯವಸ್ಥಾಪಕ ಮಂಡಳಿಯು ಅಭ್ಯಾಸದ ವೇಳೆ ಶಿಖರ್ ಧವನ್ ಗಾಯಗೊಂಡಿದ್ದರು ಎಂದು ಬಿಸಿಸಿಐ ಮುಂದೆ ಆಲವತ್ತುಕೊಂಡಿದೆ. ಬ್ರಿಸ್ಬೇನ್ ಕ್ರೀಡಾಂಗಣದಲ್ಲಿ ಅಭ್ಯಾಸಕ್ಕಾಗಿ ಮೀಸಲಿರುವ ಪಿಚ್‌ಗಳು ಹಾಳಾಗಿವೆ. ಇಂಥ ಪಿಚ್‌ಗಳಲ್ಲಿ ಅಭ್ಯಾಸ ಮಾಡುತ್ತಿರುವುದರಿಂದ ಕ್ರಿಕೆಟಿಗರು ಗಾಯಗೊಳ್ಳುತ್ತಿದ್ದಾರೆ ಎಂದು ಹೇಳಿದೆ. ಆದರೆ ವ್ಯವಸ್ಥಾಪಕ ಮಂಡಳಿಯು ಈ ದೂರುಗಳನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿಲ್ಲ. ಬದಲಿಗೆ ಅಭ್ಯಾಸದ ವೇಳೆ ಕ್ರಿಕೆಟಿಗರು ಗಾಯಗೊಳ್ಳುವುದು ಸಹಜ. ಪ್ರತಿಯೊಂದು ಪ್ರವಾಸಿ ತಂಡವೂ ಹೀಗೆ ದೂರು ನೀಡುತ್ತದೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದು ಸಹಜ. ಹಾಗಾಗಿ ಇದೆಲ್ಲವನ್ನೂ ಜೊತೆಯಲ್ಲಿಟ್ಟುಕೊಂಡೇ ಕಣಕ್ಕಿಳಿಯಬೇಕು ಎಂದಿದೆ.

ಕುಂಬ್ಳೆ ಅಸಮಾಧಾನ:
ಏತನ್ಮಧ್ಯೆ ನಾಲ್ಕನೇ ದಿನ ಶಿಖರ್ ಧವನ್ ಬೇಗನೇ ಬ್ಯಾಟಿಂಗ್‌ಗೆ ಇಳಿಯದಿದ್ದರ ಬಗ್ಗೆ ಟೀಂ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟ್ಸಮನ್ ಆಗಿರುವ ಶಿಖರ್, ತಮ್ಮ ಜವಾಬ್ದಾರಿಯನ್ನರಿತು ಅವರು ಕಣಕ್ಕಿಳಿಯಬೇಕಿತ್ತು ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com