ಐಪಿಎಲ್ಗೆ ಭದ್ರತೆ ಇಲ್ಲ: ಬಿಸಿಸಿಐಗೆ ಕೇಂದ್ರ ಸ್ಪಷ್ಟನೆ
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅದೇ ಅವಧಿಯಲ್ಲಿ ನಡೆಯಲಿರುವ ಏಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ-20 ಪಂದ್ಯಾವಳಿಗೆ ಹೆಚ್ಚಿನ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಭಾರತ ಕ್ರಿಕೆಟ್ ಮಂಡಳಿಗೆ ಕೇಂದ್ರ ಗೃಹಸಚಿವಾಲಯ ಸ್ಪಷ್ಟಪಡಿಸಿದೆ. ಸಾರ್ವತ್ರಿಕ ಚುನಾವಣೆಗೆ ಹೆಚ್ಚಿನ ಭದ್ರತೆಯ ಅಗತ್ಯವಿದೆ. ಹಾಗಾಗಿ, ಐಪಿಎಲ್ ಪಂದ್ಯಾವಳಿ ಆಯೋಜನೆಗೆ ಬೇರೆ ಸ್ಥಳ ಅಥವಾ ಹೊಸ ದಿನಾಂಕ ಆಯ್ಕೆ ಮಾಡಿಕೊಳ್ಳುವುದು ಅಗತ್ಯವೆಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಶುಕ್ರವಾರ ನವದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಈಗಾಗಲೇ ಈ ಬಗ್ಗೆ ಗೃಹ ಸಚಿವಾಲಯ, ಬಿಸಿಸಿಐಗೆ ಮನದಟ್ಟು ಮಾಡಿಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಾರ್ವತ್ರಿಕ ಚುನಾವಣೆ ಮೇ ಮಧ್ಯಭಾಗದಲ್ಲಿ ನಡೆಯುವ ನಿರೀಕ್ಷೆಯಿದೆ. ಹಾಗೆಯೇ, ಐಪಿಎಲ್ ಪಂದ್ಯಾವಳಿ ಏಪ್ರಿಲ್ 9ರಿಂದ ಜೂನ್ ನಡುವಿನ ಅವಧಿಯಲ್ಲಿ ನಡೆಯುವ ಸಾಧ್ಯತೆಯಿದೆ. ಏಪ್ರಿಲ್-ಮೇ ಅವಧಿಯಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ ರಾಜ್ಯ ಪೊಲೀಸ್ ಪಡೆಗಳ ಹೊರತಾಗಿ 1.20 ಲಕ್ಷಕ್ಕೂ ಹೆಚ್ಚು ಕೇಂದ್ರೀಯ ಪ್ಯಾರಾಮಿಲಿಟರಿ ಪಡೆಯ ಅವಶ್ಯಕತೆಯಿದೆ. ಚುನಾವಣೆಗೆ ಹೆಚ್ಚಿನ ಭದ್ರತಾ ಪಡೆ ನಿಯೋಜಿಸಲು ಗೃಹ ಸಚಿವಾಲಯ ನಿರ್ಧರಿಸಿದೆ. ಪ್ರಮುಖವಾಗಿ ನಕ್ಸಲ್ ಪೀಡಿತ ರಾಜ್ಯಗಳು, ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನ ಪ್ಯಾರಾಮಿಲಿಟರಿ ಪಡೆ ನಿಯೋಜಿಸಬೇಕಾಗುತ್ತದೆ.
ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರ ಸಾಧ್ಯತೆ: ಕೇಂದ್ರ ಸರ್ಕಾರ ಭದ್ರತೆ ನೀಡಲು ನಿರಾಕರಿಸಿರುವುದರಿಂದ ಏಳನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಯನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ. 2009ರಲ್ಲಿ ಕೂಡ ಲೋಕಸಭಾ ಚುನಾವಣೆ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ ಭದ್ರತೆ ನೀಡಲು ನಿರಾಕರಿಸಿದ್ದರಿಂದ ಆ ಬಾರಿಯ ಆವೃತ್ತಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು. ಬಿಸಿಸಿಐ ಕಾರ್ಯಕಾರಿ ಸಮಿತಿ ಫೆಬ್ರವರಿ 28ರಂದು ಸಭೆ ಸೇರಿ ಐಪಿಎಲ್ ಸ್ಥಳದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

