ಕ್ರೀಡೆ

ಐಎಸ್‌ಎಲ್‌ಗೆ ದೆಹಲಿ ಹೆಸರು ಘೋಷಣೆ: ಥೋಕ್ ದೇಂಗೆ ತಂಡದ ಗೀತೆ

Published On :

ನವದೆಹಲಿ: ವಿಶ್ವಕಪ್ ಫುಟ್ಬಾಲ್ ಜ್ವರ ಈಗ ತಣ್ಣಗಾಗಿರಬಹುದು. ಆದರೆ ಕಾವು ಮಾತ್ರ ಹಾಗೆಯೇ ಉಳಿದಿದೆ. ಈ ಕಾವು ಭಾರತದಲ್ಲಿ ಮತ್ತೆ ಫುಟ್ಬಾಲ್ ಜ್ವರಕ್ಕೆ ಪರಿವರ್ತನೆಗೊಳ್ಳಬೇಕೆಂಬುದು ರಾಜಧಾನಿಯ ಆಶಯವಾಗಿದೆ.
ಭಾರತದಲ್ಲಿ ಇದೇ ಸಾಲಿನ ಸೆಪ್ಟೆಂಬರ್, ನವೆಂಬರ್ ಅವಧಿಯಲ್ಲಿ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಆರಂಭವಾಗಲಿದೆ. ಐಪಿಎಲ್ ಮಾದರಿಯಲ್ಲೇ ಭಾರತ ಫುಟ್ಬಾಲ್ ಒಕ್ಕೂಟ ಆರಂಭಿಸಿರುವ ಈ ಪಂದ್ಯಾವಳಿ ದೇಶದಲ್ಲಿ ಕ್ರಿಕೆಟ್‌ನಂತೆ ಫುಟ್ಬಾಲ್ ಜನಪ್ರಿಯತೆ ಹೆಚ್ಚಿಸುವ ಆಶಾಕಿರಣ ಹೊಂದಿದೆ.
ಪಂದ್ಯಾವಳಿಯಲ್ಲಿ ಎಂಟು ತಂಡಗಳು ಪಾಲ್ಗೊಳ್ಳಲಿದ್ದು, ಈ ಪೈಕಿ ದೆಹಲಿ ಕೂಡ ಒಂದು. ಈ ಚೊಚ್ಚಲ ಐಎಸ್‌ಎಲ್ ಲೀಗ್‌ನಲ್ಲಿ ಪಾಲ್ಗೊಳ್ಳಲಿರುವ ದೆಹಲಿ ದೊಡ್ಡ ಕನಸೊಂದು ಕಟ್ಟಿಕೊಂಡು ಸ್ಪರ್ಧೆಗಿಳಿಯಲು ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಅದು ಹೊಸ ಅವತಾರ ತಳೆಯಲಾರಂಭಿಸಿದೆ.
ದೆಹಲಿ ತಂಡದ ಮಾಲೀಕತ್ವ ಹೊಂದಿರುವ ಡೆನ್ ನೆಟ್ವರ್ಕ್ ಲಿಮಿಟೆಡ್ ಹಾಗೂ ಅದರ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಹಾಲೆಂಡ್ ಅಗ್ರಮಾನ್ಯ ಫುಟ್ಬಾಲ್ ಕ್ಲಬ್ ಫೆಯೇನೂರ್ಡ್ ರೋಟರ್‌ಡ್ಯಾಮ್ ಗುರುವಾರ ನವದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ತಂಡದ ಹೆಸರು, ಝೆರ್ಸಿ ಹಾಗೂ ಗೀತೆಯನ್ನು ವಿನೂತನವಾಗಿ ಅನಾವರಣಗೊಳಿಸಿದವು.
ಡೆನ್ ನೆಟ್ವರ್ಕ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಮನ್‌ಚಂದ್ ಹಾಗೂ ಡಚ್ ಕ್ಲಬ್‌ನ  ಅಂತಾರಾಷ್ಟ್ರೀಯ ವ್ಯವಹಾರಗಳ ಮುಖ್ಯಸ್ಥ ಗಿಡೊ ವಾಡೆರ್ ಅವರು ತಂಡದ ಹೆಸರನ್ನು ಡೆಲ್ಲಿ ಡೈನಾಮೋಸ್ ಎಂದು ಅಧಿಕೃತವಾಗಿ ಘೋಷಿಸಿದರು. ಬಳಿಕ ತಂಡದ ಝೆರ್ಸಿ ಹಾಗೂ ತಂಡದ ಗೀತೆಯಾದ ಥೋಕ್ ದೇಂಗೆ (ಹೊಡೆದು ಬೀಳಿಸುತ್ತೇವೆ) ಸಹ ಪ್ರಕಟಿಸಿದರು.
ಈಗಷ್ಟೇ ವಿಶ್ವಕಪ್ ಕಾವು ನಿಂತಿದೆ. ಆದರೆ, ಭಾರತದಲ್ಲಿ ಮಾತ್ರ ಇನ್ನಷ್ಟೇ ಫುಟ್ಬಾಲ್ ಕಾವು ಹೆಚ್ಚಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಈ ಆಟ ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಒಂದಿಲ್ಲೊಂದು ದಿನ ಭಾರತವೂ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಳ್ಳಬಹುದೆಂಬ ಆಸೆ ಎಲ್ಲೋ ಚಿಗುರೊಡೆಯುತ್ತಿದೆ. ಹಾಗಾಗಿ, ವಿನೂತನವಾಗಿ ಐಎಸ್‌ಎಲ್ ಲೀಗ್‌ನಲ್ಲಿ ಪಾಲ್ಗೊಳ್ಳುವ ಮೂಲಕ ಹೊಸತನಕ್ಕೆ ನಾಂದಿ ಹಾಡಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದು ದೆಹಲಿ ತಂಡದ ಫ್ರಾಂಚೈಸಿ ಸಮೀರ್ ಮನ್‌ಚಂದ್ ಹೊಸ ಆತ್ಮವಿಶ್ವಾಸದೊಂದಿಗೆ ಸುದ್ದಿಗಾರರಿಗೆ ತಿಳಿಸಿದರು.
ಡಚ್ ಅತ್ಯುತ್ತಮ ಪ್ರತಿಭೆಗಳನ್ನು ಸಿದ್ಧಪಡಿಸಿರುವುದು ಕಳೆದೆರಡು ವಿಶ್ವಕಪ್ ಪಂದ್ಯಾವಳಿಗಳೇ ಸಾಕ್ಷಿ. ಹಾಲೆಂಡ್ ತಂಡದಲ್ಲಿ ಮಿಂಚುವ ರಾಬಿನ್ ವ್ಯಾನ್ ಪರ್ಸಿ ಫೆಯೇನೂರ್ಡ್ ರೋಟರ್‌ಡ್ಯಾಮ್‌ನಿಂದಲೇ ಬಂದವರು. ಹಾಗಾಗಿ ಡಚ್ ಕ್ಲಬ್‌ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದರು.
ನಿಯಮದಂತೆ ಆಡುವ ಅಂತಿಮ 11 ಆಟಗಾರರ ತಂಡದಲ್ಲಿ 5 ಮಂದಿ ಭಾರತೀಯರು ಮತ್ತು ಉಳಿದ 6 ಮಂದಿ ವಿದೇಶಿ ಆಟಗಾರರಿರುತ್ತಾರೆ. ಈಗಾಗಲೇ ಹರಾಜಿಗೆ ಒಟ್ಟು 80 ಭಾರತೀಯ ಆಟಗಾರರ ಪಟ್ಟಿ ಅಂತಿಮಗೊಂಡಿದ್ದು, ಉತ್ತಮ ಆಟಗಾರರನ್ನು ಖರೀದಿಸುವ ವಿಶ್ವಾಸವಿದೆ ಎಂದರು.
ತಂಡದಲ್ಲಿ ಯೂರೋಪಿಯನ್ ಶೈಲಿಯ ಆಟ ಅಳವಡಿಸಿಕೊಳ್ಳಲಾಗುತ್ತಿದ್ದು, ಮೊದಲಿಗೆ ಉತ್ತಮ ಫುಟ್ಬಾಲ್ ಆಡುವುದು ನಮ್ಮ ಗುರಿಯಾಗಿದ್ದು, ಅದಕ್ಕಾಗಿ ಸಮರ್ಥ ತಂಡವನ್ನು ಕಟ್ಟುವತ್ತ ಗಮನ ಹರಿಸಿದ್ದೇವೆ. ಸೋಲು-ಗೆಲುವು ನಂತರದ ಮಾತು ಎಂದ ಅವರು, ಮೊದಲಿಗೆ ಅತ್ಯುತ್ತಮ ಕೋಚ್ ಆಯ್ಕೆಯ ಹುಡುಕಾಟದಲ್ಲಿದ್ದು, ಇನ್ನೆರೆಡು ದಿನಗಳಲ್ಲಿ ಅಂತಿಮಗೊಳ್ಳಲಿದೆ ಎಂದು ವಿವರಿಸಿದರು.
ಭಾರತದಲ್ಲಿ ಫುಟ್ಬಾಲ್ ಪ್ರತಿಭೆಗಳಿಗೆ ಕೊರತೆಯಿಲ್ಲ. ಈ ದೇಶದಿಂದಲೂ ಅನೇಕ ಸ್ಟಾರ್ ಆಟಗಾರರು ಹೊರಹೊಮ್ಮಿದ್ದಾರೆ. ಇದನ್ನು ಮನಗಂಡು ಡೆಲ್ಲಿ ತಂಡದ ಜತೆ ಕೈಜೋಡಿಸಿದ್ದೇವೆ ಎಂದು ಗಿಡೊ ವಾಡೆರ್ ಹೆಮ್ಮೆಯಿಂದ ಹೇಳಿದರು.
ಪರ್ಸಿ ಅವರಂತಹ ಶ್ರೇಷ್ಠ ಆಟಗಾರರನ್ನು ಕೊಡುಗೆ ನೀಡಿರುವುದು ನಮ್ಮ ತಂಡದ ಹೆಗ್ಗಳಿಕೆ. ಇಂಡಿಯನ್ ಸೂಪರ್ ಲೀಗ್ ಮೂಲಕ ಭಾರತಕ್ಕೂ ನೆರವಾಗುವ ಉದ್ದೇಶ ನಮ್ಮದು. ಹಾಲೆಂಡ್‌ನಲ್ಲಿ ಸತತ ಐದು ವರ್ಷಗಳ ಕಾಲ ಅತ್ಯುತ್ತಮ ಅಕಾಡೆಮಿ ಎಂದು ಜನಮನ್ನಣೆ ಪಡೆದಿರುವ ಡಚ್ ಕ್ಲಬ್‌ನಿಂದ ಭಾರತಕ್ಕೆ ನೆರವಾಗುವ ಆಶಯವಿದೆ ಎಂದು ಗಿಡೊ ತಿಳಿಸಿದರು.
ಡೆಲ್ಲಿ ತಂಡ ತವರಿನಲ್ಲಿ ಆಡಲಿರುವ ಪಂದ್ಯಗಳು ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿಯೇ ನಡೆಯಲಿವೆ. ಅದಕ್ಕಾಗಿ ಕ್ರೀಡಾಂಗಣದ ಸಿದ್ಧತಾ ಕಾರ್ಯ ಕೂಡ ಭರದಿಂದ ಸಾಗಿದೆ.

ಮೈಲಾರಲಿಂಗ ದಿಂಡಲಕೊಪ್ಪ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.