ಕಾಮನ್ವೆಲ್ತ್ ಗೇಮ್ಸ್: ಕೋಚ್ ಇಲ್ಲದೆ ಸ್ಕ್ವಾಷ್ ಪಡೆ ಸೆಣಸು
ನವದೆಹಲಿ: 'ಮದುಮಗಳ ಬಿಟ್ಟು ಮದುವೆಗೆ ತೆರಳಿದಂತಾಯಿತು' ಎಂಬ ಗಾದೆ ಮಾತು ಈಗ ಭಾರತ ಸ್ಕ್ವಾಷ್ ತಂಡಕ್ಕೆ ಅಕ್ಷರ ಸಹ ಅನ್ವಯಿಸುತ್ತದೆ. ಕಾರಣ, ಪ್ರತಿಷ್ಠಿತ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ತೆರಳಿರುವ ಭಾರತ ತಂಡದ ಜತೆಗೆ ಮಾರ್ಗದರ್ಶನ ನೀಡುವ ಕೋಚ್ ಇಲ್ಲವಾಗಿದೆ.
ಆದರೆ, ತಂಡದೊಂದಿಗೆ ಕೋಚ್ ಯಾಕೆ ತೆರಳಿಲ್ಲ ಎಂಬ ಬಗ್ಗೆ ಇದುವರೆಗೂ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ. ದಶಕ ಕಾಲದಿಂದ ಭಾರತ ರಾಷ್ಟ್ರೀಯ ಸ್ಕ್ವಾಷ್ ತಂಡದ ಕೋಚ್ ಆಗಿರುವ ಸಿರಸ್ ಪೂಂಚಾ ಅವರು, ತಂಡದೊಂದಿಗೆ ತೆರಳದಿರುವ ಬಗ್ಗೆ ತಮ್ಮ ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳಷ್ಟೇ ನಡೆದ ಏಷ್ಯನ್ ಚಾಂಪಿಯನ್ಶಿಪ್ಗೆ ತಂಡದೊಂದಿಗೆ ತೆರಳಿದ್ದ ಪೂಂಚಾ ಅವರು, ಗ್ಲಾಸ್ಗೋಗೆ ತೆರಳಿದ 9 ಸದಸ್ಯರ ತಂಡದೊಂದಿಗೆ ಮಾತ್ರ ತೆರಳಿಲ್ಲ. ಗುರುವಾರವಷ್ಟೇ ಸ್ಕ್ವಾಷ್ ಸ್ಪರ್ಧೆಗಳು ಆರಂಭವಾಗಲಿದ್ದು, ಕೋಚ್ ಇಲ್ಲದ ತಂಡ ಹೇಗೆ ಪ್ರದರ್ಶನ ನೀಡಲಿದೆ ಎಂಬುದು ಈಗ ಅಚ್ಚರಿ ಮೂಡಿಸಿದೆ. 2005ರಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಪೂಂಚಾ ಅವರು ಘಟನೆ ಕುರಿತು ವಿವರ ನೀಡುವ ಬದಲು ತಮ್ಮ ಮನಸ್ಸಿಗೆ ನೋವಾಗಿರುವುದನ್ನು ವ್ಯಕ್ತಪಡಿಸಿದ್ದಾರೆ. 'ನಿಜವಾಗಿ ಏನಾಯಿತು ಎಂಬುದು ನನಗೆ ಗೊತ್ತಿಲ್ಲ. ಆ ಕುರಿತು ನಾನು ಮಾತನಾಡಲು ಬಯಸುವುದಿಲ್ಲ. ಆದರೆ, ಒಟ್ಟಾರೆಯಾಗಿ ತಂಡದೊಂದಿಗೆ ತೆರಳದಿರುವುದು ನನಗೆ ತೀವ್ರ ಬೇಸರ ಉಂಟುಮಾಡಿದೆ' ಎಂದು ಪೂಂಚಾ ತಿಳಿಸಿದ್ದಾರೆ.
'ತಡವಾಗಿ ನಾನು ಗ್ಲಾಸ್ಗೋಗೆ ಹೋಗುವ ಕುರಿತೂ ನನಗೆ ಗೊತ್ತಿಲ್ಲ' ಎಂದು ತಡವಾಗಿ ನೀವು ತಂಡವನ್ನು ಸೇರಿಕೊಳ್ಳಲಿದ್ದೀರಾ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು.ವಿದೇಶಿ ಕೋಚ್ ಆದ ಮಲೇಷ್ಯಾದ ಸುಬ್ರಮಣ್ಯನ್ ಸಿಂಗಾರಾವೆಲೂ ಮತ್ತು ಮಹಿಳಾ ಕೋಚ್ ಭುವನೇಶ್ವರಿ ಕುಮಾರಿ ಅವರು ಗ್ಲಾಸ್ಗೋಗೆ ತೆರಳಿರುವ ಭಾರತ ತಂಡದಲ್ಲಿರುವ ಸಹ ಸಿಬ್ಬಂದಿಯಾಗಿದ್ದಾರೆ. ದೈಹಿಕ ತಜ್ಞರಾದ ಗ್ರೇಮ್ ಎವೆರಾರರ್ಡ್ ಅವರೂ ತಂಡದಲ್ಲಿದ್ದಾರೆ.ಈ ಕುರಿತು ಭಾರತ ತಂಡದ ಅಗ್ರ ಆಟಗಾರರೂ ಬೇಸರ ವ್ಯಕ್ತಪಡಿಸಿದ್ದಾರೆ. 'ಪೂಂಚಾ ತಂಡದಲ್ಲಿದ್ದರೆ ಅದೇ ದೊಡ್ಡ ವಿಷಯ. ಅವರೊಂದಿಗೆ ಇದುವರೆಗೂ ನಾವು ಸಾಕಷ್ಟು ಸಮಯ ಕಳೆದಿದ್ದೇವೆ. ಅಲ್ಲದೆ, ನಮಗೆ ಅಗತ್ಯವಾದ ಬೆಂಬಲ ನೀಡಿದ್ದಾರೆ. ಹೀಗಾಗಿ ನಾವು ಅವರ ಅನುಪಸ್ಥಿತಿ ಇಲ್ಲಿ ನಮ್ಮನ್ನು ಕಾಡುತ್ತಿದೆ' ಎಂದು ಗ್ಲಾಸ್ಗೋದಿಂದ ಮಾತನಾಡಿದ ಆಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ ತಂಡಕ್ಕೆ ದೆವ್ವದ ಕಾಟ
ಲಂಡನ್: ಪ್ರಸಕ್ತ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ಆಟಗಾರರು ಉಳಿದುಕೊಂಡಿರುವ ಪಂಚತಾರಾ ಹೊಟೇಲ್ನಲ್ಲಿ ದೆವ್ವದ ಕಾಟವಿದ್ದು, ಆದಷ್ಟು ಬೇಗ ಹೊಟೇಲ್ ಬದಲಿಸುವಂತೆ ಆಟಗಾರರು ಮನವಿ ಮಾಡಿಕೊಂಡಿದ್ದಾರೆ.
ಸದ್ಯ ವಾಸವಾಗಿರುವ ಲ್ಯಾಂಗ್ಹ್ಯಾಮ್ ಹೊಟೇಲ್ನಲ್ಲಿ ರಾತ್ರಿಯ ವೇಳೆ ಅನುಮಾನಾಸ್ಪದ ಘಟನೆಗಳು ನಡೆಯುತ್ತಿದ್ದ ಕಾರಣ, ಇಂಗ್ಲೆಂಡ್ ಆಟಗಾರರ ಪತ್ನಿ ಹಾಗೂ ಪ್ರೇಯಸಿಯರು ಹೊಟೇಲ್ನಲ್ಲಿ ಉಳಿದುಕೊಳ್ಳಲು ನಿರಾಕರಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ವೇಳೆ ನಾನು ಕೊಠಡಿಯನ್ನು ಬದಲಿಸಿದ್ದೆ ಎಂದು ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಇಂಗ್ಲೆಂಡ್ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ.
ರಾತ್ರಿ ವೇಳೆ ಹೆಚ್ಚು ತಾಪಮಾನವಿತ್ತು, ಮಲಗಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ಶೌಚಾಲಯದಲ್ಲಿ ಇದ್ದಕ್ಕಿದಂತೆ ನಲ್ಲಿಯಲ್ಲಿ ನೀರು ಸುರಿಯಲಾರಂಭಿಸಿತ್ತು. ನಂತರ ನಾನು ಲೈಟ್ ಆನ್ ಮಾಡಿದಾಗ ತಕ್ಷಣವೇ ನೀರು ನಿಂತು ಹೋಗುತ್ತಿತ್ತು. ನಂತರ ಲೈಟ್ ಆಫ್ ಮಾಡಿದಾಗ ಮತ್ತೆ ನೀರು ಸುರಿಯಲಾರಂಭಿಸಿತ್ತು. ಇದು ಸಾಕಷ್ಟು ಅಚ್ಚರಿ ಮೂಡಿಸಿತ್ತು ಎಂದು ಬ್ರಾಡ್ ತಿಳಿಸಿದ್ದಾರೆ. ಈ ಘಟನೆಯಿಂದ ನಾನು ಹಾಗೂ ಗೆಳತಿ ಬೇಲಿ ಹೆದರಿದ್ದು, ನಂತರ ಕೊಠಡಿಯನ್ನು ಬದಲಿಸಿದ್ದೆವು ಎಂದಿದ್ದಾರೆ. ಅಲ್ಲದೆ ಬೆನ್ ಸ್ಟೋಕ್ಸ್ ಸಹ ಈ ರೀತಿಯಾದ ವಿಚಿತ್ರ ಅನುಭವವನ್ನು ಎದುರಿಸಿದ್ದರು ಎಂದು ಬ್ರಾಡ್ ತಿಳಿಸಿದ್ದಾರೆ.
ಈ ಹಿಂದೆ 1973ರಲ್ಲಿ ಬಿಬಿಸಿ ರೇಡಿಯೊ ಅನೌನ್ಸರ್ ಜೇಮ್ಸ್ ಅಲೆಕ್ಸಾಂಡರ್ ಎಂಬುವರು ಕೊಠಡಿ ಸಂಖ್ಯೆ 333ರಲ್ಲಿ ವಿಚಿತ್ರ ಘಟನೆಗೆ ಸಾಕ್ಷಿಯಾಗಿದ್ದರು ಎಂಬ ವರದಿಗಳು ಬಂದಿವೆ.
ಕೈ ಬೀಸುವುದರಿಂದ ಓಟಗಾರನಿಗೆ ಲಾಭ!
ನ್ಯೂಯಾರ್ಕ್: ನೀವು ಎಂದಾದರೂ ಕೈ ಬೀಸಿಕೊಂಡು ಓಡಿದ್ದೀರಾ? ಇಲ್ಲ. ಎನ್ನುವುದಾದರೇ, ಈಗಿನಿಂದಲೇ ಕೈಬೀಸುತ್ತಾ ಓಡುವುದನ್ನು ಆರಂಭಿಸಿ. ಇದು ನಿಮ್ಮ ಆರೋಗ್ಯಕ್ಕೆ ಹೆಚ್ಚು ಅನುಕೂಲ ಎಂದು ಅಧ್ಯಯನವೊಂದು ತಿಳಿಸಿದೆ. ಓಡುತ್ತಿರುವಾಗ ಅದೇ ಸಮಯದಲ್ಲಿ ಕೈಯನ್ನೂ ಬೀಸುವುದರಿಂದ ಶಕ್ತಿಯನ್ನು ಉಳಿಸುತ್ತದೆಯಂತೆ. 'ಕಾಲನ್ನು ತಿರುಗಿಸುತ್ತಿರುವಾಗ ನಿಯಂತ್ರಣ ಸಾಧಿಸಲು, ಕೈಯನ್ನೂ ತಿರುಗಿಸುವುದು ಮಹತ್ವದ ಪಾತ್ರವಹಿಸುತ್ತಿದೆ ಎಂಬುದನ್ನು ನಾವು ಅಧ್ಯಯನದಿಂದ ತಿಳಿದುಕೊಂಡಿದ್ದೇವೆ' ಎಂದು ಬ್ರೌನ್ ವಿಶ್ವವಿದ್ಯಾಲಯದ ಕ್ರಿಸ್ಟೋಫರ್ ಅರೆಲ್ಲಾನೋ ಅವರು ತಿಳಿಸಿದ್ದಾರೆ. ಅರೆಲ್ಲಾನೋ ಅವರು ಈ ಕುರಿತು ಅಧ್ಯಯನ ಮಾಡಲು 13 ಓಟಗಾರರನ್ನು ಬಳಿಸಿಕೊಂಡಿದ್ದಾರಂತೆ. ಅಲ್ಲದೆ, ಅವರು ಓಡುತ್ತಿರುವಾಗ ಸೇವಿಸುವ ಆಮ್ಲಜನಕ ಮತ್ತು ಹೊರಬಿಡುವ ಕಾರ್ಬನ್ ಡೈಯಾಕ್ಸೈಡ್ ಪ್ರಮಾಣದ ಬಗ್ಗೆಯೂ ಅವರು ತಿಳಿದುಕೊಂಡಿದ್ದಾರಂತೆ.
ಈ ಎಲ್ಲ ಓಟಗಾರರನ್ನು ಕೈಯನ್ನು ಬೆನ್ನ ಹಿಂದೆ ಹಗುರವಾಗಿ ಹಿಡಿದು ಓಡುವಂತೆ, ಎದೆಯ ಮೇಲೆ ಕೈ ಇಟ್ಟುಕೊಂಡು ಓಡುವಂತೆ, ತಲೆಯ ಮೇಲೆ ಇಟ್ಟುಕೊಂಡು ಓಡಿಸಿ ಅಧ್ಯಯನ ಮಾಡಿದ್ದಾರೆ.
ಟ್ರೆಂಟ್ಬ್ರಿಡ್ಜ್ ಪಿಚ್ ಕಳಪೆ: ಇಂಗ್ಲೆಂಡ್ಗೆ 16,000 ಡಾಲರ್ ದಂಡ ಸಾಧ್ಯತೆ
ಸಿಡ್ನಿ: ಭಾರತ ಮತ್ತು ಇಂಗ್ಲೆಂಡ್ ನಡುವೆ ಡ್ರಾಗೊಂಡ ಮೊದಲ ಟೆಸ್ಟ್ ಪಂದ್ಯ ನಡೆದ ಟ್ರೆಂಟ್ಬ್ರಿಡ್ಜ್ ಪಿಚ್ಕಳಪೆಯಾಗಿತ್ತು ಎಂದು ರೆಫರಿ ಡೇವಿಡ್ ಬೂನ್ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈಗ ಇಂಗ್ಲೆಂಡ್ ಕ್ರಿಕೆಟ್ ಅಧಿಕಾರಿಗಳು ಈಗ 16,000 ಅಮೆರಿಕನ್ ಡಾಲರ್ ಹಣ ದಂಡ ತೆರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್ಮನ್ ಬೂನ್ಸ್ ಅವರ ತೀರ್ಪನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಕಟಿಸಿದೆ. ಹೀಗಾಗಿ ಇದೇ ಮೊದಲ ಬಾರಿಗೆ ಇಂಗ್ಲೆಂಡ್ನಲ್ಲಿ ಪಿಚ್ಚೊಂದು, ಕಳಪೆಯಾಗಿರುವುದಾಗಿ ರೆಫರಿಯೊಬ್ಬರು ತೀರ್ಪು ನೀಡಿರುವುದು ವರದಿಯಾಗಿದೆ.
ಟ್ರೆಂಟ್ಬ್ರಿಡ್ಜ್ ಪಿಚ್ ಒಣಗಿತ್ತು ಮತ್ತು ಡೆಡ್ ಪಿಚ್ ಆಗಿತ್ತು. ಹಾಗಾಗಿ ವೇಗದ ಬೌಲರ್ಗಳಿಗೆ ಅನುಕೂಲವಾಗಿ ಪರಿಣಮಿಸಲಿಲ್ಲ ಎಂದು ಬೂನ್ ತಿಳಿಸಿರುವುದಾಗಿ ವೆಬ್ಸೈಟೊಂದು ವರದಿ ಮಾಡಿದೆ.
ಏತನ್ಮಧ್ಯೆ, ಪಿಚ್ ಕುರಿತು ತೀವ್ರ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ, ಗ್ರೌಂಡ್ಸ್ಮನ್ ಸ್ಟೀವ್ ಬಿಕ್ಸ್ ಅವರನ್ನು ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಒತ್ತಾಯಿಸಲಾಗಿದೆ ಎಂದು ಸಹ ವರದಿಯಾಗಿದೆ.
ಪಿಚ್ನ ಗುಣ್ಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬೂನ್ ಜಾಗತಿಕ ಆಡಳಿತ ಮಂಡಳಿಗೆ ತಮ್ಮ ವರದಿಯನ್ನು ಸಲ್ಲಿಸಿದ್ದಾರೆ. ಇದನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗೆ ಕಳುಹಿಸಲಾಗಿದ್ದು, 14 ದಿನದೊಳಗೆ ಉತ್ತರ ನೀಡುವಂತೆ ತಿಳಿಸಲಾಗಿದೆ ಎಂದು ಐಸಿಸಿ ತಿಳಿಸಿದೆ.
ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಉತ್ತರ ನೀಡಿದ ನಂತರ ಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ರೆಫರಿ ರಂಜನ್ ಮುದುಗಲ್ಲೆ ಅವರು ಪಿಚ್ನ ವಿಡಿಯೋ ತುಣುಗಳೊಂದಿಗೆ, ಬೂನ್ ವರದಿಯನ್ನು ಪರಿಶೀಲಿಸಲಿದ್ದಾರೆ. ನಂತರವಷ್ಟೇ ದಂಡ ವಿಧಿಸುವ ಪ್ರಕ್ರಿಯೆ ನಡೆಯಲಿದೆ ಎಂದು ವರದಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

