ಪದಕದ ಸುಗ್ಗಿಗೆ ವರ್ಣರಂಜಿತ ಚಾಲನೆ

ಗ್ಲಾಸ್ಗೊ: ಸ್ಕಾಟ್ಲೆಂಡ್ ಜನ ಜೀವನದ ಸಂಸ್ಕೃತಿಯ ವರ್ಣರಂಜಿತ ಅನಾವರಣ, ಕಪ್ಪನೆ ಆಕಾಶದಲ್ಲಿ ಬೆಳಕಿನ ದೀಪಗಳ ಚಿತ್ತಾರ, ಕಲಾವಿದರ ನೃತ್ಯ, ಸಂಗೀತ, ಮನರಂಜನೆ, ಹೀಗೆ ಹಲವಾರು ಕಾರ್ಯಕ್ರಮಗಳ ಮೂಲಕ 20ನೇ ಕಾಮನ್ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ 11 ದಿನಗಳ ಕಾಲ ನಡೆಯಲಿರುವ ಕ್ರೀಡಾ ಸುಗ್ಗಿಗೆ ಅದ್ಧೂರಿ ಚಾಲನೆ ದೊರಕಿತು.
ಬುಧವಾರ ತಡರಾತ್ರಿ ನಡೆದ ಈ ಅದ್ಧೂರಿ ಸಮಾರಂಭದಲ್ಲಿ ವಿಶ್ವದ ಕ್ರೀಡಾ, ರಾಜಕೀಯ, ಹಾಗೂ ಕಲಾ ಕ್ಷೇತ್ರದ ದಿಗ್ಗಜರ ಉಪಸ್ಥಿತಿ ಒಂದು ಸೊಗಸಾದರೆ, ಕಳೆದ ಆವೃತ್ತಿಯ ಆತಿಥ್ಯವಹಿಸಿದ್ದಕ್ಕಾಗಿ ಭಾರತ ಕ್ರೀಡಾಪಟುಗಳ ತಂಡ 71 ರಾಷ್ಟ್ರಗಳ ಪಥ ಸಂಚಲನಕ್ಕೆ ಸಾರಥ್ಯ ವಹಿಸಿದ್ದು ಮತ್ತೊಂದು ಆಕರ್ಷಣೆ. ತ್ರಿವರ್ಣ ಧ್ವಜವನ್ನು ಹಿಡಿದು ಶೂಟರ್ ವಿಜಯ್ ಕುಮಾರ್ ಅವರ ಮುಂದಾಳತ್ವದಲ್ಲಿ ಭಾರತೀಯ ಕ್ರೀಡಾಪಟುಗಳ ಪಥಸಂಚಲನ ಭಾರತೀಯ ಅಭಿಮಾನಿಗಳಲ್ಲಿ ಹೆಮ್ಮೆ ಭಾವ ಮೂಡಿಸಿತು.
ರಾಣಿ 2ನೇ ಎಲಿಜೆಬೆತ್ ಕ್ರೀಡಾ ಜ್ಯೋತಿಯನ್ನು ಬೆಳಗುವ ಮೂಲಕ ಈ ವರ್ಣರಂಜಿತ ಸಮಾರಂಭದಲ್ಲಿ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಿದರು.
2 ಸಾವಿರಕ್ಕೂ ಹೆಚ್ಚು ಕಲಾವಿದರು ನೀಡಿದ ಪ್ರದರ್ಶನವನ್ನು ಮೈದಾನದಲ್ಲಿ ಉಪಸ್ಥಿತರಿದ್ದ ಕ್ರೀಡಾಪಟುಗಳು, ತಾರೆಯರು ಹಾಗೂ 40000 ಅಭಿಮಾನಿಗಳ ಜತೆಗೆ ಟಿವಿ ಮೂಲಕ ವಿಶ್ವದ ಕೋಟ್ಯಾಂತರ ಜನರನ್ನು ಬೇರೊಂದು ಲೋಕದಲ್ಲಿ ವಿಹರಿಸುವಂತೆ ಮಾಡಿತು.
ಈ ಕಾರ್ಯಕ್ರಮವನ್ನು ಕಳೆದ ವಾರ ಉಕ್ರೇನ್ನಲ್ಲಿ ಸಂಭವಿಸಿದ ಮಲೇಷ್ಯಾದ ಎಂಎಚ್ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಮೌನಾಚರಣೆ ಸಲ್ಲಿಸುವ ಮೂಲಕ ಅರ್ಪಣೆ ಮಾಡಲಾಯಿತು.
2002ರ ಕಾಮನ್ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ನಿರ್ದೇಶನ ಮಾಡಿದ್ದ ಡೇವಿಡ್ ಜೋಲ್ಕ್ವರ್, ಈ ಬಾರಿಯ ಸಮಾರಂಭವನ್ನು ನಿರ್ದೇಶಿಸಿದ್ದರು. ಈ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಬಿಟ್ಟುಕೊಡದೇ ಕುತೂಹಲ ಮೂಡಿಸಿದ್ದ ಡೇವಿಡ್, ಅಭಿಮಾನಿಗಳಲ್ಲಿ ಕುತೂಹಲವನ್ನು ಹೆಚ್ಚಿಸಿದ್ದರು. ಈ ಕಾರ್ಯಕ್ರಮವನ್ನು ವೀಕ್ಷಿಸಿದ ಅಭಿಮಾನಿಗಳು ಕಣ್ ತುಂಬಿಕೊಂಡರು.
ಈ ಕಾರ್ಯಕ್ರದದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಖ್ಯಾತ ಗಾಯಕ ನಿಕೊಲ್ ಶರ್ಜಿಂಗರ್, ಸೈಕ್ಲಿಂಗ್ ದಂತಕತೆ ಸರ್ ಕ್ರಿಸ್ ಹಾಯ್, ಫುಟ್ಬಾಲ್ ಖ್ಯಾತ ತಾರೆ ಸರ್ ಅಲೆಕ್ಸ್ ಫರ್ಗುಸನ್, ಖ್ಯಾತ ನಟಿ ಕೀಲೆ ಹವೇಸ್, ಬ್ರಿಟೀಷ್ ಪ್ರಧಾನಿ ಡೇವಿಡ್ ಕೆಮರೂನ್, ಸ್ಕಾಟ್ಲೆಂಡ್ನ ಅಲೆಕ್ಸ್ ಸಾಲ್ಮೊಂಡ್ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದರು.
ಇನ್ನು ಸ್ಕಾಟ್ಲೆಂಡ್ನ ಐಕಾನ್ ರಾಡ್ ಸ್ಟಿವರ್ಟ್, ಬ್ರಿಟಿಷ್ ಗಾಟ್ ಟ್ಯಾಲೆಂಟ್ ಕಾರ್ಯಕ್ರಮದ ವಿಜೇತ ಸೂಸನ್ ಬಾಯ್ಲೆ, ಗಾಯಕ ಆ್ಯಮಿ ಮೆಕ್ಡೊನಾಲ್ಡ್ ಜತೆಗೆ ಸ್ಥಳೀಯ ತಾರಾಮಣಿಗಳು ವಿವಿಧ ಮನರಂಜನಾ ಕಾರ್ಯಕ್ರಮ ನೀಡಿದರು.
ಇದೇ ಮೊದಲ ಬಾರಿಗೆ ಕಾಮನ್ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಯುನಿಸೆಫ್ ಪುಟ್ ಚಿಲ್ಡ್ರನ್ ಫರ್ಸ್ಟ್ ಎಂಬ ಕಾರ್ಯಕ್ರಮದ ಮೂಲಕ ಕಾಮನ್ವೆಲ್ತ್ ರಾಷ್ಟ್ರಗಳಲ್ಲಿ ಮಕ್ಕಳ ಅಭಿವೃದ್ಧಿಗಾಗಿ ದೇಣಿಗೆಯನ್ನು ಸಂಗ್ರಹಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


