ಮನೆ ಬಾಗಿಲಿಗೆ ಬಂದು ಬಡಿದ ಅವಕಾಶ ಕೈಚೆಲ್ಲಿದ ಭಾರತ
ಅದೃಷ್ಟ ತನ್ನ ಮನೆಯ ಬಾಗಿಲನ್ನು ಬಡೆಯುತ್ತಿದ್ದರೂ ಎಚ್ಚೆತ್ತುಕೊಳ್ಳದ ಭಾರತೀಯ ಫುಟ್ಬಾಲ್ 1950ರಲ್ಲಿ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಪದಾರ್ಪಣೆ ಮಾಡುವ ಅವಕಾಶವನ್ನು ನೆಲಕ್ಕೆ ಹಾಕಿತು. ಇದರ ಪರಿಣಾಮ ಈಗಲೂ ಭಾರತ ತಂಡ ಫಿಫಾ ವಿಶ್ವಕಪ್ ಪಂದ್ಯಾವಳಿಗೆ ಅರ್ಹತೆ ಪಡೆಯಲು ಹರ ಸಾಹಸ ಪಡುತ್ತಿದೆ. 1950ರಲ್ಲಿ ಭಾರತಕ್ಕೆ ಪ್ರತಿಯೊಂದು ಪರಿಸ್ಥಿತಿಯೂ ಅನುಕೂಲವಾಗಿತ್ತು. ಆದರೆ ಅದರ ಪ್ರಯೋಜನ ಪಡೆಯುವಲ್ಲಿ ಭಾರತ ವಿಫಲವಾಯಿತು.
1950ರಲ್ಲಿ ಫಿಫಾ ತಂಡಗಳಿಗೆ ರ್ಯಾಂಕಿಂಗ್ ನೀಡಿರಲಿಲ್ಲ. ಅಲ್ಲದೆ ಏಷ್ಯಾದಲ್ಲಿ ಭಾರತ ಫುಟ್ಬಾಲ್ ತಂಡವನ್ನು ಅತ್ಯುತ್ತಮ ತಂಡವಾಗಿ ಗುರುತಿಸಿತ್ತು. ಹಾಗಾಗಿ ಫಿಫಾ ಏಷ್ಯಾದಲ್ಲಿ ಭಾರತವನ್ನು ಮಾತ್ರ ವಿಶ್ವಕಪ್ನಲ್ಲಿ ಭಾಗವಹಿಸಲು ಆಹ್ವಾನ ನೀಡಿತ್ತು. ಅಲ್ಲದೆ ಫಿಫಾ ಭಾರತ ತಂಡವನ್ನು ಪಂದ್ಯಾವಳಿಯ ವೇಳಾಪಟ್ಟಿಯಲ್ಲಿ ಮೂರನೇ ಗುಂಪಿನಲ್ಲಿ ಸೇರಿಸಿತ್ತು. ಭಾರತದ ಜತೆಗೆ ಸ್ವೀಡನ್, ಇಟಲಿ ಹಾಗೂ ಪರಾಗ್ವೆ ಇತರೆ ತಂಡಗಳಾಗಿದ್ದವು.
ಭಾರತ ತಂಡ ಆಗ ತಾನೆ ಸ್ವಾತಂತ್ರ್ಯ ಪಡೆದು ಹೊಸ ರಾಷ್ಟ್ರವಾಗಿತ್ತು. ಫಿಫಾದಿಂದ ಬಂದ ಅವಕಾಶ ಸವಾಲಾಗಿದ್ದರೂ ಅದನ್ನು ಸ್ವೀಕರಿಸಿದ್ದರೆ, ಭಾರತ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳಲು ಉತ್ತಮ ವೇದಿಕೆಯಾಗುತ್ತಿತ್ತು. ಆದರೆ ಭಾರತದ ಬಹುತೇಕ ಆಟಗಾರರು ಬರಿಗಾಲಿನಲ್ಲಿ ಆಡಲಿದ್ದರು. ಹಾಗಾಗಿ, ಫೀಫಾ, ಶೂ ಇಲ್ಲದೇ ಆಡಲು ಅವಕಾಶ ನೀಡದ ಹಿನ್ನಲೆಯಲ್ಲಿ ಅಂತಿಮವಾಗಿ ಭಾರತ ವಿಶ್ವಕಪ್ನಿಂದ ದೂರ ಉಳಿಯಬೇಕಾಯಿತು. ಇದರ ಜತೆಗೆ ಇನ್ನೂ ಹಲವು ಕಾರಣಗಳಿದ್ದವು. ಭಾರತ ತಂಡ ಬ್ರೆಜಿಲ್ಗೆ ತೆರಳಲು ದುಬಾರಿಯ ಹಡಗಿನ ಪ್ರಯಾಣ ಮಾಡಬೇಕಿತ್ತು. ಅದು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ಗೆ ಹೆಚ್ಚಿನ ಹೊರೆಯಾಗಿತ್ತು.
ಆಗಿನ ಸಮಯದಲ್ಲಿ ಕೇವಲ ಹವ್ಯಾಸಿ ಕ್ರೀಡಾಪಟುಗಳಿಗೆ ಮಾತ್ರ ಅವಕಾಶವಿತ್ತು. ಒಂದು ವೇಳೆ ಭಾರತ ವಿಶ್ವಕಪ್ನಲ್ಲಿ ಭಾಗವಹಿಸಿದ್ದರೆ, ಭಾರತೀಯ ಆಟಗಾರರು ವೃತ್ತಿಪರ ಫುಟ್ಬಾಲ್ ಆಟಗಾರರಾಗುತ್ತಾರೆ. ಇದರಿಂದ ಒಲಿಂಪಿಕ್ಸ್ನಲ್ಲಿ ಅವಕಾಶ ಕೈತಪ್ಪುತ್ತದೆ ಎಂಬ ತಪ್ಪು ಕಲ್ಪನೆ ಭಾರತ ಹಿಂದೆ ಸರಿಯಲು ಕಾರಣವಾಯಿತು.
ವಿಶ್ವಕಪ್ ಆತಿಥ್ಯ ವಹಿಸಿದ್ದ ಆಯೋಜಕರು, ಪಂದ್ಯಾವಳಿಯ ಮಹತ್ವ ಹೆಚ್ಚಿಸಲು ಆ ಸಮಯದಲ್ಲಿ ವಿಶ್ವದಾದ್ಯಂತ ಖ್ಯಾತಿ ಗಳಿಸಿದ್ದ ಗಾಂಧಿಜಿ ಹಾಗೂ ನೆಹರು ಅವರ ನಾಡಿನ ತಂಡವನ್ನು ಕರೆದು ತರಲೇಬೇಕೆಂದು ಹಾಗೂ ಭಾರತ ತಂಡಕ್ಕೆ ತಗುಲುವ ವೆಚ್ಚದಲ್ಲಿ ಕೆಲ ಪಾಲನ್ನು ಭರಿಸುವುದಾಗಿಯೂ ತಿಳಿಸಿತ್ತು. 1970ರ ದಶಕದ ವರೆಗೂ ಫುಟ್ಬಾಲ್ ಪಂದ್ಯದಲ್ಲಿ ಪೂರ್ಣ ಪ್ರಮಾಣದ 90 ನಿಮಿಷದ ಬದಲು 70 ನಿಮಿಷಕ್ಕೆ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಅವಕಾಶ ನೀಡಲಾಗಿತ್ತು. ಭಾರತಕ್ಕೆ ನೆರವಾಗ ಬೇಕೆನ್ನುವ ಉದ್ದೇಶದಿಂದ ಫೀಫಾ, ವಿಶ್ವಕಪ್ನಲ್ಲೂ ಪಂದ್ಯವನ್ನು ಬೇಗನೆ ಡ್ರಾ ಮಾಡಿಕೊಳ್ಳುವ ಅವಕಾಶ ಕಲ್ಪಿಸಿತ್ತು. ಇನ್ನು ಭಾರತ ತಂಡದಲ್ಲಿ ಕೆಲವು ಆಟಗಾರರು ಶೂ ಧರಿಸಿ ಆಡಲು ಪ್ರಾರಂಭಿಸಿದ್ದರು. ಮತ್ತೆ ಕೆಲವರು ಮಾತ್ರ ಬರಿಗಾಲಿನಲ್ಲಿ ಆಡುತ್ತಿದ್ದರು. ಈ ಆಟಗಾರರಿಗೆ ಕಾಲಾವಕಾಶ ನೀಡಿ ಶೂನಲ್ಲಿ ಅಭ್ಯಾಸ ನಡೆಸಿ, ಬ್ರೆಜಿಲ್ ವಿಶ್ವಕಪ್ನಲ್ಲಿ ಭಾಗವಹಿಸಿದ್ದರೆ, ಇಂದು ಭಾರತೀಯ ಫುಟ್ಬಾಲ್ ಈಗಿನ ಪರಿಸ್ಥಿತಿಯಂತೆ ಕೆಳಮಟ್ಟದಲ್ಲಿರುತ್ತಿರಲಿಲ್ಲ. ಆದರೆ, ಇಂದಿನವರೆಗೂ ಭಾರತ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವಿಶ್ವಕಪ್ಗೆ ಅರ್ಹತೆ ಪಡೆಯುವುದನ್ನು ಎದುರು ನೋಡುತ್ತಲೇ ಮುಂದುವರಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

