ಕ್ರೀಡೆ

ಟೀಂ ಇಂಡಿಯಾ 'ಎ' ತಂಡದಲ್ಲಿ ಉತ್ತಪ್ಪ, ಪಾಂಡೆಗೆ ಸ್ಥಾನ ಸಂಭವ

ಟೀಂ ಇಂಡಿಯಾ 'ಎ' ತಂಡದಲ್ಲಿ ಉತ್ತಪ್ಪ, ಪಾಂಡೆಗೆ ಸ್ಥಾನ ಸಂಭವ
Published On :

ಮುಂಬೈ: ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಬುಧವಾರ ಭಾರತ 'ಎ' ತಂಡವನ್ನು ಪ್ರಕಟಿಸಲಾಗುತ್ತಿದ್ದು, ಕರ್ನಾಟಕದ ಇಬ್ಬರು ಭರವಸೆಯ ಬ್ಯಾಟ್ಸ್‌ಮನ್‌ಗಳಾದ ರಾಬಿನ್ ಉತ್ತಪ್ಪ ಮತ್ತು ಮನೀಷ್ ಪಾಂಡೆ ಅವರಿಗೆ ಸ್ಥಾನ ಲಭಿಸುವ ಸಾಧ್ಯತೆಯಿದೆ.  
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಳನೇ ಆವೃತ್ತಿಯ ಐಪಿಎಲ್ ಟಿ-20 ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ರಾಬಿನ್ ಉತ್ತಪ್ಪ ಪ್ರಮುಖ ಪಾತ್ರವಹಿಸಿದ್ದರು. ಟೂರ್ನಿಯಲ್ಲೇ ಅತಿ ಹೆಚ್ಚು ರನ್‌ಗಳಿಸಿದ್ದ ಕೆಕೆಆರ್‌ನ ಆರಂಭಿಕ ಬ್ಯಾಟ್ಸ್‌ಮನ್ ಉತ್ತಪ್ಪ ಈಗಾಗಲೇ, ಬಾಂಗ್ಲಾದೇಶ ಪ್ರವಾಸದಲ್ಲಿ ಆಡಲಾಗುವ ಮೂರು ಏಕದಿನ ಪಂದ್ಯಗಳ ಸರಣಿಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಈ ಋುತುವಿನ ರಣಜಿ ಟ್ರೋಫಿ ಲೀಗ್ ಪಂದ್ಯಾವಳಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಉತ್ತಪ್ಪ ಹಾಗೂ ಪಾಂಡೆಗೆ ಭಾರತ 'ಎ' ಸ್ಥಾನದಲ್ಲಿ ಸ್ಥಾನ ನೀಡುವ ಸಾಧ್ಯತೆ ಹೆಚ್ಚಾಗಿದೆ.
ಈ ಮಧ್ಯೆ ಸಂದೀಪ್ ಪಾಟೀಲ್ ಅಧ್ಯಕ್ಷತೆಯ ರಾಷ್ಟ್ರೀಯ ಆಯ್ಕೆ ಸಮಿತಿ ಬುಧವಾರ ಇಲ್ಲಿ ಸಭೆ ಸೇರಿ ಜುಲೈ-ಆಗಸ್ಟ್‌ನಲ್ಲಿ ಕೈಗೊಳ್ಳಲಾಗುವ ಆಸ್ಟ್ರೇಲಿಯಾ ಪ್ರವಾಸಕ್ಕೆ 'ಎ' ತಂಡವನ್ನು ಆರಿಸಲಿದ್ದಾರೆ. ಇನ್ನು ಬಾಂಗ್ಲಾದೇಶ ಪ್ರವಾಸಕ್ಕೆ ಆಯ್ಕೆಯಾಗಿರುವ ಬಹುತೇಕ ಆಟಗಾರರು ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆಯಿದೆ. ಮನೋಜ್ ತಿವಾರಿ, ಕೇದಾರ್ ಜಾಧವ್, ಪರ್ವೇಜ್ ರಸೂಲ್, ಅಕ್ಷರ್ ಪಟೇಲ್, ಆರ್. ವಿನಯ್‌ಕುಮಾರ್, ಉಮೇಶ್ ಯಾದವ್, ಮೋಹಿತ್ ಶರ್ಮಾ ಮತ್ತು ಅಮಿತ್ ಮಿಶ್ರಾ ಸ್ಥಾನ ಪಡೆಯುವ ಸಂಭವವಿದೆ.
ಆದರೆ, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆಯಾದವರಿಗೆ ಸ್ಥಾನ ಸಿಗುವ ಸಾಧ್ಯತೆ ವಿರಳ. ಏಕೆಂದರೆ, ಕೂಡಲೇ ಆಸ್ಟ್ರೇಲಿಯಾ ಪ್ರವಾಸ ಆರಂಭವಾಗಲಿರುವ ಕಾರಣ ಆ ಆಟಗಾರರಿಗೆ ವಿಶ್ರಾಂತಿ ಬೇಕಾಗುತ್ತದೆ. ಭಾರತ 'ಎ' ತಂಡದ ಆಟಗಾರರು ಕ್ವೀನ್ಸ್‌ಲ್ಯಾಂಡ್‌ನಲ್ಲಿಯೇ ನಡೆಯಲಿರುವ ನಾಲ್ಕು ದಿನಗಳ ಎರಡು ಪಂದ್ಯಗಳನ್ನು ಆಡಲಿದ್ದಾರೆ. ಬಳಿಕ ದಕ್ಷಿಣ ಆಫ್ರಿಕಾ 'ಎ', ಆಸ್ಟ್ರೇಲಿಯಾ 'ಎ' ಮತ್ತು ಕ್ರಿಕೆಟ್ ಆಸ್ಟ್ರೇಲಿಯಾದ ನ್ಯಾಷನಲ್ ಪರಫಾರ್‌ಮೆನ್ಸ್ ತಂಡಗಳನ್ನು ಒಳಗೊಂಡ ಚತುಷ್ಕೋನ ಸರಣಿಯಲ್ಲೂ ಸಹ ಪಾಲ್ಗೊಳ್ಳಲಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.