ಕ್ರೀಡೆ

ಸೆಮಿಫೈನಲ್‌ಗೆ ಕರ್ನಾಟಕ

ಸೆಮಿಫೈನಲ್‌ಗೆ ಕರ್ನಾಟಕ
Published On :

ಕೋಲ್ಕತಾ: ಅನುಭವಿ ರಾಬಿನ್ ಉತ್ತಪ್ಪ ಹಾಗೂ ಕರುಣ್  ನಾಯರ್ ಅವರ ಸಮಯೋಚಿತ ಶತಕ ಹಾಗೂ ವಿನಯಕುಮಾರರ ಮಿಂಚಿನ ದಾಳಿಯ ನೆರವಿನಿಂದ ಕರ್ನಾಟಕ ತಂಡ ವಿಜಯ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಗುಜರಾತ್ ವಿರುದ್ಧ 27 ರನ್‌ಗಳಿಂದ ಜಯಗಳಿಸಿ ನಾಲ್ಕರಘಟ್ಟ ತಲುಪಿದೆ.
ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ನೀಡಿದ್ದ 302 ರನ್‌ಗಳ ಗುರಿಯನ್ನು ಬೆಂಬತ್ತುವಲ್ಲಿ ವಿಫಲವಾದ ಗುಜರಾತ್ 274 ರನ್‌ಗಳಿಸಲಷ್ಟೇ ಶಕ್ತವಾಯಿತು.
ಆರನೇ ಕ್ರಮಾಂಕದಲ್ಲಿ ಆಡಲಿಳಿದ ಅಕ್ಷರ್ ಪಟೇಲ್ ಅಮೋಘ 93 ರನ್ (78 ಎಸೆತ, 12 ಬೌಂಡರಿ) ಮತ್ತು ಮಧ್ಯಮ ಕ್ರಮಾಂಕದಲ್ಲಿ ರುಜುಲ್ ಭಟ್ (67) ಅರ್ಧಶತಕ ಬಾರಿಸಿ ತಂಡದ ಪರ ಉತ್ತಮ ಹೋರಾಟ ನಡೆಸಿದರು. ಆದರೆ, ಇತರೆ ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ತಂಡಕ್ಕೆ ಅಂತಿಮವಾಗಿ ಸೋಲೇಗತಿಯಾಯಿತು.
ಕರ್ನಾಟಕದ ಪರ ಕರಾರುವಾಕ್ ಬೌಲಿಂಗ್ ಪ್ರದರ್ಶನ ನೀಡಿದ ನಾಯಕ ವಿನಯಕುಮಾರ್ 5, ಅಭಿಮನ್ಯು ಮಿಥುನ್ 3 ಹಾಗೂ ಎಚ್.ಎಸ್. ಶರತ್ 1 ವಿಕೆಟ್ ಕಬಳಿಸಿದರು.
ರಾಬಿನ್ ಉತ್ತಪ್ಪ, ನಾಯರ್ ಶತಕ
ಮೈಕೊಡವಿ ಮೇಲೆದ್ದ ಕರ್ನಾಟಕ
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕರ್ನಾಟಕ 50 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 301 ರನ್‌ಗಳ ಬೃಹತ್ ಮೊತ್ತ ಸಂಪಾದಿಸಿತು.
ರಾಬಿನ್ ಉತ್ತಪ್ಪ (ಅಜೇಯ 132, 134 ಎಸೆತ, 10 ಬೌಂಡರಿ, 3 ಸಿಕ್ಸರ್) ಮತ್ತು ಮಧ್ಯಮ ಕ್ರಮಾಂಕದ ದಾಂಡಿಗ ಕರುಣ್ ನಾಯರ್ (120ರನ್, 121 ಎಸೆತ, 14 ಬೌಂಡರಿ, 1 ಸಿಕ್ಸರ್) ಆಕರ್ಷಕ ಶತಕ ಬಾರಿಸಿ ಕರ್ನಾಟಕ ತಂಡ ಉತ್ತಮ ಮೊತ್ತ ಕಲೆಹಾಕಲು ಕಾರಣರಾದರು.
ಕರ್ನಾಟಕದ ಆರಂಭ ನೋಡಿದರೆ, ನೂರರ ಗಡಿ ತಲುಪುವುದೂ ಕಷ್ಟವೇನೋ ಎಂಬಂತಹ ಸ್ಥಿತಿ ಒಂದು ಹಂತದಲ್ಲಿತ್ತು. ಏಕೆಂದರೆ, ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಪೈಕಿ ಮಾಯಾಂಕ್ ಅಗರ್‌ವಾಲ್, ಗಣೇಶ್ ಸತೀಶ್ ಮತ್ತು ಕೆ.ಎಲ್. ರಾಹುಲ್ ಶೂನ್ಯಕ್ಕೆ ವಿಕೆಟ್ ಕೈಚೆಲ್ಲಿದರೆ, ಮನೀಷ್ ಪಾಂಡೆ ಕೇವಲ 8 ರನ್‌ಗಳಿಸಿ ಪೆವಿಲಿಯನ್ ಸೇರಿದರು.
ಕರ್ನಾಟಕ 7.3 ಓವರುಗಳಾದಾಗ ಕೇವಲ 31 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ದಯನೀಯ ಕುಸಿತದಲ್ಲಿತ್ತು. ಉತ್ತಪ್ಪ ಜೊತೆ ಇನಿಂಗ್ಸ್ ಆರಂಭಿಸಿದ್ದ ಮಾಯಾಂಕ್ ತಾವು ಎದುರಿಸಿದ ಮೊದಲ ಹಾಗೂ ಇನಿಂಗ್ಸ್‌ನ ಮೊದಲ ಓವರಿನ ಮೂರನೇ ಎಸೆತದಲ್ಲಿಯೇ ವಿಕೆಟ್ ಒಪ್ಪಿಸಿದರು. ತದನಂತರ ಒಂದರ ಮೇಲೊಂದರಂತೆ ಮತ್ತೆ ಮೂರು ಆಘಾತಗಳು ಉಂಟಾದವು.
ಕರ್ನಾಟಕದ ಪಡೆ ತೀರ ಶೋಚನೀಯ ಪರಿಸ್ಥಿತಿಯಲ್ಲಿದ್ದಾಗ ಜೊತೆಯಾದ ಉತ್ತಪ್ಪ ಮತ್ತು ಕರುಣ್ ನಾಯರ್, ತಮ್ಮ ಜವಾಬ್ದಾರಿಯನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸುವುದರೊಂದಿಗೆ ಅಚ್ಚರಿಯ ರೀತಿಯಲ್ಲಿ ತಂಡವನ್ನು ಮೇಲೆತ್ತಿದರು. ಉತ್ತಪ್ಪ ಮತ್ತು ನಾಯರ್ ಐದನೇ ವಿಕೆಟ್ ಜೊತೆಯಾಟದಲ್ಲಿ 214 ಎಸೆತಗಳಿಂದ 209 ರನ್‌ಗಳ ಜೊತೆಯಾಟ ನೀಡುವ ಮೂಲಕ ತಮ್ಮ ಹೋರಾಟಕ್ಕೆ ನಾಟಕೀಯ ತಿರುವು ನೀಡಿದಂತಾಗಿತ್ತು.
ಆದರೆ, ಈ ಇಬ್ಬರೂ ಆಟಗಾರರು ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವುದರ ಜೊತೆಗೆ ಉತ್ತಮ ರೀತಿಯಲ್ಲಿ ರನ್ ವೇಗವನ್ನು ಹೆಚ್ಚಿಸಿದರು. ಪರಿಣಾಮವಾಗಿ ತ್ರಿಶತಕದ ಗಡಿ ತಲುಪುವಲ್ಲಿ ಕರ್ನಾಟಕದ ಪಡೆಗೆ ಸಾಧ್ಯವಾಯಿತು.
ಗುಜರಾತ್ ಪರ ಉತ್ತಮ ದಾಳಿ ನಡೆಸಿದ ಜಸ್‌ಪ್ರೀತ್ ಬುಮ್ರಾ 4, ಕಮಲೇಶ್ ಠಾಕೂರ್ 2 ಮತ್ತು ರಾಕೇಶ್ ಧ್ರುವ 1 ವಿಕೆಟ್ ಪಡೆದರು.
ಸ್ಕೋರ್ ವಿವರ
ಕರ್ನಾಟಕ 50 ಓವರುಗಳಲ್ಲಿ 7 ವಿಕೆಟ್‌ಗೆ 301
ರಾಬಿನ್ ಉತ್ತಪ್ಪ ಅಜೇಯ 132, ಮಾಯಾಂಕ್ ಅಗರ್‌ವಾಲ್ ಬಿ ಬುಮ್ರಾ 0, ಮನೀಷ್ ಪಾಂಡೆ ಬಿ ಬುಮ್ರಾ 8, ಗಣೇಶ್ ಸತೀಶ್ ಎಲ್‌ಬಿ ಬಿ ಠಾಕೂರ್ 0, ಕೆ.ಎಲ್. ರಾಹುಲ್ ಸಿ ಪಾರ್ಥಿವ್ ಬಿ ಠಾಕೂರ್ 0, ಕರುಣ್ ನಾಯರ್ ಬಿ ಎಆರ್ ಪಟೇಲ್ 120, ಅಮಿತ್ ವರ್ಮಾ ಸಿ ಧ್ರುವ ಬಿ ಬುಮ್ರಾ 13, ಆರ್. ವಿನಯಕುಮಾರ್ ಬಿ ಬುಮ್ರಾ 3. ಇತರೆ: (ಬೈ-4, ಲೆಗ್‌ಬೈ-9, ವೈ-12) 25.
ವಿಕೆಟ್ ಪತನ: 1-1, 2-30, 3-31, 4-31, 5-240, 6-274, 7-301.
ಬೌಲಿಂಗ್ ವಿವರ: ಜಸ್‌ಪ್ರೀತ್ ಬುಮ್ರಾ 12-1-58-4, ಕಮಲೇಶ್ ಠಾಕೂರ್ 10-1-57-2, ರೋಹಿತ್‌ದಹಿಯಾ 9-0-56-0, ಅಕ್ಷರ್ ಪಟೇಲ್ 8-0-54-1, ರಾಕೇಶ್ ಧ್ರುವ 9-0-48-0, ಜೇಸಾಲ್ ಕರಿಯಾ 2-0-15-0.
ಗುಜರಾತ್ 48.2 ಓವರುಗಳಲ್ಲಿ 274
ಪಾರ್ಥಿವ್ ಪಟೇಲ್ ಸಿ ರಾಹುಲ್ ಬಿ ವಿನಯಕುಮಾರ್ 4, ರಾಜ್‌ದೀಪ್ ದರ್ಬಾರ್ ಬಿ ಮಿಥುನ್ 15, ರುಜುಲ್ ಭಟ್ ರನೌಟ್ 67, ವೇಣುಗೋಪಾಲ್ ರಾವ್ ಸಿ ಖಾಜಿ ಬಿ ಮಿಥುನ್ 15, ಅಬ್ದುಲ್ಹಾದ್ ಮಲಿಕ್ ಸಿ ರಾಹುಲ್ ಬಿ ಮಿಥುನ್ 12, ಅಕ್ಷರ್ ಪಟೇಲ್ ಸಿ ಅಗರ್‌ವಾಲ್ ಬಿ ವಿನಯಕುಮಾರ್ 93, ಜೇಸಾಲ್ ಕರಿಯಾ ಸಿ ಅಮಿತ್ ಬಿ ವಿನಯಕುಮಾರ್ 17, ರೋಹಿತ್ ದಹಿಯಾ ಸಿ ಪಾಂಡೆ ಬಿ ವಿನಯಕುಮಾರ್ 30, ರಾಕೇಶ್ ಧ್ರುವ ಸಿ ಅಂಡ್ ಬಿ ವಿನಯಕುಮಾರ್ 4, ಜಸ್‌ಪ್ರೀತ್ ಬುಮ್ರಾ ಬಿ ಶರತ್ 1, ಕಮಲೇಶ್ ಠಾಕೂರ್ ಅಜೇಯ 3. ಇತರೆ: (ಬೈ-1, ಲೆಗ್‌ಬೈ-4, ವೈ-8) 13.
ವಿಕೆಟ್ ಪತನ: 1-4, 2-36, 3-56, 4-75, 5-214, 6-218, 7-263, 8-270, 9-270, 10-274.
ಬೌಲಿಂಗ್ ವಿವರ: ವಿನಯಕುಮಾರ್ 12-0-85-5, ಎಚ್.ಎಸ್. ಶರತ್ 9.2-0-33-1, ಅಭಿಮನ್ಯು ಮಿಥುನ್ 9-0-51-3, ಕರುಣ್ ನಾಯರ್ 5-0-25-0, ಗಣೇಶ್ ಸತೀಶ್ 1-0-8-0, ಅಬ್ರಾರ್ ಖಾಜಿ 9-0-45-0, ರಾಬಿನ್ ಉತ್ತಪ್ಪ 2-0-17-0, ಅಮಿತ್ ವರ್ಮಾ 1-0-5-0.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.