ಹ್ಯಾಟ್ರಿಕ್ ಪ್ರಶಸ್ತಿ ಮೇಲೆ ಕನ್ನಡಿಗರ ಕಣ್ಣು
ಕೋಲ್ಕತಾ: ಈ ಋತುವಿನಲ್ಲಿ ಸತತ ಮೂರನೇ ಪ್ರಶಸ್ತಿ ಗೆಲ್ಲುವತ್ತ ತಮ್ಮ ದೃಷ್ಟಿ ನೆಟ್ಟಿರುವ ಕರ್ನಾಟಕದ ಆಟಗಾರರು ಭಾನುವಾರ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ರೈಲ್ವೇಸ್ ವಿರುದ್ಧ ಜಯಗಳಿಸಿ ಕನಸು ನನಸು ಮಾಡಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ಇಲ್ಲಿನ ಈಡನ್ ಗಾರ್ಡನ್ನಲ್ಲಿ ನಾಳೆ ನಡೆಯಲಿರುವ ಪ್ರಶಸ್ತಿ ಸುತ್ತಿನ ಮುಖಾಬಲದಲ್ಲಿ ಕರ್ನಾಟಕ ಮತ್ತು ರೈಲ್ವೇಸ್ ಪರಸ್ಪರ ಮುಖಾಮುಖಿಯಾಗಲಿವೆ.
ಸದ್ಯ ಕರ್ನಾಟಕದ ಆಟಗಾರರು ಅದ್ಭುತ ಫಾರ್ಮ್ನಲ್ಲಿದ್ದಾರೆ. ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಗೆದ್ದುಕೊಂಡಿದ್ದಲ್ಲದೇ, ನಂತರ ನಡೆದ ಇರಾನಿ ಟ್ರೋಫಿಯಲ್ಲೂ ತಮ್ಮ ಪ್ರಭುತ್ವ ಸ್ಥಾಪಿಸಿ ಚಾಂಪಿಯನ್ ಎನಿಸಿಕೊಂಡಿದ್ದರು. ಇದೀಗ ವಿಜಯ್ ಹಜಾರೆ ಟ್ರೋಫಿಯನ್ನೂ ಎತ್ತಿ ಹಿಡಿಯುವ ಮೂಲಕ ಸತತ ಮೂರನೇ ಪ್ರಶಸ್ತಿ ಗೆದ್ದು ದೇಶೀಯ ಪಂದ್ಯಾವಳಿಯಲ್ಲಿ ಮತ್ತೊಮ್ಮೆ ಸಾರ್ವಭೌಮ ಎನಿಸಿಕೊಳ್ಳುವ ಆಸೆ ಹೊಂದಿದೆ.
ಒಂದು ವೇಳೆ ಕರ್ನಾಟಕದ ಈ ಕನಸು ನೆರವೇರಿದರೆ, ಮೊದಲ ಬಾರಿಗೆ ಏಕದಿನ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಕೊಂಡ ಸಾಧನೆ ಮಾಡಿದಂತಾಗಲಿದೆ. ಮತ್ತೊಂದೆಡೆ ರೈಲ್ವೇಸ್ ಆಟಗಾರರು ಎರಡನೇ ಬಾರಿಗೆ ಈ ಪ್ರಶಸ್ತಿ ಪಡೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಮುನ್ನ 2005-06ನೇ ಸಾಲಿನಲ್ಲಿ ರೈಲ್ವೇಸ್ ಮೊದಲ ಬಾರಿಗೆ ಈ ಗರಿ ಮೂಡಿಸಿಕೊಂಡಿತ್ತು.
ಕರ್ನಾಟಕ ಉತ್ತಮ ಬ್ಯಾಟಿಂಗ್ ಕ್ರಮಾಂಕ ಹೊಂದಿದೆ. ಅದರಲ್ಲೂ ಆರಂಭಿಕ ಬ್ಯಾಟ್ಸ್ಮನ್ ರಾಬಿನ್ ಉತ್ತಪ್ಪ ಉತ್ತಮ ಲಯದಲ್ಲಿದ್ದಾರೆ. ಕಳೆದೆರಡೂ ಪಂದ್ಯಗಳಲ್ಲಿ ಕ್ರಮವಾಗಿ ಶತಕ ಬಾರಿಸಿದ್ದ ಅವರು ಇದೀಗ ಫೈನಲ್ನಲ್ಲೂ ಅದೇ ಪ್ರದರ್ಶನ ಪುನರಾವರ್ತಿಸಿ ಹ್ಯಾಟ್ರಿಕ್ ಶತಕದ ಸಾಧನೆ ಮಾಡುವ ವಿಶ್ವಾಸದಲ್ಲಿದ್ದಾರೆ.
ಉಳಿದಂತೆ, ಮಾಯಾಂಕ್ ಅಗರ್ವಾಲ್, ಕರುಣ್ ನಾಯರ್ ಮತ್ತು ಇತರೆ ದಾಂಡಿಗರೂ ಸಹ ಉತ್ತಮ ಫಾರ್ಮ್ನಲ್ಲಿದ್ದಾರೆ.
ಅದೇ ರೀತಿ ಬೌಲಿಂಗ್ನಲ್ಲಿ ನಾಯಕ ವಿನಯಕುಮಾರ್ ಮಿಂಚಿನ ದಾಳಿ ನಡೆಸುತ್ತಿದ್ದಾರೆ. ಕಳೆದ 11 ಪಂದ್ಯಗಳಲ್ಲಿ ಅವರು (ಎಲ್ಲಾ ಮಾದರಿ) ಒಟ್ಟು 54 ವಿಕೆಟ್ ಉರುಳಿಸಿರುವುದು ಇದಕ್ಕೆ ಸಾಕ್ಷಿ. ಮತ್ತೊಂದು ತುದಿಯಿಂದ ಅಭಿಮನ್ಯು ಮಿಥುನ್ ಮತ್ತು ಎಚ್.ಎಸ್. ಶರತ್ ಕೂಡ ವಿನಯ್ಗೆ ಉತ್ತಮ ಬೆಂಬಲ ನೀಡುತ್ತಿದ್ದಾರೆ.
ಅದೇ ರೀತಿ ಮಹೇಶ್ ರಾವತ್ ನಾಯಕತ್ವದ ರೈಲ್ವೇಸ್ ಸಹ ಉತ್ತಮ ಪ್ರತಿಭೆಗಳನ್ನು ಹೊಂದಿದ್ದು, ಕರ್ನಾಟಕಕ್ಕೆ ಕಠಿಣ ಸವಾಲು ನಿಲ್ಲಿಸುವಷ್ಟು ಸಮರ್ಥವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

