ವೈರಿಗಳ ಕಾದಾಟಕ್ಕೆ ಜಗದ ಕಾತರ

ಈಗ ವಿಶ್ವ ಕ್ರಿಕೆಟ್ ಅಭಿಮಾನಿಗಳ ಎದೆಬಡಿತ ಹೆಚ್ಚಾಗಿದ್ದು, ಬಹು ದಿನಗಳಿಂದ ಕಾಯುತ್ತಿದ್ದ ಕ್ಷಣ ಎದುರಿಗೆ ಬಂದು ನಿಂತಿದೆ. ವಿಶ್ವದ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಮುಖಾಮುಖಿಯಾಗುತ್ತಿರುವುದರಿಂದ ಇಡೀ ವಿಶ್ವದ ಗಮನ ಈ ಪಂದ್ಯದ ಮೇಲೆ ನೆಟ್ಟಿದೆ.
ಶುಕ್ರವಾರ ಇಲ್ಲಿನ ಶೇರೆ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯುವ ಸೂಪರ್ 10 ಹಂತದ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಕಾದಾಟ ನಡೆಸುತ್ತಿವೆಯಾದರೂ, ಈ ಪಂದ್ಯ ಫೈನಲ್ ಪಂದ್ಯದಷ್ಟೇ ಮಹತ್ವ ಪಡೆದುಕೊಂಡಿದೆ.
ವಿಶ್ವಕಪ್ನಲ್ಲಿ ಭಾರತ ಇದುವರೆಗೂ ಪಾಕಿಸ್ತಾನದ ವಿರುದ್ಧ ಸೋತಿಲ್ಲ ಎಂದು ಭಾರತೀಯ ಅಭಿಮಾನಿಗಳು ಭಾರತ ತಂಡದ ಗೆಲವಿನ ನಿರೀಕ್ಷೆಯಲ್ಲಿದ್ದರೆ. ಪಾಕಿಸ್ತಾನ ತಂಡ ಈ ಬಾರಿ ಬಲಿಷ್ಠ ತಂಡವಾಗಿದ್ದು, ವಿಶ್ವಕಪ್ನಲ್ಲಿ ಭಾರತ ವಿರುದ್ಧದ ಗೆಲವಿನ ದಾಹವನ್ನು ನೀಗಿಸಿಕೊಳ್ಳಲಿದೆ ಎಂದು ಪಾಕ್ ಅಭಿಮಾನಿಗಳ ವಿಶ್ವಾಸವಾಗಿದೆ.
ಒಟ್ಟಿನಲ್ಲಿ ಪ್ರತಿ ಎಸೆತದಲ್ಲೂ ರೋಚಕತೆಯನ್ನು ತುಂಬಿರುವ ಚುಟುಕು ಕ್ರಿಕೆಟ್ನಲ್ಲಿ ಬದ್ಧವೈರಿಗಳ ಕಾದಾಟ, ಪ್ರತಿಯೊಬ್ಬರ ಮೈ ನವಿರೇಳುವಂತೆ ಮಾಡುತ್ತಿರುವುದರಲ್ಲಿ ಅನುಮಾನವಿಲ್ಲ. ಇದುವರೆಗೂ ಏಕದಿನ ಹಾಗೂ ಟಿ20 ಸೇರಿದಂತೆ ಒಟ್ಟು 8 ಬಾರಿ ಉಭಯ ತಂಡಗಳು ವಿಶ್ವಕಪ್ ಪಂದ್ಯಾವಳಿಯಲ್ಲಿ ಮುಖಾಮುಖಿಯಾಗಿದ್ದು, ಭಾರತ 8-0 ಅಂತರದ ಗೆಲವಿನ ದಾಖಲೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅದರಲ್ಲಿ ಐದು ಬಾರಿ ಏಕದಿನ ವಿಶ್ವಕಪ್ನಲ್ಲಿ ಹಾಗೂ ಮೂರು ಬಾರಿ ಟಿ20 ವಿಶ್ವಕಪ್ನಲ್ಲಿ ಮುಖಾಮುಖಿಯಾಗಿವೆ.
ಈ ಪಂದ್ಯಕ್ಕಾಗಿ ಇಡೀ ವಿಶ್ವವೇ ಕಾದು ಕುಳಿತಿದೆ. ಭಾರತ-ಪಾಕ್ ಪಂದ್ಯವೆಂದರೆ, ರೋಚಕ, ಜಿದ್ದಾಜಿದ್ದಿನ ಹೋರಾಟ, ನಾಟಕೀಯ ತಿರುವುಗಳಿಂದ ಕೂಡಿರಲಿದೆ. ಹಾಗಾಗಿ ಈ ಪಂದ್ಯ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಭಾರತಕ್ಕೆ ಪ್ರತಿಷ್ಠೆಯ ಪ್ರಶ್ನೆ: ಈ ಪಂದ್ಯ ಭಾರತದ ಪಾಲಿಗೆ ಪ್ರತಿಷ್ಠೆಯ ಪಂದ್ಯವಾಗಿದೆ ಎಂದರೆ ತಪ್ಪಿಲ್ಲ. ಭಾರತ ತಂಡ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ವಿರುದ್ಧ ಇದುವರೆಗೂ ಸೋತಿಲ್ಲ. ಅಲ್ಲದೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಭಾರತ ತಂಡ ಪ್ರಶಸ್ತಿ ಗೆಲ್ಲದಿದ್ದರೂ, ಈ ಪಂದ್ಯದಲ್ಲಿ ಗೆಲ್ಲಲೇಬೇಕು ಎಂಬ ನಿರೀಕ್ಷೆಗಳನ್ನು ಹೊತ್ತಿದ್ದಾರೆ.
ಅಲ್ಲದೆ ಭಾರತ ತಂಡ ಇತ್ತೀಚೆಗೆ ನಡೆದ ಏಷ್ಯಾಕಪ್ ಕ್ರಿಕೆಟ್ ಸರಣಿಯಲ್ಲಿ ಇದೇ ಅಂಗಣದಲ್ಲಿ ಪಾಕಿಸ್ತಾನ ವಿರುದ್ಧ ಸೋಲನುಭವಿಸಿತ್ತು. ಹಾಗಾಗಿ ಭಾರತ ತಂಡ ಸೇಡು ತೀರಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ.
ಆಟಗಾರರ ಫಾರ್ಮ್ ಕೊರತೆ: ಇನ್ನು ಭಾರತ ತಂಡದ ಆಟಗಾರರನ್ನು ನೋಡುವುದಾದರೆ, ಕೊಹ್ಲಿ ಹಾಗೂ ಧೋನಿ ಹೊರತು ಪಡಿಸಿ ಉಳಿದ ಆಟಗಾರರ ಫಾರ್ಮ್ ತಂಡಕ್ಕೆ ಚಿಂತೆಯಾಗಿದೆ. ಆರಂಭಿಕರು ಭದ್ರ ಅಡಿಪಾಯ ಹಾಕುತ್ತಿಲ್ಲ. ಅಜಿಂಕ್ಯ ರಹಾನೆ, ಧವನ್ ಜತೆ ಆರಂಭಿಕರಾಗಿ ಕಣಕ್ಕಿಳಿಯಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.
ಇನ್ನು ಸುರೇಶ್ ರೈನಾ ಎರಡು ಅಭ್ಯಾಸ ಪಂದ್ಯಗಳಲ್ಲಿ ತಕ್ಕ ಪ್ರದರ್ಶನ ನೀಡಿದ್ದು, ತಮ್ಮ ಲಯ ಕಂಡುಕೊಂಡಿರುವಂತೆ ಕಾಣುತ್ತಿದೆ. ಇನ್ನು ಯುವರಾಜ್ ಹಾಗೂ ರವೀಂದ್ರ ಜಡೇಜಾ ಬ್ಯಾಟ್ನಿಂದ ರನ್ ಹರಿದು ಬರುತ್ತಿಲ್ಲ. ಹಾಗಾಗಿ ಧೋನಿ ಹಾಗೂ ಕೊಹ್ಲಿಯ ಮೇಲೆ ಹೆಚ್ಚಿನ ಒತ್ತಡವಿರುವುದು ನಿಜ.
ಇನ್ನು ಬೌಲರ್ಗಳ ಪರಿಸ್ಥಿತಿ ಮತ್ತೆ ಆತಂಕ ಸೃಷ್ಠಿಸಿದೆ. ಭುವನೇಶ್ವರ್ ವೇಗ ಮಂದಗತಿಯಾಗಿದೆ. ಶಮಿ ಹೆಚ್ಚು ದುಬಾರಿಯಾಗುತ್ತಿದ್ದಾರೆ. ಉಳಿದಂತೆ ಸ್ಪಿನ್ ಪಿಚ್ಗಳಲ್ಲಿ ಆರ್.ಅಶ್ವಿನ್ ಹಾಗೂ ಜಡೇಜಾ ಮೇಲೆ ಜವಾಬ್ದಾರಿ ಹೆಚ್ಚಿದೆ. ವೇಗಿ ವರುಣ್ ಎರಾನ್ ಈ ಬಾರಿ ಮಿಂಚುವ ಸಾಧ್ಯತೆಗಳಿವೆ.
ಗೆಲ್ಲುವ ವಿಶ್ವಾಸದಲ್ಲಿ ಪಾಕ್: ಪಾಕಿಸ್ತಾನ ತಂಡ ಈ ಬಾರಿ ಭಾರತಕ್ಕಿಂತ ಹೆಚ್ಚಿನ ಆತ್ಮ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿರುವುದರಲ್ಲಿ ಅನುಮಾನವಿಲ್ಲ. ಏಕೆಂದರೆ ಕಳೆದ ವರ್ಷ ಭಾರತದ ವಿರುದ್ಧ ಅದರದೇ ನೆಲದಲ್ಲಿ ಏಕದಿನ ಸರಣಿ ಗೆದ್ದ ನಂತರ ಏಷ್ಯಾಕಪ್ನಲ್ಲಿ ಈ ಅಂಗಣದಲ್ಲಿನ ಗೆಲವು ಪಾಕ್ ತಂಡದ ಆತ್ಮಬಲವನ್ನು ಇಮ್ಮಡಿಗೊಳಿಸಿದೆ. ಅಲ್ಲದೆ ತಂಡದ ಆಟಗಾರರು ಉತ್ತಮ ಲಯದಲ್ಲಿದ್ದು, ತಂಡ ಸಮತೋಲನದಿಂದ ಕೂಡಿದೆ. ಹಾಗೂ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದೆ.
ಹಾಗಾಗಿ ಪಾಕಿಸ್ತಾನ ಈ ಬಾರಿ ವಿಶ್ವಕಪ್ನಲ್ಲಿ ಭಾರತದ ವಿರುದ್ಧದ ಕಳಪೆ ದಾಖಲೆಯನ್ನು ಮರೆತು, ಹೊಸ ಉತ್ಸಹದಿಂದ ಆಡುವುದೇ ಎಂಬುದನ್ನು ಕಾದು ನೋಡಬೇಕು. ಅಲ್ಲದೆ ಪಾಕ್ ತಂಡ ಒಗ್ಗಟ್ಟಿನಿಂದ ಆಡುವುದು ತಂಡದ ಗೆಲವಿಗೆ ಪ್ರಮುಖವಾಗಲಿದೆ.
ಬ್ಯಾಟಿಂಗ್ಗಿಂತ ಬೌಲಿಂಗ್ ವಿಭಾಗ ಸ್ವಲ್ಪ ಲಯ ಕಂಡುಕೊಳ್ಳಬೇಕಿದೆ. ಅಲ್ಲದೆ ಪಂದ್ಯದಲ್ಲಿ ಉತ್ತಮ ಆರಂಭ ಪಡೆಯುವುದು ಪ್ರಮುಖವಾಗಿದೆ. ಅಂತಿಮ ಓವರ್ಗಳಲ್ಲಿ ರನ್ ನಿಯಂತ್ರಿಸಿ, ಉತ್ತಮ ಬ್ಯಾಟಿಂಗ್ ನಡೆಸಿದರೆ ಪಂದ್ಯಾವಳಿಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆಯಬಹುದು.
- ಮಹೇಂದ್ರ ಸಿಂಗ್ ಧೋನಿ,
ಭಾರತ ತಂಡದ ನಾಯಕ
ತಂಡಗಳು
ಭಾರತ
ಮಹೇಂದ್ರ ಸಿಂಗ್ ಧೋನಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಯುವರಾಜ್ ಸಿಂಗ್, ಸುರೇಶ್ ರೈನಾ, ಸ್ಟುವರ್ಟ್ ಬಿನ್ನಿ, ಆರ್.ಅಶ್ವಿನ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಮೊಹಮದ್ ಶಮಿ, ವರುಣ್ ಎರಾನ್, ಮೋಹಿತ್ ಶರ್ಮಾ, ಅಮಿತ್ ಮಿಶ್ರಾ.
ಪಾಕಿಸ್ತಾನ
ಮೊಹಮದ್ ಶಮಿ(ನಾಯಕ), ಅಹ್ಮದ್ ಶೆಹಜಾದ್, ಬಿಲವಾಲ್ ಬಟ್ಟಿ, ಕಮ್ರಾನ್ ಅಕ್ಮಲ್, ಸಯೀದ್ ಅಜ್ಮಲ್, ಜುನೈದ್ ಖಾನ್, ಮೊಹಮದ್ ತಲ್ಲಾ, ಶಾಹಿದ್ ಅಫ್ರಿದಿ, ಶರ್ಜೀಲ್ ಖಾನ್, ಶೊಯೀಬ್ ಮಲಿಕ್, ಶೊಯೀಬ್ ಮಕ್ಸೂದ್, ಸೋಹೆಲ್ ತನ್ವೀರ್, ಉಮರ್ ಅಕ್ಮಲ್, ಉಮರ್ ಗುಲ್, ಜುಲ್ಫಿಕರ್ ಬಬರ್.
2007ರಲ್ಲಿ ಮೊದಲ ಪಂದ್ಯ
ಭಾರತ ಹಾಗೂ ಪಾಕಿಸ್ತಾನ ತಂಡಗಳು ಡಿ ಗುಂಪಿನಲ್ಲಿ ಸ್ಥಾನ ಪಡೆದಿದ್ದವು. ಈ ಹಂತದಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಪಂದ್ಯದಲ್ಲಿ ಮುಖಾಮುಖಿಯಾದ ಉಭಯ ತಂಡಗಳು, ವಿಶ್ವ ಕ್ರಿಕೆಟ್ ಅಭಿಮಾನಿಗಳಿಗೆ ಸಕತ್ ಮಜಾ ನೀಡುವಲ್ಲಿ ಯಶಸ್ವಿಯಾದವು. ಭಾರತ ಮೊದಲು ಬ್ಯಾಟಿಂಗ್ ಮಾಡಿ 9 ವಿಕೆಟ್ಗೆ 141 ರನ್ ದಾಖಲಿಸಿದರೆ, ಪಾಕಿಸ್ತಾನ 7 ವಿಕೆಟ್ಗೆ 141 ರನ್ಗಳಿಸಿತು. ಈ ಮೂಲಕ ಪಂದ್ಯ ರೋಚಕ ಟೈ ಆಯಿತು. ಹಾಗಾಗಿ ಪಂದ್ಯದಲ್ಲಿ ಫಲಿತಾಂಶ ಪಡೆಯಲು ಬೌಲೌಟ್ ಮೊರೆ ಹೋಗಬೇಕಾಯಿತು. ಇದರಲ್ಲಿ ಭಾರತ ಗೆಲವು ದಾಖಲಿಸಿ. ವಿಶ್ವಕಪ್ನಲ್ಲಿ ಪಾಕ್ ವಿರುದ್ಧದ ಗೆಲವಿನ ಯಾತ್ರೆ ಮುಂದುವರಿಸಿತು.
2007ರ ಫೈನಲ್ಪಂದ್ಯ
ಚೊಚ್ಚಲ ಟಿ20 ವಿಶ್ವಕಪ್ನ ಪ್ರಶಸ್ತಿ ಸುತ್ತಿನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾದವು. ಈ ಪಂದ್ಯದಲ್ಲೂ ಭಾರತದ ಕೊರಳಿಗೆ ಜಯದ ಹಾರ ಬಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 5 ವಿಕೆಟ್ಗೆ 157 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ 152 ರನ್ಗಳಿಗೆ ಸರ್ವ ಪತನವಾಗುವ ಮೂಲಕ ಭಾರತ ಟಿ20 ಚಾಂಪಿಯನ್ ಆಯಿತು. ಈ ಮೂಲಕ ಭಾರತ ತಂಡ ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಮೇಲುಗೈ ಮುಂದುವರಿಸಿತು. ಈ ಪಂದ್ಯ ವಿಶ್ವ ಕ್ರಿಕೆಟ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಅತ್ಯಂತ ನೆನಪಿನಲ್ಲಿಡುವಂತಹ ಪಂದ್ಯಾವಾಗುಳಿಯಿತು.
2012ರಲ್ಲೂ ಭಾರತ ಪ್ರಾಬಲ್ಯ
ಇನ್ನು ಕಳೆದ ಬಾರಿ ಶ್ರೀಲಂಕಾದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಎರಡನೇ ಗುಂಪಿನ ಪಂದ್ಯದಲ್ಲಿ ಸಾಂಪ್ರಾದಾಯಿಕ ಎದುರಾಳಿಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲೂ ಭಾರತ ಗೆಲವಿನ ಯಾತ್ರೆ ಮುಂದುವರಿಸುವಲ್ಲಿ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿತಾದರೂ ಕೇವಲ 128 ರನ್ ಮಾತ್ರ ಗಳಿಸಲು ಶಕ್ತವಾಯಿತು. ನಂತರ ಈ ಮೊತ್ತವನ್ನು ಬೆನ್ನಟ್ಟಿದ ಭಾರತ ವಿರಾಟ್ ಕೊಹ್ಲಿ (ಅಜೇಯ 78)ಯವರ ಅಮೋಘ ಬ್ಯಾಟಿಂಗ್ನಿಂದ ಕೇವಲ 2 ವಿಕೆಟ್ ಕಳೆದುಕೊಂಡು 129 ರನ್ ದಾಖಲಿಸಿ ಗೆಲವಿನ ಕೇಕೆ ಹಾಕಿತು. ಈ ಪಂದ್ಯದಲ್ಲಿ ಆಲ್ರೌಂಡ್ ಆಟ ಪ್ರದರ್ಶಿಸಿದ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಟಿ20ಯಲ್ಲಿ ಉಭಯರ ಮುಖಾಮುಖಿ
ದಿನಾಂಕ ಸ್ಥಳ ಫಲಿತಾಂಶ
ಸೆ.14(2007) ಡರ್ಬನ್ ಟೈ (ಬೌಲೌಟ್ನಲ್ಲಿ ಭಾರತಕ್ಕೆ ಜಯ)
ಸೆ.24(2007) ಜೊಹಾನ್ಸ್ಬರ್ಗ್ ಭಾರತಕ್ಕೆ 5 ರನ್ ಗೆಲವು
ಸೆ.30(2012) ಕೊಲಂಬೊ ಭಾರತಕ್ಕೆ 8 ವಿಕೆಟ್ ಜಯ
ಡಿ.25(2012) ಬೆಂಗಳೂರು ಪಾಕಿಸ್ತಾನಕ್ಕೆ 5 ವಿಕೆಟ್ ಜಯ
ಡಿ.28(2012) ಅಹ್ಮದಾಬಾದ್ ಭಾರತಕ್ಕೆ 11 ರನ್ ಗೆಲವು
ಪಾಕ್ ತಂಡದಲ್ಲಿ ಬಿರುಕು?
ಕರಾಚಿ: ಪ್ರಸಕ್ತ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಗೆಲವಿನ ಫೇವರಿಟ್ ತಂಡ ಎನಿಸಿರುವ ಪಾಕಿಸ್ತಾನ ಪಡೆಯಲ್ಲಿ ಬಿರುಕು ಮೂಡಿರುವ ಬಗ್ಗೆ ವದಂತಿಗಳು ಹಬ್ಬಿವೆ. ಪಾಕ್ ತಂಡದ ನಾಯಕ ಮೊಹಮದ್ ಹಫೀಜ್, ತಂಡದ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಸಮಾಧಾನಗೊಂಡಿದ್ದು, ತಂಡದ ಆಡಳಿತ ಮಂಡಳಿ ಜತೆಗೆ ತೀವ್ರ ಭಿನ್ನಾಭಿಪ್ರಾಯ ಹೊಂದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಫೀಜ್ ತಂಡದ ಕೋಚ್ ಮೊಯೀನ್ ಖಾನ್, ಸಲಹೆಗಾರ ಜಹೀರ್ ಅಬ್ಬಾಸ್ ಹಾಗೂ ಮ್ಯಾನೇಜರ್ ಜಾಕಿರ್ ಖಾನ್ ಜತೆಗೆ ಮಾತನಾಡುತ್ತಿಲ್ಲ ಎಂಬುದರ ಬಗ್ಗೆ ವರದಿಗಳು ಬಂದಿವೆ. ವಿಶ್ವಕಪ್ ಪಂದ್ಯಾವಳಿ ಆರಂಭವಾಗುವ ಮುನ್ನವೇ ಈ ರೀತಿಯಾದ ವದಂತಿಗಳು ಹರಡಿರುವುದು ಪಾಕಿಸ್ತಾನ ಕ್ರಿಕೆಟ್ಗೆ ಉತ್ತಮ ಬೆಳವಣಿಗೆಯಲ್ಲ. ಈ ಕುರಿತು ಪಿಸಿಬಿ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ. ಹಾಗಾದರೆ ಮಾತ್ರ ತಂಡ ಪಂದ್ಯಾವಳಿಯ ಕಡೆ ಗಮನ ಹರಿಸಬಹುದು ಎಂದು ಪಾಕಿಸ್ತಾನದ ಮಾಜಿ ಮುಖ್ಯ ಕೋಚ್ ಮೊಸಿನ್ ಖಾನ್ ತಿಳಿಸಿದ್ದಾರೆ.
ತಂಡದ ಪ್ರತಿಯೊಬ್ಬ ಆಟಗಾರನೂ ಉತ್ತಮವಾಗಿ ಸಿದ್ಧತೆ ನಡೆಸಿದ್ದಾರೆ. ಅಫ್ರೀದಿ ಆತ್ಮವಿಶ್ವಾಸದಲ್ಲಿದ್ದಾರೆ. ಹಾಗಾಗಿ ಅವರು ಕೆಳ ಕ್ರಮಾಂಕದಲ್ಲಿ ಬರಬೇಕೆಂಬುದು ನಮ್ಮ ತಂತ್ರ. ಅವರು ಏಷ್ಯಾಕಪ್ನಲ್ಲಿ ನೀಡಿದ ಪ್ರದರ್ಶನ ಮುಂದುವರಿಸುವ ವಿಶ್ವಾಸವಿದೆ.
- ಮೊಹಮದ್ ಹಫೀಜ್,
ಪಾಕಿಸ್ತಾನ ತಂಡದ ನಾಯಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


