ಕ್ರೀಡೆ

ವಿಶ್ವಾಸದಲ್ಲಿ ಸಲ್ಗಾಂವಕರ್

Published On :

ವಾಸ್ಕೋ: ಕಳೆದ ಐದೂ ಪಂದ್ಯಗಳಲ್ಲಿ ಸತತ ಗೆಲವು ದಾಖಲಿಸುವ ಮೂಲಕ ಗೆಲವಿನ ಅಲೆಯಲ್ಲಿ ತೇಲುತ್ತಿರುವ ಸಲ್ಗಾಂವಕರ್ ತಂಡ ಐ ಲೀಗ್‌ನ 20ನೇ ಸುತ್ತಿನ ಪಂದ್ಯದಲ್ಲಿ ಯುನೈಟೆಡ್ ಎಸ್‌ಸಿ ವಿರುದ್ಧ ಗೆಲವು ದಾಖಲಿಸಲು ಎದುರು ನೋಡುತ್ತಿದೆ.
ಶನಿವಾರ ಇಲ್ಲಿನ ತಿಲಕ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಸಾಲ್ಗಾಂವಕರ್ ತಂಡ ಯುನೈಟೆಡ್ ಎಸ್‌ಸಿ ವಿರುದ್ಧ ಗೆಲವು ಸಾಧಿಸಿ, ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದ ಸನಿಹಕ್ಕೆ ಸಾಗಲು ಸಜ್ಜಾಗಿದೆ.
ತಂಡದ ಸತತ ಗೆಲವಿನಿಂದ ಆತ್ಮವಿಶ್ವಾಸದಲ್ಲಿದ್ದು, ಪ್ರಶಸ್ತಿಯತ್ತ ದಾಪುಗಾಲು ಹಾಕುವತ್ತ ಗಮನ ಹರಿಸಿದೆ.
ಇನ್ನು ಯುನೈಟೆಡ್ ತಂಡದ ಪ್ರದರ್ಶನ ಉತ್ತಮವಾಗಿಲ್ಲ. ಕೇವಲ 4 ಪಂದ್ಯಗಳಲ್ಲಿ ಗೆಲವು ದಾಖಲಿಸಿದ್ದು, ಸತತ ಸೋಲಿನಿಂದ ಕಂಗೆಟ್ಟಿದೆ. ಹಾಗಾಗಿ ಈ ಪಂದ್ಯದಲ್ಲಿ ಸಲ್ಗಾಂವಕರ್ ಗೆಲ್ಲುವ ಫೆವರಿಟ್ ತಂಡವಾಗಿದೆ.
ಐಪಿಎಲ್ ಆಟಗಾರರಿಗೆ ಬಿಸಿಸಿಐ ಸೂಚನೆ
ನವದೆಹಲಿ: ಐಪಿಎಲ್‌ನಲ್ಲಿ ಭಾಗವಹಿಸಲಿರುವ ದೇಶಿ ಆಟಗಾರರು, ಅವರ ಸ್ಥಳೀಯ ಟಿ20 ಟೂರ್ನಿಗಳಲ್ಲಿ ಭಾಗವಹಿಸಬೇಕು ಎಂದು ಬಿಸಿಸಿಐ ತನ್ನ 27 ಅಂಗಸಂಸ್ಥೆಗಳಿಗೆ ತಿಳಿಸಿದೆ. ಐದೂ ವಲಯಗಳು ಮಾ.30ರಿಂದ ಏ.5ರವರೆಗೆ ಟಿ20 ಲೀಗ್ ನಡೆಸುತ್ತಿದ್ದು, ಇದು ಆಟಗಾರರು ತಯಾರಿ ನಡೆಸಲು ಉತ್ತಮ ಅವಕಾಶವಾಗಿದೆ. ನಂತರ ಆಟಗಾರರು ತಮ್ಮ ಐಪಿಎಲ್ ಫ್ರಾಂಚೈಸಿ ಸೇರಿಕೊಳ್ಳಲಿದ್ದಾರೆ. ಪಶ್ಚಿಮ ವಲಯದ ಟಿ-20  ಮುಂಬೈನಲ್ಲಿ ಮಾ.30ರಿಂದ, ಕೇಂದ್ರ ವಲಯ ಮಾ.31ರಿಂದ ನಾಗ್ಪುರದಲ್ಲಿ, ಉತ್ತರ ವಲಯ ಚಂಡೀಗಢದಲ್ಲಿ, ದಕ್ಷಿಣ ವಲಯ ವಿಜಯವಾಡದಲ್ಲಿ, ಪೂರ್ವ ವಲಯ ಕೋಲ್ಕತಾದಲ್ಲಿ ಏ.1ರಿಂದ ಆರಂಭವಾಗಲಿದೆ.
ಬ್ಯಾಡ್ಮಿಂಟನ್ ರ್ಯಾಂಕಿಂಗ್: ಕಶ್ಯಪ್‌ಗೆ 24ನೇ ಸ್ಥಾನ
ನವದೆಹಲಿ: ಭಾರತದ ಭರವಸೆಯ ಆಟಗಾರ ಪರುಪಳ್ಳಿ ಕಶ್ಯಪ್ ನೂತನ ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್ ಪಟ್ಟಿಯ ಪುರುಷರ ವಿಭಾಗದಲ್ಲಿ 24ನೇ ಸ್ಥಾನಕ್ಕೇರಿದ್ದಾರೆ.
2013ನೇ ಸಾಲಿನಲ್ಲಿ ಕಶ್ಯಪ್ ಜೀವನಶ್ರೇಷ್ಠ 6ನೇ ಕ್ರಮಾಂಕದಲ್ಲಿದ್ದರು. ಆದರೆ, ನಂತರದ ಪಂದ್ಯಾವಳಿಗಳಲ್ಲಿ ತೀರ ನೀರಸ ಪ್ರದರ್ಶನ ನೀಡಿದ ಪರಿಣಾಮ ರ್ಯಾಂಕಿಂಗ್‌ನಲ್ಲಿ ಗಣನೀಯ ಕುಸಿತ ಅನುಭವಿಸಿದರು. ಇದೀಗ ಮತ್ತೆ ಉತ್ತಮ ಫಾರ್ಮ್ ತೋರುತ್ತಿರುವ ಕಶ್ಯಪ್ ರ್ಯಾಂಕಿಂಗ್‌ನಲ್ಲಿ ಮೇಲೇರುವ ಸೂಚನೆ ನೀಡಿದ್ದಾರೆ.
ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಶಟಲ್ ರಾಣಿಯರಾದ ಸೈನಾ ನೆಹವಾಲ್ ಮತ್ತು ಪಿ.ವಿ. ಸಿಂಧು ಕ್ರಮವಾಗಿ 8ನೇ ಮತ್ತು 9ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಪ್ರೀತಿಗೆ ಸೋಲು
ಮುಂಬೈ: ಕರ್ನಾಟಕದ ಭರವಸೆಯ ಆಟಗಾರ್ತಿ ಪ್ರೀತಿ ಉಜೈನಿ ಅಖಿಲ ಭಾರತ ಮಹಿಳಾ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ್ದಾರೆ.
ಶುಕ್ರವಾರ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಪ್ರೀತಿ ತಮ್ಮ ಎದುರಾಳಿ ಮಹಾರಾಷ್ಟ್ರದ ಪರೀನ್ ಶಿವೇಕರ್ ವಿರುದ್ಧ 1-6, 6-4, 1-6 ಸೆಟ್‌ಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ.
140ನೇ ರ್ಯಾಂಕಿಂಗ್ ಪಡೆದ ಪರೀನ್, 27ನೇ ರ್ಯಾಂಕಿಂಗ್ ಪಡೆದಿರುವ ಪ್ರೀತಿ ಅವರನ್ನು ಮಣಿಸುವ ಮೂಲಕ ಅಚ್ಚರಿಯ ಪ್ರದರ್ಶನ ನೀಡಿದರು. ಈ ಮೂಲಕ ಪರೀನ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಿದ್ದಾರೆ.
ಆರಂಭದಿಂದಲೂ ಪ್ರೀತಿ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾದ ಪರೀನ್, ನಿರೀಕ್ಷಿತ ಫಲಿತಾಂಶ ಪಡೆಯುವಲ್ಲಿ ಸಫಲರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.