ಕ್ರೀಡೆ

ಫೈನಲ್‌ಗೆ ಹರ್ಯಾಣ, ಮಧ್ಯಪ್ರದೇಶ

Published On :

ಮೈಸೂರು: ಕಿರಿಯ ಮಹಿಳೆಯರ ಹಾಕಿಯ ಸಾಂಪ್ರದಾಯಿಕ ಎದುರಾಳಿಗಳಾದ ಹರ್ಯಾಣ ಮತ್ತು ಮಧ್ಯಪ್ರದೇಶ ತಂಡ ಫೈನಲ್ ಪ್ರವೇಶಿಸಿದ್ದು, ಕಳೆದ ವರ್ಷದ ಫಲಿತಾಂಶವೇ ಮತ್ತೆ ಮರುಕಳಿಸುವ ಸೂಚನೆ ಗೋಚರವಾಗಿದೆ.
ಹಾಕಿ ಕರ್ನಾಟಕ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿನ ಹಾಕಿ ಟರ್ಫ್‌ನಲ್ಲಿ ಆಯೋಜಿಸಿರುವ ಕಿರಿಯ ಮಹಿಳೆಯರ 4ನೇ ರಾಷ್ಟ್ರೀಯ ಹಾಕಿ ಪಂದ್ಯಾವಳಿಯ ಎ ವಿಭಾಗದ ಸೆಮಿಫೈನಲ್‌ನಲ್ಲಿ ಶನಿವಾರ ಜಾರ್ಖಂಡ್ ವಿರುದ್ಧ ಹರ್ಯಾಣ ತಂಡ 10-1 ಅಂತರದಿಂದಲೂ, ಒಡಿಶಾ ವಿರುದ್ಧ ಮಧ್ಯಪ್ರದೇಶ ತಂಡ 3-2 ಅಂತರದಿಂದಲೂ ಜಯಗಳಿಸಿ ಫೈನಲ್ ಪ್ರವೇಶಿಸಿವೆ.
2012 ಮತ್ತು 2013ರ ಫೈನಲ್ ಪಂದ್ಯಗಳಲ್ಲಿ ಜಯಗಳಿಸಿದ್ದ ಹರ್ಯಾಣ ಮತ್ತು ರನ್ನರ್ ಅಪ್ ಆಗಿದ್ದ ಮಧ್ಯಪ್ರದೇಶ ತಂಡ ಈಗ ಎದುರಾಗುತ್ತಿದ್ದು, 2013ರ ಫಲಿತಾಂಶ ಅಥವಾ 2011 (ಮಧ್ಯಪ್ರದೇಶ ಗೆದ್ದಿತ್ತು)ರ ಫಲಿತಾಂಶ ಲಭ್ಯವಾಗುವ ಸಾಧ್ಯತೆ ಇದೆ.
ಶನಿವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಜಾರ್ಖಂಡ್ ತಂಡವು, ಹರ್ಯಾಣ ತಂಡವನ್ನು 10-1 ಅಂತರದಲ್ಲಿ ಸೋಲಿಸಿತು. ತಂಡದ ರೀಟ್ ಮೂರು ಗೋಲು, ಜ್ಯೋತಿಗುಪ್ತ ಮತ್ತು ನರೀಂದರ್ ಕೌರ್ ತಲಾ ಎರಡು ಗೋಲು ಬಾರಿಸಿದರು. ಪೂಜಾ ರಾಣಿ, ನಾಯಕಿ ನೇಹ ಗೋಯಲ್(ಪೆನಾಲ್ಟಿ ಕಾರ್ನರ್) ಮತ್ತು ದೇವಿಕ ಸೇನ್ ತಲಾ ಒಂದು ಗೋಲು ದಾಖಲಿಸಿದರು.
ಪ್ರಬಲ ಹರ್ಯಾಣ ತಂಡದ ಮುಂದೆ ಜಾರ್ಖಂಡ್ ಆಟ ಹೆಚ್ಚು ಕಾಲ ನಡೆಯಲಿಲ್ಲ. ಪಂದ್ಯದ ಐದನೇನಿಮಿಷದಲ್ಲಿಯೇ ಜ್ಯೋತಿ ಗುಪ್ತ ಮೊದಲ ಗೋಲು ಬಾರಿಸಿ ತಂಡದ ಖಾತೆ ತೆರೆದರು. ಹರ್ಯಾಣ ನಾಲ್ಕು ಗೋಲು ಬಾರಿಸಿದ ಬಳಿಕವಷ್ಟೆ ಜಾರ್ಖಂಡ್‌ನ ಅನುಪಮ ಹೊರೊ ಒಂದು ಗೋಲು ಬಾರಿಸಿದರು. ಹರ್ಯಾಣ ಪಂದ್ಯದ ಮೊದಲಾರ್ಧದಲ್ಲಿ 4-1, ದ್ವಿತೀಯಾರ್ಧದಲ್ಲಿ 10-1 ಅಂತರ ಕಾಯ್ದುಕೊಂಡಿತು.
ನಂತರ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ಮತ್ತು ಒಡಿಶಾ ನಡುವೆ ಪ್ರಬಲ ಪೈಪೋಟಿ ನಡೆಯಿತು. ಉಭಯ ತಂಡಗಳ ಆಟಗಾರ್ತಿಯರೂ ಅತ್ಯುತ್ತಮ ಪ್ರದರ್ಶನ ನೀಡಿದರು. ಮಧ್ಯಪ್ರದೇಶ ತಂಡದ ರಕ್ಷಿ ಪ್ರಜಾಪತಿ ಎರಡು ಗೋಲು, ಅನುಜಾ ಸಿಂಗ್ ಒಂದು ಗೋಲು ಬಾರಿಸಿದರು. ತನಗೆ ದೊರೆತ ಪೆನಾಲ್ಟಿ ಕಾರ್ನರ್‌ಗಳ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಮಧ್ಯಪ್ರದೇಶ ತಂಡ ಆಟಗಾರ್ತಿಯರು ವಿಫಲವಾದರೂ ಮೂರು ಗೋಲು ಬಾರಿಸಿ ತಂಡವನ್ನು ಜಯದ ದಡ ತಲುಪಿಸಿದರು. ಈ ನಡುವೆ ಒಡಿಶಾ ತಂಡದ ನಾಯಕಿ ಅಂಬಿಕ ಟೊಪ್ಪೊ ಎರಡು ಗೋಲು ಬಾರಿಸಿದರು.
ಮಧ್ಯಪ್ರದೇಶ ತಂಡ ಪಂದ್ಯದ ಮೊದಲಾರ್ಧದಲ್ಲಿ 2-1 ಅಂತರ ಕಾಯ್ದುಕೊಂಡಿತ್ತು. ಪಂದ್ಯದ ದ್ವಿತೀಯಾರ್ಧದಲ್ಲಿ ಉಭಯ ತಂಡಗಳೂ ತಲಾ ಒಂದೊಂದು ಗೋಲು ದಾಖಲಿಸಿದವು. ಅಂತಿಮವಾಗಿ ಮಧ್ಯಪ್ರದೇಶ ತಂಡ ಫೈನಲ್‌ಗೆ ಲಗ್ಗೆ ಹಾಕಿತು.
ಭಾನುವಾರ ಮಧ್ಯಾಹ್ನ 2ಕ್ಕೆ ಒಡಿಶಾ ಮತ್ತು ಜಾರ್ಖಂಡ್ ತಂಡಗಳು ಪಂದ್ಯಾವಳಿಯ ಮೂರನೇ ಸ್ಥಾನಕ್ಕೆ ಸ್ಪರ್ಧಿಸಿದರೆ, ಸಂಜೆ 4ಕ್ಕೆ ಹರ್ಯಾಣ ಮತ್ತು ಮಧ್ಯಪ್ರದೇಶ ಫೈನಲ್‌ನಲ್ಲಿ ಮುಖಾಮುಖಿ ಆಗಲಿವೆ.
ರಾಜ್ಯಪಾಲರ ಆಗಮನ: ಮಾ. 23ಕ್ಕೆನಡೆಯುವ ಅಂತಿಮ ಪಂದ್ಯಕ್ಕೆ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಭಾಗವಹಿಸುವರು. ಬಳಿಕ ವಿಜೇತ ತಂಡಗಳಿಗೆ ಬಹುಮಾನ ವಿತರಿಸುವರು.
 ಶನಿವಾರ ಸಂಜೆ ನಡೆದ ಕಾರ್ಯ ಕ್ರಮದಲ್ಲಿ ಪಂದ್ಯಾವಳಿಯ ಅಂಪೈರ್‌ಗಳು ಮತ್ತು ಇತರರಿಗೆ ನೆನಪಿನ ಕಾಣಿಗೆ ನೀಡಿ ಗೌರವಿಸಲಾಯಿತು.

 ಡಿ.ಎನ್. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.