ಕ್ರೀಡೆ

ಸೆಮೀಸ್ ಕಾತರದಲ್ಲಿ ಭಾರತ

ಸೆಮೀಸ್ ಕಾತರದಲ್ಲಿ ಭಾರತ
Published On :

ಮಿರ್ಪುರ: ಮೊದಲೆರಡು ಪಂದ್ಯಗಳಲ್ಲಿ ಜಯ ಸಾಧಿಸಿ ವಿಶ್ವಾಸದಲ್ಲಿರುವ ಭಾರತ ತಂಡ, ಶುಕ್ರವಾರ ನಡೆಯಲಿರುವ 3ನೇ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಜಯ ಸಾಧಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಲು ಎದುರು ನೋಡುತ್ತಿದೆ.
ಪಂದ್ಯದಲ್ಲಿ ಭಾರತ ತಂಡಕ್ಕೆ ಬಾಂಗ್ಲಾ ಯಾವುದೇ ರೀತಿಯಲ್ಲಿ ಸಾಟಿಯಾಗದ ಹಿನ್ನೆಲೆಯಲ್ಲಿ, ಮಹೇಂದ್ರ ಸಿಂಗ್ ನಾಯಕತ್ವದ ತಂಡ ಗೆಲ್ಲುವ ಫೇವರಿಟ್ ಎನಿಸಿದೆ. ಅಲ್ಲದೆ, ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಭಾರತ ನೀಡಿದ ಪ್ರದರ್ಶನ ನೋಡಿದರೆ, ಪ್ರಶಸ್ತಿ ಗೆಲ್ಲಲು ಅದು ಗಂಭೀರ ಹೋರಾಟ ನಡೆಸುತ್ತಿರುವುದು ಸ್ಪಷ್ಟವಾಗುತ್ತದೆ. ಅಲ್ಲದೆ, ಆ ಎರಡೂ ಪಂದ್ಯಗಳಲ್ಲೂ ಪಂದ್ಯದ ಮೇಲೆ ಭಾರತ ಸಂಪೂರ್ಣವಾಗಿ ಹಿಡಿತ ಸಾಧಿಸಿತ್ತು.      ಉಭಯ ತಂಡಗಳ ಬಲಾಬಲವನ್ನು ಪರೀಕ್ಷಿಸಿ ನೋಡಿದಾಗ ತುಂಬಾ ಭಿನ್ನತೆ ಇದ್ದು, ಬಾಂಗ್ಲಾದೇಶ ಭಾರತದ ಸವಾಲನ್ನು ಎದುರಿಸುವುದೇ ಎಂಬ ಕಾತರದಲ್ಲಿದ್ದಾರೆ ಅಭಿಮಾನಿಗಳು.       ಆದರೆ, ಆಲ್ರೌಂಡ್ ಆಟಗಾರ ಯುವರಾಜ್ ಸಿಂಗ್ ಅವರು ಫಾರ್ಮ್ಗೆ ಮರಳದಿರುವುದೇ ಭಾರತ ತಂಡದಲ್ಲಿ ಕೊಂಚ ಆತಂಕವಾಗಿ ಪರಿಣಮಿಸಿದೆ. ಆದರೆ, ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಯುವಿ ಮಿಂಚಿದರೆ, ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಲೀಗ್ ಪಂದ್ಯದಲ್ಲಿ ಸೆಣಸುವ ಮುನ್ನವೇ ಟೀಂ ಇಂಡಿಯಾ ಸೆಮಿಫೈನಲ್ಗೆ ಲಗ್ಗೆ ಹಾಕಲಿದೆ.
ಅಲ್ಲದೆ, ಆಸ್ಟ್ರೇಲಿಯಾ ವಿರುದ್ಧ ಯಾವುದೇ ರೀತಿಯ ಒತ್ತಡವಿಲ್ಲದ ಹೋರಾಟವನ್ನು ಅದು ನಡೆಸಬಹುದು. ಭಾರತದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ಅಮಿತ್ ಮಿಶ್ರಾ ಹಾಗೂ ರವಿಂದ್ರ ಜಡೇಜಾ ಅವರು ಸಹ ಆಸ್ಟ್ರೇಲಿಯಾ ವಿರುದ್ಧ ತಕ್ಕ ಹೋರಾಟ ನೀಡಲು ಎದುರು ನೋಡುತ್ತಿದ್ದಾರೆ.    ಕೊಹ್ಲಿ, ಸುರೇಶ್ ರೈನಾ ಹಾಗೂ ಜಡೇಜಾ ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿರುವುದು, ಟಿ20 ಮಾದರಿಯ ಕ್ರಿಕೆಟ್ನಲ್ಲಿ ಶ್ರೇಷ್ಠ ಬ್ಯಾಟ್ಸ್ಮನ್ ಎನಿಸಿರುವ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಅಗತ್ಯವನ್ನು ಕಡಿಮೆ ಮಾಡಿದೆ.
ಭಾರತ ತಂಡದ ಬ್ಯಾಟಿಂಗ್ ಲೈನಪ್ ಬಲಿಷ್ಠವಾಗಿದ್ದು, ಬಾಂಗ್ಲಾ ಬೌಲಿಂಗ್ ವಿಭಾಗಕ್ಕೆ ಕಠಿಣ ಸವಾಲು ಎದುರಾಗಿದೆ. ವಿಶ್ವದರ್ಜೆಯ ಬೌಲರ್ ಶಕಿಬ್ ಅಲ್ ಹಸನ್ ಮಾತ್ರ ಬಾಂಗ್ಲಾ ತಂಡಕ್ಕೆ ನೆರವಾಗಬಲ್ಲವರಾಗಿದ್ದಾರೆ. ಆದರೆ, ಇತರ ಆಟಗಾರರು ಭಾರತ ತಂಡವನ್ನು ಎದುರಿಸಿ ನಿಲ್ಲುವಂತಹ ಮೊನಚಾದ ಬೌಲಿಂಗ್ ಅಥವಾ ಬ್ಯಾಟಿಂಗ್ ಅನ್ನು ಹೊಂದಿಲ್ಲ.
ಇದುವರೆಗೂ ಪಂದ್ಯಾವಳಿಯಲ್ಲಿ ಭಾರತ ತಂಡ ತನ್ನ ಸ್ಪಿನ್ ಬೌಲರ್ಗಳೊಂದಿಗೆ ಅದ್ಭುತ ಪ್ರದರ್ಶನ ತೋರಿದೆ. ಸ್ಪಿನ್ನರ್ ಅಮಿತ್ ಮಿಶ್ರಾ ಆಡಿದ ಎರಡೂ ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹೀಗಾಗಿ, ಸಮರ್ಥ್ಯ ಸ್ಪಿನ್ನರ್ಗಳನ್ನು ಹೊಂದಿರುವ ತಂಡ ಅದಮ್ಯ ಆತ್ಮವಿಶ್ವಾಸ ಹೊಂದಿದೆ.        ರವಿಚಂದ್ರನ್ ಅಶ್ವಿನ್ ಅವರು ಗಮನ ಸೆಳೆಯುವ ರೀತಿಯಲ್ಲಿ ವಿಕೆಟ್ ಪಡೆದಿಲ್ಲ. ಆದರೆ, ಪರಿಣಾಮಕಾರಿಯಾದ ಬೌಲಿಂಗ್ ಮಾಡಿದ್ದಾರೆ.      ಇನ್ನು ಮೂರನೇ ವಿಶೇಷ ಸ್ಪಿನ್ನರ್ ಆಗಿರುವ ರವಿಂದ್ರ ಜಡೇಜಾ ಸಹ ವಿಕೆಟ್ ಪಡೆಯುತ್ತಿದ್ದಾರೆ. ಆದರೆ, ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಲೆಂಡ್ಲ್ ಸಿಮನ್ಸ್ ವಿರುದ್ಧ ಜಡೇಜಾ ಕೊಂಚ ರನ್ ಸೋರಿಕೆ ಮಾಡಿದ್ದರು.      ಇನ್ನು ಭಾರತದ ವೇಗದ ಬೌಲರ್ಗಳು ಇದುವರೆಗೂ ಸಮರ್ಥ ಪ್ರದರ್ಶನವನ್ನೇ ನೀಡಿದ್ದಾರೆ. ಮೊಹ್ಮದ್ ಶಮಿ ಕೆಲ ರನ್ ನೀಡಿದ್ದಾರಾದರೂ, ಪಿಚ್ನಲ್ಲಿ ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸುತ್ತಿದ್ದಾರೆ.ಇನ್ನೊಂದೆಡೆ, ಅರ್ಹತಾ ಸುತ್ತಿನಲ್ಲಿ ಹಾಂಕಾಂಗ್ ವಿರುದ್ಧ ಸೋತಾಗಲೇ ಬಾಂಗ್ಲಾದೇಶ ತಂಡದ ದೌರ್ಬಲ್ಯ ಬಹಿರಂಗವಾಗಿದೆ. ಬ್ಯಾಟ್ಸ್ಮನ್ಗಳು ಕ್ರೀಸ್ನಲ್ಲಿ ಒದ್ದಾಡುತ್ತಿದ್ದಾರೆ, ಫೀಲ್ಡಿಂಗ್ ಸಹ ಅಚ್ಚುಕಟ್ಟಾಗಿಲ್ಲ. ಇಂತಹ ಸಂದರ್ಭದಲ್ಲಿ ಬಾಂಗ್ಲಾದೇಶ ಸಂಕಷ್ಠದ ಸ್ಥಿತಿ ತಲುಪಿದೆ. ಬಾಂಗ್ಲಾದ ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ ಏಕದಿನ ಕ್ರಿಕೆಟ್ನಲ್ಲಿ ಭಾರತದ ವಿರುದ್ಧ ಗಮನಸೆಳೆಯುವ ಪ್ರದರ್ಶನ ನೀಡಿದ್ದಾರೆ. ಆದರೆ, ಕಳೆದ ಕೆಲ ಪಂದ್ಯಗಳಲ್ಲಿ ಅವರ ಪ್ರದರ್ಶನ ಮಂದಗತಿಯಲ್ಲಿ ಸಾಗಿದೆ.
ನಾಯಕ ರಹೀಮ್ ಉತ್ತಮ ಆರಂಭ ಕಾಣುತ್ತಿದ್ದಾರೆ. ಆದರೆ, ದೊಡ್ಡ ಮೊತ್ತ ಪೇರಿಸುವಲ್ಲಿ ವೈಫಲ್ಯ ಕಾಣುತ್ತಿದ್ದಾರೆ. ಹೀಗಾಗಿ ಶಕಿಬ್ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ. ಇನ್ನು ಬೌಲಿಂಗ್ನಲ್ಲಿ ಮಶ್ರಫೆ ಮೂರ್ತಾಜ್ ಫಾರ್ಮ್ ಕಳೆದುಕೊಂಡಿದ್ದಾರೆ. ಹೀಗಾಗಿ ಬಾಂಗ್ಲಾ ಬೌಲಿಂಗ್ ಸಹ ದುರ್ಬಲವಾಗಿದೆ.


ತಂಡಗಳು


ಭಾರತ: ಮಹೇಂದ್ರ ಸಿಂಗ್ ಧೋನಿ (ನಾಯಕ), ವರುಣ್ ಎರಾನ್, ಸ್ಟುವರ್ಟ್ ಬಿನ್ನಿ, ಶಿಖರ್ ಧವನ್, ರವಿಂದ್ರ ಜಡೇಜಾ, ವಿರಾಟ್ ಕೊಹ್ಲಿ, ಭುವನೇಶ್ವರ ಕುಮಾರ, ಅಮಿತ್ ಮಿಶ್ರಾ, ಅಜಿಂಕ್ಯ ರಹಾನೆ, ರವಿಚಂದ್ರನ್ ಅಶ್ವಿನ್, ಸುರೇಶ್ ರೈನಾ, ಮೊಹ್ಮದ್ ಶಮಿ, ಮೋಹಿತ್ ಶರ್ಮಾ, ರೋಹಿತ್ ಶರ್ಮಾ, ಯುವರಾಜ್ ಸಿಂಗ್.    ಬಾಂಗ್ಲಾದೇಶ: ಮುಷ್ಫಿಖರ್ ರಹೀಮ್ (ನಾಯಕ), ತಮೀಮ್ ಇಕ್ಬಾಲ್, ಅನಾಮುಲ್ ಹಕ್ ಬಿಜಾಯ್, ಮೋಮಿನುಲ್ ಹಕ್, ಶಕಿಬ್ ಅಲ್ ಹಸನ್, ಸಬ್ಬೀರ್ ರೆಹಮಾನ್, ಮಹ್ಮದುಲ್ಲಾ ರಿಯಾಧ್, ಜಿಯಾವುರ್ ರಹಮಾನ್, ಸೋಹಾಗ್ ಗಾಜಿ, ಅಲ್-ಅಮಿನ್ ಹುಸೇನ್, ಮಹ್ರಾಫೆ ಮೂರ್ತಾಜಾ, ಅಬ್ದುರ್ ರಜಾಖ್, ನಾಸೀರ್ ಹುಸೇನ್, ಶಾಮ್ಸೂರ್ ರಹಮಾನ್ ಹಾಗೂ ಫರ್ಹಾದ್ ರೆಜಾ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.