ಹಾಕಿ ಕೋಚ್ ಹುದ್ದೆ ಬಿಟ್ಟು ತವರಿಗೆ ತೆರಳಿದ ಟೆರ್ರಿ ವಾಲ್ಶ್

ತಮ್ಮ ಗುತ್ತಿಗೆ ನವೀಕರಣಕ್ಕೆ ಸಂಬಂಧಿಸಿದಂತೆ ಹಾಕಿ ಇಂಡಿಯಾ ಜೊತೆಗಿನ ಮಾತುಕತೆ ವಿಫಲವಾದ...
ಟೆರ್ರಿ  ವಾಲ್ಶ್
ಟೆರ್ರಿ ವಾಲ್ಶ್

ನವದೆಹಲಿ: ತಮ್ಮ ಗುತ್ತಿಗೆ ನವೀಕರಣಕ್ಕೆ ಸಂಬಂಧಿಸಿದಂತೆ ಹಾಕಿ ಇಂಡಿಯಾ  ಜೊತೆಗಿನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಟೆರ್ರಿ  ವಾಲ್ಶ್, ಭಾರತ ಹಾಕಿ ತಂಡ ಕೋಚ್ ಹುದ್ದೆ ತೊರೆದು ಸ್ವದೇಶಕ್ಕೆ ಹಿಂತಿರುಗಿದ್ದಾರೆ. ಇದರೊಂದಿಗೆ ಭಾರತೀಯ ಹಾಕಿ ತಂಡದ ಮೇಲೆ ಮತ್ತೊಂದು ಆಘಾತಕಾರಿ ಪರಿಣಾಮ ಉಂಟಾಗುವ ಭೀತಿ ಮೂಡಿದೆ.

ಭಾರತ ಹಾಕಿ ತಂಡದ ಜೊತೆಗಿನ ವಾಲ್ಶ್ ಅವರ ಗುತ್ತಿಗೆ ಅವಧಿ ಬುಧವಾರ ಕೊನೆಗೊಳ್ಳಲಿದೆ. ಕಳೆದ ತಿಂಗಳೇ ವಾಲ್ಶ್, ಕೆಲವು ಬೇಡಿಕೆಗಳನ್ನು ಮುಂದಿಟ್ಟು ಕೋಚ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಈಗ ಹಾಕಿ ಇಂಡಿಯಾ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದ ಜೊತೆಗೆ ಗುತ್ತಿಗೆ ನವೀಕರಣಕ್ಕೆ ಸಂಬಂಧಿಸಿದಂತೆ ನಡೆದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ರಾಜೀನಾಮೆ ಹಿಂಪಡೆಯದೇ ವಾಲ್ಶ್ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ.

ಇದಕ್ಕೂ ಮುನ್ನ ಅವರು, ಇಂದು ಬೆಳಗ್ಗೆ ಕ್ರೀಡಾ ಸಚಿವ ಸರ್ಬಾನಂದ್ ಸೊನೊವಾಲ್ ಅವರೊಂದಿಗೆ ನಡೆಸಿದ ಮಾತುಕತೆ ವೇಳೆಯೂ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಅಲ್ಲದೆ, ವಾಲ್ಶ್ ಬೇಡಿಕೆಗಳನ್ನು ಪರಿಶೀಲಿಸಲು ಮಾಜಿ ನಾಯಕರಾದ ಅಜಿತ್ ಪಾಲ್ ಸಿಂಗ್, ಅಶೋಕ್ ಕುಮಾರ್ ಮತ್ತು ಝಫರ್ ಇಕ್ಬಾಲ್ ಒಳಗೊಂಡ ಮೂವರು ಸದಸ್ಯರ ಸಮಿತಿ ರಚಿಸಲಾಗಿತ್ತು. ಈ ಸಮಿತಿ, ಟೆರ್ರಿ, ಹಾಕಿ ಇಂಡಿಯಾ ಸಾಮರ್ಥ್ಯ ಹೆಚ್ಚಳ ನಿರ್ದೇಶಕ ರೋಲಂಚ್ ಓಲ್ಟಮಸ್ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದ  ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದಾಗಲೂ ಕೂಡಾ ಒಮ್ಮತಕ್ಕೆ ಬರಲು ವಿಫಲವಾಗಿತ್ತು.

ಆದರೆ, ಹಾಕಿ ಇಂಡಿಯಾ ಮತ್ತು ಸಾಯ್ , ವಾಲ್ಶ್ ಮರಳುವಿಕೆಗಾಗಿ ಹೊಸ ಪ್ರಸ್ತಾವನೆಯನ್ನು ಕಳುಹಿಸಿಕೊಡಲು ಮುಂದಾಗಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾದ 60ರ ವಾಲ್ಶ್, ಭಾರತ ಹಾಕಿ ತಂಡದ ಕೋಚ್ ಹುದ್ದೆಯಲ್ಲಿ ಮುಂದುವರಿಯಬೇಕೆನ್ನುವ ಇಚ್ಛೆ ಇದೆ. ವಾಲ್ಶ್ ಕೂಡಾ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತ ಹಾಕಿ ತಂಡದ ಕೋಚ್ ಹುದ್ದೆಯಲ್ಲಿ ಮುಂದುವರಿಯುವ ಆಶಾಭಾವನೆಯನ್ನು ನಾನೂ ಹೊಂದಿದ್ದೇನೆ. ಹೊಸ ಪ್ರಸ್ತಾವನೆಯಲ್ಲಿ  ತಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡರೆ, ಖಂಡಿತ ವಾಪಸಾಗಲಿದ್ದೇನೆ ಎಂದಿದ್ದಾರೆ.

ಕೋಚ್ ಹುದ್ದೆಯ ಜವಾಬ್ದಾರಿಯನ್ನು ವಾಲ್ಶ್ ವಹಿಸಿಕೊಂಡ ನಂತರ ಭಾರತೀಯ ಹಾಕಿಯಲ್ಲಿ ಸಾಕಷ್ಟು ಪ್ರಗತಿಯಾಗಿದ್ದು, ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಪ್ರಮುಖವಾಗಿ ಏಷ್ಯನ್ ಗೇಮ್ಸ್‌ನಲ್ಲಿ 16 ವರ್ಷಗಳ ನಂತರ ಚಿನ್ನದ ಪದಕದಲ್ಲಿ ಗೆದ್ದ ಸಾಧನೆ ಮಾಡುವ ಮೂಲಕ 2016ರಲ್ಲಿ ನಡೆಯಲಿರುವ ರಿಯೋ ಒಲಿಂಪಿಕ್ಸ್‌ಗೆ ಭಾರತ ತಂಡ ನೇರವಾಗಿ ಪ್ರವೇಶ ಗಿಟ್ಟಿಸಿರುವುದಕ್ಕೆ  ವಾಲ್ಶ್ ಕಾರಣರಾಗಿದ್ದಾರೆ. ಇದರ ಹೊರತಾಗಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ  ಭಾರತ ಬೆಳ್ಳಿ ಪದಕ ಗೆದ್ದುಕೊಂಡಿತ್ತು.
ಭಾರತೀಯ ಹಾಕಿ ಅನೇಕ ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಕಾರಣರಾಗಿರುವ ಆಸ್ಟ್ರೇಲಿಯನ್ ಮೂಲದ ಕೋಚ್ ದಿಢೀರನೆ ತಂಡ ತೊರೆಯುವಂತಾದರೆ, ಖಂಡಿತವಾಗಿಯೂ ಪ್ರತಿಕೂಲ ಪರಿಣಾಮ ಮೂಡುವುದರಲ್ಲಿ ಸಂದೇಹವೇ ಇಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com