ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೌಲ್ಯ ಬರೀ 5 ಲಕ್ಷವಂತೆ!
ಚೆನ್ನೈ: ಐಸಿಸಿ ಅಧ್ಯಕ್ಷ ಮತ್ತು ಇಂಡಿಯಾ ಸಿಮೆಂಟ್ಸ್ ಸಂಸ್ಥೆಯ ಮಾಲೀಕರಾದ ಎನ್. ಶ್ರೀನಿವಾಸನ್ ಅವರ ಮಾಲೀಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೌಲ್ಯ ಕೇವಲ 5 ಲಕ್ಷವಂತೆ..
ಹೀಗೆಂದು ಸ್ವತಃ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಡಳಿತ ಮಂಡಳಿಯೇ ಹೇಳಿಕೊಂಡಿದೆ. ಐಪಿಎಲ್ ನಲ್ಲಿ ಸತತ ಎರಡು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ತಂಡದ ಮೌಲ್ಯಮಾಪನ
ಮಾಡಿ ಕಳೆದ ಫೆಭ್ರವರಿ ತಿಂಗಳಲ್ಲಿ ಐಪಿಎಲ್ ಆಡಳಿತ ಮಂಡಳಿಗೆ ಕಳುಹಿಸಲಾಗಿದೆ. ಬಿಸಿಸಿಐ ನಿಯಮಾವಳಿಗಳ ಅನುಸಾರವಾಗಿ ತಂಡದ ಮೌಲ್ಯಮಾಪನದಲ್ಲಿ ಶೇ.5ರಷ್ಟು ಹಣವನ್ನು ಬಿಸಿಸಿಐಗೆ ನೀಡಬೇಕಿದೆ. ಹೀಗಾಗಿ ಚೆನ್ನೈ ತಂಡ ಕೂಡ ತನ್ನ ಚೆನ್ನೈ ತಂಡದ ಮೌಲ್ಯಮಾಪನ ಮಾಡಿ ಐಪಿಎಲ್ ಆಡಳಿತ ಮಂಡಳಿಗೆ ವರದಿ ನೀಡಿದೆ.
ಆದರೆ ಚೆನ್ನೈ ತಂಡದ ಆಡಳಿತ ಮಂಡಳಿ ನೀಡಿರುವ ವರದಿಯಿಂದ ದಿಗ್ಭ್ರಾಂತರಾಗಿರುವ ಐಪಿಎಲ್ ಆಡಳಿತ ಮಂಡಳಿ ಸಿಬ್ಬಂದಿಗಳು, ಯಾವುದೇ ಕಾರಣಕ್ಕೂ ಚೆನ್ನೈ ತಂಡದ ಮೌಲ್ಯ ಮಾಪನ ಒಪ್ಪಲು ಸಿದ್ಧವಿಲ್ಲ. ಮೂಲಗಳ ಪ್ರಕಾರ ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಜ್ಯೋತಿರಾಧಿತ್ಯ ಸಿಂಧ್ಯಾ ಅವರೇ ಈ ವಿಚಾರವನ್ನು ಮೊದಲ ಬಾರಿಗೆ ಪ್ರಶ್ನಿಸಿದ್ದು, ಇಷ್ಟು ಕಡಿಮೆ ಮೊತ್ತದ ಮೌಲ್ಯಮಾಪನ ಅಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಖಾಸಗಿ ಮೌಲ್ಯಮಾಪನ ಸಂಸ್ಥೆಯೊಂದರ ಮಾಹಿತಿಯಂತೆ ಚೆನ್ನೈ ತಂಡ ಫ್ರಾಂಚೈಸಿ ಅತಿ ಹೆಚ್ಚು ಅಂದರೆ ಸುಮಾರು 400 ಕೋಟಿ ಬ್ರಾಂಡ್ ವ್ಯಾಲ್ಯೂ ಹೊಂದಿದೆ ಎಂದು ಅಭಿಪ್ರಾಯಪಟ್ಟಿದೆ.
ಹೀಗಿರುವಾಗ ಚೆನ್ನೈ ತಂಡದ ಮೌಲ್ಯ ಅದು ಹೇಗೆ 5 ಲಕ್ಷ ಆಗಲು ಸಾಧ್ಯ. ಈ ಹಿಂದೆ ಐಪಿಎಲ್ ಗವರ್ನಿಂಗ್ ಬಾಡಿಯಲ್ಲಿದ್ದ ಶ್ರೀನಿವಾಸನ್ ಮತ್ತು ತಂಡಕ್ಕೆ ಈ ವಿಚಾರ ತಿಳಿದಿರಲಿಲ್ಲವೇ..? ಅವರು ಅದು ಹೇಗೆ ಇದಕ್ಕೆ ಅನುಮೋದನೆ ಸೂಚಿಸಿದ್ದರು ಎಂದು ಕೆಲ ಸದಸ್ಯರು ಪ್ರಶ್ನಿಸಿದ್ದಾರೆ.
ಒಟ್ಟಾರೆ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಮೂಲಕ ಸುದ್ದಿಯಾಗಿದ್ದ ಚೆನ್ನೈ ತಂಡದ ಮಾಲೀಕರು, ಇದೀಗ ತಂಡದ ಮೌಲ್ಯ ಮಾಪನ ವಿಚಾರದಲ್ಲಿಯೂ ಹೊಸದೊಂದು ವಿವಾದವನ್ನು ತಾವಾಗಿಯೇ ಮೈಮೇಲೆ ಎಳೆದುಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ