
ಕೊಲಂಬೊ: ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯರಹಾನೆ ಸಿಡಿಸಿದ ಅಜೇಯ ಶತಕದ ನೆರವಿನಿಂದ ಗುರುವಾರ ಶುರುವಾದ ಆತಿಥೇಯ ಶ್ರೀಲಂಕಾ ಮಂಡಳಿ ಅಧ್ಯಕ್ಷರ ಇಲೆವೆನ್ ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಪ್ರವಾಸಿ ಭಾರತ ಚೇತರಿಕೆ ಕಂಡಿತು.
ನಾಯಕ ವಿರಾಟ್ ಕೊಹ್ಲಿಯ ವೈಫಲ್ಯದ ಮಧ್ಯೆ ರಹಾನೆ ತೋರಿದ ಪ್ರತಿರೋಧಾತ್ಮಕ ಆಟದಿಂದಾಗಿ ಮೊದಲ ದಿನದ ಆಟ ನಿಂತಾಗ ಭಾರತ ತನ್ನ ಮೊದಲ ಇನ್ನಿಂಗ್ಸ್‍ನಲ್ಲಿ 6 ವಿಕೆಟ್‍ಗೆ 314 ರನ್ ಗಳಿಸಿತು. ದಿನದಾಟ ನಿಂತಾಗ ರಹಾನೆ (109: 127 ಎಸೆತ, 11 ಬೌಂಡರಿ 1 ಸಿಕ್ಸರ್) ಜತೆಗೆ ಆರ್. ಅಶ್ವಿನ್ 10 ರನ್ ಮಾಡಿ ಶುಕ್ರವಾರಕ್ಕೆ ವಿಕೆಟ್ ಕಾಯ್ದುಕೊಂಡಿದ್ದರು.
ಎರಡನೇ ದಿನವಾದ ಶುಕ್ರವಾರದಂದು ಇನ್ನಷ್ಟು ರನ್ ಕಲೆಹಾಕುವ ಮೂಲಕ ಆತಿಥೇಯ ತಂಡವನ್ನು ಒತ್ತಡಕ್ಕೆ ಸಿಲುಕಿಸುವ ಗುರಿ ಹೊತ್ತಿರುವ ಭಾರತ ಆ ದಿಸೆಯಲ್ಲಿ ಹೋರಾಟ ಮುಂದುವರೆಸುವ ಸುಳಿವು ನೀಡಿದೆ.
ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಹಾನೆ, "ಅಭ್ಯಾಸ ಪಂದ್ಯಕ್ಕೂ ಮುನ್ನ ಸುದೀರ್ಘ ಆಟದ ಕುರಿತು ಯೋಜನೆ ಮಾಡಿದ್ದೆ. ಅದು ಸಾಕಾರಗೊಂಡಿದ್ದಕ್ಕೆ ಖುಷಿಯಾಗಿದೆ. ಇದೇಪ್ರದರ್ಶನವನ್ನು ಮುಂದುವರೆಸುವ ವಿಶ್ವಾಸವಿದೆ'' ಎಂದು ತಿಳಿಸಿದರು.
ರಾಹುಲ್-ಧವನ್ ಶತಕದ ಜತೆಯಾಟ: ಮಳೆಯ ಭೀತಿಯಿದ್ದ ಪಂದ್ಯಕ್ಕೆ ವರುಣ ಕೃಪೆ ತೋರಲಾಗಿ ಪಂದ್ಯ ಸುಗಮವಾಗಿ ನಡೆದದ್ದು ತಂಡದ ಅಭ್ಯಾಸಕ್ಕೆ ನೆರವಾಯಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಭಾರತ ಭರ್ಜರಿ ಆರಂಭವನ್ನೇ ನಡೆಸಿತು.
ಕರ್ನಾಟಕದ ಕೆ.ಎಲ್. ರಾಹುಲ್ (43) ಮತ್ತು ಶಿಖರ್ ಧವನ್ (62) ಮೊದಲ ವಿಕೆಟ್‍ಗೆ 108 ರನ್‍ಗಳ ಭರ್ಜರಿ ಕೊಡುಗೆ ನೀಡಿದರು. ರಾಹುಲ್ ಕೇವಲ 7 ರನ್‍ಗಳಿಂದ ಅರ್ಧಶತಕ ವಂಚಿತರಾದರೆ, ಧವನ್ ಅರ್ಧಶತಕ ಪೂರೈಸಿ ಔಟಾದರು. ಆದರೆ ಈ ಇಬ್ಬರ ನಿರ್ಗಮನದ ನಂತರ ಭಾರತದ ಇನ್ನಿಂಗ್ಸ್‍ಗೆ ಬಲ ತುಂಬುವಲ್ಲಿ ರೋಹಿತ್ ಶರ್ಮ (7) ಹಾಗೂ ನಾಯಕ ಕೊಹ್ಲಿ (8) ವಿಫಲರಾದರು. ಈ ಈರ್ವರೂ ಎರಡಂಕಿ ದಾಟದೆ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಲಂಕಾಗೆ ತೆರಳುವ ಮುನ್ನ ತವರಿನಲ್ಲಿ ಆಸ್ಟ್ರೇಲಿಯಾ 'ಎ' ತಂಡದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿಯೂ ಆಡಿದ್ದ ಕೊಹ್ಲಿ ವೈಫಲ್ಯವನ್ನು ಮೆಟ್ಟಿನಿಲ್ಲಲು ಸಾಧ್ಯವಾಗದೆ ಮತ್ತೆ ಚಡಪಡಿಸಿದರು. ಆದರೆ ಆ ಬಳಿಕ ಜತೆಯಾದ ರಹಾನೆ ಹಾಗೂ ಚೇತೇಶ್ವರ ಪೂಜಾರ 5ನೇ ವಿಕೆಟ್‍ಗೆ 134 ರನ್‍ಗಳನ್ನು ಪೇರಿಸುವ ಮೂಲಕ ತಂಡದ ಸ್ಥಿತಿಯನ್ನು ಸುಧಾರಿಸಿದರು.
Advertisement