ಜಡೇಜಾ ಜಾದೂಗೆ ಹರಿಣಗಳು ಹೈರಾಣ

ಭಾರತೀಯ ಬೌಲರ್‍ಗಳ ಸ್ಪಿನ್ ಬೌಲಿಂಗ್‍ಗೆ ಸಮರ್ಥನೀಯ ಉತ್ತರ ನೀಡುವಲ್ಲಿ ಮತ್ತೊಮ್ಮೆ ವಿಫಲವಾದ ಪ್ರವಾಸಿ ದ.ಆಫ್ರಿಕಾ, ಇನ್ನೊಮ್ಮೆ ಅತ್ಯಲ್ಪ ಮೊತ್ತಕ್ಕೆ ಕುಸಿದು ಭಾರೀ ಹಿನ್ನಡೆ ಅನುಭವಿಸಿದೆ...
ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಕೊನೆಯ ಟೆಸ್ಟ್ ಪಂದ್ಯದಲ್ಲಿ 3 ರನ್ ಗಳಿಸಿ ಆಮ್ಲಾ ಔಟಾದರೆ, ವಿಕೆಟ್ ಪಡೆದ ಸಂಭ್ರಮದಲ್ಲಿ ಕೊಹ್ಲಿ ಮತ್ತು ಜಡೇಜಾ
ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಕೊನೆಯ ಟೆಸ್ಟ್ ಪಂದ್ಯದಲ್ಲಿ 3 ರನ್ ಗಳಿಸಿ ಆಮ್ಲಾ ಔಟಾದರೆ, ವಿಕೆಟ್ ಪಡೆದ ಸಂಭ್ರಮದಲ್ಲಿ ಕೊಹ್ಲಿ ಮತ್ತು ಜಡೇಜಾ

ನವದೆಹಲಿ: ಭಾರತೀಯ ಬೌಲರ್‍ಗಳ ಸ್ಪಿನ್ ಬೌಲಿಂಗ್‍ಗೆ ಸಮರ್ಥನೀಯ ಉತ್ತರ ನೀಡುವಲ್ಲಿ ಮತ್ತೊಮ್ಮೆ ವಿಫಲವಾದ ಪ್ರವಾಸಿ ದ.ಆಫ್ರಿಕಾ, ಇನ್ನೊಮ್ಮೆ ಅತ್ಯಲ್ಪ ಮೊತ್ತಕ್ಕೆ ಕುಸಿದು ಭಾರೀ ಹಿನ್ನಡೆ ಅನುಭವಿಸಿದೆ.

ಇಲ್ಲಿನ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಫ್ರೀಡಂ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಕೊನೆಯ ಪಂದ್ಯದ ಎರಡನೇ ದಿನದಂದು ಪ್ರವಾಸಿ ತಂಡದ ವಿರುದ್ಧ ರವೀಂದ್ರ ಜಡೇಜಾ (30/5), ಆರ್.ಅಶ್ವಿನ್ (26/2) ತೋರಿದ ಪರಿಣಾಮಕಾರಿ ಬೌಲಿಂಗ್ ನಿಂದಾಗಿ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 49.3 ಓವರ್ ಗಳಲ್ಲಿ 121 ರನ್ ಗಳಿಗೆ ಸರ್ವಪತನ ಕಂಡಿದ್ದು, ಆತಿಥೇ ಭಾರತ 213 ರನ್ ಗಳ ಪ್ರಚಂಡ ಮುನ್ನಡೆ ಸಾಧಿಸಿದೆ. ಫೋಲೋ ಆನ್ ಗೆ ಕೇವಲ 14 ರನ್ ಹಿನ್ನಡೆ ಅನುಭವಿಸಿದೆ ಹರಿಣಗಳನ್ನು ಮತ್ತೆ ಬ್ಯಾಟಿಂಗ್ ಗೆ ಇಳಿಸಲು ಇಚ್ಛಿಸದ ಕೊಹ್ಲಿ ಪಡೆ, ಬೃಹತ್ ರನ್ ಅಂತರದ ಗೆಲವು ಎದುರು ನೋಡುತ್ತಿದ್ದು, ಅದಕ್ಕಾಗಿ ಮೂರನೇ ದಿನದಾಟದಂದು ತಾನೇ ಬ್ಯಾಟಿಂಗ್ ಗೆ ಇಳಿಯಲು ನಿರ್ಧರಿಸಿದೆ.

ಮಿಂಚಿದ ರಹಾನೆ, ಅಶ್ವಿನ್:
ಇನ್ನು ಪಂದ್ಯದ ಮೊದಲ ದಿನದಂದು 7 ವಿಕೆಟ್ ಗೆ 231 ರನ್ ಮಾಡಿದ್ದ ಭಾರತಕ್ಕೆ ಎರಡನೇ ದಿನದಂದು ರಹಾನೆ, ಅಶ್ವಿನ್  ಇನ್ನಷ್ಟು ಬಲ ತುಂಬಿದರು.
ಈ ಜೋಡಿ 8ನೇ ವಿಕೆಟ್‍ಗೆ ಕಲೆಹಾಕಿದ ಅತ್ಯಮೋಘ 98 ರನ್‍ಗಳ ಜತೆಯಾಟವು ಪ್ರವಾಸಿಗರನ್ನು ಇನ್ನಷ್ಟು ಹೈರಾಣಾಗಿಸಿತು. ಅಜಿಂಕ್ಯ ರಹಾನೆ ನಿರೀಕ್ಷೆಯಂತೆಯೇ ತಮ್ಮ ತಾಯ್ನೆಲದಲ್ಲಿ ಮೊತ್ತ ಮೊದಲ ಶತಕ ಬಾರಿಸಿ ಅಂತಿಮವಾಗಿ ಇಮ್ರಾನ್ ತಾಹಿರ್ ಬೌಲಿಂಗ್ ನಲ್ಲಿ ಡಿವಿಲಿಯರ್ಸ್ ಗೆ ಕ್ಯಾಚಿತ್ತು ಕ್ರೀಸ್ ತೊರೆದರು.

215 ಎಸೆತಗಳನ್ನು ಎದುರಿಸಿದ ರಹಾನೆ, 11 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ ಗಳ ನೆರವಿನೊಂದಿಗೆ 127 ರನ್ ಬಾರಿಸಿ ಔಟಾದರೆ, ತಂಡಕ್ಕೆ 56 ರನ್ ಕಾಣಿಕೆ ನೀಡಿದ ಅಶ್ವಿನ್ ಕೈಲ್ ಅಬಾಟ್ ಗೆ ವಿಕೆಟ್ ಒಪ್ಪಿಸಿದರು.

ದ.ಆಫ್ರಿಕಾ ಕ್ರಿಕೆಟಿಗರನ್ನು ಬಿಟ್ಟೂ ಬಿಡದೆ ಕಾಡುತ್ತಿರುವ ಸ್ಪಿನ್ ಗುಮ್ಮ!
ಸ್ಪಿನ್ ಸುಳಿಯಲ್ಲಿ ತತ್ತರಿಸಿದಂತಾಗಿದ್ದ ಪ್ರವಾಸಿ ದ.ಆಫ್ರಿಕಾವನ್ನು ಅಕ್ಷರಶಃ ಭಾರತ ಮಾನಸಿಕವಾಗಿ ಅಸ್ಥಿರಗೊಳಿಸಿದೆ ಎಂಬುದು ಇನ್ನೊಮ್ಮೆ ನಿರೂಪಿತವಾಯಿತು. ಮಧ್ಯಾಹ್ನದ ಚಹಾ ವಿರಾಮದ ಸಮಯಕ್ಕೆ 1 ವಿಕೆಟ್ ಗೆ 38 ರನ್ ಗಳಿಸಿದ್ದ ದ.ಆಫ್ರಿಕಾ. ಆ ಬಳಿಕ ಜಡೇಜಾ ಹೊಸೆದ ಸ್ಟಿನ್ ಮಂತ್ರಕ್ಕೆ ಹಾಗೂ ಅವರ ಜತೆಗೆ ಅಶ್ವಿನ್ ಮತ್ತು ವೇಗಿ ಉಮೇಶ್ ಯಾದವ್ (32/2) ದಾಳಿಗೆ ಸಿಲುಕಿ ಕೇವಲ 83 ರನ್ ಗಳಿಗೆ ಇನ್ನುಳಿದ 9 ವಿಕೆಟ್ ಗಳನ್ನು ಬಲಿಗೊಟ್ಟದ್ದು ಇದೇನಾ ವಿಶ್ವದ ನಂ.1 ಟೆಸ್ಟ್ ತಂಡವೆನಿಸುವಷ್ಟು ವಿಸ್ಮಯ ತರಿಸಿತು.

ಒಂದು ಹಂತದಲ್ಲಿ 79ಕ್ಕೆ 6 ವಿಕೆಟ್ ಕಳೆದುಕೊಂಡು ತತ್ತರಿಸಿದ್ದ ತಂಡದ ಪರ ಮರು ಹೋರಾಟಕ್ಕೆ ನಿಂತ ಎಬಿ.ಡಿವಿಲಿಯರ್ಸ್ ಅವರನ್ನು ಕ್ರೀಡಾಂಗಣದಲ್ಲಿದ್ದ ಶಾಲಾ ಮಕ್ಕಳು ಮತ್ತು ಪ್ರೇಕ್ಷಕರು ಒಂದೇ ಸಮನೆ ಎಬಿ-ಎಬಿ ಎಂದು ಪ್ರೋತ್ಸಾಹಿಸಿದರೂ, ಎಬಿಡಿ ಗಳಿಸಿದ್ದು 42 ರನ್ ಗಳನ್ನಷ್ಟೆ. ಇದು ಪ್ರವಾಸಿ ತಂಡದ ವೈಯಕ್ತಿಕ ಗರಿಷ್ಠ ಸ್ಕೋರ್ ಎನಿಸಿದ್ದು ವಿಶೇಷ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com