ಭೀತಿ ಹುಟ್ಟಿಸಿದ ಮಾರ್ಕೆಲ್: ಇನ್ನು ಪಂದ್ಯದ ಎರಡನೇ ದಿನದಂದು ಪ್ರವಾಸಿ ತಂಡವನ್ನು 121 ರನ್ ಗಳಿಗೆ ನಿಯಂತ್ರಿಸಿ 213 ರನ್‍ಗಳ ಇನ್ನಿಂಗ್ಸ್ ಮುನ್ನಡೆ ಪಡೆದ ಭಾರತ, ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿ ಆಘಾತಕ್ಕೀಡಾಯಿತು. ವೇಗಿ ಮಾರ್ನಿ ಮಾರ್ಕೆಲ್ ಅವರ ನಿಖರ ಬೌಲಿಂಗ್‍ಗೆ ತತ್ತರಿಸಿದ ಭಾರತ ಒಂದರ ಹಿಂದೊಂದರಂತೆ ವಿಕೆಟ್ ಕಳೆದುಕೊಂಡು ಕಳೆಗುಂದಿತು. ಇನ್ನಿಂಗ್ಸ್‍ನ 5ನೇ ಓವರ್‍ನ ಕೊನೇ ಎಸೆತದಲ್ಲಿ ಆರಂಭಿಕ ಮುರಳಿ ವಿಜಯ್ (3) ವಿಕೆಟ್‍ಕೀಪರ್ ಡೇನ್ ವಿಲಾಸ್‍ಗೆ ಕ್ಯಾಚಿತ್ತು ನಿರ್ಗಮಿಸಿದರೆ, ಬಳಿಕ ಬಂದ ರೋಹಿತ್ ಶರ್ಮಾ (0)ರನ್ನು ಮಾರ್ಕೆಲ್ ಬೌಲ್ಡ್ ಮಾಡಿ ಆಘಾತ ನೀಡಿದರು. ಹೀಗೆ 8 ರನ್‍ಗೆ ಕೇವಲ 2 ವಿಕೆಟ್ ಕಳೆದುಕೊಂಡ ಭಾರತಕ್ಕೆ ಚೇತೇಶ್ವರ ಪೂಜಾರ (28) ಮತ್ತು ಶಿಖರ್ ಧವನ್ (21) ಭೋಜನವಿರಾಮದ ತನಕ 45 ರನ್ ಜತೆಯಾಟವಾಡಿ ಪರಿಸ್ಥಿತಿ ನಿಭಾಯಿಸಿದರು. ಆದರೆ, ವಿರಾಮದ ನಂತರ ಮತ್ತೆ ಎರಗಿದ ಮಾರ್ಕೆಲ್, ಧವನ್ ಅವರನ್ನು ಬೌಲ್ಡ್ ಮಾಡಿದರು. ಅವರು ನಿರ್ಗಮಿಸಿದ ಅನತಿ ಅಂತರದಲ್ಲೇ ಪೂಜಾರ ಸ್ಪಿನ್ನರ್ ಇಮ್ರಾನ್ ತಾಹಿರ್ ಗೆ ಬೌಲ್ಡ್ ಆಗಿ ಕ್ರೀಸ್ ತೊರೆದರು.