ಟೀಂ ಇಂಡಿಯಾಗೆ ಕಾಂಗರೂ ಸವಾಲು: ಇಂದು ವಿಶ್ವಕಪ್ ಅಭ್ಯಾಸ ಪಂದ್ಯ

ಟೀಂ ಇಂಡಿಯಾಗೆ ಕಾಂಗರೂ ಸವಾಲು: ಇಂದು ವಿಶ್ವಕಪ್ ಅಭ್ಯಾಸ ಪಂದ್ಯ

ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡು ಎರಡೂ ತಿಂಗಳು ಪೂರ್ಣಗೊಂಡಿದೆ...
Published on

ಅಡಿಲೇಡ್: ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡು ಎರಡೂ ತಿಂಗಳು ಪೂರ್ಣಗೊಂಡಿದೆ. ಆದರೂ ಭಾರತ ತಂಡ ಟೆಸ್ಟ್ ಹಾಗೂ ತ್ರೀಕೋನ ಏಕದಿನ ಸರಣೆಯಲ್ಲಿ ಒಂದೇ ಒಂದು ಗೆಲವು ಕಾಣದೇ ಸೊರಗಿದೆ.

ಮಹತ್ವದ ವಿಶ್ವಕಪ್ ಟೂರ್ನಿಗೆ ಒಂದು ವಾರ ಮಾತ್ರ ಉಳಿದಿದ್ದರೂ ತಂಡದ ಆಟಗಾರರು ಸಂಪೂರ್ಣ ಫಿಟ್ ಆಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪ್ರಮುಖ ಕಾಳಗಕ್ಕೂ ಮುನ್ನ ಟೀಂ ಇಂಡಿಯಾ ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಸೆಣಸಲಿರುವುದು, ತಂಡದ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಲು ಉತ್ತಮ ಅವಕಾಶವಾಗಿದೆ.

ಭಾನುವಾರ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವಿನ ಫೇವರಿಟ್ ಆದರೂ, ಪ್ರಶಸ್ತಿ ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವ ಭಾರತ ತಂಡದ ಪ್ರದರ್ಶನ ಎಲ್ಲರ ಕೇಂದ್ರ ಬಿಂದುವಾಗಿದೆ. ಆಸ್ಟ್ರೇಲಿಯಾ ತಂಡ ತವರಿನ ಅಂಗಣದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದು, ಟೆಸ್ಟ್ ಸರಣಿ ಗೆಲವು ಹಾಗೂ ತ್ರಿಕೋನ ಏಕದಿನ ಸರಣಿಯಲ್ಲಿನ ಪ್ರಶಸ್ತಿಯ ಸಾಧನೆ ಅತಿಥೇಯ ಆಟಗಾರರಲ್ಲಿ ಆತ್ಮ ವಿಶ್ವಾಸ ದುಪ್ಪಟ್ಟು ಹೆಚ್ಚಿಸಿದೆ.

ಇನ್ನು ನಾಯಕ ಮೈಕೆಲ್ ಕ್ಲಾರ್ಕ್ ಹಾಗೂ ಜೇಮ್ಸ್ ಫಾಲ್ಕನರ್ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಆಸ್ಟ್ರೇಲಿಯಾ ತಂಡದಲ್ಲಿ ಅವರ ಸ್ಥಾನವನ್ನು ತುಂಬುವ ಆಟಗಾರರನ್ನು  ಹುಡುಕಲು ಹಾಗೂ ತಂಡದ ಸಮತೋಲನವನ್ನು ಪರೀಕ್ಷಿಸಿಕೊಳ್ಳು ಉತ್ತಮ ಅವಕಾಶವಾಗಿದೆ. ತ್ರಿಕೋನ ಏಕದಿನ ಸರಣಿಯಲ್ಲಿ ಸಾಕಷ್ಟು ಪ್ರಯೋಗಗಳಿಗೆ ಮುಂದಾಗಿದ್ದ ಕಾಂಗರೂ ಪಡೆ, ಈ ಪಂದ್ಯದಲ್ಲೂ ಅದೇ ಪ್ರಯೋಗಕ್ಕೆ ಮುಂದಾದರೆ ತಪ್ಪಿಲ್ಲ.

ಇತ್ತ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡದಲ್ಲಿ ಹಿರಿಯ ಬೌಲರ್ ಇಶಾಂತ್ ಶರ್ಮಾ ಫಿಟ್ ಇಲ್ಲ. ಇನ್ನು ಆರಂಭಿಕ ಶಿಖರ್ ಧವನ್ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದಾರೆ.

ವಿರಾಟ್ ಕೊಹ್ಲಿ ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ನಂತರ ಹೆಚ್ಚು ಪರಿಣಾಮಕಾರಿಯಾಗಿಲ್ಲ. ಆಸ್ಟ್ರೇಲಿಯಾದ ವೇಗದ ಪಿಚ್‌ಗಳಿಗೆ ಇತರೆ ದಾಂಡಿಗರು ಸರಿಯಾಗಿ ಹೊಂದಿಕೊಂಡಿಲ್ಲ. ಬೌಲಿಂಗ್ ವಿಭಾಗದಲ್ಲಿ ಯಾರು ವೇಗದ ದಾಳಿ ಆರಂಭಿಸಬೇಕು ಎಂಬುದು ನಿರ್ಧಾರವಾಗಿಲ್ಲ.

ಪ್ರಮುಖ 5 ಬೌಲರ್ ಅಥವಾ 4 ಬೌಲರ್ ಕಣಕ್ಕಿಳಿಸಬೇಕೆ ಎಂಬ ಗೊಂದಲ. ಇಷ್ಟೆಲ್ಲಾ ಸಮಸ್ಯೆ ಎದುರಿಸುತ್ತಿರುವ ಟೀಂ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಪರಿಹಾರ ಕಂಡುಕೊಳ್ಳಲೇಬೇಕಿದೆ.

ಒಟ್ಟಿನಲ್ಲಿ ಒಂದು ವಾರದಲ್ಲಿ ಆರಂಭವಾಗಲಿರುವ ವಿಶ್ವಕಪ್ ಕಾಳಗಕ್ಕೆ ಟೀಂ ಇಂಡಿಯಾದ ಅಂತಿಮ ತಯಾರಿಗೆ ಈ ಅಭ್ಯಾಸ ಪಂದ್ಯ ಉತ್ತಮ ಅವಕಾಶವಾಗಿದೆ. ಇದನ್ನು ಹೇಗೆ ಬಳಸಿಕೊಳ್ಳುವುದು ಎಂಬುದನ್ನು ಕಾದು ನೋಡಬೇಕು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com