
ಇಂದೋರ್: ಆರಂಭಿಕ ಬ್ಯಾಟ್ಸ್‍ಮನ್‍ಗಳಾದ ರಾಬಿನ್ ಉತ್ತಪ್ಪ ಮತ್ತು ಕೆ.ಎಲ್. ರಾಹುಲ್ ಹಾಕಿ ಕೊಟ್ಟ ಭದ್ರ ಅಡಿಪಾಯದ ಮೇಲೆ ದಿಟ್ಟ ಹೆಜ್ಜೆಗಳನ್ನಿಟ್ಟಿರುವ ಕರ್ನಾಟಕದ ಆಟಗಾರರು ಅಸ್ಸಾಂ ವಿರುದ್ಧ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೃಹತ್ ಮೊತ್ತದೆಡೆಗೆ ಮುಖಮಾಡಿದ್ದಾರೆ.
ಹೋಳ್ಕರ್ ಕ್ರೀಡಾಂಗಣದಲ್ಲಿ ಸೋಮವಾರ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಅಸ್ಸಾಂ ನಾಯಕ ಧೀರಜ್ ಜಾಧವ್, ಕರ್ನಾಟಕವನ್ನು ಮೊದಲ ಬ್ಯಾಟಿಂಗ್‍ಗೆ ಆಮಂತ್ರಿಸಿದರು. ಈ ಅವಕಾಶವನ್ನು ಸದ್ಭಳಕೆ ಮಾಡಿಕೊಂಡ ಕರ್ನಾಟಕ ಮೊದಲ ದಿನದಾಟ ನಿಂತಾಗ ಕೇವಲ 2 ವಿಕೆಟ್ ಕಳೆದುಕೊಂಡು 302 ರನ್ ಗಳಿಸುವ ಮೂಲಕ ದಿನದ ಗೌರವ ಸಂಪೂರ್ಣ ತನ್ನದಾಗಿಸಿಕೊಂಡಿತ್ತು.
ಇನಿಂಗ್ಸ್ ಅರಂಭಿಸಿದ ರಾಬಿನ್ ಉತ್ತಪ್ಪ ಮತ್ತು ಲೋಕೇಶ್ ರಾಹುಲ್ ರಕ್ಷಣಾತ್ಮಕ ಆಟದ ಮೂಲಕ ಉತ್ತಮ ರೀತಿಯಲ್ಲಿ ತಮ್ಮ ಇನಿಂಗ್ಸ್ ಕಟ್ಟಿದರು. ಈ ಇಬ್ಬರೂ ಮೊದಲ ವಿಕೆಟ್ ಜೊತೆಯಾಟದಲ್ಲಿ 194 ರನ್ ಸೇರಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಆದರೆ, ರಾಹುಲ್ ಕೇವಲ 9 ರನ್‍ಗಳ ಅಂತರದಲ್ಲಿ ಶತಕವಂಚಿತರಾಗಿ ನಿರಾಸೆ ಹೊರ ನಡೆಯಬೇಕಾಯಿತು.
ಒಟ್ಟು 255 ನಿಮಿಷಗಳ ಕಾಲ ಕ್ರೀಸ್‍ನಲ್ಲಿದ್ದ ರಾಹುಲ್ 154 ಎಸೆತಗಳನ್ನು ಎದುರಿಸಿ 14 ಬೌಂಡರಿಗಳಿದ್ದ 91 ರನ್ ಗಳಿಸಿ ವಿಕೆಟ್ ಕೈಚೆಲ್ಲಿದರು. ನಂತರ ಉತ್ತಪ್ಪಗೆ ಸಾಥ್ ನೀಡಲು ಬಂದ ಆರ್.ಸಮರ್ಥ್ ಕೂಡ ವಿಕೆಟ್ ಕಾಯ್ದುಕೊಳ್ಳುವಲ್ಲಿ ಮಗ್ನರಾದರು. ಉತ್ತಪ್ಪ ಮತ್ತು ಸಮರ್ಥ್ ಎರಡನೇ ವಿಕೆಟ್‍ಗೆ 70 ರನ್ ಸೇರಿಸಿದರು. ಅಸ್ಸಾಂ ಬೌಲರ್‍ಗಳಿಗೆ ತೀಕ್ಷ್ಣ ಉತ್ತರ ನೀಡುತ್ತಿದ್ದ ಉತ್ತಪ್ಪ 153 ರನ್‍ಗಳಿಸಿದಾಗ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಅವರು 327 ನಿಮಿಷ ಕ್ರೀಸ್ ನಲ್ಲಿದ್ದು ತಮ್ಮ ಖಾತೆಯಲ್ಲಿ 21 ಬೌಂಡರಿ ಮತ್ತು 1 ಸಿಕ್ಸರ್ ಸೇರಿಸಿದರು. ಉತ್ತಪ್ಪಗೆ ಇದು 109ನೇ ಪ್ರಥಮದರ್ಜೆ ಕ್ರಿಕೆಟ್ ಪಂದ್ಯದಲ್ಲಿ ದೊರೆತ 17ನೇ ಶತಕವಾಗಿದೆ.
ಮೊದಲ ದಿನದಾಟ ನಿಂತಾಗ ಸಮರ್ಥ್ 39 ಮತ್ತು ಮನೀಷ್ ಪಾಂಡೆ 18 ರನ್‍ಗಳಿಸಿ ಎರಡನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದರು. ಇತ್ತ ಕರ್ನಾಟಕದ ಆರಂಭದ ಜೋಡಿಯನ್ನು ಬೇರ್ಪಡಿಸಲು ಅಸ್ಸಾಂ ಬೌಲರ್‍ಗಳು ಸಾಕಷ್ಟು ಶ್ರಮಿಸಿದರೂ ಬೇಗನೆ ವಿಕೆಟ್ ಲಭಿಸದೇ ನಿರಾಸೆಗೊಂಡರು. ನಾಯಕ ಧೀರಜ್, ಬೌಲಿಂಗ್‍ನಲ್ಲಿ ಪದೇ ಪದೆ ಬದಲಾವಣೆ ತಂದರೂ ಪ್ರಯೋಜನವಾಗಲಿಲ್ಲ.
ಒಟ್ಟು 7 ಮಂದಿ ಬೌಲರ್‍ಗಳನ್ನು ಪ್ರಯೋಗಿಸಿದರೂ ಕರ್ನಾಟಕದ ಬ್ಯಾಟ್ಸ್‍ಮನ್‍ಗಳ ಮೇಲೆ ಒತ್ತಡ ಹೇರಲು ಸಾಧ್ಯವಾಗಲಿಲ್ಲ. ಅಸ್ಸಾಂ ಪರ ಅಬು ನೆಚಿಮ್ ಅಹ್ಮದ್ ಮತ್ತು ಸೈಯದ್ ಮೊಹಮ್ಮದ್ ತಲಾ 1 ವಿಕೆಟ್ ಪಡೆಯಲಷ್ಟೇ ಶಕ್ತರಾದರು. ಮುಖ್ಯವಾಗಿ ಪಿಚ್ ಬ್ಯಾಟ್ಸ್‍ಮನ್‍ಗಳಿಗೆ ನೆರವು ನೀಡಿತು. ಅದಕ್ಕಿಂತಲೂ ಹೆಚ್ಚಾಗಿ ಕರ್ನಾಟಕದ ಬ್ಯಾಟ್ಸ್‍ಮನ್‍ಗಳು ಎಚ್ಚರಿಕೆಯಿಂದ ಮುನ್ನುಗ್ಗಿದ ಪರಿಣಾಮ ಅಪಾಯಕ್ಕೆ ಸಿಲುಕಲಿಲ್ಲ.
Advertisement