
ಸಿಡ್ನಿ: ಟೆಸ್ಟ್ ಕ್ರಿಕೆಟ್‌ಗೆ ಭಾರತ ತಂಡದ ನಾಯಕನಾಗಿದ್ದ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಹೇಳಿದರೂ ಅವರನ್ನು ಸಿಡ್ನಿಯಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಕಾಯ್ದಿರಿಸಿದ ಕೀಪರ್ ಆಗಿ ಪರಿಗಣಿಸಲಾಗಿದೆ ಎಂದು ತಂಡದ ನಿರ್ದೇಶಕ ರವಿಶಾಸ್ತ್ರಿ ತಿಳಿಸಿದ್ದಾರೆ.
ಮುಂದಿನ ಪಂದ್ಯಕ್ಕೆ ಕೀಪರ್ ಸ್ಥಾನವನ್ನು ತುಂಬಬೇಕಿದ್ದ ವೃದ್ಧಿಮಾನ್ ಸಹ ಗಾಯಗೊಂಡಿರುವ ಹಿನ್ನೆಲೆಯಲ್ಲಿ, ಧೋನಿ ಅವರನ್ನು ಕಾಯ್ದಿರಿಸಿದ ಆಟಗಾರನಾಗಿ ಪರಿಗಣಿಸಲಾಗಿದೆ ಎಂದು ಶಾಸ್ತ್ರಿ ತಿಳಿಸಿದ್ದಾರೆ.
ಆಸೀಸ್ ಪ್ರಧಾನಿ ಅವರ ಚಹಾ ಕೂಟದಲ್ಲಿ ಧೋನಿ ಭಾರತ ತಂಡದ ಜತೆಗೆ ಕಾಣಿಸಿಕೊಳ್ಳದಿದ್ದರೂ, ಭಾರತಕ್ಕೆ ವಾಪಸ್ಸಾಗಿಲ್ಲ. ಅಗತ್ಯ ಬಿದ್ದರೆ, ಹಾಗೂ ಅದಕ್ಕೆ ಧೋನಿ ಒಪ್ಪಿಗೆ ನೀಡಿದರೆ ಅವರನ್ನು ಬಳಸಿಕೊಳ್ಳಲಾಗುವುದು ಎಂದಿದ್ದಾರೆ.
ವರದಿ ಸುಳ್ಳು
ಮಹೇಂದ್ರ ಸಿಂಗ್ ಧೋನಿಯ ನಿರ್ಧಾರದ ಹಿಂದೆ ವಿರಾಟ್ ಕೊಹ್ಲಿ ಹಾಗೂ ರವಿಶಾಸ್ತ್ರಿ ಅವರ ಕೈವಾಡವಿದೆ ಎಂಬ ವರದಿಗಳನ್ನು ಸ್ವತಃ ಭಾರತ ಕ್ರಿಕೆಟ್ ತಂಡದ ನಿರ್ದೇಶಕರಾದ ರವಿಶಾಸ್ತ್ರಿ ತಿರಸ್ಕರಿಸಿದ್ದಾರೆ. ಧೋನಿ, ತಂಡದ ಪ್ರತಿಯೊಬ್ಬ ಆಟಗಾರ, ಸಹಾಯಕ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯಿಂದ ಗೌರವ ಸಂಪಾದಿಸಿದ ವ್ಯಕ್ತಿ ಎಂದು ತಿಳಿಸಿದ್ದಾರೆ.
ಈ ಕುರಿತು ಕ್ರಿಕೆಟ್ ವೆಬ್‌ಸೈಟ್‌ಗೆ ನೀಡಿರುವ ಸಂದರ್ಶನದಲ್ಲಿ ಈ ವರದಿಗಳನ್ನು ನಿರಾಕರಿಸಿರುವ ರವಿಶಾಸ್ತ್ರಿ ಅದೊಂದು ಸುಳ್ಳು ವರದಿ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
ಧೋನಿ ತಂಡದಲ್ಲಿ ಕೇವಲ ವಿರಾಟ್ ಕೊಹ್ಲಿಯಿಂದ ಮಾತ್ರವಲ್ಲ, ತಂಡದ ಇತರೆ ಆಟಗಾರರು, ಸಹಾಯಕ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಸದಸ್ಯರಿಂದ ಪಡೆಯುವ ಗೌರವದ ಬಗ್ಗೆ ನಿಮಗೆ ಕಲ್ಪನೆ ಸಹ ಇಲ್ಲ. ಧೋನಿ ಹಾಗೂ ಕೊಹ್ಲಿ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ತಿಳಿಸಿದರು.
ನಿರ್ಧಾರ ತಿಳಿದಿರಲಿಲ್ಲ
ಧೋನಿ ನಿವೃತ್ತಿಯ ನಿರ್ಧಾರ ಯಾರಿಗೂ ತಿಳಿದಿರಲಿಲ್ಲ. ಆತ ಪಂದ್ಯದ ನಂತರ ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಬಂದು ನನ್ನ ಹಾಗೂ ಆಟಗಾರರ ನಡುವೆ ಕೆಲ ನಿಮಿಷ ಮಾತನಾಡಿ ನಿರ್ಧಾರ ಪ್ರಕಟಿಸಿದರು. ಆಗಲೇ ನಮಗೆಲ್ಲ ತಿಳಿದಿದ್ದು, ಅದೊಂದು ತಕ್ಷಣದ ನಿರ್ಧಾರ. ಈ ಬಗ್ಗೆ ಧೋನಿ ಕುಟುಂಬದವರ ಜತೆಗೂ ಚರ್ಚಿಸಿರಲಿಲ್ಲ ಎಂಬುದು ಅರ್ಥವಾಯಿತು ಎಂದರು.
ಡ್ರೆಸ್ಸಿಂಗ್ ರೂಂನಲ್ಲಿ ಬಿಕ್ಕಟ್ಟಿಲ್ಲ
ಬ್ರಿಸ್ಬೇನ್ ಪಂದ್ಯದ ವೇಳೆ ಟೀಂ ಇಂಡೀಯಾ ಡ್ರೆಸಿಂಗ್ ರೂಮ್‌ನಲ್ಲಿ ನಡೆದಿದೆ ಎನ್ನಲಾಗಿರುವ ವಿರಾಟ್ ಕೊಹ್ಲಿ ಹಾಗೂ ಶಿಖರ್ ನಡುವಣ ಜಗಳದ ವರದಿಯನ್ನು ಶಾಸ್ತ್ರಿ ತಿರಸ್ಕರಿಸಿದ್ದಾರೆ. ಈ ವರದಿ ಶುದ್ಧ ಸುಳ್ಳು. ಈ ಇಬ್ಬರ ಆಟಗಾರರ ನಡುವೆ ಒಂದೇ ಒಂದು ಮಾತು ಸಹ ಬಂದಿಲ್ಲ. ಕೊಹ್ಲಿ ತಂಡದಲ್ಲಿ 5 ವರ್ಷದಿಂದ ಇದ್ದಾರೆ. ಕೆಲವರು ಅಂಡರ್ 19 ತಂಡದಿಂದಲೂ ಆತನೊಂದಿಗೆ ಆಡಿದ್ದಾರೆ. ಹಾಗಾಗಿ ಎಲ್ಲಾ ಆಟಗಾರರು ಆತನೊಂದಿಗೆ ಹೊಂದಿಕೊಂಡಿದ್ದಾರೆ ಎಂದರು.
Advertisement