
ಆರಂಭಿಕ ಎರಡು ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಪ್ರಾಬಲ್ಯ ನೋಡಿದ್ದ ಕ್ರಿಕೆಟ್ ಜಗತ್ತಿಗೆ, ಮೂರನೇ ಆವೃತ್ತಿಯಲ್ಲಿ ದೊಡ್ಡ ಅಚ್ಚರಿ ಎದುರಾಗಿತ್ತು.
ಕಾರಣ ಕ್ರಿಕೆಟ್‌ನಲ್ಲಿ ಆಗಷ್ಟೇ ಬೆಳವಣಿಗೆ ಕಾಣುತ್ತಿದ್ದ ಭಾರತ ವಿಶ್ವಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿತ್ತು.
ಆ ಕ್ಷಣದ ನಂತರ ಭಾರತದಲ್ಲಿ ಕ್ರಿಕೆಟ್ ಕ್ರೀಡೆ ಬೆಳೆದ ರೀತಿ ಅದ್ಭುತ. ಭಾರತದಲ್ಲಿ ಕ್ರಿಕೆಟ್ ಈಗ ಧರ್ಮವಾಗಿ ಪರಿವರ್ತನೆಯಾಗುವಲ್ಲಿ 1983ರ ವಿಶ್ವಕಪ್ ಗೆಲುವು ಸಹ ಪ್ರಮುಖ ಕಾರಣಗಳಲ್ಲಿ ಒಂದು ಎಂದರೆ ತಪ್ಪಿಲ್ಲ.
ಈ ಟೂರ್ನಿಯಲ್ಲಿ 8 ತಂಡಗಳು ಭಾಗವಹಿಸಿದ್ದರೂ, ಜಿಂಬಾಬ್ವೆ ಹಾಗೂ ಭಾರತದಂತಹ ದುರ್ಬಲ ತಂಡಗಳು ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್‌ನಂತಹ ಪ್ರಬಲ ತಂಡಗಳ ವಿರುದ್ಧ ಅದ್ಭುತ ಗೆಲುವ ದಾಖಲಿಸಿ, ಹೊಸ ಸಂಚಲನ ಸೃಷ್ಟಿಸಿದ್ದವು. ಈ ಟೂರ್ನಿಯಲ್ಲಿ ದುರ್ಬಲ ತಂಡಗಳು ಘಟಾನುಘಟಿಗಳಿಗೆ ಮಣ್ಣು ಮುಕ್ಕಿಸಿದ ರೀತಿ ವಿಶ್ವದಲ್ಲಿನ ಕ್ರಿಕೆಟ್ ಆಭಿಮಾನಿಗಳ ಕುತೂಹಲವನ್ನು ಕೆರಳಿಸಿತ್ತು.
ಈ ಟೂರ್ನಿಯಲ್ಲಿ ಶ್ರೀಲಂಕಾ ಸೇರಿದಂತೆ 7 ತಂಡಗಳು ಟೆಸ್ಟ್ ಮಾನ್ಯತೆ ಪಡೆದ ತಂಡಗಳಾಗಿದ್ದವು. ಜಿಂಬಾಬ್ವೆ ಅರ್ಹತೆ ಪಡೆಯುವ ಮೂಲಕ ಟೂರ್ನಿಗೆ ಪ್ರವೇಶಿಸಿತ್ತು. ಈ ಟೂರ್ನಿಯಲ್ಲೂ 60 ಓವರ್ ಪಂದ್ಯಗಳು ನಡೆದಿದ್ದು, 8 ತಂಡಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು.
ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಉಪಾಂತ್ಯದ ಸುತ್ತಿಗೆ ಪ್ರವೇಶಿಸಿದ್ದವು. ಈ ಟೂರ್ನಿಯಲ್ಲಿ ಕರ್ನಾಟಕದ ರೋಜರ್ ಬಿನ್ನಿ 18 ವಿಕೆಟ್ ಪಡೆದು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಇನ್ನು ಇಂಗ್ಲೆಂಡ್‌ನ ಡೇವಿಡ್ ಗೋವರ್ (348) ಅತಿ ಹೆಚ್ಚು ರನ್ ದಾಖಲಿಸಿದ ಆಟಗಾರನಾದರು.
Advertisement