
ಬರ್ಮಿಂಗ್‍ಹ್ಯಾಮ್: ಆಸ್ಟ್ರೇಲಿಯಾ ಕ್ರಿಕೆಟಿಗರ ಅದೃಷ್ಟ ನೆಟ್ಟಗಿಲ್ಲ ಎಂದೇ ಹೇಳಬೇಕಿದೆ. ಕಳೆದ ವರ್ಷ ಪ್ರತಿಭಾವಂತ ಕ್ರಿಕೆಟಿಗ ಫಿಲಿಪ್ ಹ್ಯೂಸ್ ಬೌನ್ಸರ್ ಎಸೆತದಿಂದ ದುರಂತ ಸಾವಿಗೀಡಾದ ನಂತರ ಕ್ರಿಕೆಟ್ ಅಂಗಣದಲ್ಲಿ ಅಂತಹುದೇ ಘಟನೆಗಳು ಪುನರಾವರ್ತಿಸುತ್ತಿದ್ದು, ಹೊಸದಾಗಿ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ.
ಸೋಮವಾರ ಯಾರ್ಕ್‍ಶೈರ್ 2 ಮತ್ತು ವೊರ್ಸಿಸ್ಟೈರ್‍ಶೈರ್ 2 ತಂಡದ ನಡುವಣ ಪಂದ್ಯದ ವೇಳೆ ಆಸೀಸ್‍ನ ಸೀಮಿತ ಓವರ್‍ಗಳ ಆರಂಭಿಕ ಆ್ಯರಾನ್ ಫಿಂಚ್ ಗಾಯಗೊಂಡಿದ್ದಾರೆ. ವೇಗಿ ಕ್ರಿಸ್ ರಸ್ಸೆಲ್ ಅವರು ಹಾಕಿದ ಬೌನ್ಸರ್‍ಗೆ ಫಿಂಚ್ ಮುಂದೆ ನುಗ್ಗಿ ಪುಲ್ ಮಾಡಲು ಪ್ರಯತ್ನಿಸಿದಾಗ, ಚೆಂಡು ಎದೆಗೆ ಬಡಿದು ಸ್ಥಳದಲ್ಲೇ ಅವರ ಬಾಯಿಂದ ರಕ್ತ ಚಿಮ್ಮಿದ ಪರಿಣಾಮ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಎಕ್ಸ್ ರೇ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ನಡೆಸಿ ಅವರಿಗೆ ಯಾವುದೇ ತೊಂದರೆಗಳಿಲ್ಲ ಎಂದು ಖಚಿತಪಡಿಸಿದ್ದಾರೆ.
ಸದ್ಯ ಅವರ ಪರಿಸ್ಥಿತಿ ಸುಧಾರಿಸಿದ್ದು, ಆಸ್ಪತ್ರೆಯಲ್ಲಿ ಉಳಿಯುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾಗಿ ಯಾರ್ಕ್ ಶೈರ್ ತಂಡದ ವಕ್ತಾರ ಹೇಳಿದ್ದಾರೆ. ಸೋಮವಾರ ಸಂಜೆ ಲೀಡ್ಸ್ ಗೆ ತೆರಳಿದ್ದು, ಮಂಗಳವಾರ ಸ್ಕ್ಯಾನ್ ಮಾಡಿದ ಪರೀಕ್ಷೆಗಳ ವರದಿಗಾಗಿ ನಿರೀಕ್ಷಿಸುತ್ತಿರುವುದಾಗಿ ತಿಳಿಸಿದ್ದಾರೆ. ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ಆಡಿದ್ದ ಆ್ಯರಾನ್ ಫಿಂಚ್ ಆರಂಭಿಕ ಹಂತದಲ್ಲೇ ಸ್ನಾಯು ಸೆಳೆತಕ್ಕೆ ಸಿಕ್ಕಿ ಎರಡು ತಿಂಗಳ ಕಾಲ ಮೈದಾನದಿಂದ ದೂರ ಉಳಿಯುವಂತಾಗಿತ್ತು.
Advertisement