ಮೊದಲ ದಿನ ಸಿಂಚನ ತಲ್ಲಣ

ಬೌಲರ್‍ಗಳ ಮಿಂಚಿನ ದಾಳಿಯ ಸಹಾಯದಿಂದ ಎದುರಾಳಿ ತಮಿಳುನಾಡು ಪಡೆಯನ್ನು ಬೇಗನೆ ನಿಯಂತ್ರಿಸಿದ ಹುರುಪಿನಲ್ಲಿ ತಮ್ಮ ಸರದಿ ಆರಂಭಿಸಿದ್ದ ಕರ್ನಾಟಕದ ಆಟಗಾರರಿಗೂ ಶುರುವಿನಲ್ಲಿಯೇ ಸಂಕಷ್ಟ ಶುರುವಾಗಿದೆ. ಹಾಗಾಗಿ, ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್...
ವಿಕೆಟ್ ಪಡೆದ ಸಂಭ್ರಮದಲ್ಲಿ ವಿನಯ್ ಕುಮಾರ್.
ವಿಕೆಟ್ ಪಡೆದ ಸಂಭ್ರಮದಲ್ಲಿ ವಿನಯ್ ಕುಮಾರ್.
Updated on

ಮುಂಬೈ: ಬೌಲರ್‍ಗಳ ಮಿಂಚಿನ ದಾಳಿಯ ಸಹಾಯದಿಂದ ಎದುರಾಳಿ ತಮಿಳುನಾಡು ಪಡೆಯನ್ನು ಬೇಗನೆ ನಿಯಂತ್ರಿಸಿದ ಹುರುಪಿನಲ್ಲಿ ತಮ್ಮ ಸರದಿ ಆರಂಭಿಸಿದ್ದ ಕರ್ನಾಟಕದ ಆಟಗಾರರಿಗೂ ಶುರುವಿನಲ್ಲಿಯೇ ಸಂಕಷ್ಟ ಶುರುವಾಗಿದೆ. ಹಾಗಾಗಿ, ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‍ನಲ್ಲಿ ಎದುರಾಗಲಿರುವ ಕರ್ನಾಟಕ ಮತ್ತು ತಮಿಳುನಾಡು ಆಟಗಾರರು ಮೊದಲ ದಿನದಾಟದಲ್ಲೇ ಅಚ್ಚರಿಗೆ ಒಳಗಾಗಿದ್ದಾರೆ.

ಜೊತೆಗೆ ಕ್ರಿಕೆಟ್ ಅಭಿಮಾನಿಗಳಿಗೂ ಅಚ್ಚರಿ ತಂದಿದ್ದಾರೆ. ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾದ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಮೊದಲು ಬ್ಯಾಟಿಂಗ್‍ಗೆ ಇಳಿಸಿದ ಕರ್ನಾಟಕ, ಕೇವಲ 134 ರನ್‍ಗಳ ಸಾಧಾರಣ ಮೊತ್ತಕ್ಕೆ ಎದುರಾಳಿಯ ಮೊದಲ ಇನಿಂಗ್ಸ್ ಅನ್ನು ಕಟ್ಟಿಹಾಕಿತು. ಬಳಿಕ ತಮ್ಮ ಮೊದಲ ಸರದಿ ಆರಂಭಿಸಿದ ಕನ್ನಡಿಗರು ಮೊದಲ ದಿನದಾಟ ನಿಂತಾಗ 4 ವಿಕೆಟ್ ನಷ್ಟಕ್ಕೆ 45 ರನ್‍ಗಳಿಸಿ ಒತ್ತಡದಲ್ಲಿದ್ದರು.

ಕರುಣ್ ನಾಯರ್ 9 ಮತ್ತು ನೈಟ್ ವಾಚಮನ್ ಆಗಿ ಕ್ರೀಸ್‍ಗೆ ಇಳಿದಿರುವ ಅಬಿsಮನ್ಯು ಮಿಥುನ್ 14 ರನ್‍ಗಳಿಸಿ ಎರಡನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದರು. ಆರ್. ಸಮರ್ಥ್ ಮತ್ತು ಕೆ.ಎಲ್. ರಾಹುಲ್ ಕರ್ನಾಟಕದ ಇನಿಂಗ್ಸ್ ಆರಂಬಿsಸಿದರು. ಆದರೆ, ಇನಿಂಗ್ಸ್ ನ 4ನೇ ಓವರಿನಲ್ಲಿ ರಾಹುಲ್ ಅವರು ಬಾಲಾಜಿ ಎಸೆತದಲ್ಲಿ ರನ್ ತೆಗೆಯುವ ವೇಳೆ ತೀವ್ರ ಸ್ನಾಯುಸೆಳೆತಕ್ಕೆ ಒಳಗಾದರು. ಆದರೆ, ಮುಂದೆ ಅವರಿಗೆ ಆಡಲು ಸಾಧ್ಯವಾಗದ ಕಾರಣ ಅಲ್ಲಿಗೆ ನಿವೃತ್ತಿ ಘೋಷಿಸಿ ಹೊರನಡೆದರು.

ದುರದೃಷ್ಟವಶಾತ್ ರಾಹುಲ್ ನಿರ್ಗಮಿಸಿದ ಮರು ಎಸೆತದಲ್ಲಿಯೇ ಸಮರ್ಥ್ ವಿಕೆಟ್ ಉರುಳಿತು. ಹಿಂದಿನ ಓವರಿನಲ್ಲಿ ಪರಮೇಶ್ವರನ್‍ಗೆ ಮೂರು ಬೌಂಡರಿ ಸಿಡಿಸಿದ್ದ ಸಮರ್ಥ್ 14 ರನ್‍ಗಳಿಗೆ ಪತನಗೊಂಡಿದ್ದು ರಾಜ್ಯದ ಪಾಲಿಗೆ ದುಬಾರಿಯಾಯಿತು. ಸಹಜವಾಗಿ ರಾಹುಲ್ ಜೊತೆ ಉತ್ತಪ್ಪ ಇನಿಂಗ್ಸ್ ಆರಂಬಿsಸುತ್ತಾರೆ ಆದರೆ, ಇಲ್ಲಿ ಸಮರ್ಥ್‍ಗೆ ಅವಕಾಶ ಸಿಕ್ಕಿತ್ತು. ಈ ಅವಕಾಶವನ್ನು ಅವರು ಬಳಸಿಕೊಳ್ಳಲಿಲ್ಲ. ಇನ್ನು ಮಧ್ಯಮ ಹಂತದಲ್ಲಿ ಶಿಶಿರ್ ಭವಾನೆ ಮತ್ತು ರಾಬಿನ್ ಉತ್ತಪ್ಪ ಶೂನ್ಯಕ್ಕೆ ನಿರ್ಗಮಿಸಿದ್ದು ಹಾಗೂ ಮನೀಷ್ ಪಾಂಡೆ ಕೇವಲ 6 ರನ್‍ಗಳಿಸಿ ಔಟಾಗಿದ್ದು, ಕರ್ನಾಟಕದ ಮೇಲೆ ಒತ್ತಡ ಬೀಳುವಂತಾಯಿತು. ಕರ್ನಾಟಕ ಇನ್ನೂ 89 ರನ್‍ಗಳ ಹಿಂದಿದ್ದು, 6 ವಿಕೆಟ್ ಗಳಿವೆ. ಕನಿಷ್ಠ ಪಕ್ಷ ಮೊದಲಿಗೆ ಇನಿಂಗ್ಸ್ ಮುನ್ನಡೆ ತಂದುಕೊಳ್ಳುವುದು ಅಗತ್ಯವಿದ್ದು, ಅದು ಸಾಧ್ಯವಾದರೆ, ಆತ್ಮವಿಶ್ವಾಸ ಹೆಚ್ಚಲಿದೆ. ಏಕೆಂದರೆ, ಪಂದ್ಯ ಯಾವುದಾದರೂ ಕಾರಣಕ್ಕೆ ಡ್ರಾಗೊಳ್ಳುವಂತಾದರೆ, ಮೊದಲ ಇನಿಂಗ್ಸ್ ಮುನ್ನಡೆ ಅಧಾರದ ಮೇಲೆ ಚಾಂಪಿಯನ್ನರ ನಿರ್ಧಾರವಾಗುತ್ತದೆ. ಹಾಗಾಗಿ, ಈಗ ಎರಡೂ ತಂಡಗಳಿಗೂ ಮೊದಲ ಇನಿಂಗ್ಸ್ ಮುನ್ನಡೆ ಮಹತ್ವದ್ದಾಗಿದೆ. ಹಾಲಿ ಚಾಂಪಿಯನ್ ಎನಿಸಿರುವ ಕರ್ನಾಟಕಕ್ಕೆ ಸದ್ಯ ಈ ನಿಟ್ಟಿನಲ್ಲಿ ಉತ್ತಮ ಅವಕಾಶವಿದೆ.

ತಮಿಳುನಾಡು ಬೌಲರ್‍ಗಳ ಪೈಕಿ ಲಕ್ಷ್ಮೀಪತಿ ಬಾಲಾಜಿ 3 ವಿಕೆಟ್ ಉರುಳಿಸಿ ಗಮನ ಸೆಳೆದರು. ಮಿಥುನ್ ಮಿಂಚಿನ ದಾಳಿ ತಮಿಳುನಾಡು 134ಕ್ಕೆ ಪತನ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಆರ್. ವಿನಯ್  ಕುಮಾರ್, ಎದುರಾಳಿಯನ್ನು ಮೊದಲು ಬ್ಯಾಟಿಂಗ್‍ಗೆ ಆಮಂತ್ರಿಸಿ ಉತ್ತಮ ನಿರ್ಧಾರವನ್ನೇ ತೆಗೆದುಕೊಂಡರು. ಪಿಚ್ ಮೇಲೆ ಸ್ವಲ್ಪ ಹುಲ್ಲು ಇದ್ದಿದ್ದರಿಂದ ಆರಂಭದಲ್ಲಿ ವೇಗದ ಬೌಲರ್‍ಗಳಿಗೆ ನೆರವಾಗುತ್ತದೆ ಎಂಬುದನ್ನು ಅವರು ಚೆನ್ನಾಗಿ ಅರಿತಿದ್ದರಿಂದ ಕ್ಷೇತ್ರರಕ್ಷಣೆ ಮಾಡಲು ನಿರ್ಧರಿಸಿದರು. ಮೇಲಾಗಿ ತಂಡದಲ್ಲಿ ಸ್ವತಃ ತಮ್ಮ ಹೊರತಾಗಿ ಇನ್ನೂ ಮೂವರು ಬೌಲರ್‍ಗಳಾದ ಅಭಿಮನ್ಯು ಮಿಥುನ್, ಶ್ರೀನಾಥ್ ಅರವಿಂದ್ ಮತ್ತು ಎಚ್.ಎಸ್. ಶರತ್ ಕೂಡ ಇದ್ದಿದ್ದರಿಂದ ಕರ್ನಾಟಕದ ಪಾಲಿಗೆ ಮೊದಲು ಬೌಲಿಂಗ್ ಆಯ್ಕೆಯೇ ಉತ್ತಮ ನಿರ್ಧಾರವಾಗಿತ್ತು.

ಮೊದಲ ಒಂದು ಗಂಟೆ ಆಟದಲ್ಲಂತೂ ಬ್ಯಾಟ್ ಮಾಡುವುದು ಕಷ್ಟವಾಗಿತ್ತು. ಒಂದೆಡೆ ಟಾಸ್ ಸೋತಿದ್ದು ಹಾಗೂ ಮಗದೊಂದೆಡೆ ಕಠಿಣ ಪರಿಸ್ಥಿತಿಯಲ್ಲಿ ಮೊದಲು ಬ್ಯಾಟ್ ಮಾಡುವ ಸನ್ನಿವೇಶವನ್ನು ತನ್ನದಾಗಿಸಿಕೊಂಡ ತಮಿಳುನಾಡು ಎಚ್ಚರಿಕೆಯಿಂದ ಬ್ಯಾಟಿಂಗ್ ಆರಂಭಿಸುವ ಮನಸ್ಸು ಮಾಡಿತಾದರೂ, ಆರಂಭದಿಂದಲೇ ಒಂದರ ಮೇಲೊಂದರಂತೆ ಆಘಾತಗಳು ಬೀಳತೊಡಗಿದವು. ಅಂತಿಮವಾಗಿ ತಮಿಳುನಾಡು ತಂಡ 62.4 ಓವರುಗಳಲ್ಲಿ 134 ರನ್‍ಗಳ ಅಲ್ಪ ಮೊತ್ತದೊಂದಿಗೆ ತನ್ನ ಮೊದಲ ಇನಿಂಗ್ಸ್ ಗೆ ತೆರೆ ಎಳೆದುಕೊಂಡಿತು. ಫೀಲ್ಡಿಂಗ್ ಆಯ್ಕೆಯ ತಮ್ಮ ನಿರ್ಧಾರವನ್ನು ಸ್ವತಃ ತಾವೇ ಬಲವಾಗಿ ಸಮರ್ಥಿಸಿಕೊಂಡ ವಿನಯ್ ಕುಮಾರ್, ಎದುರಾಳಿಯ 5 ವಿಕೆಟ್‍ಗಳನ್ನು
ಉರುಳಿಸಿದರು.

ಇವರಿಗೆ ಉತ್ತಮ ಬೆಂಬಲ ನೀಡಿದ ಅಭಿಮನ್ಯು ಮಿಥುನ್ 3 ಹಾಗೂ ಎಚ್.ಎಸ್. ಶರತ್ ಮತ್ತು ಎಸ್. ಅರವಿಂದ್ ತಲಾ 1 ವಿಕೆಟ್ ಉರುಳಿಸಿದರು. ಕರ್ನಾಟಕದ ನಾಲ್ವರು ವೇಗಿಗಳ ಕರಾರುವಾಕ್ ದಾಳಿಗೆ ಬೆಚ್ಚಿಬಿದ್ದ ತಮಿಳುನಾಡು ತಂಡ ಯಾವ ಹಂತದಲ್ಲೂ ಚೇತರಿಕೆ ಕಂಡುಕೊಳ್ಳಲಿಲ್ಲ. ಬಾಬಾ ಇಂದ್ರಜೀತ್ ಮತ್ತು ಮಲೋಲನ್ ರಂಗರಾಜನ್ ಏಳನೇ ವಿಕೆಟ್ ಜೊತೆಯಾಟದಲ್ಲಿ 31 ರನ್ ಕಲೆಹಾಕಿದ್ದೇ ತಂಡದ ಪರ ಉತ್ತಮ ಜೊತೆಯಾಟದ ಸಾಧನೆಯಾಯಿತು. ಆರಂಭಿಕ ಬ್ಯಾಟ್ಸ್‍ಮನ್, ನಾಯಕ ಅಭಿನವ್ ಮುಕುಂದ್ 35 ರನ್ ಗಳಿಸಿದ್ದು ವೈಯಕ್ತಿಕ ಉತ್ತಮ ಮೊತ್ತವಾಯಿತು. ಮುಕುಂದ್ ಕೇವಲ 3 ರನ್‍ಗಳಿಸಿದಾಗ ಇನಿಂಗ್ಸ್ ನ ಎರಡನೇ ಓವರಿನಲ್ಲಿ ಮಿಥುನ್ ಬೌಲ್ ಮಾಡಿದ ಕೊನೆಯ ಎಸೆತದಲ್ಲಿ ಎರಡನೇ ಸ್ಲಿಪ್‍ನಲ್ಲಿ ಕ್ಯಾಚ್ ನೀಡಿದ್ದರು. ಆದರೆ, ಮನೀಷ್ ಪಾಂಡೆ ಕ್ಯಾಚ್ ತೆಗೆದುಕೊಳ್ಳುವಲ್ಲಿ ವಿಫಲರಾಗಿ ತಮಿಳುನಾಡು ನಾಯಕನಿಗೆ ಜೀವದಾನ ನೀಡಿದರು.

ತಮಿಳುನಾಡು ಪಡೆ ಮೊದಲ ಅವಧಿಯಲ್ಲಿ 30 ಓವರುಗಳನ್ನು ಎದುರಿಸಿ ಕೇವಲ 60 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ವಿನಯ್ ಕುಮಾರ್ 3 ವಿಕೆಟ್ ಹಾಗೂ
ಶರತ್ 1 ವಿಕೆಟ್ ಪಡೆದು ತಮಿಳುನಾಡು ತಂಡಕ್ಕೆ ಶುರುವಿನಲ್ಲೇ ದೊಡ್ಡ ಆಘಾತ ನೀಡಿದ್ದರು. ಭೋಜನ ನಂತರ ಕೂಡ ತಮಿಳುನಾಡಿಗೆ ಎಚ್ಚೆತ್ತುಕೊಳ್ಳಲು ಕರ್ನಾಟಕದ ಬೌಲರ್‍ಗಳು ಅವಕಾಶ ನೀಡಲಿಲ್ಲ. ಫೈನಲ್ ಪಂದ್ಯಕ್ಕಾಗಿ ಕರ್ನಾಟಕ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಕುನಾಲ್ ಕಪೂರ್ ಹಾಗೂ ಗಾಯದ ಪಟ್ಟಿ ಸೇರಿರುವ ವಿಕೆಟ್ ಕೀಪರ್ ಗೌತಮ್ ಬದಲು ಶಿಶಿರ್ ಭವಾನೆ ಮತ್ತು ಎಚ್.ಎಸ್. ಶರತ್‍ಗೆ ಅವಕಾಶ ಕಲ್ಪಿಸಲಾಗಿದೆ. ರಾಬಿನ್ ಉತ್ತಪ್ಪ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಿದರು. ತಮಿಳುನಾಡು ತಂಡದಲ್ಲಿ ಮಾತ್ರ ಬದಲಾವಣೆ ಇಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com