6 ಪಂದ್ಯಗಳಲ್ಲಿ 60 ವಿಕೆಟ್: ಟೀಂ ಇಂಡಿಯಾ ಬೌಲರ್ ಗಳ ಹೊಸ ದಾಖಲೆ

ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಬೌಲರ್ ಗಳು ಉತ್ತಮ ಸಾಧನೆ ಮಾಡುತ್ತಿದ್ದು, ಆಡಿರುವ 6 ಪಂದ್ಯಗಳಲ್ಲಿ 60 ವಿಕೆಟ್ ಗಳನ್ನು ಕಬಳಿಸುವ ಮೂಲಕ ನೂತನ ದಾಖಲೆ ಬರೆದಿದ್ದಾರೆ...
ಟೀಂ ಇಂಡಿಯಾ (ಸಂಗ್ರಹ ಚಿತ್ರ)
ಟೀಂ ಇಂಡಿಯಾ (ಸಂಗ್ರಹ ಚಿತ್ರ)

ಮೆಲ್ಬರ್ನ್: ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಬೌಲರ್ ಗಳು ಉತ್ತಮ ಸಾಧನೆ ಮಾಡುತ್ತಿದ್ದು, ಆಡಿರುವ 6 ಪಂದ್ಯಗಳಲ್ಲಿ 60 ವಿಕೆಟ್ ಗಳನ್ನು ಕಬಳಿಸುವ ಮೂಲಕ ನೂತನ ದಾಖಲೆ ಬರೆದಿದ್ದಾರೆ.

ವಿಶ್ವಕಪ್ ಟೂರ್ನಿಯಲ್ಲಿ ಕಳೆದ ಫೆಬ್ರವರಿಯಲ್ಲಿ 15ರಂದು ತನ್ನ ಪ್ರವಾಸ ಆರಂಭಿಸಿದ ಟೀ ಇಂಡಿಯಾ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧವೇ ತನ್ನ ಯಶಸ್ಸಿನ  ಪಯಣವನ್ನು ಆರಂಭಿಸಿತು. ಆಸ್ಟ್ರೇಲಿಯಾದ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ತನ್ನ ಮೊದಲ ಪಂದ್ಯದಲ್ಲಿ ಟೀ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಗದಿತ 50 ಓವರ್ ಗಳಲ್ಲಿ ವಿರಾಟ್ ಕೊಹ್ಲಿ (107 ರನ್ ) ಮತ್ತು ಸುರೇಶ್ ರೈನಾ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ 7 ವಿಕೆಟ್ ನಷ್ಟಕ್ಕೆ 300 ರನ್ ಗಳನ್ನು ಕಲೆಹಾಕಿತು.

ಈ ಸಾವಾಲಿನ ಮೊತ್ತವನ್ನು ಬೆನ್ನುಹತ್ತಿದ ಪಾಕಿಸ್ತಾನ ಕೇವಲ 47 ಓವರ್ ಗಳಲ್ಲಿ 224 ರನ್ ಗಳಿಗೆ ಆಲ್ ಔಟ್ ಆಯಿತು. ಪಾಕಿಸ್ತಾನ ತಂಡದ ದಾಂಡಿಗರ ಮೇಲೆ ಆರಂಭದಿಂದಲೂ ಹಿಡಿತ ಸಾಧಿಸಿದ್ದ ಭಾರತೀಯ ಬೌಲರ್ ಗಳು 224 ರನ್ ಗಳಿಗೇ ಅವರನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಭಾರತ ಪರ ಮಹಮದ್ ಶಮಿ 4 ವಿಕೆಟ್ ಕಬಳಿಸಿದರೆ, ಉಮೇಶ್ ಯಾದವ್ ಮತ್ತು ಶರ್ಮಾ ತಲಾ 2 ವಿಕೆಟ್  ಮತ್ತು ಆರ್ ಅಶ್ವಿನ್ ಮತ್ತು ಜಡೇಜಾ ತಲಾ 1 ವಿಕೆಟ್ ಕಬಳಿಸಿದರು.

ಇನ್ನು ಫೆಬ್ರವರಿ 22ರಂದು ಮೆಲ್ಬೊರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ-ದಕ್ಷಿಣ ಆಫ್ರಿಕಾ ಪಂದ್ಯದಲ್ಲಿಯೂ ಕೂಡ ಟೀಂ ಇಂಡಿಯಾದ ಬೌಲರ್ ಗಳು ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಗಳ ಮೇಲೆ ಸವಾರಿ ನಡೆಸಿದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 307 ರನ್ ದಾಖಲಿಸಿ, ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲ್ಲಲು 308 ರನ್ ಗಳ ಗುರಿ ನೀಡಿತು. ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ಡುಪ್ಲೆಸಿಸ್ ಮತ್ತು ನಾಯಕ ಡಿವಿಲಿಯರ್ಸ್ ಅವರ ಹೊರಾಟದ ಹೊರತಾಗಿಯೂ ಕೇವಲ 177 ರನ್ ಗಳಿಗೆ ಭಾರತದ ಮುಂದೆ ಮಂಡಿಯೂರಿತು.

ಇವಿಷ್ಟೇ ಅಲ್ಲ ಇಂದು ನಡೆದ ಜಿಂಬಾಬ್ವೆ ವಿರುದ್ಧದ ಪಂದ್ಯ ಸೇರಿದಂತೆ ಮುಂದಿನ ನಾಲ್ಕು ಪಂದ್ಯಗಳಲ್ಲಿ ಭಾರತೀಯ ಬೌಲರ್ ಗಳು ಎದುರಾಳಿ ತಂಡಗಳ ಬ್ಯಾಟ್ಸ್ ಮನ್ ಗಳ ಮೇಲೆ ಸವಾರಿ ಮಾಡಿದ್ದಾರೆ. ಮಾರ್ಚ್ 6ರಂದು ಪರ್ತ್ ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ವಿಂಡೀಸ್ ತಂಡವನ್ನು ಕೇವಲ 182 ರನ್ ಗಳಿಗೆ ಕಟ್ಟಿಹಾಕಿತ್ತು. ಇದಾದ ಬಳಿಕ ಮಾರ್ಚ್ 10 ರಂದು ಹ್ಯಾಮಿಲ್ಟನ್ ನಲ್ಲಿ ನಡೆದ ಪಂದ್ಯದಲ್ಲಿ ಐರ್ ಲ್ಯಾಂಡ್ ತಂಡವನ್ನು 259 ರನ್ ಗಳಿಗೇ ಆಲ್ ಔಟ್ ಮಾಡಿತ್ತು. ಇಂದು ಆಕ್ಲೆಂಡ್ ನಲ್ಲಿ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು 287 ರನ್ ಗಳಿಗೇ ಕಟ್ಟಿ ಹಾಕಿತ್ತು. ಆ ಮೂಲಕ ಭಾರತ ಕ್ರಿಕೆಟ್ ತಂಡದ ಬೌಲರ್ ಗಳು ಸತತ 6ನೇ ಪಂದ್ಯದಲ್ಲಿಯೂ 10 ವಿಕೆಟ್ ಕಬಳಿಸುವ ಮೂಲಕ ನೂತನ ದಾಖಲೆ ಬರೆದಿದ್ದಾರೆ.

ಕ್ರಿಕೆಟ್ ಪಂಡಿತರಿಗೇ ಅಚ್ಚರಿ ಮೂಡಿಸಿದ ಬೌಲರ್ ಗಳು
ವಿಶ್ವಕಪ್ ಸರಣಿಗೂ ಮೊದಲು ಭಾರತ ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದ ಬೌಲರ್ ಗಳ ಸತತ ವಿಫಲ್ಯ, ಇದೀಗ ಪ್ಲಸ್ ಆಗಿ ಮಾರ್ಪಟ್ಟಿದೆ. ಇಂದು ಭಾರತ ಕ್ರಿಕೆಟ್ ತಂಡದ ಸಾಮರ್ಥ್ಯ ಬದಲಾಗಿದ್ದು, ಕೇವಲ ಬ್ಯಾಟಿಂಗ್ ಮಾತ್ರವಲ್ಲದೇ ತನ್ನ ಮಾರಕ ಬೌಲಿಂಗ್ ನಿಂದಲೂ ಪಂದ್ಯ ಗೆಲ್ಲುವ ಸಾಮರ್ಥ್ಯ ಹೊಂದಿದೆ. ಭಾರತ ತಂಡದಲ್ಲಿನ ಈ ದಿಢೀರ್ ಸಕಾರಾತ್ಮಕ ಬದಲಾವಣೆ ಕ್ರಿಕೆಟ್ ಪಂಡಿತರಿಗೇ ಅಚ್ಚರಿ ಮೂಡಿಸಿದೆ. ವಿಶ್ವಕಪ್ ಸರಣಿಗೂ ಮೊದಲು ನಡೆದ ಸರಣಿಗಳಲ್ಲಿ ಭಾರತ ತಂಡ ತನ್ನ ಕಳಪೆ ಬೌಲಿಂಗ್ ನಿಂದಾಗಿ ಸರಣಿ ಸೋತಿತ್ತು. ಇದೀಗ ಅದೇ ತನ್ನ ವೈಫಲ್ಯವನ್ನೇ ಸಕಾರಾತ್ಮಕ ಶಕ್ತಿಯನ್ನಾಗಿ ಬದಲಾಯಿಸಿಕೊಂಡಿರುವ ಭಾರತ ತಂಡದ ಪರಿಶ್ರಮಕ್ಕೆ ವಿಶ್ವಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದೆ.

ಇನ್ನು ಭಾರತೀಯ ಬೌಲರ್ ಗಳ ಸಾಧನೆಯ ಹಿಂದೆಯೇ ಸಾಕಷ್ಟು ಜೋಕ್ ಗಳು ಹರಿದಾಡುತ್ತಿದ್ದು, ಆ ಜೋಕ್ ಗಳ ಪೈಕಿ ಇಲ್ಲೊಂದು ಸಣ್ಣ ಝಲ್ಲಕ್ ನೀಡಲಾಗಿದೆ. "ಎಲ್ಲ ಬ್ಯಾಟ್ಸ್ ಮನ್ ಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಭಾರತೀಯ ಬೌಲರ್ ಗಳು 10 ವಿಕೆಟ್ ಗಳನ್ನು ಕಬಳಿಸುತ್ತಿದ್ದಾರೆ".

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com