ಇತಿಹಾಸ ಸೃಷ್ಟಿಕರ್ತರಿಗೆ ಹೃದಯಸ್ಪರ್ಶಿ ಗೌರವ

ಮಧ್ಯಾಹ್ನ ಸರಿಸುಮಾರು 1:30ರ ಸಮಯ. ಚಿನ್ನಸ್ವಾಮಿ ಕ್ರೀಡಾಂಗಣ ದೊಳಗಿನಿಂದ ಸಿಡಿಮದ್ದಿನ ಸದ್ದು...
ರಣಜಿ ಗೆದ್ದ ಕರ್ನಾಟಕ ತಂಡ
ರಣಜಿ ಗೆದ್ದ ಕರ್ನಾಟಕ ತಂಡ
Updated on: 

ಬೆಂಗಳೂರು: ಮಧ್ಯಾಹ್ನ ಸರಿಸುಮಾರು 1:30ರ ಸಮಯ. ಚಿನ್ನಸ್ವಾಮಿ ಕ್ರೀಡಾಂಗಣ
ದೊಳಗಿನಿಂದ ಸಿಡಿಮದ್ದಿನ ಸದ್ದು. ದಟ್ಟ ಹೊಗೆ. ಆ ನಡುವೆ ಡೊಳ್ಳು ನಾದ. ಅಲ್ಲೇ ಸಮೀಪದಲ್ಲಿದ್ದ ಎಂಜಿ ರೋಡ್ ಜಂಕ್ಷನ್‍ನ  ಟ್ರಾಫಿಕ್‍ನಲ್ಲಿ ಜಮಾಯಿಸಿದ್ದ ಜನರೆಲ್ಲರೂ ಒಮ್ಮೆ ಕ್ರೀಡಾಂಗಣದತ್ತ ಆತಂಕದಿಂದ ಹೊರಳಿದರು.
ಜನರೆಲ್ಲಾ ಕಕ್ಕಾಬಿಕ್ಕಿಯಾಗಿನೋಡುತ್ತಿದ್ದರೆ, ಇತ್ತ ಕ್ರೀಡಾಂಗಣದಲ್ಲಿ ಮಾತ್ರ ಹಬ್ಬದ ವಾತಾವರಣ ಮನೆಮಾಡಿತ್ತು. ಗುರುವಾರ ಮುಂಬೈನಲ್ಲಿ ರಣಜಿ ಗೆದ್ದ ಕರ್ನಾಟಕ
ತಂಡದ ಸ್ವಾಗತಕ್ಕೆ ಎಲ್ಲರೂ ಸನ್ನದ್ಧರಾಗಿದ್ದರು. ಶುಕ್ರವಾರ ಬೆಳಗ್ಗೆಯಿಂದಲೇ ಕೆಎಸ್ ಸಿಎಯಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣ ದಲ್ಲಿ ಸಂಭ್ರಮ ನೆಲೆಸಿತ್ತು. ಪ್ರವೇಶದ್ವಾರ,
ಕೆಎಸ್‍ಸಿಎ ಕಚೇರಿಯ ಬಾಗಿಲುಗಳೆಲ್ಲಾ ಹೂವಿನಿಂದ ಅಲಂಕೃತಗೊಂಡಿದ್ದವು.
ಆವರಣದಲ್ಲಿರುವ ಚಿನ್ನಸ್ವಾಮಿಯವರ ಪುತ್ಥಳಿ ಮುಂದೆ ಬ್ಯಾಂಡ್ ಸೆಟ್ ವೃಂದದ ವಾದ್ಯಗೋಷ್ಠಿ ಸಾಗಿತ್ತು. ಅನತಿ ದೂರದಲ್ಲೇ ದೊಡ್ಡ ಹಾವಿನಂತೆ
ವಿಸ್ತಾರವಾಗಿ ಹರಡಿಕೊಂಡಿದ್ದ ಪಟಾಕಿ ಸರಮಾಲೆಯೂ ಆಟಗಾರರ ಬರುವಿಗಾಗಿ ಕಾಯುತ್ತಿತ್ತು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಬ್ಯಾಂಡ್ ಸೆಟ್ ಜೊತೆಗೆ ಸೇರಿದ ಡೊಳ್ಳು ಕುಣಿತದ ತಂಡವೊಂದು ನೃತ್ಯ ಪ್ರದರ್ಶಿಸಿತು. ಇವರ ಕುಣಿತ ಸಾಗುತ್ತಿದ್ದಂತೆ ಕರ್ನಾಟಕ ತಂಡ ಖಾಸಗಿ ಬಸ್‍ನಲ್ಲಿ ಕ್ರೀಡಾಂಗಣದ ಆವರಣ ಪ್ರವೇಶಿಸಿತು. ಬಸ್ ಪ್ರವೇಶಿಸುತ್ತಿದ್ದಂತೆ ಪಟಾಕಿ ಹಚ್ಚಲಾಯಿತು. ಬಸ್‍ನಿಂದ ಹೊರಗಿಳಿದ ಆಟಗಾರರನ್ನು
ಕೆಎಸ್‍ಸಿಎ ಅಧ್ಯಕ್ಷ  ಅಶೋಕ್ ಆನಂದ್ ಮುಂತಾದ ಅಧಿಕಾರಿಗಳು ತಂಡವನ್ನು ಸ್ವಾಗತಿಸಿದರು. ನಂತರ ಆಟಗಾರರನ್ನು ಕ್ರೀಡಾಂಗಣದ ಪಿಎ 2 ಹಾಲ್‍ಗೆ ಕರೆದೊಯ್ಯಲಾಯಿತು. ಸರಳವಾಗಿ, ಸುಂದರವಾಗಿ ಅಲಂಕೃತಗೊಂಡಿದ್ದ ಆ ಹಾಲ್‍ನಲ್ಲಿ ತಂಡದ ಆಟಗಾರರನ್ನು ಸನ್ಮಾನಿಸಲಾಯಿತು. ಕೆಎಸ್
ಸಿಎ ಅಧ್ಯಕ್ಷ ಅಶೋಕ್ ಆನಂದ್, ಕಾರ್ಯದರ್ಶಿ ಬ್ರಿಜೇಶ್ ಪಟೇಲ್, ಖಜಾಂಚಿ ಡಾ. ದಯಾನಂದ ಪೈ, ಮಾಜಿ ಕ್ರಿಕೆಟಿಗರಾದ ಜಿ.ಆರ್. ವಿಶ್ವನಾಥ್, ಕಸ್ತೂರಿ ರಂಗನ್, ಕೆ.ಎಸ್. ಪ್ರಭು, ಸದಾನಂದ ವಿಶ್ವನಾಥ್, ರಘುರಾಮ್  ಭಟ್, ದೊಡ್ಡ ಗಣೇಶ್ ಮುಂತಾದವರು ಆಟಗಾರರಿಗೆ ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿ
ಸನ್ಮಾನಿಸಿದರು.ವಿಮಾನ ನಿಲ್ದಾಣದಲ್ಲಿ ಸ್ವಾಗತ ಬೆಳಗ್ಗೆ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕರ್ನಾಟಕ ತಂಡವನ್ನು ಕೆಎಸ್‍ಸಿಎ
ಪರವಾಗಿ ಸಂಸ್ಥೆಯ ಸದಸ್ಯರಾದ ವಿ.ಎಂ. ಮಂಜುನಾಥ್ ಹಾಗೂ ಎ.ವಿ. ಶಶಿಧರ್ ಮುಂತಾದವರು ಸ್ವಾಗತಿಸಿದರು. ಮುಂಬೈನಿಂದ ರಣಜಿ ವಿಜೇತ ತಂಡ ಆಗಮಿಸುತ್ತಿರುವ
ಸುದ್ದಿ ತಿಳಿದಿದ್ದ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ತಮ್ಮ ನೆಚ್ಚಿನ ಸ್ಟಾರ್ ಆಟಗಾರರಿಗೆ ಅಭಿನಂದನೆ ಸಲ್ಲಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com